ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ: ಕೆಲಸದ ಒತ್ತಡ ಬದಿಗಿಟ್ಟು ಮೈದಾನದಲ್ಲಿ ಪ್ರತಿಭೆ ಪ್ರದರ್ಶಿಸಿದ ಮಂಗಳೂರಿನ ಪತ್ರಕರ್ತರು

0
626

ಸನ್ಮಾರ್ಗ ವಾರ್ತೆ

ಮಂಗಳೂರು: ಸದಾ ಪತ್ರಿಕೆಯ ಕೆಲಸದ ಒತ್ತಡದ ಮಧ್ಯೆ ಬದುಕು ಸಾಗಿಸುತ್ತಿದ್ದ ಮಂಗಳೂರಿನ ಪತ್ರಕರ್ತರು ಇಂದು ಮೈದಾನದಲ್ಲಿ ಕ್ರಿಕೆಟ್, ಓಟ, ಐಸ್ ಕ್ರೀಮ್ ತಿನ್ನುವ ಸ್ಪರ್ಧೆ, ಚಕ್ಕುಲಿ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಗೆ ವೇದಿಕೆ ಕಂಡುಕೊಂಡರು.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ), ಮಂಗಳೂರು ಪ್ರೆಸ್ ಕ್ಲಬ್ ಮತ್ತು ಪತ್ರಿಕಾಭವನ‌ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟವು ಇಂದು ಮಂಗಳೂರಿನ ನೆಹರೂ ಮೈದಾನದ ಪಕ್ಕದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯಿತು.

ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಪೊಲೀಸ್ ಇಲಾಖೆಯಂತೆ ಪತ್ರಿಕೋದ್ಯಮ ಕೂಡ ಸದಾ ನಿಭಿಡತೆಯ ಕ್ಷೇತ್ರ. ಡಿಜಿಟಲ್ ಇಂದು ಹೆಚ್ಚಾಗುತ್ತಿರೂದರಿಂದ ಇಂದು ಪತ್ರಿಕೆಗಳನ್ನು ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಆದರೆ ಪತ್ರಿಕೆ ಓದುವ ಹವ್ಯಾಸ ಅದೊಂದು ಬೇರೆಯೇ ಅಭಿರುಚಿ. ಆದ್ದರಿಂದ ಪತ್ರಿಕೆಗಳ ಮಹತ್ವವನ್ನು ಇಂದಿನ ಯುವ ಜನತೆಗೆ ತಿಳಿಸಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ವಹಿಸಿ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಏಶಿಯನ್ ಪತ್ರಕರ್ತರ ಸಂಘದ ಮದನ್ ಗೌಡ, ಮುಂಬೈ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ. ಕೆ, ಕೆಯುಡಬ್ಲ್ಯುಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಬ್ಯಾಟಿಂಗ್ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್, ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ , ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿಯ ಮಹಾ ಪ್ರಬಂಧಕರಾದ ಯೋಗೀಶ್ ಆಚಾರ್ಯ ಭಾಗವಹಿಸಿ, ವಿಜೇತರಿಗೆ ಬಹುಮಾನ ವಿತರಿಸಿದರು.

ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ(ರಿ)ದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಆರಿಫ್ ಪಡುಬಿದ್ರೆ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರು ವಿವಿಯ ದೈಹಿಕ ಶಿಕ್ಷಣದ ವಿಭಾಗದವರು ಕ್ರೀಡಾಕೂಟದ ಅಂಪಾಯರ್ ಗಳಾಗಿ ಸಹಕರಿಸಿದರು.

ಕ್ರೀಡಾಕೂಟದಲ್ಲಿ ಪತ್ರಕರ್ತರಿಗಾಗಿ 100 ಮೀ. 200 ಮೀ .ಓಟ, ಸ್ಲೋ ಬೈಕ್‌ರೇಸ್, ಬಾಳೆ ಹಣ್ಣು ತಿನ್ನುವ ಸ್ಪರ್ಧೆ, ಚಕ್ಕುಲಿ ತಿನ್ನುವ ಸ್ಪರ್ಧೆ, ಕ್ರಿಕೆಟ್ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕ್ರಿಕೆಟ್ ನಲ್ಲಿ ಪುತ್ತೂರು ಸುದ್ದಿ ಬಿಡುಗಡೆ ತಂಡ ಚಾಂಪಿಯನ್ ಆಗಿ ಮೂಡಿಬಂದರೆ, ವಾರ್ತಾಭಾರತಿ ಪತ್ರಿಕೆ ತಂಡವು ರನ್ನರ್ ಅಪ್ ಆಯಿತು. ಉತ್ತಮ ಬೌಲರ್ ಆಗಿ ಸಮೀರ್(ವಾರ್ತಾಭಾರತಿ), ಉತ್ತಮ ಬ್ಯಾಟ್ಸ್ ಮನ್ ಆಗಿ ಯೂಸುಫ್ ರೆಂಜಲಾಡಿ(ಪುತ್ತೂರು ಸುದ್ದಿ ಬಿಡುಗಡೆ) ಪ್ರಶಸ್ತಿ ಪಡೆದರು. ಸನ್ಮಾರ್ಗ ಪತ್ರಿಕೆ ಸೇರಿದಂತೆ ಒಟ್ಟು ೧೧ ಮಾಧ್ಯಮ ಸಂಸ್ಥೆಗಳ ಪತ್ರಕರ್ತರ ತಂಡ ಕ್ರಿಕೆಟ್ ನಲ್ಲಿ ಭಾಗವಹಿಸಿತ್ತು. ಅದೃಷ್ಟಶಾಲಿ ಪತ್ರಕರ್ತರಾಗಿ ವಿಜಯ ಕರ್ನಾಟಕದ ವಿಜಯ್ ಕೋಟ್ಯಾನ್, ಕನ್ನಡ ಪ್ರಭದ ಸಂದೀಪ್ ವಾಗ್ಲೆ, ವಾರ್ತಾಭಾರತಿಯ ಸಮೀರ್ ಕಡಬ, ಪುತ್ತೂರು ಸುದ್ದಿ ಬಿಡುಗಡೆಯ ಫಾರೂಕ್ ಬಹುಮಾನ ಗಳಿಸಿದರು.

ಪುತ್ತೂರು ಸುದ್ದಿ ಬಿಡುಗಡೆ ತಂಡ (ಚಾಂಪಿಯನ್)

ವಾರ್ತಾಭಾರತಿ ಪತ್ರಿಕೆ ತಂಡ (ರನ್ನರ್ ಅಪ್)