✍️ ಅಬೂ ಅನೀಸ್, ಕಲ್ಲಾಪು
ಸಾಹಿತ್ಯ
ಸಲ್ಮಾನ್ ರುಶ್ದಿ ಸೆಟಾನಿಕ್ ವರ್ಸಸ್ ಕೃತಿಯ ಮೂಲಕ ಪ್ರವಾದಿ ಮುಹಮ್ಮದ್ರನ್ನು(ಸ) ತೀರಾ ಅವಹೇಳನಕಾರಿಯಾಗಿ ವಿಮರ್ಶಿಸಿದ್ದ. ಈ ಕೃತಿಗೆ ಇಂಗ್ಲೆಂಡಿನ ಬೂಕರ್ ಸಂಸ್ಥೆಯು ಅಭಿವ್ಯಕ್ತಿ ಸ್ವಾತಂತ್ರ್ಯದ ಕಿರೀಟ ತೊಡಿಸಿಕೊಂಡು ಬೂಕರ್ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ.
ಹೌದು, ಪ್ರವಾದಿ ಮುಹಮ್ಮದರನ್ನು(ಸ) ತೀರಾ ಅವಹೇಳನಕಾರಿ ವ್ಯಂಗ್ಯ ಚಿತ್ರ ಪ್ರಕಟಿಸಿದ ಫ್ರಾನ್ಸಿನ ಜೋಲಾನ್ ಪೋಸ್ಟನ್' ಪತ್ರಿಕೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಶ್ನಿಸಿದ ಮೂರು ಮಂದಿ ಫ್ರೆಂಚ್ ಮುಸ್ಲಿಮ್ ಯುವಕರು (ಭಯೋತ್ಪಾದಕರು) ಜೋಲಾನ್ ಪೋಸ್ಟನ್’ ಪತ್ರಿಕೆಯ ಸಂಪಾದಕ, ವ್ಯಂಗ್ಯ ಚಿತ್ರಕಾರನ ಸಹಿತ 12 ಮಂದಿಯನ್ನು ಗುಂಡಿಕ್ಕಿ ಕೊಂದರು. ಒಂದೆರಡು ದಿನಗಳಲ್ಲಿ ಫ್ರಾನ್ಸಿನ ಭದ್ರತಾ ಪಡೆಗಳು ಆ ಯುವಕರನ್ನು ಗುಂಡಿಕ್ಕಿ ಕೊಂದು ಹಾಕಿತು.
ಈ ಘಟನೆಯ ನಂತರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದುರಾಕ್ರಮಣ ನಡೆದಿದೆ ಎಂದು ಫ್ರೆಂಚ್ ಸರಕಾರವು ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಅಯೋಜಿಸಿತು. ಅದರಲ್ಲಿ ಟರ್ಕಿ ಸಹಿತ ಅರಬ್ ಮುಸ್ಲಿಮ್ ರಾಷ್ಟ್ರಗಳು ಪ್ರಮುಖರು ಪಾಲ್ಗೊಂಡಿದ್ದರು.
ಈ ಅಪರಾಧಕ್ಕಾಗಿ ಪ್ರಸ್ತುತ ಮೂವರು ಯುವಕರನ್ನು ಯಾವುದೇ ನ್ಯಾಯ ವಿಚಾರಣೆಯಿಲ್ಲದೆ ಪೊಲೀಸರು ಗುಂಡಿಕ್ಕಿ ಕೊಂದು ಹಾಕಿದರು. ಆದರೆ ಇನ್ನೊಂದು ಬದಿಯಲ್ಲಿ ವಿಶ್ವದ ಬಹುದೊಡ್ಡ ಸಮುದಾಯದ ಕಣ್ಮಣೆಯಾದ ಮಹಾ ಪುರುಷನನ್ನು ಅವಹೇಳನ ಮಾಡಿದ ಅಪರಾಧಕ್ಕೆ ಯಾವುದೇ ವಿಚಾರಣೆ ಶಿಕ್ಷೆಯಿಲ್ಲ. ಅದು ಅಪರಾಧವೇ ಅಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ.
ಪ್ರವಾದಿ ಮುಹಮ್ಮದರಿಗೆ(ಸ) ಆವತೀರ್ಣವಾದ ಪವಿತ್ರ ಕುರ್ಆನ್ ಈ ಬಗ್ಗೆ ಏನು ಹೇಳುತ್ತದೆ? ಮುಸ್ಲಿಮರೇ... ಅಲ್ಲಾಹನ ಹೊರತು ಯಾರನ್ನು ಪ್ರಾರ್ಥಿಸುತ್ತಿರುವರೋ ಅವರನ್ನು ತೆಗಳಬೇಡಿ. ಇದರಿಂದಾಗಿ ಅವರು ಅವರ ಆರಾಧ್ಯರಿಗಿಂತಲೂ ಮುಂದುವರಿದು ಅಲ್ಲಾಹನನ್ನು ತೆಗಳ ತೊಡಗುವರು. ಈ ರೀತಿಯಾಗಿ ಪ್ರತಿಯೊಂದು ಸಮುದಾಯಕ್ಕೆ ಅವರವರ ಕರ್ಮವನ್ನು ಚೆನ್ನಾಗಿಸಲಾಗಿದೆ (ಕುರ್ಆನ್). ಅರ್ಥಾತ್ ನಿನ್ನ ಧರ್ಮ ವಿಶ್ವಾಸ ಆಚರಣೆಗಳು ಆರಾಧನೆಗಳು ನಿನಗೆ ಅತ್ಯುತ್ಕೃಷ್ಟ ಮತ್ತು ಮೋಕ್ಷದಾಯಕವಾಗಿರಬಹುದು. ಅದಕ್ಕಾಗಿ ಅನ್ಯರ ಧರ್ಮಶ್ರದ್ಧೆ ಆರಾಧನೆಗಳನ್ನು ತೆಗಳುವ ಹೀನೈಸುವ ಹಕ್ಕು ಇಲ್ಲ. ನಂಬಿಕೆ ಮತ್ತು ಮೌಲ್ಯಗಳಲ್ಲಿ ತುಂಬಾ ವ್ಯತ್ಯಾಸವಿದೆ. ಅದನ್ನು ಅರಿತವನೇ ನಿಜವಾದ ಮನುಷ್ಯ.ಲಾ ಇಕ್ರಾಅ ಫಿದ್ದೀನ್’ (ಧರ್ಮದಲ್ಲಿ ಬಲಾತ್ಕಾರವಿಲ್ಲ).
ಈ ಕುರ್ಆನ್ ಸೂಕ್ತವು ಒಂದು ಅಪೂರ್ವ ಸತ್ಯವನ್ನು ಅನಾವರಣಗೊಳಿಸುತ್ತದೆ. ಪ್ರವಾದಿ ಮುಹಮ್ಮದ್(ಸ) ಮದೀನ ಜೀವನದಲ್ಲಿ ನಡೆದ ಘಟನೆ. ಅಂದು ಮದೀನಾದ ಅನ್ಸಾರ್ (ಮದೀನದ ಮುಸ್ಲಿಮ್ ನಾಗರಿಕರು)ಗಳ ಪೈಕಿ ಕೆಲವು ಯುವಕರು ಯಹೂದಿಯರಾದರು. ಕೆಲವರು ಕ್ರೈಸ್ತ ಮತಾನುಯಾಯಿಗಳಾದರು. ಈ ಬದಲಾವಣೆಯಿಂದ ಬೇಸತ್ತ ಅವರ ಪೋಷಕರು ಬಲ ಪ್ರಯೋಗಿಸಿ ಅವರನ್ನು ಮುಸ್ಲಿಮರನ್ನಾಗಿಸಲು ಬಯಸಿದರು. ಪ್ರವಾದಿ ಮುಹಮ್ಮದ್(ಸ)ರು ಅದಕ್ಕೆ ಅನುಮತಿ ನೀಡಲಿಲ್ಲ.
ಪ್ರವಾದಿ ಮುಹಮ್ಮದ್ರು(ಸ) ಪ್ರವಾದಿತ್ವ ಪ್ರಾಪ್ತಿಯ ಆರಂಭದ ದಿನಗಳಲ್ಲಿ ಮಕ್ಕಾದ ಮಸೀದಿ ಹರಮ್ನಲ್ಲಿ ತನ್ನ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದರು. ಕಅಬ ಗೇಹದ ಸುತ್ತಲೂ 360 ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಪ್ರವಾದಿವರ್ಯರು(ಸ) ಆ ವಿಗ್ರಹ ಇದ್ದಾಗಿಯೂ ತಾನು ಪ್ರತ್ಯೇಕವಾಗಿ ಅಲ್ಲಾಹನನ್ನು ಆರಾಧಿಸುತ್ತಿದ್ದರು. ಇದನ್ನು ಕಂಡ ಪ್ರವಾದಿಗಳ ಕಡು ವಿರೋಧಿ ಅಬೂ ಜಹಲನು,
“ಓ ಮುಹಮ್ಮದ್, ನಾನು ನಿನ್ನನ್ನು ಇದರಿಂದ ತಡೆದಿರಲಿಲ್ಲವೇ” ಎಂದು ಬೆದರಿಕೆ ಹಾಕಿದನು. ಪ್ರವಾದಿಗಳು ತೀವ್ರವಾಗಿ ಪ್ರತಿಕ್ರಿಯಿಸಿದರು. ಅಬೂಜಹಲ್ ಹೇಳಿದ,
ಯಾರ ಬಲದಿಂದ ನನ್ನನ್ನು ಗದರಿ ಸುತ್ತಿರುವೆ ದೇವನಾಣೆ ಈ ಪ್ರದೇಶದಲ್ಲಿ ನನ್ನ ಬೆಂಬಗಲಿಗರು ಅನೇಕರಿದ್ದಾರೆ.
ಆದರೂ ಪ್ರವಾದಿ(ಸ) ತನ್ನ ಆರಾಧನೆಯನ್ನು ಮುಂದರಿಸಿದರು. ಅಬೂ ಜಹಲನು ಪ್ರವಾದಿಗಳನ್ನು ಪ್ರಾರ್ಥನೆಯಿಂದ ತಡೆಯುವಲ್ಲಿ ವಿಫಲನಾದ.
ಆದಾಗ್ಯೂ ಪ್ರವಾದಿಗಳು ತನ್ನ ನಂಬಿಕೆಗಳಲ್ಲಿ ಅಚಲರಾಗಿದ್ದರು. ಪರಿಸರದ ಮೌಢ್ಯಚಾರಗಳೊಂದಿಗೆ ಹೊಂದಾಣಿಕೆ ಮಾಡುವ ಜಾಯಮಾನವು ಅವರದ್ದಲ್ಲ. ಮೌಢ್ಯಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ತನ್ನ ದೌತ್ಯಾಭಿಮುಖಿಗಳ ಮತ್ತು ತನ್ನ ಅನುಯಾಯಿಗಳನ್ನು ವೈಚಾರಿಕ ಅಧಃಪತನಕ್ಕೆ ದಾರಿ ಮಾಡಿಕೊಡುವುದು ಪ್ರವಾದಿ ದೌತ್ಯದ ಉದ್ದೇಶವಲ್ಲ.
ಇಲ್ಲಿ ದೇವವಿಶ್ವಾಸದ ದೃಢ ಸಂಕಲ್ಪದೊಂದಿಗೆ ದೇವನ ಭಯಾನಿಷ್ಠೆಯನ್ನು ತನ್ನ ಬದುಕಿನ ಆಶಯಕವಾಗಿ ಮೈಗೂಡಿಸಿ ಕೊಳ್ಳುವುದು ಪ್ರಮುಖವಾಗಿದೆ. ತನ್ನ ಲೌಕಿಕ ನೀತಿ ವಿಧಾನಗಳಿಗೂ ಮತ್ತು ಪಾರತ್ರಿಕ ಮೋಕ್ಷಕ್ಕೂ ಅತ್ಯಂತ ಸೂಕ್ತವಾದ ಮಾರ್ಗ ಇದಾಗಿದೆ ಎಂಬ ಸಂಕಲ್ಪ ಶುದ್ದಿಯನ್ನು ಹೊಂದಿರಬೇಕು.
ಈ ಅರ್ಥದಲ್ಲಿ ಯಾವನೊಬ್ಬನು ಮುಸ್ಲಿಮ್ ಪರಿವಾರದಲ್ಲಿ ಹುಟ್ಟಿದನೆಂಬ ಕಾರಣಕ್ಕಾಗಿ ಆತನಿಗೆ ಮೋಕ್ಷ ಸಿದ್ದಿಸುವುದು ಎಂಬ ಭಾವನೆಯಿದ್ದರೆ ಪ್ರವಾದಿ ದೌತ್ಯೋಪದೇಶದಂತೆ ಅದೊಂದು ಮೌಢ್ಯ ಭಾವನೆಯಾಗಿದೆ.
ಸಾಮಾನ್ಯವಾಗಿ ಮಾನವರು ಮನುವಿನಿಂದ ಬಳವಳಿಯಾಗಿ ಬಂದವರು. ಅಥವಾ ಕ್ರೈಸ್ತ, ಯಹೂದಿ, ಇಸ್ಲಾಮ್ ಧರ್ಮದಂತೆ ಮಾನವರು ಆದಂ ಮತ್ತು ಹವ್ವಾರ ಸಂತತಿಗಳಾಗಿದ್ದಾರೆ. ಅದರಂತೆ ಮಾನವ ಕೋಟಿಯನ್ನು ಅನೇಕ ಕುಲ ವರ್ಣಗಳಲ್ಲಿ ವಿಂಗಡಿಸಲಾಗಿದೆ. ಯಾಕೆಂದರೆ ವಿಶ್ವದ ಯಾವ ಪ್ರದೇಶದವನು ಯಾವ ಕುಲದವನು ಎಂದು ಪರಿಚಯಪಡಲಿಕ್ಕಾಗಿ ಮಾತ್ರ. ಅದರಂತೆ ಜನನದ ಆಧಾರದಲ್ಲಿ ಅಥವಾ ಕುಲ ಗೋತ್ರಗಳ ಆಧಾರದಲ್ಲಿ ಜನರಲ್ಲಿ ಶ್ರೇಷ್ಠನು ನಿಕೃಷ್ಟನು ಎಂಬ ಪುರುಡು ಭಾವನೆಗಳನ್ನು ಪ್ರವಾದಿ ಮುಹಮ್ಮದರು(ಸ) ಪುರಸ್ಕರಿಸಲಿಲ್ಲ. ಅನ್ಯಥಾ ಧರ್ಮ ಗ್ರಂಥಗಳು ಪ್ರತಿ ಪಾದಿಸಿದಂತೆ ನಿಮ್ಮಲ್ಲಿ ಶ್ರೇಷ್ಠನು ಯಾರೆಂದರೆ ಅತ್ಯಂತ ಹೆಚ್ಚು ದೇವಭಯ ನಿಷ್ಠೆಯುಳ್ಳವನು. ಅರ್ಥಾತ್ ನಿಜಾರ್ಥದಲ್ಲಿ ಅತ್ಯಂತ ಹೆಚ್ಚು ಭಯಾನಿಷ್ಠೆಯುಳ್ಳ ವನು, ದೇವಾಜ್ಞೆಗಳನ್ನು ನಿಷ್ಠೆಯಿಂದ ಪಾಲಿಸುವವನು, ಸಜ್ಜನನು, ನ್ಯಾಯ ನೀತಿಯನ್ನು ಪಾಲಿಸುವವನು ಆಗಿರುತ್ತಾನೆ.
ಇನ್ನೊಂದು ವೀಕ್ಷಣೆಯಲ್ಲಿ ಅವನ ಯಾವತ್ತೂ ಲೋಕ ಕಂಟಕನಾಗಿರಲು ಸಾಧ್ಯವಿಲ್ಲ. ತಾನು ನೆಮ್ಮದಿಯಿಂದ ಬದುಕುವುದರೊಂದಿಗೆ ಸಹಬಾಳ್ವೆ ನಡೆಸುವ ಮನುಷ್ಯರನ್ನು ನೆಮ್ಮದಿಯಿಂದ ಬದುಕಲು ಬಿಡಬೇಕು. ನ್ಯಾಯ ನೀತಿ, ಸಮಾನತೆ, ಸಹಿಷ್ಣುತೆಯನ್ನು ಪಾಲಿಸಬೇಕು. ತನ್ನ ಜನಾಂಗದವನು ಎಂಬ ಒಂದೇ ಕಾರಣಕ್ಕಾಗಿ ಅವನ ಬದುಕುವ ಹಕ್ಕನ್ನು ಕಸಿದುಕೊಳ್ಳುವುದು ಸರಿಯಲ್ಲ.
ಧರ್ಮ ಗ್ರಂಥ ಏನು ಹೇಳುತ್ತದೆ. ಒಂದು ಜನಾಂಗದ ಮೇಲಿರುವ ನಿಮ್ಮ ವೈಷಮ್ಯವು ಅವರ ಮೇಲೆ ಅನ್ಯಾಯ ದೌರ್ಜನ್ಯಗಳನ್ನು ಗೈಯ್ಯಲು ಪ್ರೇರಣೆ ನೀಡದಿರಲಿ. ನ್ಯಾಯ ನೀತಿಯನ್ನು ಪಾಲಿಸಿರಿ. ಯಾಕೆಂದರೆ ದೇವ ವಿಶ್ವಾಸಕ್ಕೆ ಇದು (ನ್ಯಾಯ ನೀತಿ) ಸನಿಹವಾಗಿವೆ. (ಕುರ್ಆನ್)
ಆದರೆ ಈ ಧನಾತ್ಮಕ ಋಜು ಮಾತುಗಳು ನಾಗರಿಕ ಸಮಾಜದಲ್ಲಿ ಎಷ್ಟಂಶ ಪ್ರಾಯೋಗಿಕವಾಗಿ ನಡವಳಿಕೆಯಲ್ಲಿದೆ ಎಂಬುದು ಪ್ರಶ್ನೆ. ಪ್ರವಾದಿ ಮುಹಮ್ಮದರು(ಸ) ಮಕ್ಕಾದಿಂದ ಹಿಜ್ರಾ (ವಲಸೆ) ಬಂದು ಮದೀನದಲ್ಲಿ ಪ್ರಾರಂಭದಲ್ಲಿ ಮಸೀದಿ(ಮಸ್ಜಿದುನಬವಿ)ಯನ್ನು ಸ್ಥಾಪಿಸಿದರು. ಮತ್ತು ಅಲ್ಲಿಂದ ತನ್ನ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಧಾರ್ಮಿಕರಂಗ ಮತ್ತು ರಾಜಕೀಯ ರಂಗವೆಂಬ ವಿಭಜನೆ ಅಪ್ರಸ್ತುತವಾಗಿತ್ತು. ಅನ್ಯಥಾ ಸಾಮಾಜಿಕ ರಾಜಕೀಯ ಅರ್ಥಾತ್ ಬದುಕಿನ ಸರ್ವಸ್ತ್ರಗಳಲ್ಲೂ ನ್ಯಾಯ ನೀತಿ ಸಹಿಷ್ಣತೆ ಸಮಾನತೆಯನ್ನು ಎತ್ತಿ ಹಿಡಿಯಲಾಗಿತ್ತು. ಈ ಕಾರ್ಯಗಳಲ್ಲಿ ದೇವಭಯಾನಿಷ್ಠೆಯ ತಳಹದಿಯಲ್ಲಿ ರೂಪಿಸಲಾಗಿತ್ತು. ಕುಡಿತ, ಜೂಜು, ಹಾದರದಂತಹ ಕಾರ್ಯಗಳು ವೈಯಕ್ತಿಕ ಸ್ವಾತಂತ್ರ್ಯದ ಪಟ್ಟಿಯಿಂದ ಹೊರಗಿಡಲಾಗಿತ್ತು.
ಪರಿಸರದಲ್ಲಿರುವ ಯಹೂದಿ ಕ್ರೈಸ್ತ ಸಮುದಾಯದೊಂದಿಗೆ ಮತ್ತು ಔಸ್ ಮತ್ತು ಖಜ್ರಜ್ ಎಂಬ ಮುಸ್ಲಿಮೇತರ ಸಮುದಾಯದೊಂದಿಗೆ ಪ್ರವಾದಿ(ಸ) ಸಾಮಾಜಿಕ ಮತ್ತು ರಾಜಕೀಯ ಒಪ್ಪಂದ ಮಾಡಿದರು. ಸುಮಾರು 45ಕ್ಕಿಂತಲೂ ಅಧಿಕ ನಿಬಂಧನೆಗಳನ್ನೊಳಗೊಂಡ ಲಿಖಿತ ಒಪ್ಪಂದವನ್ನು ಮಾಡಿದರು. ಅದು ರಚನಾತ್ಮಕ ಮತ್ತು ಸಭ್ಯತೆಯಿಂದ ಕೂಡಿದ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಅನ್ಯಾಯಗಳ ವಿರುದ್ಧ ಸ್ವರವೆತ್ತುವ ಅಭಿವ್ಯಕ್ತಿಯ ಮೌಲ್ಯಗಳಿಂದ ಆವೃತವಾಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಅನ್ಯರ ನಂಬಿಕೆ, ಶ್ರದ್ಧೆಗಳ ಮೇಲೆ ಬಲವಂತವಾಗಿ ಒತ್ತಡ ಹೇರುವ ಹತ್ತಿಕ್ಕುವ ಕಾರ್ಯಗಳು ನೀತಿ ಬಾಹಿರವಾಗಿದ್ದವು. ಸಾಮಾಜಿಕ ಅನ್ಯಾಯ ದೌರ್ಜನ್ಯಗಳನ್ನು ಖಂಡಿಸುವ ಅಭಿವ್ಯಕ್ತಿಯು ಸುಧಾರಣಾತ್ಮಕ ಮತ್ತು ಸಾಮಾಜಿಕ ಸಂತುಲಿತೆಯನ್ನು ರಕ್ಷಿಸುವ ನುಡಿಗಳಿಂದ ಕೂಡಿರಬೇಕು. ಇದು ಪ್ರವಾದಿ ಪ್ರತಿಪಾದಿಸಿದ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿವೆ.
ಈ ಸದ್ಭುದ್ದಿಗಳನ್ನು ಕಾಯ್ದುಕೊಳ್ಳುವುದರ ಅರ್ಥ ಮಾನವನು ಸ್ವಾರ್ಥ ಮತ್ತು ಆತ್ಮ ಪ್ರತಿಷ್ಠೆಯ ವಿರುದ್ಧ ಸ್ವಯಂ ಪ್ರವರ್ತಿಸುವ ಪ್ರಕ್ರಿಯೆಯಾಗಿವೆ. ಪ್ರವಾದಿ ಕಾಲಾನಂತರ ಪ್ರಭುತ್ವವನ್ನು ಪಡೆದ ನಾಲ್ಕು ಮಂದಿ ಖಲೀಫಾರ ಆಡಳಿತದಲ್ಲಿ ಈ ಮೌಲ್ಯಗಳು ಅತ್ಯಧಿಕ ಮಟ್ಟಿಗೆ ಜೀವಂತವಾಗಿದ್ದವು. ಆದರೆ ಖಿಲಾಫತ್ ನಂತರ ಬಂದಿರುವ ಉಮವಿ ಮತ್ತು ಅಬ್ಬಾಸಿಯ ಅರಸೊತ್ತಿಗೆಯಾಗಿ ಮಾರ್ಪಟ್ಟ ಇಸ್ಲಾಮೀ ಪ್ರಭುತ್ವಗಳಲ್ಲಿ ಈ ರಾಜಧರ್ಮವು ಉಲ್ಲಂಘಿಸಲ್ಪಡುತ್ತಿದ್ದವು. ಶೂರಾ (ಸಂಸತ್) ಪದ್ಧತಿಯನ್ನು ಸ್ಥಗಿತಗೊಳಿಸಲಾಗಿತ್ತು. ರಾಜ್ಯದ ಬೊಕ್ಕಸವು ರಾಷ್ಟ್ರದ ಸೊತ್ತಾಗಿರುವುದರ ಬದಲು ಅರಸರ ಖಾಸಗಿ ಸೊತ್ತಾಗಿ ಮಾರ್ಪಟ್ಟಿತ್ತು.
ಆದರೂ ರಾಜ ನೀತಿಯಲ್ಲಿ ಇಸ್ಲಾಮೀ ಮೌಲ್ಯಗಳು ಜೀವಂತವಾಗಿದ್ದವು. ಯುದ್ಧಗಳಲ್ಲಿ ಇಸ್ಲಾಮೀ ಯೋಧರ ಖಡ್ಗಗಳು ನ್ಯಾಯ, ನೀತಿ ಸಹಿಷ್ಣುತೆಯನ್ನು ಎತ್ತರಕ್ಕೇರಿಸುವ ಆಯುಧಗಳಾಗಿದ್ದವು. ಮುಂದಕ್ಕೆ ರಾಜನೀತಿಯನ್ನು ಇಸ್ಲಾಮೀ ಮೌಲ್ಯಗಳಿಂದ ತೆರವುಗೊಳಿಸಿದಾಗ ಮುಸ್ಲಿಮರು ಪತನೋನ್ಮುಖರಾದರು. ಕಳೆದ ಶತಮಾನದ ಆದಿಯಲ್ಲಿ 1924ರಲ್ಲಿ ಟರ್ಕಿಯಿಂದ ಇಸ್ಲಾಮೀ ಖಿಲಾಫತ್ ದುರ್ಬಲವಾಗಿದ್ದರೂ ಒಂದು ವೀಕೇಂದ್ರಿತ ಏಕತೆಯನ್ನು ಸಾರುತ್ತಿತ್ತು. ದುರದೃಷ್ಟವಶಾತ್ ಪ್ರಥಮ ಮಹಾ ಯುದ್ಧದ ನಂತರ ಖಿಲಾಫತ್ನ ಅಡಿಯಲ್ಲಿದ್ದ ಮುಸ್ಲಿಮ್ ರಾಷ್ಟ್ರಗಳು ಈಜಿಪ್ಟ್, ಸಿರಿಯಾ, ಇರಾಕ್ ಗಳು ಎಡಪಂಥೀಯ ವಿಚಾರಗಳಲ್ಲಿ ತಮ್ಮ ರಾಜಕೀಯ ಏಳಿಗೆಯನ್ನು ಬಯಸಿದ್ದವು.
ಅರಬ್ ರಾಷ್ಟ್ರಗಳು ಸೌದಿ ಅರೇಬಿಯಾ, ಕತಾರ್, ಮೊರೊಕ್ಕೊ, ಟುನೀಶಿಯಾ, ಲಿಬಿಯಾ ಮುಂತಾದ ದೇಶಗಳು ಖಿಲಾಫತ್ನಿಂದ ಬೇರ್ಪಟ್ಟು ಅರೇಬಿಯನ್ ರಾಷ್ಟ್ರೀಯತೆ ಮತ್ತು ಅರಸೊತ್ತಿಗೆಯ ಅಡಿಯಾಳುಗಳಾಗಿ ಮಾರ್ಪಟ್ಟವು. ಇಸ್ಲಾಮೀ ರಾಜನೀತಿಯು ಅನೂರ್ಜಿತವೆಂದು ತ್ಯಜಿಸಿದ ಈ ರಾಷ್ಟ್ರಗಳು ತೈಲ ಸಂಪನ್ನ ಆರ್ಥಿಕ ಬಲವನ್ನು ಹೊಂದಿದ್ದರು.
ಕಳೆದ ಶತಮಾನದಲ್ಲಿ ರಕ್ತ ಕಾಲುವೆ ಹರಿಸಿದ ಮಹಾಯುದ್ಧಗಳ ರೂವಾರಿಗಳಾರು? ಜರ್ಮನಿ ಮತ್ತು ಇಟೆಲಿಯ ಸರ್ವಾಧಿಕಾರಿ ಆಡಳಿತಗಾರರು. ವಾಸ್ತವದಲ್ಲಿ ಅವರು ಕ್ರೈಸ್ತ ಧರ್ಮಾನುಯಾಯಿಗಳಾಗಿದ್ದರೂ ಆ ಧರ್ಮದ ಮೌಲ್ಯಗಳನ್ನು ಬದಿಗೊತ್ತಿಕೊಂಡ ಅವರ ರಾಜನೀತಿಯು ಜೀಸಸ್ನದು ಜೀಸಸ್ಗೆ ಮತ್ತು ಸೀಸರನದು ಸೀಸರನಿಗೆ ಎಂಬ ಪುರುಡು ಜನಾಂಗೀಯತೆಗೆ ಅಧೀನವಾಗಿತ್ತು. ಧರ್ಮದ ಮುಖವಾಡದಲ್ಲಿ ಬೆಳೆದು ಬರುವ ಜನಾಂಗೀಯತೆಯಲ್ಲಿ ಸ್ವಾತಂತ್ರ್ಯ, ಭ್ರಾತೃತ್ವ ಸಹಿಷ್ಣುತೆ, ಪರೋಪಕಾರ ಸಹಬಾಳ್ವೆಗಳೆಲ್ಲ ಮಾಯವಾಗಿ ಪ್ರತ್ಯೇಕತೆ ದ್ವೇಷ ಹಿಂಸೆ ತಾರತಮ್ಯಗಳು ತಾರಕಕ್ಕೇರು ವುದರಲ್ಲಿ ಸಂಶಯವಿಲ್ಲ. ಪ್ರವಾದಿ ಮುಹಮ್ಮದ್(ಸ) ಜನಾಂಗೀಯತೆಯನ್ನು ಬುಡ ಸಹಿತ ಕಿತ್ತು ಹಾಕಿದರು.












