ಸನ್ಮಾರ್ಗ ಸಂಪಾದಕೀಯ
ಭಾರತೀಯ ಮುಸ್ಲಿಮರು ಸವಾಲಿನ ದಿನಗಳನ್ನು ಎದುರಿಸುತ್ತಿದ್ದಾರೆ. ಮುಸ್ಲಿಮರ ಹಕ್ಕುಗಳಿಗಾಗಿ ಧ್ವನಿಯೆತ್ತಿದರೆ ಮತ್ತು ಅವರ ಮೇಲಾಗುತ್ತಿರುವ ಅನ್ಯಾಯಗಳನ್ನು ಪ್ರತಿಭಟಿಸಿದರೆ, ಎಲ್ಲಿ ‘ಮುಸ್ಲಿಮ್ ಓಲೈಕೆಯಾಗುತ್ತದೋ’ ಎಂಬ ಭೀತಿ ದೇಶದ ರಾಜಕೀಯ ಪಕ್ಷಗಳನ್ನು ಕಾಡುತ್ತಿದೆ. ಆದ್ದರಿಂದ ಅವು ಅನ್ಯಾಯವನ್ನು ಕಂಡೂ ಕಣ್ಮುಚ್ಚಿಕೊಳ್ಳುತ್ತಿವೆ. ಅಮೇರಿಕ ಮೂಲದ ಮಾನವ ಹಕ್ಕು ಸಂಸ್ಥೆಯಾದ ಜಸ್ಟೀಸ್ ಫಾರ್ ಆಲ್ ಬಿಡುಗಡೆ ಮಾಡಿರುವ ವರದಿಯನ್ನು ನೋಡಿದರೆ ಯಾರಿಗೂ ಆಘಾತವಾಗಬಹುದು.
ಕಳೆದ ಮೇ ಆರಂಭದಿಂದ ಜೂನ್ ಮಧ್ಯಭಾಗದ ವರೆಗಿನ 45 ದಿನಗಳಲ್ಲಿ ಮುಸ್ಲಿಮರ 23 ಧಾರ್ಮಿಕ ಸಂಸ್ಥೆಗಳನ್ನು ಪ್ರಭುತ್ವ ಬುಲ್ಡೋಜರ್ ಮೂಲಕ ಧ್ವಂಸ ಮಾಡಿದೆ ಎಂದು ವರದಿ ಹೇಳಿದೆ. ಇದರಲ್ಲಿ ಮಸೀದಿ, ಮದ್ರಸ ಮತ್ತು ದರ್ಗಾಗಳು ಸೇರಿವೆ. ಈ ಎಲ್ಲ ಧ್ವಂಸ ಕಾರ್ಯಕ್ಕೂ ‘ಅನಧಿಕೃತ ಕಟ್ಟಡ’ ಎಂಬ ಬಹು ಅಂಗೀಕೃತ ಕಾರಣಗಳನ್ನು ನೀಡಲಾಗುತ್ತಿದೆ. ರೈಲ್ವೆ ನಿಲ್ದಾಣದ ಅಭಿವೃದ್ಧಿಯ ನೆಪದಲ್ಲಿ ವಾರಣಾಸಿಯಲ್ಲಿ 200 ವರ್ಷಗಳಷ್ಟು ಹಳೆಯದಾದ ಅಲ್ಗೈಬ್ ಶಹೀದ್ ಮಸೀದಿಯನ್ನು ಧ್ವಂಸ ಮಾಡಲಾಗಿದೆ. ದೆಹಲಿಯ ಮಂಗೋಲಪುರಿಯಲ್ಲಿ 200 ವರ್ಷ ಹಳೆಯದಾದ ದರ್ಗಾ ಪಂಚ್ ಪೀರ್ ಮತ್ತು ಇನ್ನೊಂದು ಮದ್ರಸಾವನ್ನು ಧ್ವಂಸ ಮಾಡಲಾಗಿದೆ. ಮೇ ತಿಂಗಳ ಕೊನೆಯಲ್ಲಿ ಮುಂಬೈಯ ಬಾಂದ್ರಾದಲ್ಲಿ ಎರಡು ಮಸೀದಿಗಳನ್ನು ಧ್ವಂಸಗೊಳಿಸಲಾಗಿದೆ. ಜೂನ್ ಎರಡರಂದು ಗೋರೆಗಾಂವ್ನಲ್ಲಿರುವ 70 ವರ್ಷ ಹಳೆಯದಾದ ಸೈಯದ್ ಬರ್ಕತ್ ಅಲಿ ಶಾ ಪೀರ್ ಬಾಬಾ ದರ್ಗಾವನ್ನು ಒಡೆದು ಹಾಕಲಾಗಿದೆ.
ಜೂನ್ 4ರಂದು ಪುಣೆಯ 100 ವರ್ಷ ಹಳೆಯದಾದ ಶಂಸುದ್ದೀನ್ ಖಾದ್ರಿ ದರ್ಗಾವನ್ನು ಕೆಡವಲಾಗಿದೆ. ಗುಜರಾತ್ನಲ್ಲಿ ಜೂನ್ ಒಂದರಂದು ಮೂರು ದರ್ಗಾಗಳು ಮತ್ತು ಒಂದು ಸಮಾಧಿ ಸ್ಥಳವನ್ನು ಧ್ವಂಸಗೊಳಿಸಲಾಗಿದೆ. ಹರ್ಯಾಣದ ಫರೀದಾಬಾದ್ನಲ್ಲಿರುವ ಮಸೀದಿಯನ್ನು ನಾಶಪಡಿಸಲಾಗಿದೆ. ಉತ್ತರ ಪ್ರದೇಶ, ಹರ್ಯಾಣ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಅಸ್ಸಾಮ್, ಉತ್ತರಾಖಂಡಗಳಲ್ಲಿ ನಿರಂತರ ಮುಸ್ಲಿಮ್ ಧಾರ್ಮಿಕ ಸಂಸ್ಥೆಗಳ ಮೇಲೆ ಬುಲ್ಡೋಜರ್ ಹರಿಸಲಾಗುತ್ತಿದೆ. ಅಕ್ರಮ ಕಟ್ಟಡ ಎಂದು ಹೇಳಿ ಈ ಕೃತ್ಯಗಳನ್ನು ಸಮರ್ಥಿಸಲಾಗುತ್ತಿದೆ. ಇದರ ಜೊತೆಗೇ,
ಅಪರಾಧ ಪ್ರಕರಣಗಳಲ್ಲಿ ಮುಸ್ಲಿಮರು ಭಾಗಿಯಾದರೆ, ಅವರ ಮನೆಗಳ ಮೇಲೆ ಬುಲ್ಡೋಜರ್ ಹರಿಸಲಾಗುತ್ತದೆ. ಅವರನ್ನು ಎನ್ಕೌಂಟರ್ ಮಾಡಲಾಗುತ್ತದೆ. ಪ್ರತಿದಿನವೆಂಬಂತೆ ಟಿವಿ ಚಾನೆಲ್ಗಳಲ್ಲಿ ಮುಸ್ಲಿಮರನ್ನು ಗುರಿಮಾಡಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ದ್ವೇಷ ಭಾಷಣಗಳಿಗೂ ಕಡಿವಾಣ ಬಿದ್ದಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಮುಸ್ಲಿಮರನ್ನು ನಿಂದಿಸುವ ಮತ್ತು ಬೆದರಿಕೆ ಹಾಕುವ ವೀಡಿಯೋಗಳು ಮತ್ತು ಬರಹಗಳು ಪ್ರಕಟವಾಗುತ್ತಿವೆ. ಅವರಲ್ಲಿ ಜೈ ಶ್ರೀರಾಮ್ ಎಂದು ಹೇಳಿಸುವುದು, ಸಾರ್ವಜನಿಕವಾಗಿ ಅವಮಾನಿಸುವುದು, ಮುಸ್ಲಿಮ್ ಮಾಲಕತ್ವದ ಹೊಟೇಲುಗಳಿಗೆ ದಾಳಿ ಮಾಡಿ ಪರಿಶೀಲನೆ ನಡೆಸುವುದು.. ಇತ್ಯಾದಿಗಳು ನಿರಂತರ ನಡೆಯುತ್ತಿವೆ. ಇನ್ನೊಂದು ಕಡೆ,
ಭಾರತೀಯ ಮುಸ್ಲಿಮರು ಜನಾಂಗ ಹತ್ಯೆಯ ಭೀತಿಯನ್ನು ಎದುರಿಸುತ್ತಿದ್ದಾರೆ ಎಂಬ ವರದಿಯನ್ನು ಒಂದಕ್ಕಿಂತ ಹೆಚ್ಚು ಎನ್ಜಿಓಗಳು 2022ರಲ್ಲಿ ನೀಡಿವೆ. ಗ್ರೆಗರಿ ಸ್ಯಾಂಚನ್ ನೇತೃತ್ವದ ಸಂಸ್ಥೆಯು 2022ರಲ್ಲಿ ಭಾರತದಲ್ಲಿ ಜನಾಂಗ ಹತ್ಯೆಯ ಅಲರ್ಟ್ ಘೋಷಿಸಿತ್ತು. ಜಾರ್ಜ್ ಟೌನ್ ನೇತೃತ್ವದ ಲಿಮ್ಕಿನ್ ಇನ್ಸ್ಟಿಟ್ಯೂಟ್, ಬ್ರಿಡ್ಜ್ ಇನಿಶಿಯೇಟಿವ್ ಮತ್ತು ವರ್ಲ್ಡ್ ವಿದೌಟ್ ಜೆನೋಸೈಡ್ ಮುಂತಾದ ಸಂಸ್ಥೆಗಳೂ ಭಾರತದಲ್ಲಿ ನಡೆಯಬಹುದಾದ ಸಂಭಾವ್ಯ ಜನಾಂಗ ಹತ್ಯೆಯ ಬಗ್ಗೆ ಎಚ್ಚರಿಕೆಗಳನ್ನು ನೀಡಿವೆ. ಇದರ ಜೊತೆಗೇ, ಅಲ್ ಜಝೀರಾ ಮಾಧ್ಯಮ ಸಂಸ್ಥೆ ಮತ್ತು ಅಮೇರಿಕ ಮೂಲಕ ಇಂಡಿಯನ್-ಅಮೇರಿಕನ್ ಮುಸ್ಲಿಮ್ ಕೌನ್ಸಿಲ್, ಕೇರ್ ಮುಂತಾದ ಸಂಸ್ಥೆಗಳೂ ಈ ಬಗ್ಗೆ ಗಂಭೀರ ಹೇಳಿಕೆಗಳನ್ನು ನೀಡಿವೆ. ಹಿಂಸೆ, ಧಾರ್ಮಿಕ ತಾರತಮ್ಯ, ದ್ವೇಷ ಭಾಷಣಗಳ ಹೆಚ್ಚಳವನ್ನು ಲೆಕ್ಕ ಹಾಕಿ ಈ ಸಂಸ್ಥೆಗಳು ಜನಾಂಗ ಹತ್ಯೆಯ ತಮ್ಮ ವರದಿಗೆ ಆಧಾರವನ್ನು ನೀಡಿವೆ. ಅಂದಹಾಗೆ,
ಮುಸ್ಲಿಮರ ಮಸೀದಿ, ಮದ್ರಸ ಮತ್ತು ದರ್ಗಾಗಳನ್ನು ಒಡೆಯುವ ಈಗಿನ ಬೆಳವಣಿಗೆಗಿಂತ ಮೊದಲು ಮುಸ್ಲಿಮರ ಮೇಲೆ ಹಲ್ಲೆ ಮತ್ತು ದೌರ್ಜನ್ಯಗಳು ವ್ಯಾಪಕವಾಗಿದ್ದವು. ‘ಲಿಂಚಿಂಗ್’ ಎಂಬ ಹೆಸರಲ್ಲಿ ಗುರುತಿಸಿಕೊಂಡ ದೌರ್ಜನ್ಯಗಳು ನಿರಂತರ ನಡೆಯುತ್ತಿದ್ದುವು. ಮುಸ್ಲಿಮರನ್ನು ದೈಹಿಕವಾಗಿ ಗುರಿ ಮಾಡಿ ಹಿಂಸೆ ಎಸಗಲಾಗುತ್ತಿತ್ತು. ಅಕ್ರಮ ಗೋಸಾಗಾಟ ಎಂಬ ನೆಪದಲ್ಲೂ ಹಲವು ಹತ್ಯೆಗಳು ನಡೆದುವು. ಅದಕ್ಕಿಂತ ಮೊದಲು,
ಮುಸ್ಲಿಮರ ವೇಷಭೂಷಣಗಳನ್ನು ಗುರಿ ಮಾಡಿ ದೌರ್ಜನ್ಯ ನಡೆಸಲಾಯಿತು. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧವೂ ನಡೆಯಿತು. ಅಝಾನ್ ನಿಷೇಧಕ್ಕಾಗಿ ಒತ್ತಡವನ್ನು ಹೇರಲಾಯಿತು. ಇದರ ಜೊತೆಜೊತೆಗೇ,
ಮದ್ರಸಾವನ್ನು ಭಯೋತ್ಪಾದಕರನ್ನು ತಯಾರಿಸುವ ಕಾರ್ಖಾನೆಯಂತೆ ಬಿಂಬಿಸಲಾಯಿತು. ಮುಸ್ಲಿಮರ ಆಹಾರ ಕ್ರಮವನ್ನು ಪ್ರಶ್ನಿಸಲಾಯಿತು. ಹಲಾಲ್ ಕ್ರಮಕ್ಕೆ ಪ್ರತಿಯಾಗಿ ಜಟ್ಕಾ ಕಟ್ ಎಂಬ ಹೊಸ ವಿಧಾನವನ್ನು ಪರಿಚಯಿಸಲಾಯಿತು. ಮುಸ್ಲಿಮರನ್ನು ಗೋಮಾಂಸ ಭಕ್ಷಕರು ಎಂದು ಹಿಂಸಿಸಲಾಯಿತು. ಲವ್ ಜಿಹಾದ್ ಬಂತು. ಎರಡೂ ಧರ್ಮದ ವಿದ್ಯಾರ್ಥಿಗಳು ಪರಸ್ಪರ ಮಾತಾಡುವುದನ್ನು ಪತ್ತೆ ಹಚ್ಚಿ ಥಳಿಸುವ ಮತ್ತು ಸಾರ್ವಜನಿಕವಾಗಿ ಮೆರವಣಿಗೆ ಮಾಡಿಸುವ ಸನ್ನಿವೇಶಗಳೂ ನಡೆದುವು. ಇದಕ್ಕಿಂತಲೂ ಮೊದಲು ಮುಸ್ಲಿಮರನ್ನು ಭಯೋತ್ಪಾದಕರು ಎಂದು ಹಂಗಿಸಲಾಗಿತ್ತು. ಇಸ್ಲಾಮ್ ಧರ್ಮದ ‘ಜಿಹಾದ್’ ಪರಿಕಲ್ಪನೆಯೇ ಇದಕ್ಕೆ ಕಾರಣ ಎಂದು ಹೇಳಲಾಗಿತ್ತು. ಪವಿತ್ರ ಕುರ್ಆನನ್ನೇ ಕಟಕಟೆಯಲ್ಲಿ ನಿಲ್ಲಿಸಲಾಗಿತ್ತು. ಅಂದರೆ,
ಮದ್ರಸ, ಮಸೀದಿಗಳ ಮೇಲೆ ಪ್ರಭುತ್ವ ಈಗ ನಡೆಸುತ್ತಿರುವ ಬುಲ್ಡೋಜರ್ಗಿಂತ ಮೊದಲು ಹಂತಹಂತವಾಗಿ ಮತ್ತು ವಿವಿಧ ರೂಪದಲ್ಲಿ ಮುಸ್ಲಿಮರನ್ನು ಗುರಿ ಮಾಡುತ್ತಲೇ ಬರಲಾಗಿತ್ತು. ಅದು ಈಗ ಮುಸ್ಲಿಮ್ ಧಾರ್ಮಿಕ ಸಂಸ್ಥೆಗಳನ್ನು ನಾಶ ಮಾಡುವ ಹಂತಕ್ಕೂ ಬಂದಿದೆ. ಇದು ಇಲ್ಲಿಗೇ ನಿಲ್ಲುವ ಸಾಧ್ಯತೆಯಿಲ್ಲ. ಮುಸ್ಲಿಮರನ್ನು ಖಳರಂತೆ ಜನರ ಮನಸ್ಸಲ್ಲಿ ಬಿಂಬಿಸುವ ಅತ್ಯಂತ ಯೋಜಿತ ತಂತ್ರದ ಭಾಗವಾಗಿಯೇ ಇವೆಲ್ಲ ನಡೆಯುತ್ತಿರುವಂತೆ ಕಾಣಿಸುತ್ತಿದೆ. ದಶಕಗಳ ಹಿಂದೆ ಮುಸ್ಲಿಮರನ್ನು ಭಯೋತ್ಪಾದಕರಂತೆ ಬಿಂಬಿಸುವಲ್ಲಿಂದ ಮತ್ತು ಅದಕ್ಕಿಂತ ಮೊದಲು ಮುಸ್ಲಿಮರನ್ನು ಹಿಂದೂ ಧರ್ಮ ವಿರೋಧಿಗಳಂತೆ ಮತ್ತು ದೇವಸ್ಥಾನ ಭಂಜಕರಂತೆ ಅಚ್ಚೊತ್ತುವಲ್ಲಿಂದ ಹಿಡಿದು ಬೇರೆ ಬೇರೆ ರೂಪದಲ್ಲಿ ಮುಸ್ಲಿಮರನ್ನು ಗುರಿ ಮಾಡುತ್ತಾ ಬಂದಿರುವುದೆಲ್ಲ ಆಕಸ್ಮಿಕ ಎಂದು ಹೇಳುವಂತಿಲ್ಲ. ಇದರ ಹಿಂದೆ ಯೋಜಿತ ತಂತ್ರವಿದೆ. ಒಂದು ಅಭಿಯಾನದ ರೂಪದಲ್ಲಿ ಇದನ್ನು ನಡೆಸಿಕೊಂಡು ಬರಲಾಗಿದೆ. ಒಂದರ ನಂತರ ಒಂದು ಎಂಬಂತೆ ಮುಸ್ಲಿಮ್ ವಿರೋಧಿ ಭಿನ್ನ ಭಿನ್ನ ವಿಷಯಗಳನ್ನು ಚರ್ಚೆಗೆ ತರಲಾಗಿದೆ. ಆ ಮೂಲಕ ಮುಸ್ಲಿಮ್ ದ್ವೇಷವನ್ನು ನಿರಂತರವಾಗಿ ಕಾಪಿಡುವ ಪ್ರಯತ್ನ ನಡೆಸಲಾಗಿದೆ. ಆದ್ದರಿಂದಲೇ,
ಇದರ ಬಗ್ಗೆ ಈ ದೇಶದ ನಾಗರಿಕರನ್ನು ಎಚ್ಚರಿಸುವ ಮತ್ತು ಅನ್ಯಾಯವನ್ನು ಪ್ರಶ್ನಿಸುವ ದೇಶವ್ಯಾಪಿ ಅಭಿಯಾನದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಬೆಂಬಲದೊಂದಿಗೆ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ರಾಷ್ಟ್ರವ್ಯಾಪಿ ಅಭಿಯಾನವನ್ನು ಕೈಗೊಂಡಿದೆ. ಬಿಜೆಪಿ ಆಡಳಿತದ ಒಂದೊಂದೇ ರಾಜ್ಯಗಳು ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುತ್ತಿವೆ. ಇದೀಗ ಈ ಪಟ್ಟಿಗೆ ಪಶ್ಚಿಮ ಬಂಗಾಳ ಕೂಡಾ ಸೇರಿದೆ. ಇದರ ಜೊತೆಗೇ, ಮುಸ್ಲಿಮ್ ಧಾರ್ಮಿಕ ಸಂಸ್ಥೆಗಳ ಮೇಲೆ ಬುಲ್ಡೋಜರ್, ಮುಸ್ಲಿಮರ ಮೇಲೆ ದಾಳಿ ಇತ್ಯಾದಿಗಳ ವಿರುದ್ಧ ಪ್ರಬಲವಾಗಿ ಧ್ವನಿಯೆತ್ತುವುದು ಈ ಅಭಿಯಾನದ ಉದ್ದೇಶ ಎಂದು ಹೇಳಲಾಗಿದೆ. ಈ ದೇಶದ ಎಲ್ಲ ನ್ಯಾಯಪ್ರಿಯರನ್ನು ಒಟ್ಟುಗೂಡಿಸಿಕೊಂಡು ಈ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಇದು ನಿಜಕ್ಕೂ ಆಗಲೇಬೇಕಾದ ಕೆಲಸ. ಈ ದೇಶದ ಜನರಿಗೆ ವಾಸ್ತವವನ್ನು ಅರ್ಥ ಮಾಡಿಸುವುದು ಮತ್ತು ಮುಸ್ಲಿಮರಲ್ಲಿ ಧೈರ್ಯ ಮತ್ತು ಸ್ವಾಭಿಮಾನವನ್ನು ತುಂಬುವ ಕೆಲಸ ಆಗಲೇಬೇಕು. ಇದೊಂದು ಚಳವಳಿ ರೂಪವನ್ನು ಪಡೆದಾಗ, ಈಗ ಮೌನವಾಗಿರುವ ರಾಜಕೀಯ ಪಕ್ಷಗಳು ‘ಓಲೈಕೆ’ ಭೀತಿಯಿಂದ ಹೊರಬಂದು ಮುಸ್ಲಿಮ್ ದ್ವೇಷವನ್ನು ಪ್ರಶ್ನಿಸುವ ಸಾಧ್ಯತೆ ಇದೆ.












