ಸನ್ಮಾರ್ಗ ವಾರ್ತೆ
ಅಮ್ನೆಸ್ಟಿ ಇಂಟರ್ನ್ಯಾಷನಲ್ನ ಹೊಸ ವರದಿಯ ಪ್ರಕಾರ, ಗಾಝಾದಲ್ಲಿ ಫೆಲೆಸ್ತೀನಿಯರ ವಿರುದ್ಧ ನಡೆಯುತ್ತಿರುವ ನರಮೇಧದಲ್ಲಿ ಆ ಶಸ್ತ್ರಾಸ್ತ್ರಗಳು ಬಳಕೆಯಾಗುವ ಗಣನೀಯ ಅಪಾಯವಿದ್ದರೂ ಭಾರತವು ಇಸ್ರೇಲ್ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದನ್ನು ಮುಂದುವರೆಸಿದೆ.
ಬ್ರಿಟನ್ ಮೂಲದ ಮಾನವ ಹಕ್ಕುಗಳ ಸಂಘಟನೆಯು, ಇಸ್ರೇಲ್ನ ಮಿಲಿಟರಿ ಕಾರ್ಯಾಚರಣೆಗಳನ್ನು ಬೆಂಬಲಿಸುವ ಪೂರೈಕೆ ಸರಪಳಿಗಳಿಗೆ ಪ್ರಮುಖ ಕೊಡುಗೆದಾರನಾಗುವ ಮೂಲಕ ಭಾರತವು ಇಸ್ರೇಲಿ ರಕ್ಷಣಾ ವಲಯದೊಂದಿಗೆ ಹೇಗೆ ನಿಕಟ ಹಾಗೂ ಲಾಭದಾಯಕ ಪಾಲುದಾರಿಕೆಯನ್ನು ರೂಪಿಸಿಕೊಂಡಿದೆ ಎಂಬುದನ್ನು ದಾಖಲಿಸಿದೆ.
ಅಮ್ನೆಸ್ಟಿ ಇಂಟರ್ನ್ಯಾಷನಲ್ನ ತನಿಖಾಧಿಕಾರಿಗಳು, ಗಾಝಾದ ಮೇಲೆ ಇಸ್ರೇಲ್ನ ಭಾರಿ ಆಕ್ರಮಣದ ದಿನವಾದ ಅಕ್ಟೋಬರ್ 7, 2023 ರಿಂದ ಭಾರತದಿಂದ ಇಸ್ರೇಲ್ಗೆ ಕಳುಹಿಸಲಾದ ಶಸ್ತ್ರಾಸ್ತ್ರಗಳು, ಯುದ್ಧಸಾಮಗ್ರಿಗಳು, ಬಿಡಿಭಾಗಗಳು ಮತ್ತು ಘಟಕಗಳ 2,596 ಸಾಗಣೆಗಳನ್ನು ವಿಶ್ಲೇಷಿಸಿದ್ದಾರೆ.
‘ಇಸ್ರೇಲ್ಗೆ ಶಸ್ತ್ರಾಸ್ತ್ರಗಳು ಮತ್ತು ಯುದ್ಧಸಾಮಗ್ರಿಗಳ ಪೂರೈಕೆ’ ಎಂಬ ಶೀರ್ಷಿಕೆಯ ವರದಿಯ ಪ್ರಕಾರ, ಭಾರತೀಯ ಕಂಪನಿಗಳು ಇಸ್ರೇಲಿ ಮಿಲಿಟರಿ ಪೂರೈಕೆದಾರರಿಗೆ ಕನಿಷ್ಠ 390,516 ಮಿಲಿಟರಿ ದರ್ಜೆಯ ಶಸ್ತ್ರಾಸ್ತ್ರಗಳ ಸಣ್ಣ ಶಸ್ತ್ರಾಸ್ತ್ರ ಭಾಗಗಳನ್ನು, ಡ್ರೋನ್ ವಾರ್ಹೆಡ್ಗಳು ಹಾಗೂ ಫಿರಂಗಿ ಶೆಲ್ ಕೇಸಿಂಗ್ಗಳು ಸೇರಿದಂತೆ 564,970 ಸ್ಫೋಟಕ ಸುಸಜ್ಜಿತ ಭಾಗಗಳನ್ನು ಮತ್ತು 298 ಮಿಲಿಟರಿ ವಾಹನಗಳ ಘಟಕಗಳನ್ನು ಪೂರೈಸಿವೆ.
ಸಂಶೋಧಕರು, ಸಾಗಣೆ ವ್ಯಾಪಾರ ದತ್ತಾಂಶವನ್ನು ಬಳಸಿಕೊಂಡಿದ್ದಾರೆ ಮತ್ತು ನಾಗರಿಕ ಬಳಕೆಗೆ ಉದ್ದೇಶಿಸಿರಬಹುದಾದ ಸಾಗಣೆಗಳನ್ನು ವ್ಯವಸ್ಥಿತವಾಗಿ ಹೊರಗಿಟ್ಟಿದ್ದಾರೆ. ಶಸ್ತ್ರಾಸ್ತ್ರಗಳು, ಯುದ್ಧಸಾಮಾಗ್ರಿಗಳು, ಬಿಡಿಭಾಗಗಳು ಮತ್ತು ಪರಿಕರಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಹಾರ್ಮೋನೈಸ್ಡ್ ಸಿಸ್ಟಮ್ ಕೋಡ್ಗಳ ಅಡಿಯಲ್ಲಿ ಭಾರತದ ರಫ್ತುಗಳನ್ನು ಅವರು ಗುರುತಿಸಿದ್ದಾರೆ.
ಬಾಂಬುಗಳು ಮತ್ತು ಗ್ರೆನೇಡ್ಗಳಿಗೆ ಸಂಬಂಧಿಸಿದ ವರ್ಗೀಕರಣ ಕೋಡ್ನಡಿಯಲ್ಲಿ 2024 ರಲ್ಲಿ ಇಸ್ರೇಲ್ಗೆ ಶಸ್ತ್ರಾಸ್ತ್ರ ಸಂಬಂಧಿತ ಸಾಗಣೆಗಳನ್ನು ಒಳಗೊಂಡ 91 ಭಾರತೀಯ ಕಸ್ಟಮ್ಸ್ ರಫ್ತು ದಾಖಲೆಗಳನ್ನು ಅಲ್ ಜಝೀರಾ ಪ್ರತ್ಯೇಕವಾಗಿ ಪಡೆದುಕೊಂಡಿದೆ. ಆ ದಾಖಲೆಗಳು ಭಾರತೀಯ ಸಂಸ್ಥೆಗಳು ರಫೇಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್, ಐಎಂಐ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಎಂಸಿಟಿ ಮೆಟೀರಿಯಲ್ಸ್ ಸೇರಿದಂತೆ ಇಸ್ರೇಲಿ ಶಸ್ತ್ರಾಸ್ತ್ರ ತಯಾರಕರಿಗೆ ಶಸ್ತ್ರಾಸ್ತ್ರ ಘಟಕಗಳನ್ನು ರಫ್ತು ಮಾಡುತ್ತಿರುವುದನ್ನು ತೋರಿಸಿವೆ.
ವರ್ಷಗಳಿಂದ ಬಹುತೇಕ ಪ್ರತಿದಿನ ವಿಶ್ವದಾದ್ಯಂತ ಬಿತ್ತರಗೊಳ್ಳುತ್ತಿರುವ ಗಾಝಾದ ನರಮೇಧದ ಹೊರತಾಗಿಯೂ ಇಸ್ರೇಲಿ ಮಿಲಿಟರಿ ಮತ್ತು ರಕ್ಷಣಾ ವಲಯಕ್ಕೆ ಭಾರತವು ಮುಂದುವರೆಸುತ್ತಿರುವ ಬೆಂಬಲವನ್ನು ಈ ವರದಿಯು ಬಹಿರಂಗಪಡಿಸುತ್ತದೆ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ನ ಪ್ರಧಾನ ಕಾರ್ಯದರ್ಶಿ ಆಗ್ನೆಸ್ ಕಾಲಮಾರ್ಡ್ ತಿಳಿಸಿದ್ದಾರೆ.
“ಪ್ರಮುಖ ಪೂರೈಕೆದಾರ ಕಂಪನಿಗಳ ಮೇಲಿನ ತನ್ನ ಮಾಲೀಕತ್ವ ಮತ್ತು ನಿಯಂತ್ರಣದ ಮೂಲಕ ಭಾರತವು ಇಸ್ರೇಲ್ಗೆ ವರ್ಗಾಯಿಸಲ್ಪಡುವ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತದೆ ಮತ್ತು ಪೂರೈಸುತ್ತದೆ. ಅಂತಾರಾಷ್ಟ್ರೀಯ ಕಾನೂನು ಮತ್ತು ಮಾನದಂಡಗಳಿಗೆ ಅನುಗುಣವಾಗಿ ಖಾಸಗಿ ಕಂಪನಿಗಳು ಇಸ್ರೇಲ್ಗೆ ಶಸ್ತ್ರಾಸ್ತ್ರ ರಫ್ತು ಮಾಡುವುದನ್ನು ನಿಯಂತ್ರಿಸುವಲ್ಲಿ ಭಾರತವು ವಿಫಲಗೊಂಡಿರುವುದು ಮಾತ್ರವಲ್ಲದೆ, ಅದು ಇಸ್ರೇಲ್ನೊಂದಿಗಿನ ತನ್ನ ರಕ್ಷಣಾ ಪಾಲುದಾರಿಕೆಯನ್ನು ಮತ್ತಷ್ಟು ಗಾಢವಾಗಿಸಿದೆ.”
ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರಕಾರ, 2020 ಮತ್ತು 2025 ರ ನಡುವಿನ ಒಟ್ಟು ಇಸ್ರೇಲಿ ಶಸ್ತ್ರಾಸ್ತ್ರ ಮಾರಾಟದ ಶೇ 29 ರಷ್ಟು ಪಾಲನ್ನು ಹೊಂದಿರುವ ಭಾರತವು ವರ್ಷಗಳಿಂದ ಇಸ್ರೇಲ್ನ ಅತಿ ದೊಡ್ಡ ರಕ್ಷಣಾ ಖರೀದಿದಾರನಾಗಿದೆ. ಅದೇ ಅವಧಿಯಲ್ಲಿ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ದೇಶಗಳಲ್ಲಿ ಇಸ್ರೇಲ್ ಶೇ 15 ರಷ್ಟು ಆಮದುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿಯ ಸಂದರ್ಭದಲ್ಲಿ 2025ರ ನವೆಂಬರ್ 4 ರಂದು ಭಾರತ ಮತ್ತು ಇಸ್ರೇಲ್ ರಕ್ಷಣಾ ಸಹಕಾರದ ಕುರಿತು ಒಪ್ಪಂದಕ್ಕೆ (MOU) ಸಹಿ ಹಾಕಿದವು. ರಕ್ಷಣಾ ಸಹಕಾರದಲ್ಲಿ ಆಗಿರುವ ಬೆಳವಣಿಗೆಯನ್ನು ಎರಡೂ ದೇಶಗಳು ಒಪ್ಪಿಕೊಂಡವು ಮತ್ತು ಭವಿಷ್ಯದ ಮಿಲಿಟರಿ ಸಂಬಂಧಗಳಿಗಾಗಿ ರೋಡ್ಮ್ಯಾಪ್ ಅನ್ನು ರೂಪಿಸಿದವು.
ಗಾಝಾದಲ್ಲಿ ನರಮೇಧವನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಇಸ್ರೇಲ್ಗೆ ಆದೇಶಿಸಿ ಅಂತಾರಾಷ್ಟ್ರೀಯ ನ್ಯಾಯಾಲಯವು 2024 ರಲ್ಲಿ ತಾತ್ಕಾಲಿಕ ಕ್ರಮಗಳನ್ನು ಹೊರಡಿಸಿದೆ. ಯುದ್ಧಪರಾಧಗಳ ಆರೋಪದ ಮೇಲೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯವು ಬಂಧನ ವಾರಂಟ್ ಕೂಡ ಜಾರಿಗೊಳಿಸಿದೆ. ಮೋದಿ ಅವರು ನೆತನ್ಯಾಹು ಅವರನ್ನು ಪ್ರೀತಿಯ ಸ್ನೇಹಿತ ಎಂದು ಪದೇ ಪದೇ ಬಣ್ಣಿಸಿದ್ದಾರೆ.












