ರಮಝಾನ್: ಸಹನೆಯ ಒಂದು ತರಬೇತಿ

0
432

ಖದೀಜ ನುಸ್ರತ್ ಅಬುಧಾಬಿ

ಸಬ್ರ್(ಸಹನೆ) ಎಂಬುದು ಕುರ್ ಆನ್ ಹಾಗೂ ಪ್ರವಾದಿ ವಚನಗಳಲ್ಲಿ ಹಲವಾರು ಬಾರಿ ಪ್ರಸ್ತಾಪಿಸಲ್ಪಡುವ ವಿಷಯವಾಗಿದೆ. ಸಬ್ರ್ ಎಂಬ ಪದಕ್ಕೆ ಸಹನೆ, ತಾಳ್ಮೆ, ಸಂಯಮ, ಸ್ಥೈರ್ಯ, ಪರಿಶ್ರಮ,  ಸ್ವಯಂ ನಿಯಂತ್ರಣ ಇತ್ಯಾದಿ ಅರ್ಥಗಳನ್ನು ನೀಡಬಹುದು. ಸಹನೆಯು ಸತ್ಯವಿಶ್ವಾಸದ ಅರ್ಧಾಂಶ ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿರುವರು. ಸಹನೆಯು ಉಪವಾಸದೊಂದಿಗೆ ನೇರ ಸಂಪರ್ಕವಿರುವ ವಿಷಯವಾಗಿದೆ. ಉಪವಾಸವು ಅನ್ನ ಪಾನೀಯ ಹಾಗೂ ಇತರ ಹಲವಾರು ಲೌಖಿಕ ಆಸೆ ಆಕಾಂಕ್ಷೆಗಳನ್ನು ನಿಯಂತ್ರಿಸಲು ಸಹನೆಯ ಉತ್ತಮ ತರಭೇತಿ ನೀಡುತ್ತದೆ. ಪ್ರವಾದಿ ಮುಹಮ್ಮದ್(ಸ)ರು ರಮಝಾನ್ ತಿಂಗಳನ್ನು ಸಹನೆಯ ತಿಂಗಳು ಮತ್ತು ಉಪವಾಸವ್ರತವನ್ನು ಸಹನೆಯ ಅರ್ಧಾಂಶ ಎಂದು ಹೇಳಿರುವರು.

ಸಹನೆ ಮೂರು ವಿಧಗಳಿವೆ.

1.ಅಲ್ಲಾಹನ ಆದೇಶಗಳನ್ನು ಪಾಲಿಸಲು ಬೇಕಾದ ಸಹನೆ
ಆರಾಧನೆಗಳನ್ನು ಮಾಡಲು, ನಮಾಝ್, ತರಾವೀಹ್, ತಹಜ್ಜುದ್ ನಮಾಝ್ ಗಳಲ್ಲಿ ದೀರ್ಘ ಕಾಲ ನಿಂತುಕೊಳ್ಳಲು, ನಿದ್ರೆಯನ್ನು ನಿಯಂತ್ರಿಸಲು, ನಿದ್ರೆಯಿಂದ ಆರಾಧನೆಗಾಗಿ ಎದ್ದೇಳಲು, ರಾತ್ರಿಕಾಲದಲ್ಲಿ ಎದ್ದು ಉಪಹಾರ ಸೇವಿಸಲು , ಉಪವಾಸದಲ್ಲಿ ಹಗಲಿನ ವೇಳೆ ಅನ್ನಪಾನೀಯಗಳಿಂದ ದೂರವಿರಲು, ಆಸೆ ಆಕಾಂಕ್ಷೆ, ಸ್ವಯಂ ಬಯಕೆಗಳಿಂದ ದೂರವಿರಲು ನಮಗೆ ಸಹನೆ ಅಗತ್ಯವಿದೆ.

2.ಅಲ್ಲಾಹನು ನಿಷೇಧಿಸಿದವುಗಳಿಂದ ದೂರವಿರಲು ಬೇಕಾದ ಸಹನೆ
ಬಡ್ಡಿ ವ್ಯವಹಾರ, ಮದ್ಯ ಪಾನ, ಜೂಜಾಟ, ಸಂಗೀತ, ನೃತ್ಯ, ದುಷ್ಕರ್ಮ, ಪರದೂಷಣೆ, ಪರಿಹಾಸ್ಯ, ಕೆಟ್ಟ ಮಾತುಗಳನ್ನಾಡದೆ ಇರಲು, ನಮ್ಮೊಂದಿಗೆ ಜಗಳ ಆಡಿದಾಗ ಅವರೊಂದಿಗೆ ಉತ್ತಮ ಮಾತುಗಳನ್ನಾಡಲು, ನಮ್ಮ ನಾಲಗೆಯನ್ನು ನಿಯಂತ್ರಿಸಲು ನಮಗೆ ಸಹನೆ ಅಗತ್ಯವಿದೆ.

3.ಯಾವುದೇ ವಿಪತ್ತು, ಕಷ್ಟ ನಷ್ಟಗಳು ಬರುವಾಗ ಬೇಕಾದ ಸಹನೆ
ಅಲ್ಲಾಹನು ನಮಗೆ ವಿಧಿಸುವುದರಲ್ಲಿ ಸಂತೃಪ್ತರಾಗಲು ಸಹನೆ ಬೇಕು. ಆಪ್ತರ ಮರಣ, ಉದ್ಯೋಗ ಕಳೆದುಕೊಳ್ಳುವುದು, ವ್ಯಾಪಾರದಲ್ಲಿ ನಷ್ಟ, ಪಾರ್ಶ್ವವಾಯು, ಅಂಗವೈಕಲ್ಯತೆ, ಬುದ್ಧಿಮಾಂದ್ಯತೆ, ಮಧುಮೇಹ, ಸಕ್ಕರೆ ಖಾಯಿಲೆ, ಕ್ಯಾನ್ಸರ್ ಅಥವಾ ಇನ್ನಾವುದೇ ಮಾರಕ ನೋವುಗಳಿಂದ ನರಳುವವರು, ಅಪಘಾತದಲ್ಲಿ ಕೈ ಕಾಲು ಕಳೆದುಕೊಳ್ಳುವುದು ಅಥವಾ ಶರೀರದ ಯಾವುದೇ ಮುಖ್ಯ ಭಾಗ ನಿಷ್ಕ್ರಿಯವಾಗುವುದು, ಅಪಘಾತದಲ್ಲಿ ತಮ್ಮ ವಾಹನ ಕಳೆದುಕೊಳ್ಳುವುದು, ತಮ್ಮ ಯಾವುದೇ ಅಮೂಲ್ಯ ವಸ್ತು ಕಳ್ಳತನವಾಗುವುದು, ತಮ್ಮ ಮನೆ ಅಥವಾ ಅಂಗಡಿ ಬೆಂಕಿ ಅನಾಹುತಿಗೆ ಬಲಿಯಾಗುವುದು, ಯಾವುದೇ ಕಾರಣಗಳಿಲ್ಲದೆ ವಿವಾಹ ವಿಚ್ಛೇದನೆಯಾಗುವುದು, ತಾವು ಮಾಡಿದ ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಪ್ರತಿಫಲ ಸಿಗದಿರುವುದು ಇಂತಹ ಸಂದರ್ಭಗಳಲ್ಲಿ ಅತೀ ಹೆಚ್ಚು ಸಹನೆ ವಹಿಸುವ ಅಗತ್ಯವಿದೆ.

ಆಹಾರದ ಕೊರತೆ, ಬರಗಾಲ, ಅನಾರೋಗ್ಯ, ಯುದ್ಧ, ಕೃಷಿನಾಶ, ಅಥವಾ ಖರೀದಿಸಲು ಸಾಮರ್ಥ್ಯವಿಲ್ಲದಿರುವುದರಿಂದ ಇಹಲೋಕದಲ್ಲಿ ಮನುಷ್ಯನು ಹಸಿವನ್ನು ಅನುಭವಿಸಬೇಕಾಗುತ್ತದೆ. ನಮಗೆ ಇಷ್ಟವಿರುವ ಯಾರಾದರೂ ನಮ್ಮ ಜೀವಮಾನದಲ್ಲೇ ಮರಣ ಹೊಂದಬೇಕಾಗುತ್ತದೆ. ನಾವು ಒಂದು ದಿನ ನಮ್ಮ ಕುಟುಂಬ, ಸಂಪತ್ತು ಎಲ್ಲವನ್ನೂ ಬಿಟ್ಟು ಬರಿಕೈಯಲ್ಲಿ ಅಲ್ಲಾಹನ ಬಳಿ ಮರಳಬೇಕಾಗಿದೆ .

“ನಾವು ನಿಮ್ಮನ್ನು ಭಯಾಶಂಕೆ, ಹಸಿವು, ಧನಹಾನಿ, ಜೀವಹಾನಿ ಮತ್ತು ಉತ್ಪನ್ನಗಳ ನಾಶಗಳಿಗೊಳಪಡಿಸಿ ಅವಶ್ಯವಾಗಿಯೂ ಪರೀಕ್ಷಿಸುವೆವು. ಇಂತಹ ಸನ್ನಿವೇಶಗಳಲ್ಲಿ ತಾಳ್ಮೆ ವಹಿಸಿದವರಿಗೆ ಸುವಾರ್ತೆ ನೀಡಿರಿ.” (ಅಲ್ ಬಕರಃ :155)

ಜಗತ್ತಿನಲ್ಲಿ ಎಲ್ಲವನ್ನೂ ಪದೆದವರು ಯಾರೂ ಇಲ್ಲ. ಎಲ್ಲರಿಗೂ ಏನಾದರೂ ಕಡಿಮೆ ಇರುತ್ತದೆ. ಮಾನವನು ನಿರೀಕ್ಷಿಸುವ, ಪ್ರಾರ್ಥಿಸುವ ಹಣ, ಸಂತಾನ, ಆರೋಗ್ಯ ಅಥವಾ ಇತರ ಯಾವುದೇ ಆಸೆ, ಬೇಡಿಕೆ ರಾತ್ರಿ ಹಗಲಾಗುವುದರೊಳಗೆ ಬಂದು ತಲುಪುವುದಿಲ್ಲ. ಏಕೆಂದರೆ ಅಲ್ಲಾಹನು ಆ ಸ್ಥಿತಿಯಲ್ಲಿ ನಿರ್ದಿಷ್ಟ ಸಮಯದವರೆಗೆ ಪರೀಕ್ಷಿಸುತ್ತಾನೆ. ದಾಸನು ಈ ಅವಧಿಯಲ್ಲಿ ಅಲ್ಲಾಹನೊಂದಿಗೆ ಪ್ರಾರ್ಥಿಸುತ್ತ ಅಲ್ಲಾಹನಿಗೆ ನಿಕಟ ವಾಗುತ್ತಾನೆ, ಅವನ ಹೃದಯವು ಮೃದುವಾಗುತ್ತದೆ.

ಇಹಲೋಕ ಜೀವನವು ಒಂದು ಪರೀಕ್ಷೆಯಾಗಿರುತ್ತದೆ. ಅದರಲ್ಲಿ ನಮಗೆ ಸಿಗುವ ಅನುಗ್ರಹಗಳೆಲ್ಲವೂ ಪರೀಕ್ಷೆಯಾಗಿರುತ್ತದೆ. ನಮ್ಮ ಸಮಯ, ಕುಟುಂಬ, ಸಂಪತ್ತು, ಆರೋಗ್ಯ, ಸಂತೋಷ, ದುಖಃ, ನೋವು ಎಲ್ಲವೂ ಪರೀಕ್ಷೆಯಾಗಿರುತ್ತದೆ. ಅಲ್ಲಾಹನು ನಮಗೆ ಇಷ್ಟವಾದ ಆತ್ಮೀಯವಾದ ಕುಟುಂಬ, ಆರೋಗ್ಯ ಮತ್ತು ಸಂಪತ್ತಿನಿಂದ ಖಂಡಿತವಾಗಿಯೂ ಪರೀಕ್ಷಿಸುವನು. ಅಲ್ಲಾಹನು ನಮಗೆ ನೀಡಿರುವುದೆಲ್ಲವೂ ಯಾವುದೇ ಸಮಯದಲ್ಲಿ ನಾವು ಕಳೆದುಕೊಳ್ಳುವ ಸಾಧ್ಯತೆ ಇದೆ. ನಾವು ಯಾವಾಗಲು ನಮಗೆ ಅಲ್ಲಾಹನು ನೀಡಿದ ಅನುಗ್ರಹಗಳ ಮೇಲೆ ಅವಲಂಭಿತರಾಗದೆ ಅವುಗಳನ್ನು ನೀಡಿದ ಅಲ್ಲಾಹನ ಮೇಲೆ ಅವಲಂಭಿತರಾಗಬೇಕು. ಇಂತಹ ಸಂದರ್ಭಗಳಲ್ಲಿ ನಿರಾಶರೂ ಹತಾಶರೂ ಆಗದೆ ಅಲ್ಲಾಹನ ಮೇಲೆ ಭರವಸೆಯನ್ನಿಡಬೇಕು. ನಿರಾಶರಾಗುವುದು ಸತ್ಯ ವಿಶ್ವಾಶದ ದುರ್ಬಲ ಅವಸ್ಥೆಯಾಗಿರುತ್ತದೆ. ನಾವು ಕಳೆದುಕೊಂಡವುಗಳೆಲ್ಲವೂ ನಮ್ಮನ್ನು ಅಲ್ಲಾಹ್ ಮತ್ತು ಸ್ವರ್ಗಕ್ಕೆ ನಿಕಟಗೊಳಿಸುತ್ತದೆ. ನಾವು ಅನುಭವಿಸುವ ಪ್ರತಿಯೊಂದು ಕಷ್ಟ ನೋವು ನಷ್ಟ ರೋಗಗಳು ಸ್ವರ್ಗದಲ್ಲಿ ನಮಗೆ ಪ್ರತಿಫಲವಾಗಿ ಸಿಗಲಿದೆ.

“ಮತ್ತು ಅವರ ಸಹನೆಯ ಪ್ರತಿಫಲವಾಗಿ ಅವರಿಗೆ ಸ್ವರ್ಗೋದ್ಯಾನವನ್ನೂ ರೇಶ್ಮೆಯ ಉಡುಪನ್ನೂ ದಯಪಾಲಿಸುವನು.” (ಅದ್ದಹ್ರ್: 12)

ನಮ್ಮ ಎಲ್ಲ ವ್ಯವಹಾರಗಳು ನಾವು ನಿರೀಕ್ಷಿಸಿದಂತೆ, ನಮ್ಮ ಯೋಜನೆಯಂತೆ, ಸರಿಯಾದ ಸಮಯಕ್ಕೆ ನಡೆಯದಿರುವುದು ಎಲ್ಲರಿಗೂ ಸವಾಲಾಗಿರುತ್ತದೆ. ನಮಗೆ ಯಾವುದು ಒಳಿತು ಮತ್ತು ಕೆಡುಕು ಎಂಬುದನ್ನು ಅಲ್ಲಾಹನು ಅರಿತಿದ್ದಾನೆ. ಆರಂಭದಲ್ಲಿ ನಾವು ಕೆಡುಕೆಂದು ಕಾಣುವ, ಕೆಡುಕೆಂದು ಭಾವಿಸುವ ಕೆಲವು ಕಾರ್ಯಗಳ ಅಂತ್ಯವು ನಮ್ಮ ಪಾಲಿಗೆ ಒಳಿತಾಗಿರುತ್ತದೆ. ಕಷ್ಟ ನಷ್ಟ ನೋವುಗಳು ಬರುವಾಗ ದುಃಖಿತರಾಗುವುದು ಮಾನವ ಪ್ರಕೃತಿ. ಕಣ್ಣೀರು ಸುರಿಸುವುದು ಅನುವಾದನೀಯವಾಗಿದೆ. ಆಗ ನಮ್ಮ ನಾಲಗೆ ಮತ್ತು ನಮ್ಮ ಆಲೋಚನೆಗಳನ್ನು ಸಹನೆಯೊಂದಿಗೆ ನಿಯಂತ್ರಿಸಬೇಕು . ಕಷ್ಟ ಬರುವಾಗ ನನ್ನನ್ನು ಅಲ್ಲಾಹನು ಈ ರೀತಿ ಯಾಕೆ ಪರೀಕ್ಷಿಸುತ್ತಿದ್ದಾನೆ ಎಂದು ಅಲ್ಲಾಹನನ್ನು ಪ್ರಶ್ನಿಸಬೇಡಿರಿ. ಬದಲಾಗಿ ಸಹನೆವಹಿಸುತ್ತಾ ಆ ಕಷ್ಟ, ಸಮಸ್ಯೆಗಳನ್ನು ಯಾವ ರೀತಿ ಎದುರಿಸಬೇಕೆಂದು ಆಲೋಚಿಸಿರಿ. ಸಮಸ್ಯೆ ಪರಿಹಾರಕ್ಕಾಗಿ ಹೃದಯಂತರಾಳದಿಂದ ಅಲ್ಲಾಹನೊಂದಿಗೆ ಪ್ರಾರ್ಥಿಸಿರಿ. ಅಲ್ಲಾಹನ ಯೋಜನೆಯು ಯಾವಾಗಲು ನಮ್ಮ ಪಾಲಿಗೆ ಒಳಿತಾಗಿರುತ್ತದೆ ಎಂಬ ದೃಢ ವಿಶ್ವಾಸವನ್ನು ಹೊಂದಿರಬೇಕು.