ಹಸಿವಿಗೆ ಧರ್ಮವಿಲ್ಲ: ಸಾವಿರಾರು ವಲಸೆ ಕಾರ್ಮಿಕರ ಹಸಿವಿಗೆ ಪ್ರತಿಸ್ಪಂದಿಸುವ ಸಿಖ್ಖ-ಮುಸ್ಲಿಮ್ ಸಂಸ್ಥೆಗಳು

0
1314

ಸನ್ಮಾರ್ಗ ವಾರ್ತೆ

ನಾಸಿಕ್,ಮೇ,13: ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಮುಂಬೈನಿಂದ ಯುಪಿ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಇತರ ರಾಜ್ಯಗಳಿಗೆ ತೆರಳುತ್ತಿರುವ ಕಾರ್ಮಿಕರ ದಂಡುಗಳು ರಸ್ತೆಯನ್ನು ತುಂಬಿಕೊಂಡಿವೆ. ಸುಡುವ ಬಿಸಿಲಿನ ಮಧ್ಯೆ ಹಸಿವು ತಣಿಸುವ ಈ ಲಂಗರುಗಳು ಕಾರ್ಮಿಕರಿಗೆ ಮರುಭೂಮಿಯ ಓಯಾಸಿಸ್ ಆಗಿ ಮಾರ್ಪಟ್ಟಿವೆ.

ಕಸಾರಾ(ಮುಂಬೈ) ಮತ್ತು ನಾಸಿಕ್ ನಡುವೆ ಸ್ಥಳದಿಂದ ಸ್ಥಳಕ್ಕೆ ವಲಸೆ ಕಾರ್ಮಿಕರಿಗಾಗಿ ಲಂಗರ್ ಊಟವನ್ನು ನೀಡುತ್ತಿದ್ದಾರೆ. 80 ಕಿ.ಮೀ ದೂರದ ಅಂತರದಲ್ಲಿರುವ ಈ ಎರಡು ದೊಡ್ಡ ಲಂಗರ್‌ ಊಟಗಳನ್ನು ಸಿಖ್ ಸಮುದಾಯ ನಡೆಸುತ್ತಿದೆ ಮತ್ತು ಒಂದು ಲಂಗರ್‌ ಊಟದ ಡೇರೆಯನ್ನು ಮುಸ್ಲಿಂ ಸಮುದಾಯ ನಡೆಸುತ್ತಿದೆ.

ನಿರ್ಮಾಲಾ ಆಶ್ರಮ ತಪಸ್ಥಾನ್ ಲಂಗರ್ ಅನ್ನು ಸಿಖ್ಖರು ನಾಸಿಕ್ ನಿಂದ 25 ಕಿ.ಮೀ ದೂರದಲ್ಲಿರುವ ರಾಜೂರ್ ಫಾಟಾದಲ್ಲಿ ನಿರ್ವಹಿಸುತ್ತಿದ್ದಾರೆ. ಇಲ್ಲಿಂದ ಸ್ವಲ್ಪ ಮುಂದೆ ಸಾಗುತ್ತಿರುವಾಗ, ಮುಸ್ಲಿಮರ ಆಶ್ರಯದೊಂದಿಗೆ ಜನಜೀವನ್ ವಿವಿಧೋದ್ದೇಶ ಪ್ರತಿಷ್ಠಾನವು ವಾಡಿವೆರೆ ಗ್ರಾಮದ ಬಳಿ ಎರಡನೇ ಲಂಗರ್‌ನ್ನು ನಡೆಸುತ್ತಿದೆ.

ಮೂರನೇ ಲಂಗರ್ ಅನ್ನು ಸಿಖ್ಖರು ನಾಸಿಕ್ ನಿಂದ 65 ಕಿ.ಮೀ ದೂರದಲ್ಲಿರುವ ಮಂಗ್ರುಲ್‌ನಲ್ಲಿ ನಡೆಸುತ್ತಿದ್ದಾರೆ. ಇದಲ್ಲದೇ, ಅಲ್ಲಲ್ಲಿ ಹಿಂದೂ ಬಾಂಧವರು ರಿಕ್ಷಾ, ಕಾರ್ ಗಳಲ್ಲಿ ಬಂದು ನೀರು ಆಹಾರ ಪೊಟ್ಟಣಗಳನ್ನು ನೀಡುವುದು ನಗರದಲ್ಲಿ ಕಂಡು ಬರುತ್ತಿದೆ. ಹೆದ್ದಾರಿಯ ಈ ನೋಟವನ್ನು ನೋಡುವಾಗ, ಅಲ್ಲಮಾ ಇಕ್ಬಾಲ್ ಬರೆದಿರುವ ಸಾಲುಗಳು, ‘ಧರ್ಮವು ಪರಸ್ಪರ ಕಚ್ಚಾಡುವುದನ್ನು ಕಲಿಸುವುದಿಲ್ಲ, ………. ಹಿಂದೂಸ್ತಾನ್ ನಮ್ಮದು’ ಎಂಬ ಸಾಲುಗಳು ಸ್ಮೃತಿಪಟಲದಲ್ಲಿ ಹಾದು ಹೋಗುತ್ತವೆ.

ಹಸಿವಿನಿಂದ ಮತ್ತು ಬಾಯಾರಿಕೆಯಿಂದ ತಮ್ಮ ಮನೆಗಳ ಕಡೆಗೆ ಕಾಲ್ನಡಿಗೆ ಹೊರಟ ವಲಸೆ ಕಾರ್ಮಿಕರಿಗೆ ಹಿಂದೂ, ಮುಸ್ಲಿಂ ಮತ್ತು ಸಿಖ್ ಸಮುದಾಯದ ಜನರು ಸೇವೆ ಸಲ್ಲಿಸುತ್ತಿದ್ದಾರೆ. ನಮಗೆ ಯಾರು ಆಹಾರವನ್ನು ನೀಡುತ್ತಿದ್ದಾರೆಂದು ತಿನ್ನುವವರಿಗೆ ತಿಳಿದಿಲ್ಲ ಅಥವಾ ನಾವು ಯಾರಿಗೆ ಆಹಾರವನ್ನು ನೀಡುತ್ತಿದ್ದೇವೆ ಎಂದು ಹಸಿವಿಂಗಿಸುವವರಿಗೂ ತಿಳಿದಿಲ್ಲ. ಪವಿತ್ರ ರಮಝಾನ್ ತಿಂಗಳ ಸಮಯದಲ್ಲಿ, ಉಪವಾಸಿಗರು ಸ್ವತಃ ಹಸಿವು ಮತ್ತು ಬಾಯಾರಿಕೆಯಿಂದ ಇದ್ದರೂ ಹೆದ್ದಾರಿಯ ಮೂಲಕ ಹಾದುಹೋಗುವ ಕಾರ್ಮಿಕರ ಹಸಿವಿಗೂ ಬಾಯಾರಿಕೆಗೂ ಸೇವೆ ನೀಡುವಲ್ಲಿ ನಿರತರಾಗಿದ್ದಾರೆ.

ಕಸಾರಾದಿಂದ ಸ್ವಲ್ಪ ಚಲಿಸಿದ ತಕ್ಷಣ, ಮುಸ್ಲಿಮರು ನಡೆಸುತ್ತಿರುವ ಲಂಗರ್ ಕಂಡು ಬರುತ್ತದೆ. ನಾಸಿಕ್ ಆಶಾ ಜನಜೀವನ್ ವಿವಿಧೋದ್ದೇಶ ಪ್ರತಿಷ್ಠಾನವು ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಇಲ್ಲಿ ಲಂಗರ್ ಊಟ ನಡೆಸುತ್ತಿದೆ. ಈ ಜನರು ಪ್ರಯಾಣಿಕರಿಗೆ ಹಣ್ಣುಗಳು, ಬಿರಿಯಾನಿ, ಖಿಚ್ಡಿ ಮತ್ತು ನೀರನ್ನು ನೀಡುತ್ತಿದ್ದಾರೆ.

ಸಂಘಟನೆಯ ಅಜ್ಮಲ್ ಖಾನ್ ಹೇಳುವಂತೆ, ಪ್ರತಿದಿನ ನಾಲ್ಕರಿಂದ ಐದು ಸಾವಿರ ಜನರು ತಮ್ಮ ಹಸಿವು ಮತ್ತು ಬಾಯಾರಿಕೆಯನ್ನು ಇಲ್ಲಿ ನೀಗಿಸಿಕೊಳ್ಳುತ್ತಾರೆ. ವಿವಿಧ ವಾಹನ,ಸೈಕಲ್ ಹಾಗೂ ಕಾಲ್ನಡಿಗೆ ಹೊರಟ ವಲಸೆ ಕಾರ್ಮಿಕರು ಇಲ್ಲಿ ನಿಲ್ಲುತ್ತಾರೆ. ಹಸಿವು ಮತ್ತು ದಾಹವನ್ನು ತಣಿಸಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ತೆರಳುವಾಗ ಪ್ರತಿಹಂತದಲ್ಲಿ ಅದೆಷ್ಟೋ ಬಾರಿ ಧನ್ಯವಾದ ಸಲ್ಲಿಸುತ್ತಾರೆ.

ಸಿಖ್ ಸಮುದಾಯದ ಲಂಗರ್‌ನಲ್ಲಿ ಆಹಾರದ ಹೊರತಾಗಿ ಮಜ್ಜಿಗೆ, ನೀರು ಮತ್ತು ಲಸ್ಸಿಗಳನ್ನು ಸಹ ವಿತರಿಸಲಾಗುತ್ತಿದೆ.

ಪ್ರತಿದಿನ 5-6 ಸಾವಿರ ಜನರು ಬೆಳಿಗ್ಗೆಯಿಂದ ತಡರಾತ್ರಿಯವರೆಗೆ ನಡೆಯುವ ಲಂಗರ್‌ನಲ್ಲಿ ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತಿದ್ದಾರೆ ಎಂದು ಸಮುದಾಯದ ಹರ್ವಿಂದರ್ ಸಿಂಗ್ ಅವರು ಹೇಳಿದರು.

ಪ್ರಯಾಣದಲ್ಲಿರುವ ವಲಸೆ ಕಾರ್ಮಿಕರಿಗೆ ಆಹಾರ ಮತ್ತು ಪಾನೀಯಕ್ಕೆ ತಮ್ಮದೇ ಆದ ವ್ಯವಸ್ಥೆಗಳಿಲ್ಲ. ಅವರು ದಾರಿಯಲ್ಲಿ ಸಿಗುವ ನದಿಗಳಲ್ಲಿ ಸ್ನಾನ ಮಾಡುತ್ತಿದ್ದಾರೆ. ಅಲ್ಲಲ್ಲಿ ನೀಡಲಾದ ಆಹಾರವನ್ನು ಪಾನೀಯವನ್ನು ತಿಂದು ನಡೆದುಕೊಂಡು ಮತ್ತೆ‌ ತಮ್ಮೂರತ್ತ ಹೆಜ್ಜೆ ಹಾಕುತ್ತಾರೆ.

ಮಂಗಳವಾರ, ಕಸರಾ ಘಾಟ್‌ನಲ್ಲಿ ಜಾರ್ಖಂಡ್‌ಗೆ ಹೋಗುವ 70 ಜನರ ಗುಂಪನ್ನು ಭೇಟಿಯಾದೆವು. ನಾವು ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದೇವೆ ಎಂದು ಗುಂಪಿನ ಉಮೇಶ್ ಮಂಡಲ್ ಹೇಳಿದರು. ನಾವು ಇದನ್ನು ಡೀಪ್ ಕಲೆಕ್ಟರ್‌ಗೆ ಈ ಕುರಿತು ವರದಿ ಮಾಡಿದೆವು. ನಂತರ ಈ ಜನರನ್ನು ಬಸ್ಸುಗಳ ಮೂಲಕ ಸೆಂಧ್ವಾ ಗಡಿಗೆ ಬಿಡುಗಡೆ ಮಾಡಲಾಯಿತು. ಕಾರ್ಮಿಕರನ್ನು ಇತರ ರಾಜ್ಯಗಳ ಗಡಿಯವರೆಗೆ ಬಿಡಲು ಸರಕಾರವು ಬಸ್ಸುಗಳನ್ನು ಓಡಿಸುತ್ತಿದೆ, ಆದರೆ ಎಲ್ಲರಿಗೂ ಇದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ವರದಿ: ಜೆಪಿ ಪವಾರ್
ಅನು: ಎಸ್‌ವೈಕೆ