ಪಂಜಾಬ್ ನ್ಯಾಶನಲ್ ಬ್ಯಾಂಕ್‍ ಗೆ ನೀರವ್ ಮೋದಿ 7300 ಕೋಟಿ ರೂ. ಕೊಡಬೇಕು: ಟ್ರಿಬ್ಯೂನಲ್

0
541

ಪುಣೆ, ಜು. 6: ಕೋಟ್ಯಂತರ ರೂಪಾಯಿ ಸಾಲ ಪಡೆದು ತಲೆ ತಪ್ಪಿಸಿಕೊಂಡಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ ಬಡ್ಡಿಸಹಿತ 7300 ಕೋಟಿ ರೂ. ನೀಡಬೇಕೆಂದು ಪುಣೆ ಡೆಬಿಟ್ ರಿಕವರಿ ಟ್ರಿಬ್ಯುನಲ್ (ಡಿ ಆರ್ ಟಿ ) ಆದೇಶಿಸಿದೆ. ಪಂಜಾಬ್ ನ್ಯಾಶನಲ್ ಬ್ಯಾಂಕ್ ಮುಂಬೈಯಲ್ಲಿ ದಾಖಲಿಸಿದ ಎರಡು ಪ್ರಕರಣಗಳಲ್ಲಿ ಡಿ ಆರ್ ಟಿ ಪ್ರಿಸೈಡಿಂಗ್ ಅಧಿಕಾರಿ ದೀಪಕ್ ಠಾಕೂರ್ ಈ ಆದೇಶ ಹೊರಡಿಸಿದರು. 1700 ಕೋಟಿ ರೂಪಾಯಿ ಆರ್ಥಿಕ ವಂಚನೆಯ ಇನ್ನೊಂದು ಕೇಸು ಡಿ ಆರ್ ಟಿ ಮುಂದಿದೆ.

ನೀರವ್ ಸಹೋದರಿ ಪೂರ್ವಿ ಮೋದಿ ಮತ್ತು ಅವರ ಪತಿ ಮಾಯಂಕ್ ಮೆಹ್ತಾರ 44.41 ಕೋಟಿ ರೂಪಾಯಿ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಲು ಸಿಂಗಾಪುರ ಹೈಕೋರ್ಟು ಒಂದು ವಾರದ ಮೊದಲು ಆದೇಶ ಹೊರಡಿಸಿತ್ತು. ಈ ಖಾತೆ ಸಿಂಗಾಪುರದಲ್ಲಿ ಇವರಿಬ್ಬರ ಒಡೆತನದಲ್ಲಿರುವ ಪವ್ಲಿಯನ್ ಪೊಯಿಂಟ್ ಕಂಪೆನಿಯ ಖಾತೆಯಾಗಿದೆ. ಪಂಜಾಬ್ ನ್ಯಾಶನಲ್ ಬ್ಯಾಂಕಿನಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದೆ ತಲೆ ತಪ್ಪಿಸಿಕೊಂಡಿದ್ದ ನೀರವ್ ಮೋದಿಯನ್ನು ಸ್ಕಾಟ್‍ಲೆಂಡ್ ಯಾರ್ಡ್ ಪೊಲೀಸರು ಮಾರ್ಚ್ 19ಕ್ಕೆ ಬಂಧಿಸಿದ್ದರು . ಈಗ ಅವರು ಸೌತ್‍ವೆಸ್ಟ್ ಲಂಡನ್‍ನ ವಾಂಡ್ಸ್‍ವರ್ತ್ ಜೈಲಿನಲ್ಲಿದ್ದಾರೆ.