ಭಾಷಣದ ನಡುವೆ ರಿಮೊಟ್ ಕಂಟ್ರೋಲ್ ಎತ್ತಿ ಹಿಡಿದ ರಾಹುಲ್ ಗಾಂಧಿ:  ಇಂತದ್ದು ಮೋದಿಯ ಕೈಯಲ್ಲಿಯೂ ಇದೆ, ಆದರೆ…

0
1328

ಸನ್ಮಾರ್ಗ ವಾರ್ತೆ

ರಾಯ್‌ಪುರ: ಛತ್ತೀಸ್‌ಗಢದಲ್ಲಿ ಮಾಡಿದ ಭಾಷಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ. ರಾಜ್ಯದಲ್ಲಿ ಗ್ರಾಮೀಣ ಆವಾಸ್ ನ್ಯಾಯ ಯೋಜನೆಗೆ ಚಾಲನೆ ನೀಡಿ ರಾಹುಲ್ ಗಾಂಧಿ ಮಾತನಾಡುತ್ತಿದ್ದರು.

ಕಾರ್ಯಕ್ರಮದ ಉದ್ಘಾಟನೆಗೆ ಬಳಸಿದ ರಿಮೋಟ್ ಕಂಟ್ರೋಲ್ ಅನ್ನು ಜನರಿಗೆ ತೋರಿಸಿದ ರಾಹುಲ್, ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿಯೂ ಇದೇ ರೀತಿಯ ರಿಮೋಟ್ ಕಂಟ್ರೋಲ್ ಇದೆ ಆದರೆ ಅದನ್ನು ಅವರು ರಹಸ್ಯವಾಗಿ ಒತ್ತುತ್ತಾರೆ ಎಂದು ರಾಹುಲ್ ಹೇಳಿದರು.

ನಾವು ಸಾರ್ವಜನಿಕ ಸ್ಥಳದಲ್ಲಿ ರಿಮೊಟ್ ಕಂಟ್ರೋಲ್ ಬಟನ್ ಒತ್ತುತ್ತೇವೆ. ಆದರೆ ಬಿಜೆಪಿ ಅದನ್ನು ಗುಟ್ಟಾಗಿ ಒತ್ತುವುದು. ಕೂಡಲೇ ಅದಾನಿಗೆ ವಿಮಾನ ನಿಲ್ದಾಣ ಸಿಗುತ್ತದೆ. ಸಾರ್ವಜನಿಕ ಕ್ಷೇತ್ರ ಖಾಸಗಿ ಕ್ಷೇತ್ರವಾಗಿ ಬದಲಾಗುತ್ತದೆ ಎಂದು ರಾಹುಲ್ ವ್ಯಂಗವಾಡಿದರು.

ಲೋಕಸಭೆಯಲ್ಲಿ ಪ್ರಧಾನಿಗೆ ಅಧಾನಿಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರವಾಗಿ ನನ್ನ ಲೋಕಸಭಾ ಸದಸ್ಯತ್ವ ರದ್ದುಪಡಿಸಲಾಯಿತು ಎಂದು ರಾಹುಲ್ ಹೇಳಿದರು.

ಪ್ರಧಾನಿ ನರೇದ್ರ ಮೋದಿ ಈ ಹಿಂದೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ವಿರುದ್ಧ ಟೀಕೆ ನಡೆಸಿದ್ದು, ಪ್ರತಿಪಕ್ಷವಾದ ಕಾಂಗ್ರೆಸ್ ತುಕ್ಕು ಹಿಡಿದ ಕಬ್ಬಿಣದಂತೆ ಬಳಕೆ ಅಯೋಗ್ಯವಾದದ್ದು. ದೇಶದ ಪ್ರಜೆಗಳನ್ನು ಬೆಳವಣಿಗೆಯಿಂದ ದೂರವಿಟ್ಟು ಕುಟುಂಬ ಕಲ್ಯಾಣ ಮಾತ್ರ ಕಾಂಗ್ರೆಸ್ ನೋಡುತ್ತಿದೆ ಎಂದು ಅವರು ಆರೋಪಿಸಿದರು. ಇದರ ಬೆನ್ನಿಗೆ ರಾಹುಲ್ ಗಾಂಧಿ ರಿಮೋಟ್ ಕಂಟ್ರೋಲ್ ಅನ್ನು ಮೋದಿಗೆ ಹೋಲಿಸಿ ಹೇಳಿಕೆ ನೀಡಿದ್ದಾರೆ.