ಸನ್ಮಾರ್ಗ ವಾರ್ತೆ
ದೆಹಲಿ: ಸಂಸತ್ ಭವನದಲ್ಲಿ ನಡೆದ ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಪ್ರತಿಭಟನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ವಾರಣಾಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂಸದ ಪಪ್ಪು ಯಾದವ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಸಂಸತ್ತಿನ ಪ್ರತಿಭಟನೆಯ ಸಂದರ್ಭದಲ್ಲಿ ಪೂರ್ಣಿಯಾ ಸಂಸದ ಪಪ್ಪು ಯಾದವ್ ವಿರುದ್ಧ ವಾರಣಾಸಿಯ ವಕೀಲರು ಪ್ರತಿಭಟನೆ ನಡೆಸಿದ್ದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಹಾಗೂ ಪಪ್ಪು ಯಾದವ್ ಮತ್ತು ರಾಹುಲ್ ಗಾಂಧಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ದೇಣಿಗೆಯಲ್ಲಿ ಭಾರೀ ಹಣಕಾಸಿನ ಅವ್ಯವಹಾರ ಮತ್ತು ವಂಚನೆ ನಡೆದಿದೆ ಎಂದು ಆರೋಪಿಸಿ ನಿನ್ನೆ ವಿರೋಧ ಪಕ್ಷದ ಸಂಸದರು ಸಂಸತ್ ಭವನದ ಮುಂಭಾಗದಲ್ಲಿ ನಾಟಕೀಯ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಅವರು ‘ಚಂದಾ ಚೋರಿ’ (ದೇಣಿಗೆ ಕಳವು) ಎಂಬ ಸಾಂಕೇತಿಕ ನಾಟಕವನ್ನು ಪ್ರದರ್ಶಿಸಿದರು.
ಪಪ್ಪು ಯಾದವ್ ಅವರು ಕಾವಿ ಉಡುಗೆ ತೊಟ್ಟು, ಪೂಜಾರಿಯ ವೇಷ ಧರಿಸಿ ಸಂಸತ್ತಿಗೆ ಆಗಮಿಸಿದ್ದರು. ರಾಹುಲ್ ಗಾಂಧಿ ಸೇರಿದಂತೆ ಹಿರಿಯ ವಿರೋಧ ಪಕ್ಷದ ಸಂಸದರು, ತಮ್ಮ ಮುಂದೆ ಶ್ರೀರಾಮನ ಚಿತ್ರ ಮತ್ತು ‘ದೇಣಿಗೆ ಪೆಟ್ಟಿಗೆ’ಯನ್ನಿಟ್ಟುಕೊಂಡು ಕುಳಿತಿದ್ದ ಪಪ್ಪು ಯಾದವ್ ಬಳಿಗೆ ಬಂದು ಪೆಟ್ಟಿಗೆಗೆ ಹಣ ಹಾಕಿದರು.
ನಾಟಕದ ಮುಂದಿನ ದೃಶ್ಯದಲ್ಲಿ, ಪೂಜಾರಿಯ ಪಾತ್ರವನ್ನು ನಿರ್ವಹಿಸಿದ್ದ ಪಪ್ಪು ಯಾದವ್ ಅವರು ಹುಂಡಿಯಲ್ಲಿದ್ದ ಹಣದೊಂದಿಗೆ ಪರಾರಿಯಾಗಲು ಯತ್ನಿಸುತ್ತಿದ್ದರು. ಪರಾರಿಯಾಗಲು ಯತ್ನಿಸುತ್ತಿದ್ದ ಪಪ್ಪು ಯಾದವ್ ಅವರ ಕಾಲರನ್ನು ಸಮಾಜವಾದಿ ಪಕ್ಷದ ಅಯೋಧ್ಯೆ ಸಂಸದ ಅವಧೇಶ್ ಪ್ರಸಾದ್ ಹಿಡಿದುಕೊಂಡು, “ಅವನಿಗೆ ನೇಣು ಹಾಕಲು ಹಗ್ಗ ಕೊಡಿ” ಎಂದು ಕೂಗಿದರು. ದೇಣಿಗೆ ವಂಚನೆ ವಿರುದ್ಧ ಪ್ರತಿಭಟಿಸಲು ಹಾಗೂ ಸಾರ್ವಜನಿಕರ ಗಮನ ಸೆಳೆಯಲು ವಿರೋಧ ಪಕ್ಷವು ಈ ದೃಶ್ಯವನ್ನು ರೂಪಿಸಿತ್ತು.












