ಚದುರದೆ ನಿಲ್ಲುವ ಶಕ್ತಿ ನೀಡುವ ರಮಝಾನ್

0
731

ಸನ್ಮಾರ್ಗ ವಾರ್ತೆ

✍️ ಅರಫಾ ಮಂಚಿ

ಜಗತ್ತಿನ ವಿವಿಧ ಭಾಗದಲ್ಲಿ ಇಂದು ಮುಸ್ಲಿಮರು ವಿವಿಧ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದರೂ ಅವರು ಚದುರಿಲ್ಲ, ಅಚಲರಾಗಿ, ಬಂದ್ದದ್ದನ್ನು ಎದುರಿಸಿ ನಿಂತಿದ್ದಾರೆ. ಅಲ್ಲಿ, ಫೆಲೆಸ್ತೀನಿನ ಗಾಝದಲ್ಲಿ ಅವರ ಮೇಲೆ ಇಸ್ರೇಲ್ ನಿರಂತರ ಬಾಂಬು ಸುರಿಸುತ್ತಿದೆ. ಅವರು ತಮ್ಮ ನಿಕಟ ಬಂಧುಗಳನ್ನು ಕಳಕೊಳ್ಳುತ್ತಿದ್ದಾರೆ. ಬದುಕಿದವರಲ್ಲಿ ಅಲ್ಲಿ ಯಾರಿಗೂ ತಂದೆಯಿಲ್ಲ, ತಾಯಿಯಿಲ್ಲ, ಮಕ್ಕಳಿಲ್ಲ. ಕುಟುಂಬದ ಎಲ್ಲರನ್ನೂ ಕಳಕೊಂಡವರೂ ಅಲ್ಲಿ ಇದ್ದಾರೆ. ಚೀನದ ಭ್ರಷ್ಟ ಸರಕಾರ ಕ್ಸಿಂಜಿಯಾಂಗ್ ಪ್ರದೇಶವನ್ನೇ ಬಯಲು ಬಂದಿಖಾನೆ ಮಾಡಿದೆ. ಮಸೀದಿಗಳನ್ನು ಕೆಡಹಲಾಗುತ್ತಿದೆ. ಅವರಿಂದ ಅವರ ಇಸ್ಲಾಮೀ ಸ್ಫೂರ್ತಿಯನ್ನು ಕಸಿಯಲು ಯತ್ನಿಸಲಾಗುತ್ತಿದೆ.

ಯುರೋಪ್‌ಗಳಲ್ಲಿ ಇಸ್ಲಾಮೋಫೋಬಿಯ ಹರಡಲಾಗಿದೆ. ಇವೆಲ್ಲದರ ನಡುವೆ ಮತ್ತೆ ರಮಝಾನ್ ಬಂದಿದೆ. ಮುಸ್ಲಿಮರ ಕುರಿತು ಸಂದೇಹ ಸೃಷ್ಟಿಸಿ ದೊಡ್ಡ ಆಕಾರಕ್ಕೆ ತಂದು ನಿಲ್ಲಿಸಿದ ಜನರಿರುವ ಜಗತ್ತಿನಲ್ಲಿ ಮುಸ್ಲಿಮರಿಗೆ ರಮಝಾನ್ ಚೇತೋಹಾರಕವೂ ಶಕ್ತಿದಾಯಕವೂ ಆಗಿದೆ. ಇಸ್ಲಾಮನ್ನು, ಮುಸ್ಲಿಮರನ್ನು ಸರಿಯಾಗಿ ಅರ್ಥ ಮಾಡಿಕೊಂಡವರಿಗೆ ರಮಝಾನನ್ನು ಆ ತಿಂಗಳ ಮಹತ್ವವನ್ನು ಅದು ಯಾಕೆ ಚೇತೋಹಾರಿ ಎಂಬುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಹುದು.

ಹೌದು, ಮುಸ್ಲಿಮರಿಗೆ ಸಮಸ್ಯೆ ಸಂದಿಗ್ಧ ಸ್ಥಿತಿಗಳನ್ನು ಮೀರಿ ನಿಲ್ಲುವ ಶಕ್ತಿಯನ್ನು ರಮಝಾನ್ ತಿಂಗಳ ಸಂಸ್ಕರಣೆ ನೀಡುತ್ತದೆ. ಈ ಸಂಸ್ಕರಣೆಯನ್ನೇ ನೀವು ಈ ತಿಂಗಳ ಒಂದು ಯಜ್ಞವೋ, ತಪಸ್ಸೋ ಆಗಿದೆ ಎಂದೂ ಕರೆಯಬಹುದು. ಒಟ್ಟಿನಲ್ಲಿ ರಮಝಾನ್ ತಿಂಗಳು ಮುಸ್ಲಿಮರಿಗೆ ಇತರೆಲ್ಲ ತಿಂಗಳಂತಲ್ಲ, ಪವಿತ್ರವಾದದ್ದು. ಅನುಗ್ರಹೀತವಾದದ್ದು ಎಂದು ತಿಳಿಯಬಹುದು.

ಪವಿತ್ರ ಕುರ್‌ಆನ್ ಹೇಳಿತು-
“ಓ ಸತ್ಯವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ ನಿರ್ಬಂಧಗೊಳಿಸಿದಂತೆಯೇ ನಿಮ್ಮ ಮೇಲೂ ಉಪವಾಸ ವ್ರತವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ಧರ್ಮನಿಷ್ಠೆಯ ಗುಣ ವಿಶೇಷವುಂಟಾಗುವುದು ಎಂದು ಆಶಿಸಲಾಗಿದೆ.”

ಪ್ರತಿರೋಧಕ್ಕಿರುವ ಬಲವಾದ ಆತ್ಮಶಕ್ತಿಯನ್ನು ಧರ್ಮ ನೀಡುತ್ತದೆ. ಧರ್ಮನಿಷ್ಠ ವ್ಯಕ್ತಿಗೆ ಧರ್ಮವೇ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ನಿಲ್ಲುವ ಶಕ್ತಿಯನ್ನು ಕೊಡುತ್ತದೆ. ಇದುವೇ ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವುದು.

ಇವತ್ತು ಮುಸ್ಲಿಮರು ಒಂಥರಾ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ. ಅವರ ಧರ್ಮ ಮತ್ತು ಅವರ ಅಸ್ಮಿತೆಗೆ ವಿಶ್ವದಾದ್ಯಂತ ಸವಾಲುಗಳನ್ನು ತಂದು ನಿಲ್ಲಿಸಲಾಗುತ್ತದೆ. ಫೆಲೆಸ್ತೀನಿಯರು, ಚೀನಾದ ಮುಸ್ಲಿಮರು, ರೋಹಿಂಗ್ಯನ್ನರು ಒಟ್ಟು ಜಗತ್ತಿನುದ್ದಕ್ಕೂ ಮುಸ್ಲಿಮರು ಅನುಭವಿಸುತ್ತಿರುವುದು ಕೂಡ ಇಂತಹ ಒಂದು ಸವಾಲು ಮತ್ತು ಪರೀಕ್ಷೆಯಾಗಿದೆ. ಮುಸ್ಲಿಮರ ಮುಂದೆ ತಲೆ ಎತ್ತಿ ನಿಂತುದು ಸಾಮೂಹಿಕ ವಿನಾಶದ ಸ್ಥಿತಿ ಮತ್ತು ಬುಸುಗುಡುತ್ತಿರುವುದು ಇಸ್ಲಾಮೋಫೋಬಿಯ. ಇಸ್ಲಾಮಿಗೆ ಹೆದರಬೇಕೆಂದು ಇವರೇ ಕಳಿಸುವುದು. ಇನ್ನೊಂದು ಕಡೆ ದಮನ ನಡೆಸುವುದು ಇವರೇ. ಆದರೆ ಈ ಎಲ್ಲಾ ಆದ್ವಾನಗಳ ನಡುವೆ ಮುಸ್ಲಿಮರು ಎದೆಯೊಡ್ಡಿ ನಿಂತಿರುವುದೇ ಅಚ್ಚರಿಯಾಗುವುದಿಲ್ಲವೇ.

ನಮ್ಮ ಭಾರತದಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯರ, ಪರ್ದಾದ ಮೇಲೆ ದಾಳಿ ಮಾಡಲಾಗುತ್ತಿದೆ. ನಮ್ಮ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಹಿಜಾಬ್ ಮೇಲೆ ತೀವ್ರ ಅಸಹನೆ ವ್ಯಕ್ತವಾಗುತ್ತಿದೆ. ರಾಜಸ್ತಾನ, ಕರ್ನಾಟಕಗಳಲ್ಲಿ ಇದಕ್ಕಾಗಿ ಕೇಸರಿ ಪಡೆ ಕುಖ್ಯಾತವಾದವು. ಯಾವುದೇ ಗಲಾಟೆ ನಡೆದರೂ ಮುಸ್ಲಿಮರ ಮನೆ ಕಟ್ಟಡಗಳನ್ನು ಕೆಡಹುವ ಸಂಸ್ಕೃತಿ ಯು.ಪಿ.ಯಲ್ಲಿ ಶುರುವಾಗಿ ಮಧ್ಯಪ್ರದೇಶಗಳಲ್ಲಿ ನಡೆಯುತ್ತಿದೆ. ಅಭಿವೃದ್ಧಿ ಹೆಸರಿಟ್ಟು ಪ್ರಾಧಿಕಾರ ದಿಲ್ಲಿಯಲ್ಲಿ ಮುಸ್ಲಿಮರದ್ದೂ ಮುಸ್ಲಿಮರಲ್ಲದವರದ್ದೂ ಕಟ್ಟಡ ಕೆಡಹುತ್ತಿದೆ. ಹೀಗೆ ಉತ್ತರಾಖಂಡ ಸರಕಾರ ನೈನಿತಾಲ್‌ನಲ್ಲಿ ಮಸೀದಿ ಕೆಡವಿದ್ದು. ದೆಹಲಿಯ ಮೋಹರೌಲಿಯಲ್ಲಿ, ಅದಕ್ಕೂ ಮೊದಲು ಉತ್ತರಾಖಂಡದ ಹಲ್ದವಾನಿಯಲ್ಲಿ ಮುಸ್ಲಿಂ ಬಾಹುಲ್ಯದ ವಸತಿ ಪ್ರದೇಶವನ್ನು ರೈಲ್ವೆ ಜಮೀನು ಎಂದು ಹೇಳಿ ನೆಲಸಮ ಮಾಡಲು ಅಲ್ಲಿನ ಸರಕಾರ ಹೊರಟಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯವು, ನಿಮಗೆ ತೆರವುಗೊಳಿಸಬೇಕೆಂದೇ ಇದ್ದರೆ ಬದಲಿ ವ್ಯವಸ್ಥೆ ಮಾಡಿ ಎಂದು ಚಾಟಿ ಬೀಸಿದ ಮೇಲೆ ಸರಕಾರ ಸುಮ್ಮನಾಯಿತು.

ಗಡ್ಡ ಇಟ್ಟುಕೊಂಡಿರುವ ಮುಸ್ಲಿಮರನ್ನು ವಯೋವೃದ್ಧರೆಂದೂ ನೋಡದೆ ದೇಶದ ನಾನಾ ಕಡೆಗಳಲ್ಲಿ ಇತ್ತೀಚೆಗೆ ನಮ್ಮ ಕರ್ನಾಟಕದಲ್ಲಿಯೂ ಹಿಂಸಿಸಲಾಗಿದೆ. ದುಷ್ಕರ್ಮಿಗಳು ತಮ್ಮ ಧರ್ಮದ ಘೋಷಣೆಯನ್ನು ಅವರ ಗಂಟಲಿನಿಂದ ಹೊರ ತರಲು ಯತ್ನಿಸಿ ವಿಫಲಾರಗುತ್ತಿದ್ದಾರೆ. ದನದ ಹೆಸರಿನಲ್ಲಿ ಮೋಬ್ ಲಿಂಚಿಂಗ್ ಮಾಡುವ ಚಾಳಿ ಈಗಲೂ ಇದೆ. ಹೀಗೆ, ದೇಶ ವಿದೇಶಗಳಲ್ಲಿ ಪ್ರತೀಕಾರಾತ್ಮಕ ಶಕ್ತಿಗಳ ದೌರ್ಜನ್ಯಕ್ಕೆ ಮುಸ್ಲಿಮರು ತುತ್ತಾಗುತ್ತಿದ್ದಾರೆ.

ಇರಲಿ, ಇವರಿಗೂ ಇಂತಹ ದೌರ್ಜನ್ಯಕ್ಕೊಳಗಾದವರಿಗೂ ರಮಝಾನ್ ತಿಂಗಳು ಇದೆ. ವರ್ಷ ವರ್ಷ ಬರುತ್ತದೆ. ರಮಝಾನಿನಲ್ಲಿ ಎಲ್ಲ ನೋವು ನಲಿವುಗಳನ್ನು ದೇವನಿಗೆ ಅರ್ಪಿಸಿ ಇವರು ವ್ರತ ಇಡುತ್ತಾರೆ. ಧರ್ಮ ಬೆಳಗ್ಗಿನಿಂದ ಸಂಜೆಯವರೆಗೆ ತಿನ್ನಬೇಡಿ ಎಂದದ್ದಕ್ಕಾಗಿ ಇವರು ಯಾವುದೇ ಆಹಾರ ತಿನ್ನುವುದಿಲ್ಲ. ನೀರೂ ಕುಡಿಯುವುದಿಲ್ಲ. ವ್ರತ ಅಂದರೆ ಇದು ಹೀಗಿರುತ್ತದೆ. ಶಿಸ್ತಿನಿಂದ ಜೀವನವನ್ನು ಕಟ್ಟುವವರನ್ನು ದುಷ್ಟ ಶಕ್ತಿಗಳಿಗೆ ಮಣಿಸುವುದು ಕಷ್ಟ. ಮುಸ್ಲಿಮರದ್ದು ಸತ್ಯಕ್ಕೆ ಕಟಿಬದ್ಧರಾಗಿ ಮಾನವೀಯ ನೆಲೆಯಲ್ಲಿ ಸಮಾಜದಲ್ಲಿ ಬದುಕುವ ಜನ ವಿಭಾಗ ಆಗಿದೆ. ಇದಕ್ಕೆ ಅಪವಾದವಾಗಿ ವರ್ತಿಸುವವರು ಇಲ್ಲ ಎಂದಲ್ಲ; ಇದ್ದಾರೆ. ಆದರೆ ನೀವು ಕರೆಯ ಬಹುದಾದ ಮುಸ್ಲಿಂ ಎಂಬ ಹೆಸರು ಮಾತ್ರ ಆಗಿ ಅವರು ಉಳಿಯುತ್ತಾರೆ. ಕಷ್ಟಗಳನ್ನು ಬಂಡೆಯಂತೆ ಎದುರಿಸಿ ನಿಲ್ಲುವ ಶಕ್ತಿಯನ್ನು ಕೊಟ್ಟದ್ದು ಧರ್ಮದ ತರಬೇತಿ ಶಿಕ್ಷಣವಾಗಿದೆ.

ಯಥಾರ್ಥವಾಗಿಯೂ ಮುಸ್ಲಿಮರ ಜೀವನವನ್ನು ಅಧ್ಯಯನಿಸುವವರಿಗೆ ಈ ಅಂಶವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಹುದು. ಹಾಗಾಗಿ ಅವರು ಚದುರುವುದಿಲ್ಲ. ಬೆಟ್ಟದಂತಹದೇ ಸಮಸ್ಯೆ ತನ್ನ ಎದುರು ನಿಂತರೂ ತತ್ತರಿಸುವುದೂ ಇಲ್ಲ. ಇನ್ನೊಂದೆಡೆ ಸಂತೋಷ ಸಂತೃತಪ್ತಿಯೇ ಅವರ ಪದತಳಗಳಲ್ಲಿ ಬಂದು ಬಿದ್ದರೂ ಅದಕ್ಕಾಗಿ ಕುಣಿದಾಡುವುದೂ ಇಲ್ಲ. ಮುಸ್ಲಿಮರೆಂದರೆ ಸ್ಥಿತ ಪ್ರಜ್ಞರು. ಪರಿಸ್ಥಿತಿ ಪರಿಸರದ ಅರಿವಿನೊಂದಿಗೆ ಜೀವಿಸುವ ತರಬೇತಿಯನ್ನು ಅವರು ರಮಝಾನ್‌ನಲ್ಲಿ ವರ್ಷ ವರ್ಷವೂ ಪಡೆಯುತ್ತಾರೆ ಮತ್ತು ನವೀಕರಿಸುತ್ತದೆ.

ಹೌದು, ಮುಖ್ಯವಾಗಿ ಮುಸ್ಲಿಮರಿಗೆ ಇದು ಧರ್ಮ ನಿಷ್ಠೆಯಿಂದ ಸಾಧ್ಯವಾಗಿದ್ದು. ಪವಿತ್ರ ಕುರ್‌ಆನ್ ಹೇಳುವುದು ಅದನ್ನೇ. ನಿಮಗೆ ರಮಝಾನಿನ ತಿಂಗಳ ವ್ರತ ಕೊಟ್ಟದ್ದು ನಿಮ್ಮ ಧರ್ಮನಿಷ್ಠೆಯನ್ನು ಗಟ್ಟಿ ಮಾಡುವುದಕ್ಕಾಗಿದೆ. ದೇವನಲ್ಲಿ ಅಚಲ ನಿಷ್ಠೆ ಇಲ್ಲದಿರುತ್ತಿದ್ದರೆ, ಇವರು ಎಂದೋ ಬಿಕರಿಗೊಳಗಾಗುತ್ತಿದ್ದರು. ಧರ್ಮದೊಂದಿಗೆ ರಾಜೀ ಮಾಡಿಕೊಂಡು ಮಾರಲ್ಪಟ್ಟು ಇಸ್ಲಾಮೀ ವಿರೋಧಿಗಳ ತಂತ್ರಗಳಿಗೆ ಬಲಿ ಬೀಳುತ್ತಿದ್ದರು. ತಮ್ಮ ಅಸ್ತಿತ್ವವನ್ನು ಕಳಕೊಳ್ಳುತ್ತಿದ್ದರು. ಹಾಗಾಗಲಿಲ್ಲ. ಅವರು ಹಾಗಾಗದಿರಲು ದೃಢವಾದ ಧರ್ಮನಿಷ್ಠೆ ಇಟ್ಟುಕೊಂಡವರು ಹೆದರಿ ಚದುರುವವರಲ್ಲ. ಇದನ್ನು ಜಗತ್ತು ನೋಡುತ್ತಿದೆ ಮತ್ತು ಸಾಕ್ಷಿಯೂ ಆಗಿದೆಯಲ್ವೇ.

ಇಸ್ಲಾಂ ವಿಶ್ವದಲ್ಲಿ ತನ್ನ ಅಸ್ತಿತ್ವದೊಂದಿಗೆ ತನ್ನ ಚಲನಶೀಲತೆಯನ್ನು ಸಕ್ರಿಯವಾಗಿಟ್ಟುಕೊಂಡಿದೆ. ಇಲ್ಲಿ ರಮಝಾನ್ ತಿಂಗಳ ಉಪವಾಸದ ಪಾತ್ರವೂ ಸಂಸ್ಕರಣೆಯದು. ಪ್ರತಿವರ್ಷ ಅವರಿಗಾಗಿ ಅವರಲ್ಲಿರಬೇಕಾದ ಮತ್ತು ಅವರಲ್ಲಿ ಇರುವ ಧರ್ಮನಿಷ್ಠೆ ಎಂಬ ಗುಣವಿಶೇಷತೆಯ ನವೀಕರಣಕ್ಕಾಗಿ ಕಡ್ಡಾಯ ರಮಝಾನ್ ತಿಂಗಳು ಅವರೆಡೆಗೆ ಬಂದದ್ದು. ಅದಕ್ಕೆ ಮುಸ್ಲಿಮನನ್ನು ಪ್ರಬಲಿಸುವ ಶಕ್ತಿ ಇದೆ. ಆತ್ಮಶಕ್ತಿಯನ್ನು ಗಟ್ಟಿಗೊಳಿಸುವ ಸಂಸ್ಕರಣೆಯ ಗುಣವಿದೆ. ಆದುದರಿಂದ ಆದರದಿಂದಲೇ ಧರ್ಮಭಕ್ತ ಜನ ವಿಭಾಗವು ರಮಝಾನ್ ಅನ್ನು ಕಾತರಿಸುವುದು ಸ್ವಾಗತಿಸುವುದು.

ಮುಸ್ಲಿಮರ ಬಗ್ಗೆ ಹೇಳುವುದಾದರೆ ರಮಝಾನ್ ಉಪವಾಸ ವ್ರತ ಇಸ್ಲಾಮ್ ಧರ್ಮದ ಒಂದು ಪಿಲ್ಲರ್ ಆಗಿದೆ. ಇನ್ನೊಂದು ಅರ್ಥದಲ್ಲಿ ಇಲ್ಲಿ ತ್ಯಾಗ, ಸತ್ವ ಪರೀಕ್ಷೆ ಕೂಡ ಇದೆ. ಎಲ್ಲ ಕೆಟ್ಟ ಅಭ್ಯಾಸಗಳಿಂದ ದೂರವಿರಲು ಸಮರ್ಥರಾಗುವುದಕ್ಕೆ ಈ ತಿಂಗಳನ್ನು ಮುಸ್ಲಿಮರು ಸಕರಾತ್ಮಕವಾಗಿ ಬಳಸಿಕೊಳ್ಳಬೇಕು. ಸಿಂಪಲ್! ಧರ್ಮ ವಿಧಿಸಿದ ವಿಧಿ ನಿಷೇಧಗಳಂದ ದೂರ ನಿಲ್ಲಬೇಕು. ಅಂತಹ ರಮಝಾನ್ ತರಬೇತಿಯನ್ನು ನೀಡುತ್ತದೆ. ಇಂತಹ ರಮಝಾನ್ ಈಗ ಮತ್ತೊಮ್ಮೆ ಜಗತ್ತಿನ ಮುಂದೆ ಬಂದು ನಿಂತಿದೆ.

ಇಸ್ಲಾಂ ಅಂದರೆ ಶಾಂತಿಯೂ ಹೌದು, ದೇವನಿಗೆ ಶರಣಾಗತಿಯೂ ಆಗಿದೆ. ಅದನ್ನು ಸಮಾಜದಲ್ಲಿ ಹೇಗೆ ರೂಢಿಗೆ ತರುವುದು. ಹೀಗೆ… ಸಾಮಾಜಿಕ ಸೌಹಾರ್ದ, ಸಾಹೋದರ್ಯ, ಸತ್ಕರ್ಮ, ಪ್ರೀತಿ ವಿಶ್ವಾಸ, ಅಹಿಂಸೆ, ಒಳ್ಳೆಯ ಚಾರಿತ್ರ್ಯ, ಮಿತವ್ಯಯ, ಕರುಣೆ ಉಪಕಾರ, ದಾನ ಶಾಂತಿ ಮಾನವೀಯವಾದ ಎಲ್ಲ ಗುಣಗಳನ್ನು ಪಾಲಿಸುವ ಮೂಲಕ ಮಾತ್ರವಲ್ಲ, ಸಮಾಜದಲ್ಲಿ ಇರುವಂತೆ ನೋಡಿಕೊಳ್ಳುವುದು ಮುಸ್ಲಿಮರ ಕರ್ತವ್ಯ. ಯಾಕೆಂದರೆ ಇವೆಲ್ಲವೂ ಮುಸ್ಲಿಮರಲ್ಲಿ ಇರಲೇಬೇಕೆಂದು ಇಸ್ಲಾಂ ಕಲಿಸಿದೆ.

ಇಸ್ಲಾಮ್ ಎಂಬುದು ಏಕದೇವೋ ಪಾಸನೆಯ ಧರ್ಮ. ಸಾಮಾನ್ಯವಾಗಿ ಒಬ್ಬ ಮುಸ್ಲಿಮನಲ್ಲಿ ಈ ಎಲ್ಲ ಗುಣಗಳನ್ನು ಅವನ ಏಕದೇವೋ ಪಾಸನೆಯೇ ಆತನಲ್ಲಿ ಮೈಗೂಡಿಸಿಕೊಳ್ಳಲು ಪ್ರೇರೇಪಿಸಿರುತ್ತದೆ. ಅವನ ಒಂದು ಮುಗುಳ್ನಗುವಿನಿಂದ ಹಿಡಿದು ಕಟ್ಟುನಿಟ್ಟಿನ ನಿರ್ಣಾಯಕ ನಿರ್ಧಾರಗಳವರೆಗೂ ತೌಹೀದ್ ಅವನನ್ನು ಸಮರ್ಥಗೊಳಿಸುತ್ತದೆ. ಇಸ್ಲಾಮಿನ ಎಲ್ಲ ಪ್ರತಿಪಾದನೆಗಳು ಸಮಾಜಕ್ಕೆ ಉಪಕಾರದ್ದೂ ಆಗಿದೆ. ಜೊತೆಗೆ ಮನುಷ್ಯ ಕೇಂದ್ರಿತವಾಗಿದೆ. ಜಗತ್ತಿಗಾಗಿ ಜನರಿಲ್ಲ. ಜನರಿಗಾಗಿ ಜಗತ್ತಿನ್ನೆಲ್ಲವೂ ಇದೆ. ಜನರು ದೇವೋಪಾಸನೆಗಿರುವವರಾಗಿದ್ದಾರೆ. ಇದು ಇಸ್ಲಾಂ ಕಲಿಸಿಕೊಡುವ ಸರಳ ತತ್ವವಾಗಿದೆ ಹೌದು. ಮುಸ್ಲಿಮರು ಎಲ್ಲರಿಗಾಗಿರುವವರು ಎಂಬುದು ಇಸ್ಲಾಮಿನ ಇನ್ನೊಂದು ಪ್ರಮುಖ ತತ್ವ. ಈ ತತ್ವದ ಆಧಾರದಲ್ಲಿ ಕೆಡುಕನ್ನು ತಡೆಯುವುದು. ಇತರರಿಗೆ ಕಷ್ಟದಲ್ಲಿ ನೆರವಾಗುವುದು. ಸಹಜೀವಿಗಳನ್ನು ಗೌರವಿಸುವುದು ಮುಸ್ಲಿಮರ ಧಾರ್ಮಿಕ ಕರ್ತವ್ಯಗಳಲ್ಲಿ ಸೇರಿರುತ್ತದೆ.

ಇಂತಹ ಉದಾತ್ತ ಧರ್ಮ ಮತ್ತು ಇದರ ಅನುಯಾಯಿಗಳ ವಿರುದ್ಧ ನೆಗೆಟಿವ್ ಮೈಂಡ್‌ನವರು ಇಸ್ಲಾಮೋಫೋಬಿಯ ಹರಡುವುದು. ಮುಸ್ಲಿಮರನ್ನು ಕಂಡಾಗ ಹೆದರುವಂತೆ ತೋರ್ಪಡಿಸುವುದು ಮುಸ್ಲಿಮರೆಂದರೆ ಟೈಟ್ ಮಾಡಬೇಕಾದವರೆಂದು ನಂಬಿಸುವುದು. ಆದರೆ ಈ ಎಲ್ಲ ಟೈಟ್ ದೌರ್ಜನ್ಯಗಳನ್ನು ಮೀರಿ ನಿಲ್ಲುವ ಆತ್ಮಬಲ ಮುಸ್ಲಿಮರಿಗೆ. ಜೊತೆಗೆ ರಮಝಾನ್ ಇರುವುದೇ ಇಂತಹ ಶಕ್ತಿ ಸಾಮರ್ಥ್ಯವನ್ನು ಅವರಿಗೆ ದೊರಕಿಸಿಕೊಡುವುದಕ್ಕಾಗಿದೆ. ಅಂದರೆ ಅದು ಅಂತಹ ವ್ಯವಸ್ಥೆಯಾಗಿದೆ. ಮುಸ್ಲಿಮರು ಮತ್ತು ಇಸ್ಲಾಮಿನ ಬಗ್ಗೆ ತಪ್ಪುಕಲ್ಪನೆಗೊಳಗಾದವರು ಮತ್ತು ಅಪಪ್ರಚಾರ ಮಾಡುವವರು ಇಸ್ಲಾಮಿನ ಈ ಎಲ್ಲ ಮಹತ್ತರ ಗುಣಗಳ ಬಗ್ಗೆ ಅಪರಿಚಿತರು ಮತ್ತು ಅರಿವಿಲ್ಲದವರು ಆಗಿದ್ದಾರೆ. ಆದರೆ ಇಸ್ಲಾಮೋಫೋಬಿಯ ಹರಡುವವರು ತಮ್ಮ ಅಸ್ತಿತ್ವ ಇಸ್ಲಾಮಿನ ಮುಂದೆ ಉಳಿಯುವುದಿಲ್ಲ ಎಂದು ಹೆದರುವುದರಿಂದ ಅವರು ಹರಡುವುದು. ಆದರೆ ಅದು ನಿಜ ಅಲ್ಲ. ಮುಸ್ಲಿಮರು ಸಮಾಜಮುಖಿಗಳು ಮತ್ತು ರಕ್ಷಕರು ಆಗಿದ್ದಾರೆ.

ಉದಾಹರಣೆಗೆ ಫೆಲೆಸ್ತೀನನ್ನೇ ನೋಡಿ. ಝಿಯೋನಿಸ್ಟರು ಸುಮಾರು 30 ಸಾವಿರದಷ್ಟು ಮಂದಿಯನ್ನು ಅಲ್ಲಿ ಹತ್ಯೆ ಮಾಡಿದ್ದಾರೆ. ಹಾಗಂತ ಪ್ರತೀಕಾರವಾಗಿ ಬೇರೆಲ್ಲೋ ಇರುವ, ಯಹೂದಿಯರ ಮೇಲೆ ಮುಸ್ಲಿಮರು ಕೈ ಎತ್ತುವುದಿಲ್ಲ. ಯಾಕೆಂದರೆ ಜಾತಿ ಗೋತ್ರಗಳ ಮೇಲೆ ಶಿಕ್ಷೆ ನೀಡುವುದು ಇಸ್ಲಾಮಿನಲ್ಲಿ ಇಲ್ಲ. ತಪ್ಪೆಸಗಿದವರಿಗೆ ಶಿಕ್ಷೆ ನೀಡಲಾಗುವುದು. ಯಾಕೆಂದರೆ ಮುಸ್ಲಿಮರು ತಮ್ಮ ಧರ್ಮದಿಂದ ಇಲ್ಲಿ ಸಂಭವಿಸಿದ ಎಲ್ಲದರಲ್ಲೂ, ಸಂಭವಿಸಬಹುದಾದ ಎಲ್ಲವೂ ಮತ್ತು ಮನುಷ್ಯನ ಜೀವನ ಮರಣ ಸಹಿತ ಎಲ್ಲದರಲ್ಲೂ ದೇವನ ಪಾತ್ರ ಇದೆ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ. ಝಿಯೋನಿಸ್ಟರು ಬಾಂಬು ಸುರಿಸಿ ಕೊಲ್ಲುವಂತೆ ಮುಸ್ಲಿಮರು ಮಾಡುವಂತಿಲ್ಲ. ರಮಝಾನ್ ಇಂತಹ ಸಂಸ್ಕರಣೆ ನೀಡುತ್ತದೆ.
ಹೀಗಾಗಿ ವರ್ಷದಲ್ಲಿ ಒಮ್ಮೆಯಂತೆ ಪ್ರತಿ ವರ್ಷವೂ ಬರುವ ರಮಝಾನ್ ತಿಂಗಳು ಮುಸ್ಲಿಮರಿಗೆ ಮಹತ್ವದ್ದಾಗಿದೆ. ಈ ಒಂದು ತಿಂಗಳಲ್ಲಿ ನಿಗದಿತ ಸಮಯದಲ್ಲಿ ಉಪವಾಸ ವ್ರತ ಆಚರಿಸುವ ಮೂಲಕ ಅಪಾರ ಸಂಯಮವನ್ನು ಪಾಲಿಸುತ್ತಾರೆ. ಸಹಜೀವಿಯನ್ನು ಪ್ರೀತಿಸುವ, ಗೌರವಿಸುವ, ಅವರಿಗೆ ನೆರವಾಗುವ, ಕೆಡಕಿನಿಂದ ದೂರ ಇರುವ, ಕೆಡುಕನ್ನು ತಡೆಯುವ ಇಂಥ ಎಲ್ಲ ಮಾನವಿಯ ಗುಣಗಳ ತರಬೇತಿಯಿಂದ ಮುಸ್ಲಿಮರು ಸಜ್ಜುಗೊಳುತ್ತಾರೆ. ಅದಕ್ಕಾಗಿ ಈ ತಿಂಗಳು.

ಧರ್ಮದ ಈ ಬೇಡಿಕೆಗಳಿಗೆ ಅನುಗುಣವಾಗಿ ಅವರು ತಮ್ಮನ್ನು ರಮಝಾನ್‌ನಲ್ಲಿ ಸಾಣೆ ಹಿಡಿದುಕೊಳ್ಳಬೇಕು. ಧರ್ಮ ಹೇಳುವುದು ಮುಸ್ಲಿಂ ಸ್ವಯಂ ಸಂಸ್ಕರಿಸಬೇಕು. ತಾನು ಮುಸ್ಲಿಂ ಎಂಬ ಅರ್ಹತೆಗೆ ತಕ್ಕಂತೆ. ಅದಕ್ಕಾಗಿ ದೇವನು ವರ್ಷದಲ್ಲಿ ಒಂದು ತಿಂಗಳು ಕೊಟ್ಟೂ ಆಗಿದೆ. ಮುಸ್ಲಿಮರು ರಮಝಾನ್ ಅನ್ನು ದೇವನ ವಿಶೇಷ ಕೃಪೆಯಿರುವ ಈ ತಿಂಗಳಾಗಿ ಪರಿಗಣಿಸಿದ್ದಾರೆ. ಅದಕ್ಕಾಗಿ ಕಾದು ನಿಂತು ಸ್ವಾಗತಿಸುತ್ತಾರೆ.

ಹಝ್ರತ್ ಅಬೂ ಹುರೈರಾ ವರದಿ ಮಾಡುತ್ತಾರೆ- ರಮಝಾನ್ ಬಂದಾಗ ಪ್ರವಾದಿಯವರು(ಸ) ಹೇಳಿದರು, ‘ಅನುಗ್ರಹೀತವಾದ ಒಂದು ತಿಂಗಳು ಇದೋ ನಿಮ್ಮಲ್ಲಿಗೆ ಬಂದಿದೆ. ಇದರಲ್ಲಿ ಅಲ್ಲಾಹನು ಉಪವಾಸವನ್ನು ಕಡ್ಡಾಯವಾಗಿ ಇಡಲು ಹೇಳಿದ್ದಾನೆ. ಸ್ವರ್ಗದ ಕವಾಟಗಳು ತೆರೆಯಲ್ಪಡುತ್ತದೆ. ನರಕದ ಬಾಗಿಲುಗಳು ಮುಚ್ಚಲ್ಪಡುತ್ತದೆ. ಪಿಶಾಚಿಗಳನ್ನು ಬಂಧಿಸಲಾಗುತ್ತದೆ. ಇದರಲ್ಲಿ ಸಾವಿರ ಮಾಸಕ್ಕಿಂತ ಉತ್ತಮವಾದ ಒಂದು ರಾತ್ರಿಯಿದೆ. ಅದರ ಪುಣ್ಯ ಯಾರಾದರೂ ಕಳಕೊಂಡರೆ ಅವನಿಗೆ ಎಲ್ಲವೂ ನಷ್ಟವಾಯಿತು. (ಅಹ್ಮದ್, ನಸಾಈ, ಬೈಹಕಿ)

ಹೌದು, ಈ ಪ್ರವಾದಿಯವರ(ಸ) ಮಾತುಗಳು ರಮಝಾನ್ ತಿಂಗಳಲ್ಲಿರುವ ವಿಶೇಷವಾದ ದೈವಿಕ ವ್ಯವಸ್ಥೆಯನ್ನು ತಿಳಿಸಿಕೊಡುತ್ತದೆಯಲ್ಲವೇ.

ಹೌದು, ರಮಝಾನ್ ಪ್ರತಿಕೂಲ ಸ್ಥಿತಿಯಲ್ಲಿಯೂ ದಿಟ್ಟವಾಗಿ ನಿಲ್ಲುವ ತರಬೇತಿ ನೀಡುತ್ತದೆ. ದಮನ, ದೌರ್ಜನ್ಯಗಳನ್ನು ಎದುರಿಸಿ ಸೋಲಿಸುವ ಶಕ್ತಿ ಅವರಿಗೆ ನೀಡುತ್ತದೆ. ರಮಝಾನ್ ಒಬ್ಬ ತರಬೇತುಗೊಂಡ ಯೋಧನ ರೀತಿಯಲ್ಲಿ ಅವರನ್ನು ಪರಿವರ್ತಿಸುತ್ತದೆ. ಓರ್ವ ಯಥಾರ್ಥ ವಿಶ್ವಾಸಿ ಅಂದು ಅದುರುವುದಿಲ್ಲ. ನೀವು ಅವರಿಗೆ ಎಂತೆಂತಹ ಪರೀಕ್ಷೆಗಳಿಗೊಡ್ಡಿ, ಸವಾಲಿಗೊಡ್ಡಿ ಅವರು ಅಲ್ಲಾಡುವುದಿಲ್ಲ. ಹಝ್ರತ್ ಮೋಸೆಯನ್ನು ಸೋಲಿಸಲು ಫರೋವನಿಗಾಗಿಲ್ಲ. ಆದರೆ ಫರೋವ ಸ್ವಯಂ ನಾಶವಾದ. ಹಝ್ರತ್ ಇಬ್ರಾಹೀಮರನ್ನು ನಮ್ರೂದ್ ಅಗ್ನಿ ಕುಂಡಕ್ಕೆ ಎಸೆದ. ಇಬ್ರಾಹೀಂ ಸುಟ್ಟು ಹೋಗಲಿಲ್ಲ. ಈ ದೇವ ಸಹಾಯದ ವಿಶ್ವಾಸ. ಮುಸ್ಲಿಮರನ್ನು ಸಂಸ್ಕರಿಸುತ್ತದೆ. ಮತ್ತು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವುದು. ದೇವನ ವಾಗ್ದತ್ತ ಸಹಾಯ ತಮ್ಮ ಬಳಿಗೆ ಬಂದೇ ತೀರುವುದೆಂಬ ವಿಶ್ವಾಸದಲ್ಲಿ. ಈ ವಿಶ್ವಾಸ ಅವರನ್ನು ಗಟ್ಟಿ ಪಡಿಸುತ್ತದೆ. ರಮಝಾನ್ ಈ ವಿಶ್ವಾಸವನ್ನು ನವೀಕರಿಸುತ್ತದೆ. ಹೀಗಾಗಿ ರಮಝಾನ್ ಮುಸ್ಲಿಮರನ್ನು ಚದುರದೆ ಅಚಲವಾಗಿ ಬದುಕಿನಲ್ಲಿ ನೆಲೆಯೂರಿ ನಿಲ್ಲಲು ತರಬೇತುಗೊಳಿಸುತ್ತಿರುತ್ತದೆ.

ಕೊನೆಯದಾಗಿ ರಮಝಾನ್ ತಿಂಗಳು ಎಲ್ಲರಿಗೂ ಬರುತ್ತದೆ. ಮುಸ್ಲಿಮರಿಗೆ ಪುಣ್ಯಗಳ ಜೊತೆಗೆ ಧರ್ಮನಿಷ್ಠೆಯನ್ನೂ ತಂದು ಕೊಡುತ್ತದೆ. ಇಲ್ಲಿ ಪುಣ್ಯವೂ ಇದೆ. ಪ್ರತಿಫಲವೂ ಇದೆ. ನೀವು ರಮಝಾನ್ ತಿಂಗಳನ್ನು ಧರ್ಮನಿಷ್ಠೆಯ ನವೀಕರಣವೆಂದೂ ಕರೆಯಿರಿ.