ಪ್ರತಿಭಟನಾ ನಿರತ ರೈತರು ಚಿಕನ್ ಬಿರಿಯಾನಿ ತಿಂದು ಹಕ್ಕಿಜ್ವರ ಹರಡುತ್ತಿದ್ದಾರೆ: ಬಿಜೆಪಿ ಶಾಸಕ ಮದನ್ ದಿಲ್ವಾರ್

0
423

ಸನ್ಮಾರ್ಗ ವಾರ್ತೆ

ನವದೆಹಲಿ: ಕಳೆದ ಒಂದೂವರೆ ತಿಂಗಳಿನಿಂದ ಕೇಂದ್ರ ಜಾರಿಗೊಳಿಸಿರುವ ಕೃಷಿ ಕಾನೂನು ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಇದುವರೆಗೆ ಕೊರೋನ ಹರಡುವ ಭೀತಿ ಹೆಚ್ಚಾಗಿದೆ ಎಂಬುದಾಗಿ ನಾಯಕರು ಆರೋಪಿಸಿದ್ದರು. ಈ ನಡುವೆ ರೈತರು ತಿನ್ನುತ್ತಿರುವ ಚಿಕನ್ ಬಿರಿಯಾನಿಯಿಂದ ಹಕ್ಕಿಜ್ವರ ಹರಡುತ್ತಿದೆ ಎಂಬುದಾಗಿ ಬಿಜೆಪಿ ಶಾಸಕ ಮದನ್ ದಿಲ್ವಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರತಿಭಟನಾ ಸ್ಥಳಗಳಲ್ಲಿ ಕೋಳಿ ಮಾಂಸ ಸೇವಿಸಿ ಹಕ್ಕಿ ಜ್ವರ ಹರಡುತ್ತಿದ್ದಾರೆ ಎಂಬುದಾಗಿ ಅವರು ನೀಡಿದ ಹೇಳಿಕೆಯು ವಿವದಾಕ್ಕೆಡೆಯಾಗಿದೆ.

ರೈತರಿಗೆ ದೇಶದ ಬಗ್ಗೆ ಕಾಳಜಿಯಿಲ್ಲ, ರುಚಿಯಾದ ಆಹಾರದ ಜೊತೆ ಪಿಕ್‌ನಿಕ್‌ಗೆ ಬಂದಿರುವಂತೆ ಎಂಜಾಯ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.  ಒಂದು ವೇಳೆ ರೈತರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸದಿದ್ದರೆ ಹಕ್ಕಿಜ್ವರ ದೇಶದ ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಲಿದೆ ಎಂದು ದಿಲ್ವಾರ್ ಹೇಳಿದರು.

ರೈತರು ಹೋರಾಟ ನಡೆಸುತ್ತಿದ್ದಾರೆ. ಇನ್ನು ಕೆಲ ರೈತರು ಯಾವುದೇ ಚಳವಳಿಯಲ್ಲಿ ತೊಡಗಿಸಿಕೊಂಡಿಲ್ಲ ಆದರೆ, ಚಿಕನ್ ಬಿರಿಯಾನಿ, ಡ್ರೈ ಪ್ರೂಟ್ಸ್ ತಿನ್ನುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದ ಹಕ್ಕಿ ಜ್ವರ ಹರಡುವ ಶಂಕೆ ಇದೆ. ರೈತ ಪ್ರತಿಭಟನಾಕಾರರ ನಡುವೆ ಭಯೋತ್ಪಾದಕರು, ಕಿಸೆಗಳ್ಳರು, ಆರೋಪಿಗಳೂ ಇದ್ದಾರೆ ಇವರು ರೈತರಿಗೆ ಶತ್ರುಗಳಾಗಿ ಪರಿಣಮಿಸಬಹುದು ಎಂದು ಅವರು ಹೇಳಿದ ವಿಡಿಯೋ ವೈರಲ್ ಆಗಿದ್ದು ಹೋರಾಟಗಾರರು, ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ತಬ್ಲೀಗ್ ಜಮಾಅತ್ ಕಾರ್ಯಕ್ರಮದಿಂದ ಕೊರೋನ ಹರಡತ್ತಿದ್ದಾರೆ ಎಂದು ಆರೋಪಿಸಿದವರು ಇದೀಗ ರೈತ ಪ್ರತಿಭಟನೆಯಿಂದ ಹಕ್ಕಿ ಜ್ವರ ಹರಡುತ್ತಿದ್ದಾರೆ ಎನ್ನುತ್ತಿದ್ದಾರೆ ಎಂದು ದಿಲ್ವಾರ್‌ರನ್ನು ನೆಟ್ಟಿಗರು ಕುಟುಕಿದ್ದಾರೆ‌.