ಆಝಂಖಾನ್ ಮಹಿಳೆಯರನ್ನು ಗೌರವಿಸುವುದಿಲ್ಲ; ಕ್ಷಮೆಯಾಚಿಸಬೇಕು- ಉಪಸಭಾಧ್ಯಕ್ಷೆ ರಮಾದೇವಿ

0
652

ಹೊಸದಿಲ್ಲಿ, ಜು. 26: ಸಮಾಜವಾದಿ ಸಂಸದ ಆಝಂಖಾನ್ ಲೋಕಸಭೆಯಲ್ಲಿ ನೀಡಿದ ಹೇಳಿಕೆಗೆ ಬಿಜೆಪಿ ಸಂಸದೆ ಮತ್ತು ಉಪಸಭಾಪತಿಯಾಗಿರುವ ರಮಾದೇವಿ ತೀಕ್ಷ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಝಂಖಾನ್ ಮಹಿಳೆಯರನ್ನು ಗೌರವಿಸುವುದಿಲ್ಲ ಎಂದು ರಮಾದೇವಿ ಹೇಳಿದರು. ನಟಿ ಮತ್ತು ಸಂಸದೆಯಾದ ಜಯಪ್ರದಾರ ವಿರುದ್ಧ ಅವರು ನೀಡಿದ ಹೇಳಿಕೆಯನ್ನು ನಾವೆಲ್ಲ ಅರಿತಿದ್ದೇವೆ. ಲೋಕಸಭೆಯಲ್ಲಿ ಕುಳಿತುಕೊಳ್ಳುವ ಯಾವ ಅವಕಾಶವೂ ಅವರಿಗಿಲ್ಲ. ಆಝಂಖಾನ್‍ರನ್ನು ಸ್ಪೀಕರ್ ಹೊರದಬ್ಬಬೇಕು. ಆಝಂ ಖಾನ್ ಕ್ಷಮೆ ಯಾಚಿಸಬೇಕೆಂದು ರಮಾದೇವಿ ಆಗ್ರಹಿಸಿದರು.

ತ್ರಿವಳಿ ತಲಾಕ್ ಮಸೂದೆ ಚರ್ಚೆಯ ವೇಳೆ ಉಪಸಭಾಪತಿ ರಮಾದೇವಿಯವರ ವಿರುದ್ಧ ಆಝಂಖಾನ್ ಮಾತಾಡಿದ್ದರು. ಇದು ಲೋಕಸಭೆಯಲ್ಲಿ ಗಲಾಟೆಗೂ ಕಾರಣವಾಗಿತ್ತು. ನಿಮ್ಮ ಕಣ್ಣುಗಳನ್ನು ನೋಡುವಾಗ ನನಗೆ ಮಾತಾಡಬೇಕು ಎಂದು ಅನಿಸುತ್ತದೆ ಎಂದು ಆಝಂಖಾನ್ ಹೇಳಿದ್ದರು.

ಮಹಿಳೆಯರೊಂದಿಗೆ ಮಾತಾಡಬೇಕಾದ ರೀತಿ ಇದಲ್ಲ ಎಂದು ರಮಾದೇವಿ ಹೇಳಿದರು. ತಾನು ರಮಾದೇವಿಯವರನ್ನು ಸಹೋದರಿಯಂತೆ ಕಾಣುತ್ತಿದ್ದೇನೆ ಎಂದು ಆಝಂಖಾನ್ ಉತ್ತರಿಸಿದರು. ಆದರೆ ಇದರಿಂದ ತೃಪ್ತರಾಗದ ಬಿಜೆಪಿ ಸದಸ್ಯರು ಸದನದಲ್ಲಿ ಗಲಾಟೆ ಮಾಡಿದರು. ಸಮಾಜವಾದಿ ಪಾರ್ಟಿ ಸಂಸದ ಖಾನ್ ಕ್ಷಮೆ ಯಾಚಿಸಬೇಕೆಮದು ಬಿಜೆಪಿ ಪಟ್ಟು ಹಿಡಿಯಿತು.

ವಿಷಯದಲ್ಲಿ ಸ್ಪೀಕರ್ ಓಂ ಬಿರ್ಲಾ ಮಧ್ಯಪ್ರವೇಶಿಸಿ ಆಝಂಖಾನ್ ಕ್ಷಮೆಯಾಚಿಸಲು ಹೇಳಿದರು. ಆದರೆ, ಪಾರ್ಲಿಮೆಂಟಿನಲ್ಲಿ ಕೆಟ್ಟ ಭಾಷೆ ಬಳಕೆಯನ್ನು ಬಿಜೆಪಿ ಮಾಡುತ್ತಿದೆ ಎಂದು ಸ್ಪೀಕರ್ ಗೆ ಅಖಿಲೇಶ್ ಯಾದವ್ ಮರುತ್ತರ ನೀಡಿದರು. ತಾನು ಕೆಟ್ಟ ಪದ ಬಳಸಿಲ್ಲ ಎಂದು ಆಝಂಖಾನ್ ಹೇಳಿದರು. ನಂತರ ಕ್ಷಮೆಯಾಚಿಸದೆ ಆಂಝಂಖಾನ್ ಮತ್ತು ಅಖಿಲೇಶ್ ಯಾದವ್ ಸದನದಿಂದ ಹೊರನಡೆದರು.