ಧರ್ಮಗಳು ಪ್ರೀತಿಸಲು ಕಲಿಸುತ್ತದೆ, ದ್ವೇಷಿಸಲು ಅಲ್ಲ…

0
281

ಸನ್ಮಾರ್ಗ ವಾರ್ತೆ

ಮನಸ್ಸನ್ನು ಕಟ್ಟುವ, ಸಮಾಜವನ್ನು ಕಟ್ಟುವ ಕೆಲಸ ಇಂತಹ ಈದ್ ಮಿಲನ ಕಾರ್ಯಕ್ರಮದಿಂದ ಸಾಧ್ಯ.
ಎಲ್ಲರ ನೋವು ಒಂದೇ.ಎಲ್ಲರ ಹಸಿವು ಒಂದೇ. ಆದುದರಿಂದ ಮೊದಲು‌ ನಾವು ಮಾನವರಾಗಬೇಕು. ಎಲ್ಲರನ್ನೂ ಪ್ರೀತಿಸುವ, ಎಲ್ಲರ ಸಂಕಷ್ಟಕ್ಕೆ ಸ್ಪಂದಿಸುವ ಮನಸ್ಥಿತಿ ನಮ್ಮದಾಗಬೇಕು ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾI ಅಣ್ಣಯ್ಯ ಕುಲಾಲ್ ಅಭಿಪ್ರಾಯ ಪಟ್ಟರು.

ಮಂಗಳೂರಿನ ಶಾದಿ ಮಹಲ್ ನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಜಪ್ಪು-ಬೋಳಾರ ವರ್ತುಲದ ವತಿಯಿಂದ ಈದ್ ಮಿಲನ‌ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇನ್ನೋರ್ವ ಮುಖ್ಯ ಅತಿಥಿ ಸಾಮಾಜಿಕ ಹೋರಾಟಗಾರ ಜೆರಾರ್ಡ್ ಟವರ್ಸ್ ಮಾತನಾಡುತ್ತಾ ಇತರರಿಗೆ ಪ್ರಯೋಜನಕಾರಿಗಳಾಗಬೇಕು. ಯಾರ ಶಾಪ ಪ್ರಾರ್ಥನೆಗೂ ಗುರಿಯಾಗಬಾರದು. ಜಾತಿ ಮತ ಬೇಧವಿಲ್ಲದೆ ಎಲ್ಲರಿಗೂ ನೆರವಾಗಬೇಕು. ಎಲ್ಲಾ ಧರ್ಮಗ್ರಂಥಗಳು ಎಲ್ಲರನ್ನು ಪ್ರೀತಿಸಲು ಕಲಿಸುತ್ತದೆ, ದ್ವೇಷಿಸಲು ಕಲಿಸುವುದಿಲ್ಲ. ಅದನ್ನು ಜೀವನದಲ್ಲಿ ಅಳವಡಿಸೋಣ ಎಂದು ಅಭಿಪ್ರಾಯಪಟ್ಟರು.

ಕೊನೆಯದಾಗಿ ಮುಖ್ಯ ಅತಿಥಿಯಾಗಿ ಸನ್ಮಾರ್ಗ ಪತ್ರಿಕೆ ಸಂಪಾದಕರಾದ ಏ.ಕೆ.ಕುಕ್ಕಿಲ ಹಬ್ಬಗಳು ಪರಸ್ಪರ ಧರ್ಮೀಯರನ್ನು ಹತ್ತಿರಗೊಳಿಸುತ್ತದೆ. ಈದ್ ಸಮಾನತೆಯ, ವಿಶ್ವ ಭ್ರಾತೃತ್ವದ ಸಂದೇಶ ನೀಡುತ್ತದೆ. ಸಮಾಜದಲ್ಲಿ ಮೌಲ್ಯಗಳು ಮೇಲೈಸಬೇಕು. ನಮ್ಮೊಳಗಿನ ಕೆಡುಕುಗಳನ್ನು ಹೊಡೆದೊಡಿಸಬೇಕು. ಧರ್ಮದ ಶಬ್ಧಾರ್ಥದಲ್ಲಿ ಹೆಣಗಾಡುವ ಬದಲು ಅದರ ಒಳಾರ್ಥವನ್ನು ಅರಿತು ಜೀವನ ಸಾಗಿಸಬೇಕು ಎಂದು ಅಭಿಪ್ರಾಯಪಟ್ಟರು.

ಮೀರ್ ಮುಬಶ್ಶಿರ್ ಕುರ್ ಆನ್ ಪಠಿಸಿದರು. ರಹ್ಮತುಲ್ಲಾ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾದಿ ಮಹಲ್ ಟ್ರಸ್ಟ್ ಉಪಾಧ್ಯಕ್ಷ ಎಸ್.ಎ.ಖಲೀಲ್, ಜಮಾಅತೆ ಇಸ್ಲಾಮಿ ಹಿಂದ್ ಬೋಳಾರ ಸಂಚಾಲಕ ಹನೀಫ್ ಮಾಸ್ಟರ್ ಭಾಗವಹಿಸಿದ್ದರು. ಕಾಸಿಮ್ ಕಾರ್ಯಕ್ರಮ ನಿರೂಪಿಸಿದರು.