ಇರಾನ್ ವಿರುದ್ಧ ಯುದ್ಧದ ಮುನ್ಸೂಚನೆ ನೀಡಿದ ಅಮೆರಿಕ

0
783

ವಾಷಿಂಗ್ಟನ್, ಜೂ.18: ಮಧ್ಯಪ್ರಾಚ್ಯದಲ್ಲಿ ತೈಲ ಹಡಗುಗಳ ಮೇಲೆ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇರಾನ್ ವಿರುದ್ಧ ಯುದ್ಧ ನಡೆಸುವ ವಿಚಾರವನ್ನು ಪರಿಗಣಿಸಲಾಗುತ್ತಿದೆ ಎಂದು ಅಮೆರಿಕದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದರು. ಅನಿವಾರ್ಯ ಹಂತದಲ್ಲಿ ಪ್ರತ್ಯುತ್ತರ ನೀಡುತ್ತೇವೆ ಎಂದು ಕಳೆದ ದಿವಸ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಘೋಷಿಸಿದ ಬೆನ್ನಿಗೆ ಅಮೆರಿಕ ಈ ಪ್ರತಿಕ್ರಿಯೆ ನೀಡಿದೆ.

ಟ್ರಂಪ್ ಆಡಳಿತ ಕೂಟ ಎಲ್ಲ ಸಾಧ್ಯತೆಗಳ ಪರಿಶೀಲನೆ ನಡೆಸುತ್ತಿದೆ. ಒಂದಕ್ಕಿಂತ ಹೆಚ್ಚು ಬಾರಿ ಈ ವಿಷಯವನ್ನು ಟ್ರಂಪ್‍ರೊಡನೆ ಚರ್ಚಿಸಲಾಗಿದೆ. ಅಮೆರಿಕದ ಹಿತಾಸಕ್ತಿ ಸಂರಕ್ಷಣೆಗೆ ಯಾವ ಮಟ್ಟಕ್ಕೂ ಹೋಗುತ್ತೇವೆ. ವಲಯದ ಶಾಂತಿ ಮರುಸ್ಥಾಪನೆಗೆ ಅಗತ್ಯ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಖಾಸಗಿ ಚ್ಯಾನೆಲ್‍ಗೆ ನೀಡಿದ ಸಂದರ್ಶನದ ವೇಳೆ ಪೊಂಪಿಯೊ ಹೇಳಿದರು. ಇದೇ ರೀತಿಯ ಹೇಳಿಕೆಯನ್ನು ಈ ಹಿಂದೆ ವೈಟ್ ಹೌಸ್ ಭದ್ರತಾ ಸಲಹೆಗಾರ ಜಾನ್ ಬಾಲ್ಟನ್ ಕೂಡ ಹೇಳಿದ್ದರು. ಬಿಕ್ಕಟ್ಟು ನಿವಾರಣೆಗೆ ಇರಾನಿನೊಂದಿಗೆ ಚರ್ಚೆಗೆ ಸಿದ್ಧ, ಆದರೆ ಸೈನಿಕ ಉದ್ವಿಗ್ನತೆಗೆ ಅದೇ ಮಟ್ಟದಲ್ಲಿ ಪ್ರತ್ಯುತ್ತರ ನೀಡಲಾಗುವುದು ಎಂದು ಅವರು ಹೇಳಿದ್ದರು. ಒಮನ್ ಸಮುದ್ರದಲ್ಲಿ ಕಳೆದ ವಾರ ತೈಲ ತುಂಬಿದ ಎರಡು ಹಡಗುಗಳ ಮೇಲೆ ದಾಳಿ ನಡೆದಿತ್ತು. ಇದು ಇರಾನ್‍ನ ಕೃತ್ಯವೆಂದು ಅಮೆರಿಕ ಆರೋಪಿಸಿತ್ತು.