ಮುಸ್ಲಿಂ ವ್ಯಕ್ತಿಯ ದೇಶಪ್ರೇಮವನ್ನು ಪ್ರಶ್ನಿಸಿದ ರಾಜಸ್ಥಾನದ ಬಿಜೆಪಿ ಶಾಸಕ

0
671

ಸನ್ಮಾರ್ಗ ವಾರ್ತೆ

ಜೈಪುರದಲ್ಲಿ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ರಾಜಸ್ಥಾನದ ಬಿಜೆಪಿ ಶಾಸಕ ಬಾಲಮುಕಂದ್ ಆಚಾರ್ಯ ಅವರ ನಡವಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಸಭೆಯಲ್ಲಿ ಮಾತಾಡುತ್ತಾ ಶಾಸಕ ಭಾರತ್ ಮಾತಾ ಕಿ ಜೈ ಮತ್ತು ವಂದೇ ಮಾತರಂ ಎಂಬ ಘೋಷಣೆ ಕೂಗಿದ್ದಾರೆ. ಆ ಬಳಿಕ ಓರ್ವ ಮುಸ್ಲಿಂ ಶಿಕ್ಷಕನ ಬಳಿಗೆ ಹೋಗಿ ನೀನೇಕೆ ವಂದೇ ಮಾತರಂ ಘೋಷಿಸಿಲ್ಲ ಮತ್ತು ಭಾರತ್ ಮಾತಾ ಕಿ ಜೈ ಎಂದು ಹೇಳಿಲ್ಲ ಎಂದು ಪ್ರಶ್ನಿಸಿದ್ದಾರೆ ಮತ್ತು ಅಂತಿಮವಾಗಿ ಅವರನ್ನು ನಿಂದಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗುತ್ತಿದೆ.

ಜೈಪುರದ ವೈಶಾಲಿ ನಗರದಲ್ಲಿರುವ ಹೋಟೆಲ್ನಲ್ಲಿ ಹಿಂದುಸ್ತಾನ್ ಬುಕ್ ಆಫ್ ರೆಕಾರ್ಡ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

ದೇಶದ ವಿವಿಧ ಭಾಗಗಳಿಂದ ಆಗಮಿಸಿದ ನೂರರಷ್ಟು ಶಿಕ್ಷಕರು ಇದರಲ್ಲಿ ಭಾಗಿಯಾಗಿದ್ದರು. ವಂದೇ ಭಾರತ್ ಮತ್ತು ಭಾರತ ಮಾತಾ ಕಿ ಜೈ ಎಂದು ಘೋಷಿಸಿದ ಸಚಿವರು ಅದೇ ಸಂದರ್ಭದಲ್ಲಿ ಓರ್ವ ಶಿಕ್ಷಕರ ಕಡೆಗೆ ನೋಡಿದ್ರು. ಅವರು ಈ ಸಭೆಯಲ್ಲಿ ಭಾಗಿಯಾಗಿರಲಿಲ್ಲ.

ನೀವೇಕೆ ಹೊರಗೆ ನಿಂತ್ಕೊಂಡಿದ್ದೀರಿ? ಸಭೆಗೆ ಬನ್ನಿ. ನೀವು ಭಾರತ್ ಮಾತಾ ಕಿ ಜೈ ಮತ್ತು ಒಂದೇ ಮಾತರಂ ಘೋಷಣೆಯನ್ನು ಕೂಗಲ್ಲವೇ? ನಿಮಗೆ ಹೇಳುವುದಕ್ಕೆ ತೊಂದರೆ ಇದೆಯೇ? ನೀವು ಎಲ್ಲಿಂದ ಬಂದಿದ್ದೀರಿ? ಎಂದು ಶಾಸಕ ಪ್ರಶ್ನಿಸಿರುವುದು ವಿಡಿಯೋದಲ್ಲಿದೆ.

ತಾನು ಮಹಾರಾಷ್ಟ್ರದ ಮೊಹಮ್ಮದ್ ಆಸಿಫ್ ಎಂದು ಪರಿಚಯಿಸುವ ಆ ವ್ಯಕ್ತಿ ತನಗೆ ಹೀಗೆ ಘೋಷಿಸುವುದಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳುತ್ತಾರೆ.

ಆದರೆ ಇದನ್ನು ಗಮನಿಸದಂತೆ ಶಾಸಕರು ವರ್ತಿಸುತ್ತಾರೆ. ನಿಮಗೆ ದೇಶದ ಮೇಲೆ ಪ್ರೀತಿ ಇಲ್ಲವೇ? ವಂದೇ ಭಾರತ್ ಎಂದರೆ ಏನಾಗುತ್ತೆ ? ನಾನು ಭಾರತಕ್ಕೆ ನಮಿಸುತ್ತೇನೆ. ನಿಮಗೆ ಭಾರತದ ಮೇಲೆ ವಿಶ್ವಾಸ ಇಲ್ಲವೇ? ನಿಮಗೆ ಭಾರತದ ಧ್ವಜದ ಮೇಲೆ ವಿಶ್ವಾಸ ಇಲ್ಲವೇ? ಎಂತ ಜನ್ರು ನೀವು ಎಂದು ಅವರು ಮೂದಲಿಸುತ್ತಾರೆ.

ಮೊಹಮ್ಮದ್ ಆಸಿಫ್ ಎಂಬ ವ್ಯಕ್ತಿ ಅವರ ಮಾತನ್ನು ಒಪ್ಪಿಕೊಳ್ಳದೆ ತಾನು ಭಾರತವನ್ನು ಪ್ರೀತಿಸುತ್ತೇನೆ ಎಂದು ಹೇಳಿದರೂ ಶಾಸಕರು ಕೇಳುವುದಿಲ್ಲ.

ಕೆಲವರು ಈ ದೇಶದ ಅನ್ನವನ್ನು ಉಣ್ಣುತ್ತಾರೆ. ಈ ದೇಶದಲ್ಲಿ ಇರುತ್ತಾರೆ. ಆದರೆ ದೇಶದ ವಿರುದ್ಧ ಮಾತಾಡುತ್ತಾರೆ ಎಂದು ಅವರು ಹೇಳುತ್ತಾರೆ.

ಬಳಿಕ ಸ್ಟೇಜ್ ನಿಂದ ಇಳಿದು ಹೋದ ಶಾಸಕರು, ಪುನಃ ತಿರುಗಿ ಬಂದು ಮಹಮ್ಮದ್ ಆಸಿಫ್ ಅವರಲ್ಲಿ ಮತ್ತೆ ವಾಗ್ವಾದಕ್ಕಿಳಿಯುತ್ತಾರೆ. ಹಾಗೆ ಘೋಷಿಸುವುದಕ್ಕೆ ತನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಮೊಹಮ್ಮದ್ ಆಸಿಫ್ ಹೇಳಿದರೂ ಕೇಳದೆ ಮತ್ತೆ ಮತ್ತೆ ಮೂದಲಿಸುತ್ತಾರೆ.