✍️ ಅರಫಾ ಮಂಚಿ
ಈ ಬಾರಿ ಟ್ರಂಪ್ ಸರಿಯಾಗಿ ಹೇಳಿದ್ದಾರಾ?
ಗಲ್ಫ್ ವಲಯದಲ್ಲಿ ಯುದ್ಧ ಕೊನೆಗೊಳಿಸುವುದಕ್ಕಾಗಿ ಇರಾನ್ ಅಮೆರಿಕ ನಡುವೆ ಒಪ್ಪಂದ ಪತ್ರಕ್ಕೆ ಸಹಿಹಾಕಲಾಗಿದೆ. ಹಾಗಿದ್ದರೆ ಇರಾನ್ನ ಮೇಲೆ ಯುದ್ಧ ಹೂಡಿ ಟ್ರಂಪ್ಗೆ ಸಿಕ್ಕಿದ್ದೇನು? ಒಮ್ಮೆ ಒಪ್ಪಂದವಾಗಲಿ, ಯುದ್ಧ ನಿಲ್ಲಲಿ ಎಂದು ತಡಬಡಿಸುವ ಸ್ಥಿತಿಗೆ ಇರಾನ್ ಒಡ್ಡಿದ ಪ್ರತಿರೋಧ ದೂಡಿ ಹಾಕಿತು. ಇಸ್ರೇಲ್ ಕಿವಿ ಹಿಂಡಿದ್ದಕ್ಕೆ ತಲೆದೂಗಿ ದಡ್ಡತನ ಮಾಡಿದ್ದು ಈ ಟ್ರಂಪ್ಗೆ ಅರಿವಾಗಿದೆ. ಈಗ ಈ ಒಪ್ಪಂದ ಅಮೆರಿಕಕ್ಕೆ ಬೇಕಿತ್ತು.
ಒಪ್ಪಂದದ ಸಲುವಾಗಿ 60 ದಿನಗಳ ಯುದ್ಧವಿರಾಮ ಘೋಷಣೆಯಾಗಿದೆ. ಬಹುಶಃ ಒಂದು ವಾರದಲ್ಲಿ ಮುಗಿಸಿ ಅಧಿಕಾರ ಬದಲಾಯಿಸಿ ಕೈಗೊಂಬೆ ಸರಕಾರ ಸ್ಥಾಪಿಸಬಹುದೆಂದು ಹೊರಟಿದ್ದ ಟ್ರಂಪ್ ಮತ್ತು ನೆತನ್ಯಾಹು ಇರಾನಿನಿಂದ ಅಂತಹ ಹೊಡೆತವನ್ನು ಖಂಡಿತ ನಿರೀಕ್ಷಿಸಿರಲಿಲ್ಲ.
ಇರಾನ್ ಇಸ್ರೇಲ್ ಮೇಲೆ ಮತ್ತು ಅಮೆರಿಕದ ಮಧ್ಯಪ್ರಾಚ್ಯದ ಸೈನಿಕ ನೆಲೆಗಳನ್ನು (ಮಿಲಿಟರಿ ಬೇಸ್ಗಳನ್ನು) ಬಹುತೇಕ ಧ್ವಂಸ ಮಾಡಿತು. ಇನ್ನಷ್ಟು ತಮ್ಮ ಸೈನಿಕರು ಸಾಯುವುದು ನಾಶ-ನಷ್ಟ ತಡೆಯುವುದು ಅಮೆರಿಕಕ್ಕೆ ಅತ್ಯಗತ್ಯವಾಯಿತು. ಅಂಥ ಆಕ್ರೋಶ ಅಮೆರಿಕನ್ ಜನತೆ ವ್ಯಕ್ತಪಡಿಸುತ್ತಿದ್ದರು. ಟ್ರಂಪ್ರ ಮಗನನ್ನು ಜೆಡಿವಾನ್ಸ್ರ ಮಗನನ್ನು ಯುದ್ಧಕ್ಕೆ ಯಾಕೆ ಕಳುಹಿಸಿಲ್ಲ ಎಂಬ ಪ್ರಶ್ನೆಗಳು ಕೇಳಲ್ಪಟ್ಟವು. ಇಂಥ ಮುಖಭಂಗವು ಅಮೆರಿಕ ಯುದ್ಧದಿಂದ ಹಿಂದಕ್ಕೋಡುವ ಪರಿಸ್ಥಿತಿ ನಿರ್ಮಿಸಿತು. ಆದರೆ ಟ್ರಂಪ್ ಘೋಷಿಸಿದ ಮಧ್ಯಂತರ ಯುದ್ಧವಿರಾಮ ಎಷ್ಟು ದಿನಗಳವರೆಗೆ ಇರುತ್ತದೆ ಮತ್ತು ಅದಕ್ಕೆ ಇಸ್ರೇಲ್ ಅವಕಾಶ ನೀಡುತ್ತಾ? ಎಂಬ ಪ್ರಶ್ನೆ ಜಗತ್ತಿನ ಮುಂದೆ ಒಂದು ಆತಂಕವಾಗಿ ನಿಂತಿದೆ.
ಯುದ್ಧದಲ್ಲಿ ಇರಾನ್ ಮೇಲುಗೈ ಪಡೆದುದು ಹೀಗೆ:
1979ರಲ್ಲಿ ನಡೆದಿದ್ದ ಕ್ರಾಂತಿಯ ಮೂಲಕ ಇರಾನಿನಲ್ಲಿ ಇಸ್ಲಾಮಿಕ್ ಸರಕಾರ ಅಸ್ತಿತ್ವಕ್ಕೆ ಬಂತು. ಅದನ್ನು ಸಂಪೂರ್ಣ ಕಿತ್ತೊಗೆಯುವೆ ಎಂದು ಇರಾನಿಗೆ ದಾಳಿ ನಡೆಸುವ ಆರಂಭದಲ್ಲಿ ಟ್ರಂಪ್ ಘೋಷಿಸಿದರು. ಈಗ ಒಮ್ಮೆ ಒಪ್ಪಂದ ಮಾಡಿಕೊಳ್ಳೋಣ ಎಂದು ಪಾಡುಪಡುತ್ತಿದ್ದಾರೆ. ಅಕ್ರಮಿ ಯಾರಾದರೂ ಅಂತಿಮವಾಗಿ ತನ್ನ ಕೃತ್ಯಕ್ಕೆ ಕಟು ಪರಿಣಾಮ ಅನುಭವಿಸಬೇಕು. ಟ್ರಂಪ್ರಿಂದಾಗಿ ಅಮೆರಿಕದ ಸೂಪರ್ ಪವರ್ ಸ್ಥಾನವೇ ಪಲ್ಲಟಗೊಂಡಿದೆ. ಇಸ್ರೇಲ್ ಅಮೆರಿಕಗಳು ಸೇರಿ ಇರಾನಿನ ಪರಮೋನ್ನತ ನಾಯಕ ಅಲಿ ಖಾಮ್ನೆಯಿಯವರನ್ನು ಕೊಂದಿತು. ಆನಂತರ ಅಲಿ ಲರಿಜಾನಿ ಗುಪ್ತಚರ ಮುಖ್ಯಸ್ಥ ಇಸ್ಮಾಯೀಲ್ ಕಾತಿಬ್, ಐಆರ್ಜಿಸಿ ಕಮಾಂಡರ್ ಅಲಿ ರಿಝ ಹೀಗೆ ಸಾಲು ಸಾಲು ನಾಯಕರನ್ನು ಹತ್ಯೆ ಮಾಡಿತು.
ಈ ಸಾವುಗಳಿಂದ ಇರಾನ್ ತತ್ತರಿಸುತ್ತದೆ, ತನ್ನ ಕಾಲಬುಡಕ್ಕೆ ಮಣಿಯುತ್ತದೆ ಎಂದು ಆರಂಭದಲ್ಲಿದ್ದ ನಿರೀಕ್ಷೆಗಳನ್ನು ಇರಾನ್ ಹುಸಿಗೊಳಿಸಿತು. ಒಬ್ಬರ ನಂತರ ಒಬ್ಬರು ನಾಯಕರು ಎದ್ದು ಬಂದು ಅಮೆರಿಕದ ವಿರುದ್ಧ ಸೆಟೆದೆದ್ದು ನಿಂತು ಹೋರಾಟ ಮುಂದುವರಿಸಿದ್ದಾರೆ. ಆದ್ದರಿಂದ ಅಮೆರಿಕದ ಕೈಗೊಂಬೆ ರೆಝ ಶಾ ಪಹ್ಲವಿಯ ಮಗನಿಗೆ ಅಧಿಕಾರ ಬರುತ್ತದೆ, ಇರಾನಿನಲ್ಲಿ ವಿಪರೀತ ಆಧುನಿಕತೆ ನುಗ್ಗುತ್ತದೆ, ಶಿಯಾ ನೇತೃತ್ವವನ್ನು ಜನ ತಿರಸ್ಕರಿಸುತ್ತಾರೆ ಎಂದು ಅಮೆರಿಕದಂತೆ ಜಗತ್ತು ಭಾವಿಸಿತ್ತು. ಜನ ತನ್ನ ನಾಯಕರನ್ನು ಬೆಂಬಲಿಸಿದರು. ಯುದ್ಧಕ್ಕೆ ನಾವೇ ಇಳಿಯುತ್ತೇವೆ ಎಂದು ಘೋಷಿಸಿದರು.
ಇರಾನಿನ ಇಸ್ಲಾಮಿಕ್ ಆಡಳಿತದಿಂದ ಜನ ಬೇಸತ್ತಿದ್ದಾರೆ ಎಂಬ ಇಸ್ರೇಲಿನ ಪ್ರಚಾರ ಈ ರೀತಿ ಬೃಹತ್ತಾಗಿ ಟುಸ್ಸಾಯಿತು. ಒಂದು ಕಡೆ ಐಆರ್ಜಿಸಿ ಗಲ್ಫ್ನಲ್ಲಿರುವ ಅಮೆರಿಕದ ಆಯ ಕಟ್ಟಿನ ಸೈನಿಕ ನೆಲೆಗಳ ಮೇಲೆ ಕ್ಷಿಪಣಿ ಹಾರಿಸಿ ಬಿಟ್ಟರೆ, ಇನ್ನೊಂದು ಕಡೆ ಇಸ್ರೇಲಿನ ಮೇಲೆ ಮಾರಕ ಪ್ರಹಾರ ನಡೆಸಿತು. ಜೊತೆಗೆ ಇರಾನ್ ಆಡಳಿತಾತ್ಮಕವಾಗಿಯೂ ತನ್ನ ಬಿಗುವನ್ನು ಉಳಿಸಿಕೊಂಡದ್ದಂತೂ ಜಗತ್ತನ್ನೇ ಅಚ್ಚರಿಯಲ್ಲಿ ಕೆಡವಿತು. ಇರಾನ್ ಅಧ್ಯಕ್ಷ ಮಸೂದ್ ಫೆಝಶ್ಕಿಯಾನ್ ನೇತೃತ್ವದಲ್ಲಿ ಆಡಳಿತ ಕೂಟ ಪ್ರಸಂಗಾವಧಾನತೆಯಿಂದ ದೇಶವನ್ನು ಮುನ್ನಡೆಸಿತು. ಅಲಿ ಖಾಮ್ನೆಯಿ ಹತ್ಯೆಯಿಂದ ತೆರವಾದ ಅವರ ಸ್ಥಾನಕ್ಕೆ ಅವರ ಮಗ ಮುಜ್ತಬ ಖಾಮ್ನೆಯಿ ಸರ್ವೋಚ್ಚ ನಾಯಕನಾಗಿ ಬಂದರು. ಇನ್ನೊಂದು ಕಡೆ ರಾಜತಾಂತ್ರಿಕ ಹೋರಾಟವನ್ನು ವಿದೇಶ ಸಚಿವ ಅಬ್ಬಾಸ್ ಅರಾಗ್ಚಿ ನೇತೃತ್ವದಲ್ಲಿ ಇರಾನ್ ಮುಂದುವರಿಸಿತು. ಇರಾನ್ನ ಮುಂದೆ ಒಂದೇ ಅಜೆಂಡ ಆಗಲೂ ಇತ್ತು, ಈಗಲೂ ಇದೆ, ಅದು ಯಾರ ಮುಂದೆಯೂ ಮಂಡಿಯೂರದೆ ಗೆಲ್ಲುವವರೆಗೆ ಹೋರಾಟವೆಂಬ ಅಜೆಂಡವಾಗಿತ್ತು.
ಅಮೆರಿಕದಲ್ಲೇ ಟ್ರಂಪ್ ನಿಲುವಿಗೆ ಅಸಮಾಧಾನ:
ಅಮೆರಿಕದ ಸೆನೆಟ್ನ ಡೆಮಾಕ್ರಾ ಟಿಕ್ ಪಾರ್ಟಿ ನಾಯಕ ಚಕ್ ಶುಮರ್ ಒಪ್ಪಂದದ ವಿವರಗಳನ್ನು ಟ್ರಂಪ್ ಕೂಡಲೇ ಸೆನೆಟ್ ಮುಂದೆ ಬಹಿರಂಗಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಯಾಕೆಂದರೆ ಇರಾನಿನ ಮೇಲೆ ದಿಗ್ಬಂದ ಕೊನೆಯಾಗುತ್ತಿದೆ. ಪರಮಾಣು ಕಾರ್ಯಕ್ರಮ ಮುಂದುವರಿಯಬಹುದು. ಹುರ್ಮುಝ್ ಜಲಸಂಧಿ ಮತ್ತು ತೈಲ ದ್ವೀಪವಾದ ಕಾರ್ಗ್ ಕಿತ್ತುಕೊಳ್ಳುವ ಸಂಚು ಯಶಸ್ವಿಯಾಗಲಿಲ್ಲ. ಬಹುಶಃ ಇಂತಹ ಘೋರ ಕಹಿ ಅನುಭವದಿಂದ ಬಚಾವಾಗಲು ಈ ಒಪ್ಪಂದ ಬರುತ್ತಿದೆ. ಇನ್ನೊಂದು ಕಾರಣ, ಜಗತ್ತಿನ ಇತರ ದೇಶಗಳು ಯುದ್ಧದಲ್ಲಿ ಅಮೆರಿಕದೊಂದಿಗೆ ನಿಲ್ಲಲು ನಿರಾಕರಿಸದ್ದಾಗಿರಬಹುದು. ಹೌದು ಬಹುತೇಕ ಇರಾನ್ ತಾನು ಬಯಸಿದ್ದೆಲ್ಲವನ್ನೂ ಸಾಧಿಸಿಕೊಂಡಿದೆ. ನೋಡಿ, ಇನ್ನೋರ್ವ ಡೆಮಕ್ರಾಟಿಕ್ ಸೆನೆಟರ್ ಕ್ರಿಸ್ ಮರ್ಫಿ ಇರಾನಿಗೆ ಟ್ರಂಪ್ ಸರೆಂಡರ್ ಆಗಿದ್ದಾರೆ ಎಂದು ಹೇಳಿದ್ದಾರೆ. ಈ ಅನಗತ್ಯ ಯುದ್ಧ ಮತ್ತು ಈಗ ನಡೆದ ಒಪ್ಪಂದದ ಮೂಲಕ ಟ್ರಂಪ್ ಸ್ವದೇಶ ಅಮೆರಿಕದಲ್ಲಿ ಕೂಡ ಗರಿಷ್ಠ ಮುಖಭಂಗಕ್ಕೊಳಗಾಗುತ್ತಿದ್ದಾರೆ.
ಒಪ್ಪಂದದ ನಂತರವೂ ಇರಾನ್ ಕಟ್ಟೆಚ್ಚರದಲ್ಲಿ:
ಹೌದು, ಇರಾನ್ ಸೈನ್ಯ ಕಟ್ಟೆಚ್ಚರ ವಹಿಸುತ್ತಿದೆ. ಈ ಒಪ್ಪಂದದ ನಂತರವೂ ತಂಟೆ ಮುಂದುವರಿಸಬಹುದೆಂದೇ ಇರಾನಿಗೆ ಗೊತ್ತಿದೆ. ಇತ್ತ ಒಪ್ಪಂದದ ಚರ್ಚೆ ನಡೆಯುತ್ತಿದ್ದಂತೆ ಅತ್ತ ಇಸ್ರೇಲ್ ಲೆಬನಾನಿನ ರಾಜಧಾನಿ ಬೈರೂತ್ಗೆ ವಾಯುದಾಳಿ ನಡೆಸಿದ್ದು ಕೂಡ ಒಪ್ಪಂದ ಆಯುಷ್ಯ ಖಚಿತವಿಲ್ಲ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ಇರಾನಿನ ಅಧಿಕೃತ ಮಾಧ್ಯಮ ಇರ್ನಾ ವರದಿ ಮಾಡಿರುವ ಪ್ರಕಾರ ಈಗಲೂ ಐಆರ್ಜಿಸಿಯ ಬೆರಳುಗಳು ಟ್ರಿಗರ್ ಮೇಲಿದೆ. ಶತ್ರುಗಳ ಹೃದಯಕ್ಕೆ ಗುಂಡಿಕ್ಕಿಲು ತಯಾರಾಗಿಯೇ ನಿಂತಿದೆ. ಆದರೆ ಒಪ್ಪಂದದ ನಡುವೆ ಇಸ್ರೇಲ್ ಲೆಬನಾನ್ನ ಮೇಲೆ ನಡೆಸಿದ ದಾಳಿಯನ್ನು ಡೊನಾಲ್ಡ್ ಟ್ರಂಪ್ ಕಟು ಭಾಷೆಯಲ್ಲಿ ಖಂಡಿಸುತ್ತಾ ಇಸ್ರೇಲ್ ಹೆಚ್ಚು ಜವಾಬುದಾರಿಕೆಯಿಂದ ವರ್ತಿಸಬೇಕೆಂದು ಹೇಳಿದ್ದಾರೆ. ಜಿ7 ಶೃಂಗದಲ್ಲಿ ಇರಾನಿನ ನಾಯಕರೊಂದಿಗೆ ಅಮೆರಿಕ ಉತ್ತಮ ಸಂಬಂಧವನ್ನು ಬಯಸುತ್ತದೆ ಎಂದಿದ್ದಾರೆ. ಅಲ್ಲ ಟ್ರಂಪ್ ಒಮ್ಮೆ ಯುದ್ಧ ನಿಲ್ಲಲಿ ಎಂದು ಬಯಸುತ್ತಿದ್ದರೆ ನೆತನ್ಯಾಹುಗೆ ಇಸ್ರೇಲಿನಲ್ಲಿ ಮುಳುಗುತ್ತಿರುವ ತನ್ನ ರಾಜಕೀಯ ಅಸ್ತಿತ್ವ ಉಳಿಸುವುದಕ್ಕಾಗಿ ಗಾಝ, ಲೆಬನಾನ್ ಇರಾನ್ಗಳ ವಿರುದ್ಧ ಯುದ್ಧ ಮುಂದುವರಿಯಬೇಕು. ಆದರೆ ಅದಕ್ಕೆ ಅಮೆರಿಕ ಅವಕಾಶ ನೀಡುವ ಸ್ಥಿತಿಯಲ್ಲಿಲ್ಲ.
ಇದೇವೇಳೆ,
ಒಪ್ಪಂದ ಅಸ್ತಿತ್ವಕ್ಕೆ ಬಂದ ನಂತರ ಇಸ್ರೇಲಿನಿಂದಾಗುವ ಯಾವುದೇ ದಾಳಿಯನ್ನು ನಾವು ಅಮೆರಿಕದೊಂದಿಗಿನ ಮಧ್ಯಂತರ ಒಪ್ಪಂದದ ಉಲ್ಲಂಘನೆ ಎಂದು ತಿಳಿಯುವುದಾಗಿ ಇರಾನ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. ಇಸ್ರೇಲ್ ತಂಟೆಗಿಳಿದರೆ ಇಡೀ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧಾಗ್ನಿಗೆ ತೆರೆಯುತ್ತದೆ. ತೆರದಷ್ಟೇ ವೇಗದಲ್ಲಿ ಹುರ್ಮುಝ್ ಕೊಲ್ಲಿ ಬಂದ್ ಆಗುತ್ತದೆ. ಸರಕು ಸಾಗಟ ಸಹಿತ ಅಲ್ಲಿಂದ ನಡೆಯುವ ಎಲ್ಲ ವಹಿವಾಟು ಸ್ಥಗಿತವಾಗುತ್ತದೆ.
ಅಮೆರಿಕ ಯುದ್ಧದಿಂದ ಪಡೆದಿದ್ದೇನು?:
ಹೀಗೆ ನೀವು ನೋಡುತ್ತಾ ಹೋದರೆ ಇರಾನ್ ವಿರುದ್ಧ ಯುದ್ಧದಲ್ಲಿ ಅಮೆರಿಕ ಇಸ್ರೇಲುಗಳು ಸಂಪೂರ್ಣ ಸೋಲುಂಡಿದ್ದಂತೂ ಸತ್ಯ. ಹಿರಿಯಣ್ಣನಿಗಾದ ಮುಖ ಭಂಗ ಅದರ ಸೂಪರ್ ಪವರ್ಗಿರಿಯನ್ನು ಜಗತ್ತಿನ ಮುಂದೆ ಪ್ರಶ್ನಾರ್ಥಕಗೊಳಿಸುತ್ತಿದೆ. ಯುದ್ಧದಲ್ಲಿ ಇರಾನಿನೊಂದಿಗೆ ಸಹಕರಿಸಿದ ಚೀನಾ, ರಷ್ಯಾ ಹೊಸ ಸೂಪರ್ ಪವರ್ಗಳಾಗಿ ಅಸ್ತಿತ್ವಕ್ಕೆ ಬಂತು. ಇಸ್ರೇಲ್ಗಾಗಿ ತಾನು ಕೆಟ್ಟೆ ಎಂದು ಟ್ರಂಪ್ ತಲೆ ಚಚ್ಚಿಕೊಳ್ಳಬೇಕು. ಅಲ್ಲ ಈ ಯುದ್ಧ ಆರಂಭದಿಂದಲೂ ಟ್ರಂಪ್ ಪಡೆದದ್ದು ಅಮೆರಿಕನ್ ನಾಗರಿಕರಿಂದ ಬೈಗುಳ. ಜಗತ್ತಿನಾದ್ಯಂತ ಪ್ರತಿಭಟನೆ. ಹೆಚ್ಚಿನ ಅಮೆರಿಕನ್ ನಾಗರಿಕರು ಯುದ್ಧ ನಿಲ್ಲಿಸಬೇಕೆಂದು ಒತ್ತಡ ಹೇರಿದರು. ಇರಾನ್ ಹುರ್ಮುಝ್ ಕೊಲ್ಲಿಯಲ್ಲಿ ಸರಕು ಸಾಗಾಟ ಬಂದ್ ಮಾಡಿದ ನಂತರ ಇಡೀ ಜಗತ್ತಿನ ಆರ್ಥಿಕತೆ ಕುಸಿದು ಕುಪ್ಪೆಯಾಯಿತು. ಈ ಅತಂತ್ರ ಸ್ಥಿತಿಯಿಂದ ಹೊರ ಬರಲು ಯುದ್ಧ ನಿಲ್ಲಿಸುವುದೊಂದೇ ಸರ್ವೋಪಾಯವಾಗಿತ್ತು. ಟ್ರಂಪ್ ಈ ಸಲ ಜಗತ್ತಿನ ಮಾತಿಗೆ ಕಿವಿಗೊಟ್ಟಿದ್ದಾರೆ. ಇಸ್ರೇಲನ್ನು ಮೂಲೆಗೆ ಅಟ್ಟಿದ್ದಾರೆ.
ಅತ್ತ ಇರಾನಿಯರು ಅಮೆರಿಕ ಇಸ್ರೇಲ್ಗಳು ಬಾಂಬು ಸುರಿಸುತ್ತಿರುವಾಗಲೂ ಮನೆಯಿಂದ ಹೊರ ಬಂದು ಬೀದಿಗಿಳಿದರು. ತಮ್ಮ ಆಡಳಿತಗಾರರನ್ನು ಬೆಂಬಲಿಸಿದ್ದರು. ಕಪಟವಾದ ಮತ್ತು ಸತ್ಯದ ಸಂಘರ್ಷ ಅದಾಗಿತ್ತು. ಊರವರ ಬೆಂಬಲ ಇರುವ ಅಲ್ಲಿನ ಆಡಳಿತಗಾರರನ್ನು ಮಣಿಸುವುದು ಸುಲಭ ಅಲ್ಲ. ಜಾಗತಿಕ ನಾಯಕರು ಬಹಳ ಬೇಗನೆ ಇದನ್ನು ಮನಗಂಡದ್ದು ಈ ಒಪ್ಪಂದ ಅನಿವಾರ್ಯತೆಯ ಹಿಂದಿರುವ ದೊಡ್ಡ ಸತ್ಯವಾಗಿದೆ. ಕೊನೆಗೂ ಇರಾನ್ ತನ್ನ ನಾಗರಿಕತೆ ಮತ್ತು ಸಾರ್ವಭೌಮತೆಯನ್ನು ಉಳಿಸಿಕೊಂಡಿದೆ. ಆದ್ದರಿಂದ ಜಗತ್ತು ಅಕ್ಷರಾರ್ಥದಲ್ಲಿ ಅಮೆರಿಕದ ಹೆಡೆಮುರಿ ಕಟ್ಟಿದೆ. ಆದ್ದರಿಂದ ಈಗ ನಡೆದಿರುವ ಒಪ್ಪಂದವನ್ನು ಇರಾನಿನ ವಿಜಯ ಎಂದೇ ವಿಶ್ಲೇಷಿಸಲಾಗುತ್ತಿದೆ.












