ತಮಿಳುನಾಡು: ಭಾರಿ ಮಳೆಗೆ 50,000 ಹೆಕ್ಟರ್ ಕೃಷಿ ನಾಶ

0
272

ಸನ್ಮಾರ್ಗ ವಾರ್ತೆ

ಚೆನ್ನೈ: ತಮಿಳ್ನಾಡಿನಲ್ಲಿ ಭಾರಿ ಮಳೆಯಿಂದಾಗಿ ವ್ಯಾಪಕ ಕೃಷಿ ನಾಶವಾಗಿದೆ. ಹಲವು ದಿನಗಳಿಂದ ಇಲ್ಲಿ ಮಳೆ ಸುರಿದ ಪರಿಣಾಮ 50,000 ಹೆಕ್ಟೇರ್ ವ್ಯಾಪಕ ಕೃಷಿ ನಾಶ ಸಂಭವಿಸಿದೆ. ತಮಿಳ್ನಾಡಿನ ಮಾನ್ಸೂನ್ ಸೀಝನ್‍ನಲ್ಲಿ ಲಭಿಸುವ ಮಳೆಗಿಂತ ಶೇ. 68ರಷ್ಟು ಹೆಚ್ಚು ಮಳೆಯಾಗಿದ್ದು, ಅನೀರೀಕ್ಷಿತ ಮಳೆಯಿಂದಾಗಿ ನಾಶನಷ್ಟ ಸಂಭವಿಸಿದೆ.

ಚೆನ್ನೈ, ವಿಲ್ಲುಪುರಂ ಕಡಲ್ಲೂರ್, ಕನ್ಯಾಕುಮಾರಿ, ತುತ್ತುಕುಡಿ, ಮಧ್ಯ ತಮಿಳ್ನಾಡಿನ ಡೆಲ್ಟ ಪ್ರದೇಶಗಳಲ್ಲಿ ಮಳೆ ಭಾರೀ ನಾಶ ನಷ್ಟಕ್ಕೆ ಕಾರಣವಾಗಿದೆ. ಅಕ್ಟೋಬರ್‌ನಲ್ಲಾದ ಮಳೆಯಿಂದಾಗಿ 2300 ಮನೆಗಳು ಕುಸಿದು ಬಿದ್ದಿದ್ದವು. ನವೆಂಬರಿನಲ್ಲಿ ಪುನಃ ಭಾರೀ ಮಳೆಯಾಗುತ್ತಿದೆ. ರಾಜ್ಯದ ಮೂರನೆಯ ಎರಡು ಭಾಗದಷ್ಟು ಪ್ರದೇಶವು ನೆರೆಯಲ್ಲಿ ಮುಳುಗಿದಂತಿದೆ. ರಾಜ್ಯದ ನೀರು ಸಂಗ್ರಹ ಸ್ಥಳಗಳು ತುಂಬಿದವು.

ನಾಗಪಟ್ಟಣ ಜಿಲ್ಲೆಯಲ್ಲಿ ರೈತ ರಾಸಪ್ಪನ್‍ರ 15 ಎಕರೆ ಫಸಲು ನಾಶವಾಗಿದೆ. ಈಗ ಅವರ ಮುಂದಿರುವುದು ಸಾಲದ ಶೂಲ ಎಂಬಂತಾಗಿದೆ. ಕೃಷಿಗಾಗಿ ಮನೆಯ ಚಿನ್ನಾಭರಣಗಳನ್ನು ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದು ಸರಕಾರಿ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಕೇಂದ್ರ ಸರಕಾರದಿಂದ ರಾಜ್ಯ ಸರಕಾರವು 2600ಕೋಟಿ ದುರಂತ ಪರಿಹಾರ ನಿಧಿಯನ್ನು ಕೇಳಿದೆ. ಕೇಂದ್ರದ ನಿಯೋಗ ಪರಿಸ್ಥಿತಿಯ ಅವಲೋಕನಕ್ಕಾಗಿ ತಮಿಳ್ನಾಡಿಗೆ ಆಗಮಿಸಿದೆ.