ಪವಿತ್ರ ಕುರ್‌ಆನ್ ಆನ್‍ಲೈನ್ ಅಧ್ಯಯನ: ಜ್ಞಾನ ಪ್ರಸಾರಕ್ಕೊಂದು ಸ್ವಾಗತಾರ್ಹ ಕ್ರಮ- ಅಬ್ದುಸ್ಸಲಾಮ್ ಪುತ್ತಿಗೆ

0
672

ಸನ್ಮಾರ್ಗ ವಾರ್ತೆ

ಮಂಗಳೂರು: ಮಂಗಳೂರಿನಲ್ಲಿ ಹಿದಾಯತ್ ಸೆಂಟರನ್ನು ಕೇಂದ್ರವಾಗಿರಿಸಿಕೊಂಡು ಪವಿತ್ರ ಕುರ್‌ಆನ್ ಅಧ್ಯಯನಕ್ಕಾಗಿ ಇತ್ತೀಚೆಗೆ ಆರಂಭಿಸಿರುವ ಆನ್‍ಲೈನ್ ಕೋರ್ಸ್ ಒಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆಯವರು ತಿಳಿಸಿದರು.

ಕುರ್‌ಆನ್ ಆನ್‍ಲೈನ್ ಅಧ್ಯಯನ ಸರಣಿಯ ಎರಡನೇ ಕೈಪಿಡಿಯ ಬಿಡುಗಡೆ ಸಮಾರಂಭಕ್ಕೆ ಕಳುಹಿಸಿದ ಶುಭ ಸಂದೇಶದಲ್ಲಿ ಅವರು ಈ ಮಾತನ್ನು ಹೇಳಿದರು.

ಯಾವುದಾದರೂ ನಿರ್ದಿಷ್ಟ ಸ್ಥಳಕ್ಕೆ ಹೋಗಿ ಕಲಿಯಲು ಅನುಕೂಲ ವಿಲ್ಲದ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ಸಹಾಯವಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬಳಸಿ ನಡೆಸಲಾಗುತ್ತಿರುವ ಈ ಕೋರ್ಸ್‍ನಲ್ಲಿ ಕುರ್‌ಆನ್‍ನ ಪದಗಳು ಹಾಗೂ ವಾಕ್ಯಗಳನ್ನು ಅವುಗಳ ಶಬ್ದಾರ್ಥ, ತಾತ್ಪರ್ಯ, ಹಿನ್ನೆಲೆ ಮತ್ತು ವ್ಯಾಕರಣದ ಸಹಿತ ವಿದ್ಯಾರ್ಥಿಗಳಿಗೆ ಕಲಿಸಿ ಕೊಡಲಾಗುತ್ತಿದೆ. ಆನ್‍ಲೈನ್‍ನಲ್ಲಿ ಶಿಕ್ಷಕರು ಮೌಖಿಕವಾಗಿ ಏನನ್ನು ಕಲಿಸುತ್ತಾರೋ ಅದನ್ನೇ ಪರಿಣಾಮಕಾರಿಯಾಗಿ ಮನನ ಮಾಡಿಕೊಳ್ಳುವುದಕ್ಕೆ ಮತ್ತು ನೆನಪಿಟ್ಟು ಕೊಳ್ಳುವುದಕ್ಕೆ ಇದು ತುಂಬಾ ಸಹಾಯಕವಾಗುತ್ತದೆ. ಹಿರಿಯ ವಿದ್ವಾಂಸರಾದ ಮೌಲಾನಾ ಯಹ್ಯಾ ತಂಙಳ್ ಮದನಿ ಅವರ ನೇತೃತ್ವದ ಒಂದು ತಜ್ಞರ ಸಮಿತಿಯ ಮಾರ್ಗದರ್ಶನದಲ್ಲಿ ಈ ಕೋರ್ಸ್ ನಡೆಯುತ್ತಿರುವುದು ಆಶಾದಾಯಕವಾಗಿದೆ ಎಂದು ತಿಳಿಸಿದ ಅವರು, ಪವಿತ್ರ ಕುರ್‍ಆನ್‍ನ ಕುರಿತಾದ ಜ್ಞಾನದ ಪ್ರಸಾರದ ಉದ್ದೇಶದಿಂದ ಆರಂಭಿಸಲಾದ ಈ ಕೋರ್ಸ್ ಎಲ್ಲ ರೀತಿಯಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಆನ್‍ಲೈನ್ ಅಧ್ಯಯನ ಸಮಿತಿಯ ಸದಸ್ಯರಾದ ಜ| ಅಬ್ದುಲ್ಲತೀಫ್ ಆಲಿಯಾರ ಕುರ್‌ಆನ್ ಪಠಣದೊಂದಿಗೆ ಆರಂಭಿಸಿದ ಝೂಮ್ ಕಾರ್ಯಕ್ರಮದಲ್ಲಿ ಕುರ್‌ಆನ್ ಆನ್‍ಲೈನ್ ಅಧ್ಯಯನ ಸರಣಿಯ ಎರಡನೇ ಕೈಪಿಡಿಯನ್ನು ಮಂಗಳೂರು, ಅಬುಧಾಬಿ ಮತ್ತು ರಿಯಾದ್‍ನಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳಿಸಲಾಯಿತು.

ಮಂಗಳೂರಿನಲ್ಲಿ ಮೌಲಾನಾ ಯಹ್ಯಾ ತಂಙಳ್ ಮದನಿ ಮತ್ತು ಮಂಗಳೂರು ವಲಯ ಕಾರ್ಯದರ್ಶಿ ಇಲ್ಯಾಸ್ ಇಸ್ಮಾಈಲ್, ಅಬುಧಾಬಿಯಲ್ಲಿ ಯು.ಎ.ಇ. ಕನ್ನಡ ಒಕ್ಕೂಟದ ಸಂಚಾಲಕರಾದ ಮುಬಾರಕ್ ಪಿ.ಡಿ. ಮತ್ತು ಆನ್‍ಲೈನ್ ಅಧ್ಯಯನದ ಗಲ್ಫ್ ರಾಷ್ಟ್ರಗಳ ಸಂಯೋಜಕರಾದ ಅಬ್ದುಲ್ಲತೀಫ್ ನೀರ್ಕಜೆ ಹಾಗೂ ರಿಯಾದ್‍ನಲ್ಲಿ ಭಾರತೀಯ ಗೆಳೆಯರ ಬಳಗ ಕನ್ನಡ ವರ್ತುಲ ರಿಯಾದ್ ಇದರ ಅಧ್ಯಕ್ಷರಾದ ಇಸ್ಮಾಯಿಲ್ ಖಲೀಲ್ ಮತ್ತು ಮಹ್‍ಫೂಝ್ ಉಳ್ಳಾಲ ಬಿಡುಗಡೆಗೊಳಿಸಿದರು.

ಜ.ಇ. ಹಿಂದ್ ಮಂಗಳೂರು ವಲಯ ಸಂಚಾಲಕರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಮೌಲಾನಾ ಯಹ್ಯಾ ತಂಙಳ್ ಮದನಿಯವರು ಮುಹರ್ರಮ್ ಸಂದೇಶವನ್ನು ನೀಡಿದರು. ಆನ್‍ಲೈನ್ ಅಧ್ಯಯನದ ಸಾಧಕ-ಬಾಧಕಗಳ ಬಗ್ಗೆ ನಡೆದ ಚರ್ಚಾಗೋಷ್ಠಿಯಲ್ಲಿ ಹಲವರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕೊನೆಯಲ್ಲಿ ಆನ್‍ಲೈನ್ ಅಧ್ಯಯನ ವಿಭಾಗದ ನಿರ್ದೇಶಕರಾದ ಜ| ಹೈದರಲಿ ವಿಟ್ಲರವರು ಸಮಾರೋಪವಾಗಿ ಮಾತನಾಡಿ ಧನ್ಯವಾದವಿತ್ತರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.