ಕೇರಳ ರಾಜ್ಯೋತ್ಸವಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿಯವರ ಕಾಲೆಳೆದ ಟ್ವಿಟ್ಟರಿಗರು

0
661

ಸನ್ಮಾರ್ಗ ವಾರ್ತೆ

ನವದೆಹಲಿ: ಕೇರಳ ರಾಜ್ಯೋತ್ಸವ ಪ್ರಯುಕ್ತ ಪ್ರಧಾನ ಮಂತ್ರಿ ಶುಭಾಶಯ ಕೋರಿ ಮಾಡಿದ ಟ್ವೀಟ್‌ಗೆ ಸವಾಲಾಗಿ ಹಳೆಯ ಸೋಮಾಲಿಯಾ ಉಲ್ಲೇಖದ ಮೂಲಕ ಮಲಯಾಳಿಗರು ಮೋದಿ ವಿರುದ್ಧ ಚಾಟಿ ಬೀಸಿದ್ದಾರೆ. ನೂರಾರು ಮಂದಿ ಮೋದಿ ಟ್ವೀಟ್‌ಗೆ ವಿರುದ್ಧ ‘ಸೋಮಾಲಿಯಾ ಕಥೆ’ಯನ್ನು ಮುಂದಿಟ್ಟು ಟ್ರೋಲ್‌ಗಳೊಂದಿಗೆ ರಂಗಕ್ಕಿಳಿದಿದ್ದಾರೆ.

ಕೇರಳದ ನಿರಂತರ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆ ಎಂದ ಮೋದಿಜಿ ಭಾರತದ ಬೆಳವಣಿಗೆಗೆ ರಾಜ್ಯ ನೀಡಿದ ದೇಣಿಗೆಗಳನ್ನೂ ಪ್ರಶಂಸಿಸಿದ್ದಾರೆ. ಟ್ವಟರ್‌ನಲ್ಲಿ ಮಲಯಾಳಂ ಭಾಷೆಯಲ್ಲೇ ಮೋದಿ ಶುಭಾಶಯ ತಿಳಿಸಿದ್ದಾರೆ.

ಸೋಮಾಲಿಯಾ ಕುರಿತಾಗಿಯೋ, ಉನ್ನತ ವಿದ್ಯಾಭ್ಯಾಸ ಗುಣಮಟ್ಟದ ಕಾರಣ ಬಿ.ಜೆ.ಪಿ ತಲೆಯೆತ್ತದ ನನ್ನ ಸುಂದರ ಕೇರಳ ಮುಂತಾದ ರೀತಿಯಲ್ಲಿ ಟ್ರೋಲ್‌ಗಳ ಸುರಿಮಳೆ ಮೋದಿ ಟ್ವೀಟ್‌ಗೆ ಉತ್ತರವಾಗಿ ಲಭಿಸಿದೆ. ಶುಭಾಶಯಕ್ಕೆ ಧನ್ಯವಾದ ಅರ್ಪಿಸಿ ಕೂಡ ಕೆಲವರು ಪ್ರತಿಕ್ರಿಯಿಸಿದ್ದಾರೆ.

“ಕೇರಳದ ನಿರಂತರ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತಿದ್ದೇನೆ. ಭಾರತದ ಬೆಳವಣಿಗೆಗೆ ಶಾಶ್ವತವಾದ ದೇಣಿಗೆಗಳನ್ನು ನೀಡಿರುವ ಕೇರಳ ಜನತೆಗೆ ಕೇರಳ ರಾಜ್ಯೋತ್ಸವದ ಶುಭಾಶಯಗಳು. ಕೇರಳದ ಪ್ರಕೃತಿ ಸೌಂದರ್ಯ, ವಿಶ್ವದ ನಾನಾ ಭಾಗಗಳಿಂದ ಜನರನ್ನು ಆಕರ್ಷಿತಗೊಳಿಸಿ ಕೇರಳವನ್ನು ಅತ್ಯಂತ ಪ್ರಶಸ್ತವಾದ ಪ್ರವಾಸಿ ತಾಣವನ್ನಾಗಿಸಿದೆ.” – ಎರಡು ಟ್ವೀಟ್‌ಗಳಲ್ಲಿ ಮೋದಿ ಬರೆದಿದ್ದರು.

ಕೆಲವು ವರ್ಷಗಳ ಹಿಂದೆ ತಿರುವನಂತಪುರದಲ್ಲಿ ಚುನಾವಣಾ ಪ್ರಚಾರ ರ‌್ಯಾಲಿಯಲ್ಲಿ ಭಾಗವಹಿಸಿ ಮಾತನಾಡುವ ಸಂದರ್ಭದಲ್ಲಿ ಕೇರಳವನ್ನು ಸೋಮಾಲಿಯಾಗೆ ಹೋಲಿಸಿ ವ್ಯಾಪಕ ಟೀಕೆಗೊಳಗಾಗಿದ್ದರು. ಅದೇ ಕೇರಳವನ್ನು ಅಭಿನಂದಿಸಿ ಬರೆದ ಟ್ವೀಟ್‌ನಲ್ಲಿ ಕೇರಳಿಗರು ಮೋದಿಯನ್ನು ಕಾಲೆಳೆದಿದ್ದಾರೆ.

ಇತ್ತ ಕರ್ನಾಟಕ ರಾಜ್ಯೋತ್ಸವಕ್ಕೂ ಮೋದಿ ಅಚ್ಚ ಕನ್ನಡದಲ್ಲೇ ಶುಭಾಶಯ ಕೋರಿದ್ದಾರೆ.