ಕುಂಞಿ ಅಹ್ಮದ್ ತಹಶೀಲ್ದಾರರನ್ನು ಭೇಟಿಯಾದ ಸನ್ಮಾರ್ಗ ಅಭಿಮಾನಿಗಳು: ವ್ಯಾಪಕ ಪ್ರಶಂಸೆಗೆ ಪಾತ್ರವಾದ ತಹಶೀಲ್ದಾರ್

0
816

ಸನ್ಮಾರ್ಗ ವಾರ್ತೆ-

ಸುಳ್ಯ; ಸೆ. 20- ವಾರಗಳ ಹಿಂದೆ ಸನ್ಮಾರ್ಗ ಪತ್ರಿಕೆಯು ಸುಳ್ಯದ ತಹಶೀಲ್ದಾರರ ಜೀವಪರ ಮನಸ್ಸಿನ ಬಗ್ಗೆ ಅಭಿಮಾನ ವ್ಯಕ್ತಪಡಿಸಿ ಸಂಪಾದಕೀಯ ಬರೆದಿತ್ತು. ಕುಂಞಿ ಅಹ್ಮದ್ ಎಂಬ ತಹಶೀಲ್ದಾರ ಮತ್ತು ಸಂವೇದನಾಶೀಲ ಮಾಧ್ಯಮ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಆ ಸಂಪಾದಕೀಯವು ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿತ್ತು.

ಸುಬ್ರಹ್ಮಣ್ಯ ತಾಲೂಕಿನ ಪಂಜ ಗ್ರಾಮದ ಪಲ್ಲೋಡಿ ಎಂಬಲ್ಲಿ ಶೆಡ್‍ನಲ್ಲಿ ಬದುಕುತ್ತಿದ್ದ ಮೀನಾಕ್ಷಿಗೆ ಮನೆ ಇರಲಿಲ್ಲ. ಅಲ್ಲದೇ ಅವರು ಅಂಗವಿಕಲೆ. ಇಬ್ಬರು ಮಕ್ಕಳೂ ಇದ್ದಾರೆ. ಸ್ವಂತ ಮನೆಯಿಲ್ಲದ, ಅಂಗವಿಕಲೆಯಾಗಿರುವ ಮತ್ತು ಇಬ್ಬರು ಪುಟ್ಟ ಮಕ್ಕಳನ್ನೂ ಹೊಂದಿರುವ ಅವರು ವಾಸವಿದ್ದ ಶೆಡ್‍ನಿಂದ ಅಧಿಕಾರಿಗಳು ತೆರಿಗೆ ಸಂಗ್ರಹಿಸುತ್ತಿದ್ದರೂ ಹಕ್ಕು ಪತ್ರ ನೀಡಿರಲಿಲ್ಲ. ‘94 ಸಿ’ ಕೆಟಗರಿಯಡಿ ಅವರಿಗೆ ಹಕ್ಕು ಪತ್ರ ನೀಡುವ ಅವಕಾಶವಿದ್ದೂ ಅದನ್ನು ಅವರ ಪಾಲಿಗೆ ನಿರಾಕರಿಸುತ್ತಲೇ ಬರಲಾಗಿತ್ತು. ಪಕ್ಕದ ಗುತ್ತಿಗಾರಿನ ಹೊಟೇಲೊಂದರಲ್ಲಿ ಕೂಲಿ ಮಾಡಿಕೊಂಡು ಮತ್ತು ಇಬ್ಬರು ಮಕ್ಕಳನ್ನು ಓದಿಸಿಕೊಂಡು ಅಸಹಾಯಕ ಸ್ಥಿತಿಯಲ್ಲಿ ಬದುಕುತ್ತಿದ್ದ ಅವರ ಬಗ್ಗೆ ಮಾಧ್ಯಮಗಳು ಸುದ್ದಿ ಮಾಡಿದುವು. ಈ ಸುದ್ದಿಯನ್ನು ಓದಿದ ಸುಳ್ಯದ ತಹಶೀಲ್ದಾರರಾದ ಕುಂಞಿ ಅಹ್ಮದ್‍ರು ಪಂಜ ಗ್ರಾಮದ ಕಂದಾಯ ಇಲಾಖೆಯ ನಿರೀಕ್ಷಕರನ್ನು, ಗ್ರಾಮ ಲೆಕ್ಕಿಗ, ಗ್ರಾಮ ಕರಣಿಕ ಮತ್ತು ನಾಡ ಕಚೇರಿಯ ಅಧಿಕಾರಿಗಳನ್ನು ಸ್ಥಳ ಪರಿಶೀಲನೆಗೆ ಕಳುಹಿಸಿ ವರದಿ ತರಿಸಿಕೊಂಡರಲ್ಲದೇ, ‘94 ಸಿ’ ಕೆಟಗರಿಯ ಅಡಿಯಲ್ಲಿ ಮೀನಾಕ್ಷಿಗೆ ನಿವೇಶನದ ಹಕ್ಕು ಪತ್ರ ನೀಡಲು ಮುಂದಾದರು.

ಈ ಹಿನ್ನೆಲೆಯಲ್ಲಿ ದಿನಗಳ ಹಿಂದೆ ಸುಳ್ಯದ ಸನ್ಮಾರ್ಗ ಅಭಿಮಾನಿಗಳು ಕುಂಞಿ ಅಹ್ಮದ್ ರನ್ನು ಭೇಟಿಯಾಗಿ ಅವರ ಮಾನವೀಯ ಸ್ಪಂದನೆಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ತಾನು ಸನ್ಮಾರ್ಗ ಪತ್ರಿಕೆಯನ್ನು ಶಾಲಾ ದಿನಗಳಿಂದಲೂ ಓದುತ್ತಿರುವುದಾಗಿಯೂ ಕುಂಞಿ ಅಹ್ಮದ್ ಪ್ರತಿಕ್ರಿಯಿಸಿದರು. ಮಾತ್ರವಲ್ಲ, ಟೆಂಟ್ ನಲ್ಲಿ ವಾಸಿಸುತ್ತಿರುವ ಕುಟುಂಬವೊಂದಕ್ಕೆ ಹೊಸದಾಗಿ ಕಟ್ಟಿಸಿ ಕೊಡುತ್ತಿರುವ ಮನೆಯ ಸ್ಥಳಕ್ಕೆ ತಂಡವನ್ನು ಕೊಂಡೊಯ್ದರು. ಬಡವರ ಬಗ್ಗೆ ಅವರು ತೋರುತ್ತಿರುವ ಕಾಳಜಿ ಮತ್ತು ಪ್ರದೇಶದ ಎಲ್ಲರನ್ನೂ ಸೇರಿಸಿಕೊಂಡು ಹಾಗೂ ಅವರ ಸಹಾಯ ಪಡೆದು ಮನೆ ಇಲ್ಲದವರಿಗೆ ಮನೆ ಕಟ್ಟಿಸಿಕೊಡುವ ಮತ್ತು ನಿರ್ಗತಿಕರಿಗೆ ನೆರವಾಗುವ ಅವರ ಸೇವಾ ಕಾರ್ಯಕ್ಕೆ ತಾಲೂಕಿನಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.