ಪಿಎನ್ ಬಿ ಹಗರಣ: ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದ ಲಂಡನ್ ಕೋರ್ಟ್

0
347

ಸನ್ಮಾರ್ಗ ವಾರ್ತೆ

ಲಂಡನ್:14 ಸಾವಿರ ಕೋಟಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣದಲ್ಲಿ ವಂಚನೆ ಮತ್ತು ಹಣ ವರ್ಗಾವಣೆಗೆ ಸಂಬಂಧಿಸಿ ಜ್ಯುವೆಲರ್ ಹಾಗೂ ಗುಜರಾತ್ನ ವಜ್ರೋದ್ಯಮಿ ನೀರವ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಲಂಡನ್ ನ್ಯಾಯಾಧೀಶರು ಇಂದು ತೀರ್ಪು ನೀಡಿದ್ದಾರೆ.

ಕೋರೋನಾ ಸಂದರ್ಭ ಹಾಗೂ ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂಬ ವಾದಗಳನ್ನು ತಳ್ಳಿಹಾಕಿರುವ ನ್ಯಾಯಾಧೀಶರು, ಹಗರಣಕ್ಕೆ ಸಂಬಂಧಿಸಿ ನೀರವ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಹೇಳಿದ್ದಾರೆ.

“ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸುವುದು ಮಾನವ ಹಕ್ಕುಗಳಿಗೆ ಅನುಸಾರವಾಗಿದೆ ಎಂದು ನನಗೆ ತೃಪ್ತಿ ಇದೆ” ಎಂದು ಜಿಲ್ಲಾ ನ್ಯಾಯಾಧೀಶ ಸ್ಯಾಮ್ಯುಯೆಲ್ ಗೂಝೀ, ಈ ಆದೇಶದ ಬಗ್ಗೆ ಮೇಲ್ಮನವಿ ಸಲ್ಲಿಸುವ ಹಕ್ಕು ಅವರಿಗೆ ಇದೆ ಎಂದು ಹೇಳಿದರು.

“ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸಿದರೆ ನ್ಯಾಯ ದೊರೆಯುವುದಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ” ಎಂದಿರುವ ನ್ಯಾಯಾಧೀಶರು, ಭಾರತ ಸರ್ಕಾರದ ಸಲ್ಲಿಸಿದ್ದ ಮನವಿಯನ್ನು ಒಪ್ಪಿಕೊಂಡಿದ್ದಾರೆ.

49 ವರ್ಷದ ನೀರವ್ ಮೋದಿ ಅವರು ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನೈರುತ್ಯ ಲಂಡನ್‌ನ ವಾಂಡ್ಸ್‌ವರ್ತ್ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿದ್ದರು. ಭಾರತದಿಂದ 16 ಸಂಪುಟಗಳ ಸಾಕ್ಷ್ಯವನ್ನು ಸ್ವೀಕರಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪನ್ನು ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರಿಗೆ ಸಹಿ ಹಾಕಲು ಕಳುಹಿಸಲಾಗುವುದು, ಫಲಿತಾಂಶವನ್ನು ಅವಲಂಬಿಸಿ ಎರಡೂ ಕಡೆಗಳಲ್ಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ. 14 ಸಾವಿರ ಕೋಟಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣಕ್ಕೆ ಸಂಬಂಧಿಸಿ 2019 ರ ಮಾರ್ಚ್ 19 ರಂದು ಹಸ್ತಾಂತರ ವಾರಂಟ್‌ನಲ್ಲಿ ನೀರವ್ ಮೋದಿಯನ್ನು ಬಂಧಿಸಲಾಗಿತ್ತು.