✍️ ಅಂಕಿತ್ ರಾಜ್ ಮತ್ತು ಆಕಾಂಕ್ಷ ಕುಮಾರ್
ನವದೆಹಲಿ: ಕಳೆದ ತಿಂಗಳು ಅಯೋಧ್ಯೆಯ ರಾಮ ಜನ್ಮಭೂಮಿ ಮಂದಿರದಲ್ಲಿ ಕಾಣಿಕೆಗಳ ಕಳ್ಳತನ ನಡೆದಿದೆ ಎಂಬ ಆರೋಪದ ವರದಿಗಳ ಬೆನ್ನಲ್ಲೇ ಎದ್ದಿರುವ ವಿವಾದದ ನಡುವೆ, ಉತ್ತರ ಪ್ರದೇಶ ಸರ್ಕಾರದ ಗೃಹ ಇಲಾಖೆಯು ಈ ಆರೋಪಗಳ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿತ್ತು. ಎಸ್ಐಟಿಯ ಮಧ್ಯಂತರ ವರದಿಯು ಈಗ ದೇವಸ್ಥಾನದಲ್ಲಿ ನಡೆಯುತ್ತಿರುವ ಹಣದ ದುರುಪಯೋಗ ಮತ್ತು ಕಳ್ಳತನದ ಸ್ವರೂಪವನ್ನು ಬಹಿರಂಗಪಡಿಸಿದೆ – ಆದರೆ ಎಸ್ಐಟಿ ಎತ್ತದ ಬಾಕಿ ಬಿಟ್ಟಿರುವ ಕೆಲವು ಪ್ರಶ್ನೆಗಳಿವೆ.
ಮೊದಲನೆಯದಾಗಿ, ಕಾಣಿಕೆಗಳನ್ನು ಎಣಿಸುವ ಜವಾಬ್ದಾರಿಯನ್ನು ಹೊಂದಿದ್ದ ಕೆಲವು ಉದ್ಯೋಗಿಗಳು ನಗದು ಕಳ್ಳತನ ಮತ್ತು ದುರುಪಯೋಗದಲ್ಲಿ ಭಾಗಿಯಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಎಸ್ಐಟಿ ಗಮನಿಸಿದೆ.
ಸಿಸಿಟಿವಿ ದೃಶ್ಯಾವಳಿಗಳು 40 ದಿನಗಳ ಅವಧಿಯಲ್ಲಿ 70 ಕಳ್ಳತನದ ಘಟನೆಗಳನ್ನು ಸೆರೆಹಿಡಿದಿವೆ. ಕಾಣಿಕೆಗಳ ನಿರ್ವಹಣೆ ಮತ್ತು ಭದ್ರತಾ ವ್ಯವಸ್ಥೆಗಳಲ್ಲಿ ವರ್ಷಗಳಿಂದ ಗಂಭೀರ ಲೋಪಗಳು ನಡೆದಿವೆ ಎಂಬುದನ್ನು ಮಧ್ಯಂತರ ವರದಿಯು ಒಪ್ಪಿಕೊಂಡಿದೆ – ಈ ಕಳವಳಗಳನ್ನು ಆಂತರಿಕ ಆಡಿಟ್ಗಳು ಪದೇ ಪದೇ ಎತ್ತಿ ತೋರಿಸಿದ್ದರೂ, ಅವುಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಲಾಗಿಲ್ಲ.
ಆದರೆ, ಈ ಮಧ್ಯಂತರ ವರದಿಯು ಉತ್ತರಿಸುವುದಕ್ಕಿಂತ ಹೆಚ್ಚು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅತ್ಯುನ್ನತ ಮಟ್ಟದಲ್ಲಿರುವವರ ಶಾಮೀಲಾತಿ ಮತ್ತು/ಅಥವಾ ನಿರ್ಲಕ್ಷ್ಯದ ಕುರಿತು ಪ್ರಶ್ನೆಗಳನ್ನು ಎತ್ತುವಲ್ಲಿಯೂ ಇದು ವಿಫಲವಾಗಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಕೋರಿಕೆಯ ಮೇರೆಗೆ ಎಸ್ಐಟಿಯನ್ನು ರಚಿಸಲಾಗಿತ್ತು. ಜೂನ್ 12 ರಂದು ಸರ್ಕಾರಕ್ಕೆ ಬರೆದ ಪತ್ರದಲ್ಲಿ, ದೇವಸ್ಥಾನದ ಕಾಣಿಕೆಗಳ ನಿರ್ವಹಣೆ ಮತ್ತು ದುರುಪಯೋಗದ ಕುರಿತಾದ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ವರದಿಗಳು ಭಕ್ತರಲ್ಲಿ ಅನುಮಾನಗಳನ್ನು ಮೂಡಿಸುತ್ತಿವೆ ಮತ್ತು ಆದ್ದರಿಂದ ಇಡೀ ವಿಷಯದ ಬಗ್ಗೆ ಸ್ವತಂತ್ರ ತನಿಖೆಯ ಅಗತ್ಯವಿದೆ ಎಂದು ಟ್ರಸ್ಟ್ ತಿಳಿಸಿತ್ತು.
ಆ ಪರಿಣಾಮವಾಗಿ, ಉತ್ತರ ಪ್ರದೇಶ ಸರ್ಕಾರದ ಗೃಹ ಇಲಾಖೆಯು ಜೂನ್ 17 ರಂದು ಎಸ್ಐಟಿಯನ್ನು ರಚಿಸಿತು. ಕಳ್ಳತನ ಹೇಗೆ ಸಂಭವಿಸಿತು ಎಂಬುದನ್ನು ಪತ್ತೆಹಚ್ಚಲು, ಹೊಣೆಗಾರರನ್ನು ಗುರುತಿಸಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಅಗತ್ಯವಾದ ಸುಧಾರಣೆಗಳನ್ನು ಶಿಫಾರಸು ಮಾಡಲು ಇಡೀ ಘಟನೆಯ ತನಿಖೆಯ ಜವಾಬ್ದಾರಿಯನ್ನು ಈ ತಂಡಕ್ಕೆ ವಹಿಸಲಾಗಿತ್ತು.
ಕೇವಲ ಆರು ದಿನಗಳ ಕಾಲ ನಡೆದ ತನಿಖೆಯ ನಂತರ, ಎಸ್ಐಟಿ ತನ್ನ ಒಂಬತ್ತು ಪುಟಗಳ ಮಧ್ಯಂತರ ವರದಿಯನ್ನು ಜೂನ್ 23 ರಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವರಿಗೆ ಸಲ್ಲಿಸಿತು.
ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ ಮತ್ತು ರಮಾಶಂಕರ್ ಮಿಶ್ರಾ ಎಂಬ ಆರು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಎಸ್ಐಟಿ ಶಿಫಾರಸು ಮಾಡಿದೆ. ಆದರೆ, ವರದಿಯಲ್ಲಿ ಟ್ರಸ್ಟ್ನ ಆಗಿನ ಪ್ರಧಾನ ಕಾರ್ಯದರ್ಶಿ ಮತ್ತು ವಿಶ್ವ ಹಿಂದೂ ಪರಿಷತ್ ಮುಖಂಡ ಚಂಪತ್ ರಾಯ್ ಅವರ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಎಸ್ಐಟಿಯು ಟ್ರಸ್ಟ್ನ ಹಿರಿಯ ಪದಾಧಿಕಾರಿ ಅನಿಲ್ ಮಿಶ್ರಾ ಮತ್ತು ಎಣಿಕೆಯ ಉಸ್ತುವಾರಿ ಅಧಿಕಾರಿ ಸುಭಾಷ್ ಶ್ರೀವಾಸ್ತವ ಅವರ ಮೇಲ್ವಿಚಾರಣೆಯ ವೈಫಲ್ಯಗಳನ್ನು ಗಮನಿಸಿದ್ದರೂ, ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಅಥವಾ ಇತರ ಹಿರಿಯ ಪದಾಧಿಕಾರಿಗಳ ಪಾತ್ರದ ಬಗ್ಗೆ ಯಾವುದೇ ಖಚಿತವಾದ ತೀರ್ಮಾನಕ್ಕೆ ಬಂದಿಲ್ಲ.
ಅಲ್ಲದೆ, ಒಟ್ಟು ಎಷ್ಟು ಹಣ ದುರುಪಯೋಗವಾಗಿದೆ ಮತ್ತು ವರ್ಷಗಳಿಂದ ಮುಂದುವರಿದಿರುವ ಸಾಂಸ್ಥಿಕ ವೈಫಲ್ಯಗಳಿಗೆ ಅಂತಿಮ ಹೊಣೆಗಾರಿಕೆ ಯಾರ ಮೇಲಿದೆ ಎಂಬಂತಹ ಹಲವಾರು ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಲು ವರದಿಯು ವಿಫಲವಾಗಿದೆ.
ದೇವಸ್ಥಾನದಲ್ಲಿ ಕಾಣಿಕೆಗಳನ್ನು ಅರ್ಪಿಸುವುದು ಹೇಗೆ?
ವರದಿಯ ಪ್ರಕಾರ, ಭಕ್ತರು ರಾಮ ಮಂದಿರಕ್ಕೆ ಮೂರು ಪ್ರಾಥಮಿಕ ಮಾರ್ಗಗಳ ಮೂಲಕ ತಮ್ಮ ಕಾಣಿಕೆಗಳನ್ನು ಸಲ್ಲಿಸುತ್ತಾರೆ:
- ಮೊದಲನೆಯದಾಗಿ, ದೇವಸ್ಥಾನದ ಆವರಣದಲ್ಲಿ ಸ್ಥಾಪಿಸಲಾದ ಹುಂಡಿಗಳಲ್ಲಿ ಅಥವಾ ಕಾಣಿಕೆ ಪೆಟ್ಟಿಗೆಗಳಲ್ಲಿ ನಗದು, ನಾಣ್ಯಗಳು, ಚಿನ್ನ, ಬೆಳ್ಳಿ ಮತ್ತು ಇತರ ಅಮೂಲ್ಯ ವಸ್ತುಗಳನ್ನು ಹಾಕುವುದು.
- ಎರಡನೆಯದಾಗಿ, ಟ್ರಸ್ಟ್ ನಿಗದಿಪಡಿಸಿದ ಕೌಂಟರ್ಗಳಲ್ಲಿ ನೇರವಾಗಿ ಜಮಾ ಮಾಡುವುದು.
- ಮೂರನೆಯದಾಗಿ, ಗರ್ಭಗುಡಿಯ ಸಮೀಪವಿರುವ ರಾಮ್ ಲಲ್ಲಾನ ಪಾದಗಳ ಬಳಿ ಕಾಣಿಕೆಗಳನ್ನು ಇಡುವುದು.
ಈ ಮಾರ್ಗಗಳ ಮೂಲಕ ಸಂಗ್ರಹಿಸಲಾದ ನಗದು ಮತ್ತು ಅಮೂಲ್ಯ ವಸ್ತುಗಳನ್ನು ಎಣಿಕೆ ಕೊಠಡಿಗೆ ಕೊಂಡೊಯ್ಯಲಾಗುತ್ತಿತ್ತು, ಅಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಸಹಾಯದಿಂದ ಅವುಗಳನ್ನು ಎಣಿಕೆ ಮಾಡಲಾಗುತ್ತಿತ್ತು ಎಂದು ವರದಿಯಾಗಿದೆ.
ಈ ಉದ್ದೇಶಕ್ಕಾಗಿ ಟ್ರಸ್ಟ್ ಮತ್ತು ಬ್ಯಾಂಕ್ ನಡುವೆ ವಿವರವಾದ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (SOP) ರೂಪಿಸಲಾಗಿತ್ತು. ಕಾಣಿಕೆ ಪೆಟ್ಟಿಗೆಗಳನ್ನು ಟ್ರಸ್ಟ್ ಮತ್ತು ಬ್ಯಾಂಕ್ ಪ್ರತಿನಿಧಿಗಳ ಜಂಟಿ ಸಮ್ಮುಖದಲ್ಲಿ ತೆರೆಯಬೇಕು; ಪ್ರತಿಯೊಂದು ಪೆಟ್ಟಿಗೆಗೆ ಪ್ರತ್ಯೇಕ ದಾಖಲೆಗಳನ್ನು ನಿರ್ವಹಿಸಬೇಕು; ಸಿಬ್ಬಂದಿ ಒಳಗೆ ಪ್ರವೇಶಿಸುವಾಗ ಮತ್ತು ಹೊರಹೋಗುವಾಗ ತಪಾಸಣೆಗೆ ಒಳಗಾಗಬೇಕು; ಎಣಿಕೆ ಸಿಬ್ಬಂದಿ ಜೇಬುಗಳಿಲ್ಲದ ವಿಶೇಷ ಉಡುಪುಗಳನ್ನು ಧರಿಸಬೇಕು; ಎಣಿಕೆ ಕೊಠಡಿಯೊಳಗೆ ವೈಯಕ್ತಿಕ ವಸ್ತುಗಳನ್ನು ನಿಷೇಧಿಸಬೇಕು; ಪ್ರತಿಯೊಬ್ಬ ಉದ್ಯೋಗಿಗೂ ಬಯೋಮೆಟ್ರಿಕ್ ಹಾಜರಾತಿಯನ್ನು ದಾಖಲಿಸಬೇಕು; ಮತ್ತು ಇಡೀ ಪ್ರಕ್ರಿಯೆಯನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಸಬೇಕು ಎಂದು ಈ ವಿಧಾನವು ಕಡ್ಡಾಯಗೊಳಿಸಿತ್ತು.
ಕಾಗದದ ಮೇಲೆ ಈ ವ್ಯವಸ್ಥೆಯು ಅತ್ಯಂತ ಬಲಿಷ್ಠವಾಗಿ ಕಂಡುಬರುತ್ತಿತ್ತು. ಆದರೆ, ಪ್ರಾಯೋಗಿಕವಾಗಿ ಈ ನಿಯಮಗಳನ್ನು ಯಾವುದೇ ರೀತಿಯಲ್ಲೂ ಪಾಲಿಸುತ್ತಿರಲಿಲ್ಲ ಎಂಬುದು ಎಸ್ಐಟಿ ತನಿಖೆಯಿಂದ ಬಹಿರಂಗವಾಗಿದೆ.
ಇಲ್ಲಿಂದಲೇ ಗಂಭೀರ ಅಕ್ರಮಗಳು ಪ್ರಾರಂಭವಾದವು.
ನಗದು ನಿರ್ವಹಣೆಯಲ್ಲಿನ ನ್ಯೂನತೆಗಳು:
ಕಳ್ಳತನದ ಘಟನೆಗಳನ್ನು ಗ್ರಹಿಸಲು, ಕಾಣಿಕೆಗಳನ್ನು ನಿರ್ವಹಿಸುವ ಇಡೀ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ ಎಂದು ಎಸ್ಐಟಿ ಪ್ರತಿಪಾದಿಸಿದೆ.
ವರದಿಯ ಪ್ರಕಾರ, ಮೊದಲ ಮತ್ತು ಅತ್ಯಂತ ಗಂಭೀರವಾದ ಲೋಪವೆಂದರೆ, ಎಣಿಕೆ ಪ್ರಕ್ರಿಯೆ ಪ್ರಾರಂಭವಾಗುವ ಮೊದಲೇ ವಿವಿಧ ಹುಂಡಿಗಳಿಂದ ತೆಗೆದ ನಗದನ್ನು ಒಟ್ಟಿಗೆ ಸೇರಿಸಲಾಗುತ್ತಿತ್ತು. ಆದರೆ ನಿಗದಿಪಡಿಸಿದ ವಿಧಾನದ ಪ್ರಕಾರ, ಪ್ರತಿ ಹುಂಡಿಯಲ್ಲಿದ್ದ ಹಣವನ್ನು ಪ್ರತ್ಯೇಕವಾಗಿ ಎಣಿಸಿ ದಾಖಲಿಸಬೇಕಾಗಿತ್ತು.
ಇದರ ನೇರ ಪರಿಣಾಮವಾಗಿ, ಯಾವುದೇ ನಿರ್ದಿಷ್ಟ ದಿನದಂದು ನಿರ್ದಿಷ್ಟ ಹುಂಡಿಯಲ್ಲಿ ಎಷ್ಟು ಹಣ ಸಂಗ್ರಹವಾಗಿದೆ ಎಂಬುದನ್ನು ನಂತರ ನಿಖರವಾಗಿ ಪತ್ತೆಹಚ್ಚುವುದು ಅಸಾಧ್ಯವಾಯಿತು. ಹೊಣೆಗಾರಿಕೆ ಮತ್ತು ಪಾರದರ್ಶಕತೆಗೆ ಸಂಬಂಧಿಸಿದಂತೆ ಇದನ್ನು ಗಂಭೀರ ಸಾಂಸ್ಥಿಕ ಲೋಪ ಎಂದು ಎಸ್ಐಟಿ ಗುರುತಿಸಿದೆ.
ಅಮೂಲ್ಯ ವಸ್ತುಗಳ ನಿರ್ವಹಣೆಯಲ್ಲಿನ ನ್ಯೂನತೆಗಳು:
ಎಸ್ಐಟಿ ತನಿಖೆಯು ಈ ಸಮಸ್ಯೆ ಕೇವಲ ನಗದಿಗೆ ಮಾತ್ರ ಸೀಮಿತವಾಗಿರಲಿಲ್ಲ ಎಂಬುದನ್ನು ಬಹಿರಂಗಪಡಿಸಿದೆ. ಚಿನ್ನ, ಬೆಳ್ಳಿ ಮತ್ತು ಇತರ ಅಮೂಲ್ಯ ವಸ್ತುಗಳ ನಿರ್ವಹಣೆಯಲ್ಲೂ ಗಂಭೀರ ಕಾರ್ಯವಿಧಾನದ ನ್ಯೂನತೆಗಳಿದ್ದವು. ಯಾವುದೇ ಪೆಟ್ಟಿಗೆಯಿಂದ ಚಿನ್ನ, ಬೆಳ್ಳಿ ಅಥವಾ ಇತರ ಅಮೂಲ್ಯ ವಸ್ತುಗಳನ್ನು ಹೊರಗೆ ತೆಗೆದಾಗ, ಅವುಗಳನ್ನು ಪ್ರತ್ಯೇಕವಾಗಿ ಇಟ್ಟು ವಿಶೇಷ ಹುಂಡಿಯಲ್ಲಿ (ಸಂಖ್ಯೆ 12) ಜಮಾ ಮಾಡಲಾಗುತ್ತದೆ. ನಂತರ, ಅವುಗಳ ತೂಕ, ಛಾಯಾಗ್ರಹಣ, ಧ್ವನಿಮುದ್ರಣ ಮತ್ತು ಸುರಕ್ಷಿತ ಸೀಲಿಂಗ್ಗೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತದೆ.
ಆದರೆ, ಅನೇಕ ಸಂದರ್ಭಗಳಲ್ಲಿ ಈ ಕಾರ್ಯವಿಧಾನಗಳನ್ನು ಸತತವಾಗಿ ಪಾಲಿಸುತ್ತಿರಲಿಲ್ಲ. ಕೆಲವು ಭಕ್ತರಿಗೆ ರಶೀದಿಗಳನ್ನು ನೀಡದಿರುವ ಬಗ್ಗೆಯೂ ದೂರುಗಳು ಕೇಳಿಬಂದಿವೆ.
ಆದಾಗ್ಯೂ, ಲಾಕರ್ನಲ್ಲಿ ಸಂಗ್ರಹಿಸಲಾಗಿದ್ದ 11 ಅಮೂಲ್ಯ ವಸ್ತುಗಳ ದಿಢೀರ್ ಭೌತಿಕ ಪರಿಶೀಲನೆಯನ್ನು ನಡೆಸಲಾಗಿದ್ದು, ಅವು ಲಭ್ಯವಿರುವುದು ದೃಢಪಟ್ಟಿದೆ ಎಂದು ಎಸ್ಐಟಿ ಹೆಚ್ಚುವರಿಯಾಗಿ ಉಲ್ಲೇಖಿಸಿದೆ.
ಅಮೂಲ್ಯ ಲೋಹಗಳನ್ನು ಕರಗಿಸಲು ಇಂಡಿಯನ್ ಸೆಕ್ಯುರಿಟಿ ಪ್ರಿಂಟಿಂಗ್ ಆಂಡ್ ಮಿಂಟಿಂಗ್ ಕಾರ್ಪೊರೇಶನ್ಗೆ ಕಳುಹಿಸುವ ಪ್ರಕ್ರಿಯೆಯೂ ದಾಖಲಾಗಿದೆ ಎಂದು ವರದಿ ತಿಳಿಸಿದೆ. ಆದಾಗ್ಯೂ, ಹೆಚ್ಚಿನ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಾಖಲಾತಿಯನ್ನು ಖಚಿತಪಡಿಸಿಕೊಳ್ಳಲು ಅಮೂಲ್ಯ ವಸ್ತುಗಳ ಒಟ್ಟಾರೆ ನಿರ್ವಹಣಾ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವನ್ನು ಎಸ್ಐಟಿ ಒಪ್ಪಿಕೊಂಡಿದೆ.
ಸಿಸಿಟಿವಿ ಬಿಚ್ಚಿಟ್ಟ ಕಳ್ಳತನದ ಹಂತಗಳು:
ಎಸ್ಐಟಿಯ ಮಧ್ಯಂತರ ವರದಿಯ ಪ್ರಾಥಮಿಕ ಆಧಾರವೆಂದರೆ ಎಣಿಕೆ ಕೊಠಡಿಯ ಸಿಸಿಟಿವಿ ದೃಶ್ಯಾವಳಿಗಳು.
ಏಪ್ರಿಲ್ 27 ಮತ್ತು ಜೂನ್ 5, 2026 ರ ನಡುವಿನ ವಿಡಿಯೋ ರೆಕಾರ್ಡಿಂಗ್ಗಳ ವಿಶ್ಲೇಷಣೆಯು ಸುಮಾರು 70 ಇಂತಹ ಘಟನೆಗಳನ್ನು ಬಹಿರಂಗಪಡಿಸಿದೆ; ಅದರಲ್ಲಿ ಎಣಿಕೆ ಸಿಬ್ಬಂದಿ ನಗದನ್ನು ತಮ್ಮ ಬಟ್ಟೆ, ಜೇಬುಗಳು, ಶೂಗಳು ಮತ್ತು ಇತರ ವಿಧಾನಗಳಲ್ಲಿ ಅಡಗಿಸಿ ಎಣಿಕೆ ಕೊಠಡಿಯಿಂದ ಹೊರಗೆ ಕೊಂಡೊಯ್ಯುತ್ತಿರುವುದು ಕಂಡುಬಂದಿದೆ ಎಂದು ವರದಿ ಸೂಚಿಸುತ್ತದೆ.
ಇದು ವಿವಿಧ ದಿನಾಂಕಗಳಲ್ಲಿ ಕಂಡುಬಂದ ಪುನರಾವರ್ತಿತ ಪ್ರವೃತ್ತಿಯಾಗಿದೆ ಎಂದು ವರದಿಯು ಸ್ಪಷ್ಟವಾಗಿ ಹೇಳಿದೆ. ಎಸ್ಐಟಿ ಇದನ್ನು ‘ನಿರಂತರ ಪ್ರವೃತ್ತಿ’ ಎಂದು ಬಣ್ಣಿಸಿದೆ.
ಲಭ್ಯವಿರುವ ದೃಶ್ಯಾವಳಿಗಳು ಇಡೀ ಅವಧಿಯನ್ನು ಒಳಗೊಂಡಿಲ್ಲ ಎಂಬುದೂ ತನಿಖೆಯಿಂದ ತಿಳಿದುಬಂದಿದೆ. ಎಣಿಕೆ ಕೊಠಡಿಯ ಸಿಸಿಟಿವಿ ವ್ಯವಸ್ಥೆಯು ಕೇವಲ ಸೀಮಿತ ಅವಧಿಗೆ ಮಾತ್ರ ರೆಕಾರ್ಡಿಂಗ್ಗಳನ್ನು ಇಟ್ಟುಕೊಳ್ಳುತ್ತಿತ್ತು, ಆ ಅವಧಿಯ ನಂತರ ಅದು ಸ್ವಯಂಚಾಲಿತವಾಗಿ ಓವರ್ರೈಟ್ (ಹಳೇ ರೆಕಾರ್ಡಿಂಗ್ ಮೇಲೆ ಹೊಸದು ದಾಖಲು) ಆಗುತ್ತಿತ್ತು. ಆದ್ದರಿಂದ, ರೆಕಾರ್ಡಿಂಗ್ಗಳು ಲಭ್ಯವಿದ್ದ ಅವಧಿಯಲ್ಲಿ ನಡೆದ ಘಟನೆಗಳನ್ನು ಮಾತ್ರ ವಿಶ್ಲೇಷಿಸಲು ಎಸ್ಐಟಿಗೆ ಸಾಧ್ಯವಾಯಿತು.
ಆರೋಪಿ ಉದ್ಯೋಗಿಗಳ ಹೇಳಿಕೆಗಳು ಮತ್ತು ಇತರ ಸಂದರ್ಭಗಳು, ಕಳ್ಳತನದ ಘಟನೆಗಳು ಏಪ್ರಿಲ್ 27 ಕ್ಕಿಂತ ಮುಂಚಿತವಾಗಿಯೂ ನಡೆದಿರಬಹುದು ಎಂಬುದನ್ನು ಸೂಚಿಸುತ್ತವೆ ಎಂದು ವರದಿಯು ಒಪ್ಪಿಕೊಂಡಿದೆ. ಆದರೆ, ಹಳೆಯ ರೆಕಾರ್ಡಿಂಗ್ಗಳು ಲಭ್ಯವಿಲ್ಲದ ಕಾರಣ, ಆ ಅವಧಿಯ ತನಿಖೆ ಸಾಧ್ಯವಾಗಲಿಲ್ಲ. ಕೈಯಲ್ಲಿರುವ ಸಾಕ್ಷ್ಯಗಳು ನಿಜವಾದ ನಷ್ಟದ ಸಂಪೂರ್ಣ ಚಿತ್ರಣವನ್ನು ನೀಡಲು ವಿಫಲವಾಗಿವೆ ಎಂಬುದನ್ನು ಎಸ್ಐಟಿ ಒಪ್ಪಿಕೊಳ್ಳುವ ಅಂಶ ಇದಾಗಿದೆ.
ಕಳ್ಳತನಕ್ಕೆ ಪ್ರೇರಣೆ ನೀಡಿದ್ದು ಯಾವುದು?
ತನಿಖೆಯ ಸಮಯದಲ್ಲಿ, ಎಣಿಕೆ ಕೊಠಡಿಗಾಗಿ ವಿನ್ಯಾಸಗೊಳಿಸಲಾದ ಬಹುತೇಕ ಎಲ್ಲಾ ಭದ್ರತಾ ಪ್ರೋಟೋಕಾಲ್ಗಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ ಅಥವಾ ಜಾರಿಗೆ ತರುತ್ತಿಲ್ಲ ಎಂಬುದನ್ನು ಎಸ್ಐಟಿ ಪತ್ತೆಹಚ್ಚಿದೆ.
ವರದಿಯ ಪ್ರಕಾರ, ಸಿಬ್ಬಂದಿ ಒಳಗೆ ಪ್ರವೇಶಿಸುವಾಗ ಮತ್ತು ಹೊರಹೋಗುವಾಗ ಕಡ್ಡಾಯವಾಗಿ ಮಾಡಬೇಕಾದ ತಪಾಸಣೆಗಳನ್ನು ನಡೆಸುತ್ತಿರಲಿಲ್ಲ. ಜೇಬುಗಳಿಲ್ಲದ ನಿಗದಿತ ಸಮವಸ್ತ್ರದ ಅಗತ್ಯವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿರಲಿಲ್ಲ; ಉದ್ಯೋಗಿಗಳಿಗೆ ವೈಯಕ್ತಿಕ ಬಟ್ಟೆಗಳನ್ನು ಧರಿಸಲು ಅನುಮತಿಸಲಾಗಿತ್ತು ಮತ್ತು ಅನೇಕ ಸಂದರ್ಭಗಳಲ್ಲಿ ಮೊಬೈಲ್ ಫೋನ್ಗಳು ಮತ್ತು ಇತರ ವೈಯಕ್ತಿಕ ವಸ್ತುಗಳನ್ನು ಎಣಿಕೆ ಕೊಠಡಿಯೊಳಗೆ ತರುತ್ತಿದ್ದರು.
ಎಣಿಕೆ ಕೊಠಡಿಯಲ್ಲಿ ಆಸನದ ವ್ಯವಸ್ಥೆಯು ಹೇಗಿತ್ತೆಂದರೆ, ನಗದಿನ ಕಂತೆಗಳು ಸಿಬ್ಬಂದಿಗೆ ಸುಲಭವಾಗಿ ಕೈಗೆಟುಕುವಂತಿದ್ದವು.
ಎಸ್ಐಟಿ ಪ್ರಕಾರ, ಈ ಲೋಪಗಳ ಸಂಯೋಜನೆಯು ಕಳ್ಳತನವನ್ನು ಸುಲಭಗೊಳಿಸಿತು.
ಎಸ್ಒಪಿ ಬದಲಾವಣೆಗಳ ಕುರಿತು ನಿರ್ಣಾಯಕ ಅವಲೋಕನಗಳು:
ರಾಮ ಮಂದಿರದಲ್ಲಿ ಕಾಣಿಕೆಗಳ ಎಣಿಕೆಯನ್ನು ಎಸ್ಬಿಐ ಮತ್ತು ಟ್ರಸ್ಟ್ ನಡುವಿನ ತಿಳುವಳಿಕಾ ಒಪ್ಪಂದದ (MoU) ಅಡಿಯಲ್ಲಿ ನಡೆಸಲಾಗುತ್ತಿತ್ತು.
ಈ ಚೌಕಟ್ಟಿನೊಳಗೆ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಹುಂಡಿಗಳ ಭದ್ರತೆ, ಅವುಗಳನ್ನು ತೆರೆಯುವ ಪ್ರಕ್ರಿಯೆ, ಎಣಿಕೆ ಕೊಠಡಿಯ ನಿರ್ವಹಣೆ, ಭದ್ರತಾ ಕ್ರಮಗಳು ಮತ್ತು ಕಣ್ಗಾವಲು ಜವಾಬ್ದಾರಿಯನ್ನು ಟ್ರಸ್ಟ್ ಹೊಂದಿತ್ತು. ಮತ್ತೊಂದೆಡೆ, ಎಣಿಕೆ ಪ್ರಕ್ರಿಯೆಯನ್ನು ನಿರ್ವಹಿಸುವುದು, ನಗದು ಎಣಿಸುವ ಸಿಬ್ಬಂದಿ, ಯಂತ್ರೋಪಕರಣಗಳು, ಬ್ಯಾಂಕಿಂಗ್ ದಾಖಲೆಗಳು ಮತ್ತು ಜಮಾ ಪ್ರಕ್ರಿಯೆಯ ಜವಾಬ್ದಾರಿಯನ್ನು ಎಸ್ಬಿಐ ಹೊಂದಿತ್ತು.
ಜವಾಬ್ದಾರಿಗಳ ಸ್ಪಷ್ಟ ವಿಭಜನೆಯ ಹೊರತಾಗಿಯೂ, ಯಾವುದೇ ಪಕ್ಷಗಳು ಪ್ರಾಯೋಗಿಕವಾಗಿ ಭದ್ರತಾ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿಲ್ಲ ಎಂದು ಎಸ್ಐಟಿ ಹೇಳಿದೆ.
ವರದಿಯಲ್ಲಿನ ಒಂದು ಪ್ರಮುಖ ವಿವರವೆಂದರೆ, ಸೆಪ್ಟೆಂಬರ್ 20, 2024 ರ ಎಸ್ಬಿಐ ಜೊತೆಗಿನ ತಿಳುವಳಿಕಾ ಒಪ್ಪಂದದ ಅಡಿಯಲ್ಲಿ ಜಾರಿಗೆ ತರಲಾದ ವ್ಯವಸ್ಥೆಯು, ಎಣಿಕೆ ಕೊಠಡಿಯನ್ನು ಪ್ರವೇಶಿಸುವ ಅಥವಾ ನಿರ್ಗಮಿಸುವ ಪ್ರತಿಯೊಬ್ಬ ವ್ಯಕ್ತಿಯ ಕಡ್ಡಾಯ ತಪಾಸಣೆಗೆ ಸ್ಪಷ್ಟವಾದ ನಿಬಂಧನೆಯನ್ನು ಒಳಗೊಂಡಿತ್ತು.
ಆದರೆ, ಟ್ರಸ್ಟ್ ಫೆಬ್ರವರಿ 6, 2025 ರಂದು ಬಿಡುಗಡೆ ಮಾಡಿದ ನವೀಕರಿಸಿದ ಎಸ್ಒಪಿಯಲ್ಲಿ ಈ ವ್ಯವಸ್ಥೆಯನ್ನು ಮಾರ್ಪಡಿಸಿತು. ಪರಿಷ್ಕೃತ ಎಸ್ಒಪಿಯು ಪ್ರತಿಯೊಬ್ಬ ವ್ಯಕ್ತಿಯ ಕಡ್ಡಾಯ ತಪಾಸಣೆಯ ಅಗತ್ಯವನ್ನು “ಯಾದೃಚ್ಛಿಕ (ರಾಂಡಮ್) ತಪಾಸಣೆ”ಯ ಷರತ್ತಿನೊಂದಿಗೆ ಬದಲಾಯಿಸಿತು.
ಈ ಮಾರ್ಪಾಡಿಗೆ ಸಂಬಂಧಿಸಿದಂತೆ, ಟ್ರಸ್ಟ್ ಅಧಿಕಾರಿಗಳು ಈ ತಿದ್ದುಪಡಿಯನ್ನು ಮಾಡಿದ ಸಂದರ್ಭಗಳ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ ಎಂದು ಎಸ್ಐಟಿ ಅವಲೋಕಿಸಿದೆ.
ಸೈನಿಕ ಸೆಕ್ಯುರಿಟಿ ಸರ್ವಿಸಸ್ ಪಾತ್ರ:
ಎಣಿಕೆ ಕೊಠಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಟ್ರಸ್ಟ್ನ ನೇರ ಉದ್ಯೋಗಿಗಳಾಗಿರಲಿಲ್ಲ ಎಂದು ವರದಿ ಸೂಚಿಸುತ್ತದೆ. ಅವರನ್ನು ಒಪ್ಪಂದದ ಏಜೆನ್ಸಿಯಾದ ಸೈನಿಕ ಸೆಕ್ಯುರಿಟಿ ಸರ್ವಿಸಸ್ ಮೂಲಕ ಒದಗಿಸಲಾಗಿತ್ತು ಮತ್ತು ಎಣಿಕೆ ಕಾರ್ಯಾಚರಣೆಗಳಿಗಾಗಿ ಬ್ಯಾಂಕ್ನಿಂದ ನಿಯೋಜಿಸಲಾಗಿತ್ತು.
ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ, ಪರಿಶೀಲನೆ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದ ಸಂಪೂರ್ಣ ಕಾರ್ಯವಿಧಾನದ ವಿವರವಾದ ತನಿಖೆಯ ಅಗತ್ಯವಿದೆ ಎಂದು ಎಸ್ಐಟಿ ಹೇಳಿದೆ. ಪರಿಣಾಮವಾಗಿ, ವರದಿಯು ಕೇವಲ ಉದ್ಯೋಗಿಗಳ ಪಾತ್ರಕ್ಕೆ ಸೀಮಿತವಾಗದೆ ಇಡೀ ನೇಮಕಾತಿ ಪ್ರಕ್ರಿಯೆಯನ್ನು ಮರುಪರಿಶೀಲಿಸುವ ಅಗತ್ಯವನ್ನು ಎತ್ತಿ ತೋರಿಸುತ್ತದೆ.
ರಮಾಶಂಕರ್ ಯಾದವ್ ಅಲಿಯಾಸ್ ‘ತಿನ್ನು’ ಪಾತ್ರ:
ರಮಾಶಂಕರ್ ಯಾದವ್ ಅಲಿಯಾಸ್ ‘ತಿನ್ನು’ ಎಂಬಾತನ ಹೆಸರು ವರದಿಯಲ್ಲಿ ಪದೇ ಪದೇ ಪ್ರಸ್ತಾಪವಾಗಿದೆ. ಆತನ ಬಳಿ ದೇವಸ್ಥಾನದ ಕಾಣಿಕೆ ಪೆಟ್ಟಿಗೆಗಳ ಕೀಲಿಗಳಿದ್ದವು. ಆದರೆ, ಇದಕ್ಕೆ ಯಾವುದೇ ಔಪಚಾರಿಕ ಲಿಖಿತ ಅಧಿಕಾರ ಪತ್ರ ಪತ್ತೆಯಾಗಿಲ್ಲ ಎಂದು ಎಸ್ಐಟಿ ತಿಳಿಸಿದೆ.
ಅಲ್ಲದೆ, ಕಳ್ಳತನದಲ್ಲಿ ಭಾಗಿಯಾಗಿದ್ದಾನೆನ್ನಲಾದ ಮನೀಶ್ ಕುಮಾರ್ ಯಾದವ್ನನ್ನು ಈತನ ಶಿಫಾರಸಿನ ಮೇರೆಗೆ ನೇಮಿಸಲಾಗಿತ್ತು.
ಲಿಖಿತ ಅಧಿಕಾರವಿಲ್ಲದೆ ಇಂತಹ ಸೂಕ್ಷ್ಮ ಕಾರ್ಯಾಚರಣೆಯ ಮೇಲೆ ಪರಿಣಾಮಕಾರಿ ನಿಯಂತ್ರಣ ಚಲಾಯಿಸಲು ವ್ಯಕ್ತಿಯೊಬ್ಬನಿಗೆ ಅವಕಾಶ ಮಾಡಿಕೊಟ್ಟಿರುವುದು ಭದ್ರತಾ ವ್ಯವಸ್ಥೆಯಲ್ಲೇ ಒಂದು ಗಂಭೀರ ಲೋಪವಾಗಿದೆ ಎಂದು ವರದಿ ಅವಲೋಕಿಸಿದೆ. ಅಪರಾಧದ ದೃಷ್ಟಿಕೋನದಿಂದ ಆತನ ಪಾತ್ರದ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಎಸ್ಐಟಿ ಶಿಫಾರಸು ಮಾಡಿದೆ.
ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದರೂ ಮೇಲ್ವಿಚಾರಣೆ ಇರಲಿಲ್ಲ:
ಎಣಿಕೆ ಕೊಠಡಿಯಲ್ಲಿ ಸಾಕಷ್ಟು ಸಂಖ್ಯೆಯ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದರೂ, ಯಾವುದೇ ಪರಿಣಾಮಕಾರಿ ಲೈವ್ ಮೇಲ್ವಿಚಾರಣೆ ಅಥವಾ ಲೈವ್ ಕಣ್ಗಾವಲು ಇಲ್ಲದ ಕಾರಣ ಈ ಕ್ಯಾಮೆರಾಗಳ ಬಳಕೆ ಹೆಚ್ಚಾಗಿ ರೆಕಾರ್ಡಿಂಗ್ಗೆ ಮಾತ್ರ ಸೀಮಿತವಾಗಿತ್ತು ಎಂಬುದನ್ನು ಎಸ್ಐಟಿ ಪತ್ತೆಹಚ್ಚಿದೆ. ಕ್ಯಾಮೆರಾ ದೃಶ್ಯಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿದ್ದರೆ, ಕಳ್ಳತನದ ಘಟನೆಗಳು ಸಂಭವಿಸಿದ ಸಮಯದಲ್ಲಿಯೇ ಅವುಗಳನ್ನು ತಡೆಯಬಹುದಿತ್ತು ಎಂದು ವರದಿ ತೀರ್ಮಾನಿಸಿದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ಸಮಸ್ಯೆ ತಂತ್ರಜ್ಞಾನದ ಲಭ್ಯತೆಯಲ್ಲಿರಲಿಲ್ಲ, ಬದಲಿಗೆ ಅದರ ಬಳಕೆಯಲ್ಲಿತ್ತು.
ಎಸ್ಐಟಿ ರಚನೆಗೆ ಮುನ್ನವೇ ಲಕ್ಷಾಂತರ ರೂಪಾಯಿ ವಶ:
ವರದಿಯ ಪ್ರಕಾರ, ಎಸ್ಐಟಿ ಸ್ಥಾಪನೆಗೆ ಮುನ್ನವೇ ಟ್ರಸ್ಟ್ ಸ್ವತಂತ್ರವಾಗಿ ಕ್ರಮ ಕೈಗೊಂಡಿತ್ತು. ಕಳ್ಳತನದಲ್ಲಿ ಭಾಗಿಯಾಗಿದ್ದ ಆರು ವ್ಯಕ್ತಿಗಳಿಂದ ಒಟ್ಟು ಸುಮಾರು 78.94 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಹೆಚ್ಚುವರಿಯಾಗಿ, ವಿದೇಶಿ ಕರೆನ್ಸಿ, ಆಭರಣಗಳು ಮತ್ತು ವಿವಿಧ ಇತರ ಅಮೂಲ್ಯ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಜೂನ್ 4, 2026 ರಂದು ನಡೆದ ಘಟನೆಯೊಂದನ್ನು ವರದಿಯು ಉಲ್ಲೇಖಿಸಿದೆ, ಇದರಲ್ಲಿ ಎಣಿಕೆ ಕೊಠಡಿಗೆ ಹೊಂದಿಕೊಂಡಿರುವ ವಿಶ್ರಾಂತಿ ಕೊಠಡಿಯಿಂದ ಸುಮಾರು 2.25 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಎಸ್ಐಟಿ ಪ್ರಕಾರ, ಈ ಮರುಪಡೆಯುವಿಕೆಯು ಎಣಿಕೆ ಕೊಠಡಿಯಿಂದ ಹಣವನ್ನು ಸಾಗಿಸಲು ಸಂಘಟಿತ ಪ್ರಯತ್ನ ನಡೆದಿತ್ತು ಎಂಬುದನ್ನು ಸೂಚಿಸುತ್ತದೆ.
ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಬಂದಿದ್ದ ಎಚ್ಚರಿಕೆಗಳು:
ಎಸ್ಐಟಿ ವರದಿಯ ಅತ್ಯಂತ ನಿರ್ಣಾಯಕ ಅಂಶವೆಂದರೆ ಆಂತರಿಕ ಆಡಿಟ್ ವರದಿಗಳಿಗೆ ಸಂಬಂಧಿಸಿದ್ದಾಗಿದೆ.
2022-23, 2023-24, 2024-25 ಮತ್ತು 2025-26 ರ ಆರ್ಥಿಕ ವರ್ಷಗಳಲ್ಲಿ ನಡೆಸಲಾದ ಆಂತರಿಕ ಆಡಿಟ್ಗಳು ಗಂಭೀರ ನ್ಯೂನತೆಗಳನ್ನು ಪದೇ ಪದೇ ಎತ್ತಿ ತೋರಿಸಿವೆ ಎಂದು ವರದಿ ಬಹಿರಂಗಪಡಿಸಿದೆ.
ಈ ಆಡಿಟ್ ವರದಿಗಳಲ್ಲಿ ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡಲಾಗಿತ್ತು:
- ಪ್ರತಿ ಹುಂಡಿಗೆ ಪ್ರತ್ಯೇಕ ದಾಖಲೆಗಳನ್ನು ನಿರ್ವಹಿಸಬೇಕು.
- ಎಣಿಕೆ ಕೊಠಡಿಗೆ ಪ್ರವೇಶಿಸುವಾಗ ಮತ್ತು ಹೊರಹೋಗುವಾಗ ಕಡ್ಡಾಯ ತಪಾಸಣೆ ನಡೆಸಬೇಕು.
- ಅಮೂಲ್ಯ ವಸ್ತುಗಳನ್ನು ಸ್ವೀಕರಿಸಿದ ತಕ್ಷಣ ರಶೀದಿಗಳನ್ನು ನೀಡಬೇಕು.
- ಸಿಸಿಟಿವಿ ರೆಕಾರ್ಡಿಂಗ್ಗಳನ್ನು ಕನಿಷ್ಠ 180 ದಿನಗಳವರೆಗೆ ಸಂರಕ್ಷಿಸಬೇಕು.
- ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು.
- ದಾಖಲಾತಿ ಪ್ರಕ್ರಿಯೆಗಳನ್ನು ಸುಧಾರಿಸಬೇಕು.
ಆದರೆ, ಈ ಎಚ್ಚರಿಕೆಗಳಿಗೆ ಸ್ಪಂದಿಸಿ ಯಾವುದೇ ಗಣನೀಯ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದನ್ನು ಎಸ್ಐಟಿ ಪತ್ತೆಹಚ್ಚಿದೆ.
ಟ್ರಸ್ಟ್ ಅಧಿಕಾರಿಗಳು ಆಡಿಟ್ ವರದಿಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಮತ್ತು ಅವುಗಳನ್ನು ನಿರ್ಲಕ್ಷಿಸಲು ನಿರ್ಧರಿಸಿದ್ದಾರೆ ಎಂದು ವರದಿಯು ಸ್ಪಷ್ಟವಾಗಿ ಹೇಳಿದೆ. ಈ ಅವಲೋಕನವು ವರದಿಯ ಅತ್ಯಂತ ಪ್ರಮುಖ ಸಂಶೋಧನೆಗಳಲ್ಲಿ ಒಂದಾಗಿದೆ, ಏಕೆಂದರೆ ಭದ್ರತಾ ಲೋಪಗಳು ಇತ್ತೀಚಿನದ್ದಲ್ಲ ಆದರೆ ಹಲವಾರು ವರ್ಷಗಳ ಅವಧಿಯಲ್ಲಿ ದಾಖಲಾಗಿವೆ ಎಂಬುದನ್ನು ಇದು ಸೂಚಿಸುತ್ತದೆ.
ಮೂರು ಹೈಪ್ರೊಫೈಲ್ ಆರೋಪಗಳ ಕುರಿತು ಎಸ್ಐಟಿ ಸಂಶೋಧನೆಗಳು:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಮೂರು ಘಟನೆಗಳನ್ನು ಸಹ ವರದಿಯು ಪರಿಶೀಲಿಸಿದೆ. ಮೊದಲ ಪ್ರಕರಣವು ಇಂಡಿಯನ್ ಬುಲಿಯನ್ ಆಂಡ್ ಜ್ಯುವೆಲರ್ಸ್ ಅಸೋಸಿಯೇಷನ್ನ ಉತ್ತರ ಭಾರತದ ಮುಖ್ಯಸ್ಥ ಅನುರಾಗ್ ರಾಸ್ತೋಗಿ ಅವರು ಅರ್ಪಿಸಿದ ಬೆಳ್ಳಿ ಇಟ್ಟಿಗೆಗಳಿಗೆ ಸಂಬಂಧಿಸಿದೆ. ಎರಡನೇ ಪ್ರಕರಣವು ವಿಶ್ವ ಸಿಂಧಿ ಸೇವಾ ಸಮಾಜದ ಅಧ್ಯಕ್ಷ ರಾಜು ಮಂದ್ವಾನಿ ಅವರ ಹಕ್ಕಿಗೆ ಸಂಬಂಧಿಸಿದೆ, ಅವರು ತಾವು 200 ಕೆಜಿ ಬೆಳ್ಳಿಯನ್ನು ದೇಣಿಗೆ ನೀಡಿದ್ದರೂ ಅದಕ್ಕೆ ರಶೀದಿ ಸಿಕ್ಕಿಲ್ಲ ಎಂದು ಹೇಳಿದ್ದರು. ಮೂರನೇ ಘಟನೆಯು ಮುಂಬೈನ ಅನಿಲ್ ವಿಶ್ವಕರ್ಮ ಅವರು ಅರ್ಪಿಸಿದ ಬೆಳ್ಳಿಯ ಹಾರ ಮತ್ತು ಚರಣ ಪಾದುಕೆಗಳಿಗೆ ಸಂಬಂಧಿಸಿದೆ. ಈ ಮೂರೂ ಪ್ರಕರಣಗಳಲ್ಲಿ, ಎಸ್ಐಟಿ ಟ್ರಸ್ಟ್ ದಾಖಲೆಗಳು, ಲಾಕರ್ ರಿಜಿಸ್ಟರ್ ಮತ್ತು ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿದೆ.
ವರದಿಯ ಪ್ರಕಾರ, ಪ್ರಶ್ನಾರ್ಹ ಅಮೂಲ್ಯ ವಸ್ತುಗಳು ಟ್ರಸ್ಟ್ನ ದಾಖಲೆಗಳಲ್ಲಿ ದಾಖಲಾಗಿರುವುದು ಕಂಡುಬಂದಿದೆ. ಕೆಲವು ವಸ್ತುಗಳನ್ನು ನಂತರ ಕರಗಿಸಲು ಸೆಕ್ಯುರಿಟಿ ಪ್ರಿಂಟಿಂಗ್ ಆಂಡ್ ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾಕ್ಕೆ ಕಳುಹಿಸಲಾಗಿದೆ ಮತ್ತು ಅದರ ದಾಖಲೆಗಳೂ ಲಭ್ಯವಿವೆ. ಈ ಆಧಾರದ ಮೇಲೆ, ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಆರೋಪಗಳು ಸಾಬೀತಾಗಿಲ್ಲ ಎಂದು ಎಸ್ಐಟಿ ತೀರ್ಮಾನಿಸಿದೆ.
ಆದರೆ, ರಶೀದಿಗಳನ್ನು ಪಡೆಯದ ಬಗ್ಗೆ ಭಕ್ತರ ಕುಂದುಕೊರತೆಗಳನ್ನು ಹೇಗೆ ಬಗೆಹರಿಸಲಾಯಿತು ಅಥವಾ ಅಮೂಲ್ಯ ವಸ್ತುಗಳನ್ನು ಮೌಲ್ಯೀಕರಿಸುವ ಸ್ವತಂತ್ರ ಪ್ರಕ್ರಿಯೆಯ ಬಗ್ಗೆ ಸ್ಪಷ್ಟತೆಯನ್ನು ನೀಡಲು ವರದಿಯು ವಿಫಲವಾಗಿದೆ. ಇಲ್ಲಿಯೇ ಎಸ್ಐಟಿ ವರದಿಯ ಇನ್ನೊಂದು ಮೌಖಿಕ ಅಂಶವು ಮುಂಚೂಣಿಗೆ ಬರುತ್ತದೆ, ಅದು ಕೆಲವು ಆರೋಪಗಳನ್ನು ವಜಾಗೊಳಿಸಿದರೆ, ಅನೇಕ ಪ್ರಮುಖ ಪ್ರಶ್ನೆಗಳನ್ನು ಉತ್ತರಿಸದೆ ಬಿಡುತ್ತದೆ.
ವರದಿಯ ಸಂಶೋಧನೆಗಳಲ್ಲಿನ ವಿರೋಧಾಭಾಸಗಳು:
ಎಸ್ಐಟಿಯ ಮಧ್ಯಂತರ ವರದಿಯ ಸಮಾರೋಪ ಭಾಗವು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಇದು ಏಕಕಾಲದಲ್ಲಿ ಎರಡು ವಿಭಿನ್ನ ತೀರ್ಮಾನಗಳನ್ನು ಪ್ರಸ್ತುತಪಡಿಸುತ್ತದೆ.
ವರದಿಯು ಒಂದು ಕಡೆ, ಎಣಿಕೆ ಕೊಠಡಿಯೊಳಗೆ ಕಳ್ಳತನದ ಘಟನೆಗಳು ಮತ್ತು ಹಣದ ದುರುಪಯೋಗ ನಡೆದಿರುವುದಕ್ಕೆ ಮೇಲ್ನೋಟಕ್ಕೆ ಪುರಾವೆಗಳಿವೆ ಎಂದು ಸೂಚಿಸುತ್ತದೆ. ಮತ್ತೊಂದೆಡೆ, ಹೆಚ್ಚಿನ ಅಕ್ರಮಗಳು ‘ಸಾಂಸ್ಥಿಕ ನ್ಯೂನತೆಗಳಿಂದ’ ಉದ್ಭವಿಸಿವೆ ಎಂಬುದನ್ನು ಒತ್ತಿಹೇಳುತ್ತದೆ. ಆದರೆ ವರದಿಯಲ್ಲಿ ದಾಖಲಾಗಿರುವ ಸಂಗತಿಗಳು ಈ ತೀರ್ಮಾನವನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತವೆ.
ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರುವಲ್ಲಿ ಗಂಭೀರ ನಿರ್ಲಕ್ಷ್ಯ ವಹಿಸಲಾಗಿದ್ದು, ಹಲವು ನಿಯಮಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ ಎಂದು ವರದಿ ತಿಳಿಸಿದೆ. ಮೇಲಾಗಿ, ವರ್ಷಗಳಿಂದ ಎಚ್ಚರಿಕೆಗಳನ್ನು ಪಡೆದಿದ್ದರೂ, ಯಾವುದೇ ಸಾಂಸ್ಥಿಕ ಸುಧಾರಣೆಗಳನ್ನು ಮಾಡಲಾಗಿಲ್ಲ. ಇದು ಮಧ್ಯಂತರ ವರದಿಯು ಉತ್ತರಿಸಲು ವಿಫಲವಾಗಿರುವ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಒಟ್ಟು ಕಳುವಾದ ಮೊತ್ತ ಎಷ್ಟು?
ಇದು ಇಡೀ ವರದಿಯಲ್ಲಿ ಉತ್ತರಿಸಲಾಗದ ಅತಿ ದೊಡ್ಡ ಪ್ರಶ್ನೆಯಾಗಿದೆ. ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸುಮಾರು 70 ಘಟನೆಗಳು ಕಂಡುಬರುತ್ತವೆ ಎಂದು ಎಸ್ಐಟಿ ಹೇಳಿಕೊಂಡಿದೆ. ಆರು ಜನರಿಂದ ಒಟ್ಟು 78.94 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಪಕ್ಕದ ವಿಶ್ರಾಂತಿ ಕೊಠಡಿಯಲ್ಲಿ 2.25 ಲಕ್ಷ ರೂ. ನಗದು ಪತ್ತೆಯಾಗಿದೆ. ವಿದೇಶಿ ಕರೆನ್ಸಿ ಹಾಗೂ ಇತರೆ ಅಮೂಲ್ಯ ವಸ್ತುಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಆದರೆ ದುರುಪಯೋಗವಾಗಿರುವ ಒಟ್ಟು ಹಣದ ಅಂದಾಜನ್ನು ವರದಿಯು ನೀಡುವುದಿಲ್ಲ.
ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳು ಸೀಮಿತ ಅವಧಿಯನ್ನು ಮಾತ್ರ ಒಳಗೊಂಡಿವೆ ಮತ್ತು ಏಪ್ರಿಲ್ 27, 2026 ಕ್ಕಿಂತ ಮುಂಚಿತವಾಗಿಯೂ ಕಳ್ಳತನ ನಡೆದಿರಬಹುದು ಎಂದು ಎಸ್ಐಟಿ ಒಪ್ಪಿಕೊಂಡಿರುವುದರಿಂದ ಈ ವಿಷಯವು ಮಹತ್ವದ್ದಾಗಿದೆ. ಇದೇ ನಿಜ ಆದಲ್ಲಿ, ನಿಜವಾದ ನಷ್ಟವು ಇದುವರೆಗೆ ವಶಪಡಿಸಿಕೊಂಡಿರುವುದಕ್ಕಿಂತ ಭಾರೀ ಹೆಚ್ಚಿರಬಹುದು. ಆದರೆ, ಮಧ್ಯಂತರ ವರದಿಯು ಈ ಬಗ್ಗೆ ಯಾವುದೇ ಮೌಲ್ಯಮಾಪನವನ್ನು ನೀಡುವುದಿಲ್ಲ.
ಆಡಿಟ್ ಎಚ್ಚರಿಕೆಗಳನ್ನು ನಾಲ್ಕು ವರ್ಷಗಳ ಕಾಲ ಏಕೆ ನಿರ್ಲಕ್ಷಿಸಲಾಯಿತು?
2022-23 ರಿಂದ 2025-26 ರವರೆಗಿನ ಆರ್ಥಿಕ ವರ್ಷಗಳ ಆಂತರಿಕ ಆಡಿಟ್ ವರದಿಗಳು ನಿರಂತರವಾಗಿ ಪ್ರಮುಖ ನ್ಯೂನತೆಗಳನ್ನು ಎತ್ತಿ ತೋರಿಸಿವೆ ಎಂಬುದು ಎಸ್ಐಟಿ ವರದಿಯ ಪ್ರಮುಖ ಸಂಶೋಧನೆಯಾಗಿದೆ. ಈ ವರದಿಗಳು ತಪಾಸಣಾ ಕಾರ್ಯವಿಧಾನಗಳನ್ನು ಬಲಪಡಿಸಲು, ಪ್ರತಿ ಕಾಣಿಕೆ ಪೆಟ್ಟಿಗೆಗೆ ಪ್ರತ್ಯೇಕ ಖಾತೆಗಳನ್ನು ನಿರ್ವಹಿಸಲು, ಅಮೂಲ್ಯ ವಸ್ತುಗಳ ದಾಖಲಾತಿಯನ್ನು ಸುಧಾರಿಸಲು, ಸಿಸಿಟಿವಿ ರೆಕಾರ್ಡಿಂಗ್ಗಳನ್ನು 180 ದಿನಗಳವರೆಗೆ ಇಟ್ಟುಕೊಳ್ಳಲು ಮತ್ತು ಭದ್ರತಾ ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸಲು ಶಿಫಾರಸು ಮಾಡಿದ್ದವು.
ಟ್ರಸ್ಟ್ ಅಧಿಕಾರಿಗಳು ಈ ಆಡಿಟ್ ವರದಿಗಳನ್ನು ಗಂಭೀರವಾಗಿ ಪರಿಗಣಿಸಲು ವಿಫಲರಾಗಿದ್ದಾರೆ ಮತ್ತು ಆಡಿಟ್ ಸಂಶೋಧನೆಗಳನ್ನು ಕಡೆಗಣಿಸಿದ್ದಾರೆ ಎಂದು ಎಸ್ಐಟಿ ಗಮನಿಸಿದೆ. ಆದಾಗ್ಯೂ, ವರದಿಯು ಈ ಕೆಳಗಿನವುಗಳನ್ನು ಉದ್ದೇಶಿಸಿಲ್ಲ:
- ಈ ಆಡಿಟ್ ವರದಿಗಳ ಕುರಿತು ಅಂತಿಮ ನಿರ್ಧಾರಗಳನ್ನು ಯಾವ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ?
- ಈ ಶಿಫಾರಸುಗಳನ್ನು ಜಾರಿಗೆ ತರಲು ಯಾವ ಅಧಿಕಾರಿಗಳು ವಿಫಲರಾಗಿದ್ದಾರೆ?
- ಈ ನಿರ್ಲಕ್ಷ್ಯಕ್ಕಾಗಿ ಯಾವುದೇ ಆಡಳಿತಾತ್ಮಕ ಅಥವಾ ಅಪರಾಧ ಹೊಣೆಗಾರಿಕೆಯನ್ನು ನಿಗದಿಪಡಿಸಲಾಗುತ್ತದೆಯೇ?
ಸಿಸಿಟಿವಿ ರೆಕಾರ್ಡಿಂಗ್ಗಳ ಉಳಿಸಿಕೊಳ್ಳುವ ಅವಧಿಯನ್ನು ಏಕೆ ಸೀಮಿತಗೊಳಿಸಲಾಗಿತ್ತು?
ಸಿಸಿಟಿವಿ ರೆಕಾರ್ಡಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು ಏಕೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂಬುದನ್ನು ವಿವರಿಸಲು ಮಧ್ಯಂತರ ವರದಿಯು ವಿಫಲವಾಗಿದೆ.
ತಪಾಸಣೆ ಪ್ರೋಟೋಕಾಲ್ ಅನ್ನು ಏಕೆ ಬದಲಾಯಿಸಲಾಯಿತು?
ಎಸ್ಐಟಿ ವರದಿಯ ಮತ್ತೊಂದು ಮಹತ್ವದ ಸಂಶೋಧನೆಯು ಫೆಬ್ರವರಿ 6, 2025 ರಂದು ಜಾರಿಗೆ ತರಲಾದ ಪರಿಷ್ಕೃತ ಎಸ್ಒಪಿಗೆ ಸಂಬಂಧಿಸಿದೆ. ಹೊಸ ವ್ಯವಸ್ಥೆಯಡಿಯಲ್ಲಿ, ಪ್ರತಿಯೊಬ್ಬ ವ್ಯಕ್ತಿಯ ಕಡ್ಡಾಯ ತಪಾಸಣೆಯನ್ನು ‘ನಿಯಮಿತ/ಯಾದೃಚ್ಛಿಕ’ ತಪಾಸಣೆಯ ವ್ಯವಸ್ಥೆಯಿಂದ ಬದಲಾಯಿಸಲಾಯಿತು.
ಈ ತಿದ್ದುಪಡಿಯನ್ನು ಮಾಡಿದ ಸಂದರ್ಭಗಳ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ ಎಂದು ವರದಿ ಹೇಳಿದೆ. ಆದಾಗ್ಯೂ, ಅಂತಹ ತನಿಖೆಯಿಂದ ಯಾವುದೇ ಸಂಶೋಧನೆಗಳನ್ನು ಅದು ಪ್ರಸ್ತುತಪಡಿಸುವುದಿಲ್ಲ. ನಿರ್ಧಾರವನ್ನು ಯಾರು ಪ್ರಸ್ತಾಪಿಸಿದರು, ಯಾರು ಅನುಮೋದನೆ ನೀಡಿದರು ಅಥವಾ ಭದ್ರತಾ ತಜ್ಞರ ಅಭಿಪ್ರಾಯವನ್ನು ಪಡೆಯಲಾಗಿದೆಯೇ ಎಂಬುದನ್ನು ನಿರ್ದಿಷ್ಟಪಡಿಸಲು ಇದು ವಿಫಲವಾಗಿದೆ.
ಅಮೂಲ್ಯ ವಸ್ತುಗಳ ತನಿಖೆ ಅಪೂರ್ಣವಾಗಿದೆಯೇ?
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಗಮನ ಸೆಳೆದ ಮೂರು ಪ್ರಕರಣಗಳಲ್ಲಿ ಎಸ್ಐಟಿ ಟ್ರಸ್ಟ್ಗೆ ಕ್ಲೀನ್ ಚಿಟ್ ನೀಡಿದೆ.
ವರದಿಯ ಪ್ರಕಾರ, ಪ್ರಶ್ನಾರ್ಹ ಬೆಳ್ಳಿ ಇಟ್ಟಿಗೆಗಳು, ಹಾರಗಳು ಮತ್ತು ಚರಣ ಪಾದುಕೆಗಳು ಟ್ರಸ್ಟ್ನ ರೆಜಿಸ್ಟರ್ಗಳಲ್ಲಿ ದಾಖಲಾಗಿರುವುದು ಕಂಡುಬಂದಿದೆ, ಕೆಲವು ವಸ್ತುಗಳನ್ನು ತರುವಾಯ ಕರಗಿಸಲು ಸೆಕ್ಯುರಿಟಿ ಪ್ರಿಂಟಿಂಗ್ ಆಂಡ್ ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾಕ್ಕೆ ಕಳುಹಿಸಲಾಗಿದೆ. ಆದಾಗ್ಯೂ, ವರದಿಯು ಕೆಲವು ನಿರ್ಣಾಯಕ ಅಂಶಗಳ ಬಗ್ಗೆ ಮೌನವಾಗಿದೆ. ಉದಾಹರಣೆಗೆ:
- ಅಮೂಲ್ಯ ವಸ್ತುಗಳನ್ನು ಕರಗಿಸುವ ಮುನ್ನ ಅವುಗಳ ಸ್ವತಂತ್ರ ಮೌಲ್ಯಮಾಪನವನ್ನು ಯಾರು ನಡೆಸಿದರು?
- ರಶೀದಿಗಳನ್ನು ಪಡೆಯದ ಬಗ್ಗೆ ದೂರು ನೀಡಿದವರ ಕುಂದುಕೊರತೆಗಳನ್ನು ಹೇಗೆ ಬಗೆಹರಿಸಲಾಯಿತು?
- ಅಮೂಲ್ಯ ವಸ್ತುಗಳ ದಾಸ್ತಾನನ್ನು ಸ್ವತಂತ್ರ ಸಂಸ್ಥೆಯೊಂದು ದಾಖಲೆಗಳ ವಿರುದ್ಧ ಪರಿಶೀಲಿಸಿದೆಯೇ?
ಮಧ್ಯಂತರ ವರದಿಯು ಈ ಪ್ರಶ್ನೆಗಳಿಗೆ ಯಾವುದೇ ಉತ್ತರಗಳನ್ನು ನೀಡುವುದಿಲ್ಲ.
ಉನ್ನತ ಮಟ್ಟದ ಹೊಣೆಗಾರಿಕೆಯ ಪ್ರಶ್ನೆ
ಅನಿಲ್ ಮಿಶ್ರಾ, ಶ್ರೀವಾಸ್ತವ ಮತ್ತು ತಿನ್ನು ಅವರ ಪಾತ್ರಗಳ ಬಗ್ಗೆ ವರದಿಯು ಟಿಪ್ಪಣಿ ಮಾಡಿದೆ ಮತ್ತು ಆರು ಉದ್ಯೋಗಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಶಿಫಾರಸು ಮಾಡಿದೆ. ಆದಾಗ್ಯೂ, ಟ್ರಸ್ಟ್ನ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯ ಸಾಮೂಹಿಕ ಹೊಣೆಗಾರಿಕೆಯ ಬಗ್ಗೆ ಅದು ಯಾವುದೇ ಖಚಿತವಾದ ತೀರ್ಮಾನವನ್ನು ತೆಗೆದುಕೊಂಡಿಲ್ಲ. ವರ್ಷಗಳಿಂದ ಮುಂದುವರಿದಿರುವ ಭದ್ರತಾ ಲೋಪಗಳನ್ನು ಯಾವ ಮಟ್ಟದಲ್ಲಿ ಮರುಪರಿಶೀಲಿಸಲಾಗಿದೆ, ಆಡಿಟ್ ವರದಿಗಳನ್ನು ಯಾರು ಪರಿಶೀಲಿಸಿದ್ದಾರೆ ಅಥವಾ ಭದ್ರತಾ ಪ್ರೋಟೋಕಾಲ್ಗಳನ್ನು ಜಾರಿಗೆ ತರುವ ಅಂತಿಮ ಹೊಣೆಗಾರಿಕೆಯನ್ನು ಯಾರು ಹೊತ್ತಿದ್ದಾರೆ ಎಂಬುದನ್ನು ವರದಿಯು ಸ್ಪಷ್ಟಪಡಿಸುವುದಿಲ್ಲ.
ಮುಂದೆ ಏನು?
ಸಮಾರೋಪ ಅವಲೋಕನದಲ್ಲಿ, ಎಸ್ಐಟಿ ತನ್ನ ತನಿಖೆ ಇನ್ನೂ ಮುಂದುವರಿದಿದೆ ಎಂದು ಒತ್ತಿಹೇಳಿದೆ. ಸಾರಾಂಶದಲ್ಲಿ, ದೇವಸ್ಥಾನದ ಕಾಣಿಕೆಗಳ ಎಣಿಕೆಯ ಸಮಯದಲ್ಲಿ ಕಳ್ಳತನ ಸಂಭವಿಸಿದೆ, ಭದ್ರತಾ ವ್ಯವಸ್ಥೆಗಳು ವಿಫಲವಾಗಿವೆ ಮತ್ತು ಹಲವಾರು ಉದ್ಯೋಗಿಗಳು ಹಾಗೂ ಮೇಲ್ವಿಚಾರಣಾ ಅಧಿಕಾರಿಗಳ ಭಾಗವಹಿಸುವಿಕೆ ಮೇಲ್ನೋಟಕ್ಕೆ ಶಂಕಾಸ್ಪದವಾಗಿ ಕಂಡುಬಂದಿದೆ, ಅವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಎಸ್ಐಟಿ ಇದುವರೆಗೆ ಹೇಳಿದೆ.
ಆದರೂ, ಈ ಮಧ್ಯಂತರ ವರದಿಯು ಹಲವಾರು ಪ್ರಶ್ನೆಗಳನ್ನು ಉತ್ತರಿಸದೆ ಬಿಟ್ಟಿದೆ ಎಂಬುದು ಅಷ್ಟೇ ಸ್ಪಷ್ಟವಾಗಿದೆ – ಈ ಪ್ರಶ್ನೆಗಳ ಉತ್ತರಗಳು ಈ ಘಟನೆಯು ಕೇವಲ ಬೆರಳೆಣಿಕೆಯಷ್ಟು ಉದ್ಯೋಗಿಗಳಿಂದ ನಡೆದ ಕಳ್ಳತನದ ವಿಷಯವೇ ಅಥವಾ ದೀರ್ಘಕಾಲದ ಸಾಂಸ್ಥಿಕ ಲೂಟಿಯ ಪ್ರವೃತ್ತಿಯನ್ನು ಸೂಚಿಸುತ್ತದೆಯೇ ಎಂಬುದನ್ನು ನಿರ್ಧರಿಸುತ್ತದೆ.
ಕೃಪೆ: thewire.in












