ವರದಿ: ಏ ಕೆ ಕುಕ್ಕಿಲ
ಹೆಸರು: ಅಬ್ದುರ್ರವೂಫ್ ಮುಸ್ಲಿಯಾರ್
ಪ್ರಾಯ: 28
ವಿದ್ಯಾರ್ಹತೆ: ಪಿಯುಸಿ
ಉದ್ಯೋಗ: ಅಲ್ ಮದೀನಾ ವಿದ್ಯಾಸಂಸ್ಥೆ, ಮಂಜನಾಡಿ, ದ.ಕ.
ಆಸ್ತಿ: ಎರಡೂವರೆ ಸೆಂಟ್ಸ್ ಭೂಮಿಯಲ್ಲಿ 1000 ಚದರ ಅಡಿ ವಿಸ್ತೀರ್ಣದ ಮನೆ ಕಟ್ಟಿಸಿದ್ದಾರೆ. ಇನ್ನೂ ಸಂಪೂರ್ಣ ಆಗಿಲ್ಲ. ಏ.ಸಿ. ಇಲ್ಲ. ಮನೆಗಾಗಿ 2 ಲಕ್ಷ ರೂಪಾಯಿ ಸಾಲ ಮಾಡಿದ್ದಾರೆ. ಅಣ್ಣನ ಪತ್ನಿಯ ಚಿನ್ನಾಭರಣವನ್ನು ಅಡವಿಟ್ಟು ಸಾಲ ಪಡೆದಿದ್ದಾರೆ. ವಾಹನ ಇಲ್ಲ. ಬಸ್ನಲ್ಲಿ ಪ್ರಯಾಣ.
ಚಹರೆ: ಬಿಳಿ ಲುಂಗಿ, ಬಿಳಿ ಶರ್ಟು, ಬಿಳಿ ಟೋಪಿ ಧರಿಸುತ್ತಾರೆ. ತುಸು ಗಡ್ಡ ಇದೆ.
ಗೃಹಪ್ರವೇಶ: 2018 ಆಗಸ್ಟ್ 15ರ ಸ್ವಾತಂತ್ಯೋತ್ಸವ ದಿನದಂದು ಗೃಹಪ್ರವೇಶ ಮಾಡಿದ್ದಾರೆ. ಆಗಸ್ಟ್ 16ರಂದು ಇದೇ ಮನೆಯಲ್ಲಿ ಮದುವೆಯಾಗಿದ್ದಾರೆ. ಈಗ 2 ತಿಂಗಳ ಮಗು ಇದೆ.
2019 ಆಗಸ್ಟ್ 17ರ ವರೆಗೆ ಅಬ್ದುರ್ರವೂಫ್ ಮುಸ್ಲಿಯಾರ್ ಇಷ್ಟೇ ಆಗಿದ್ದರು. ಆವರೆಗೆ, ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋವಿಂದೂರು ಮತ್ತು ನಾಳ ಎಂಬ ಪ್ರದೇಶದ ಮಧ್ಯದಲ್ಲಿರುವ ಜಾರಿಗೆಬೈಲಿನ ರಸ್ತೆಗೆ ತಾಗಿಕೊಂಡಿರುವಂತೆ ಇರುವ ಅವರ ಮನೆ ಬರೇ ಮನೆಯಷ್ಟೇ ಆಗಿತ್ತು. ಆ ಮನೆಯಲ್ಲಿದ್ದ ಅವರ ಪತ್ನಿಯಾಗಲಿ, 67ರ ಹರೆಯದ ಅನಾರೋಗ್ಯ ಪೀಡಿತ ತಾಯಿಯಾಗಲಿ, ತಂಗಿಯಾಗಲಿ ಎಲ್ಲರೂ ಆ ಊರಿನ ಎಲ್ಲರ ಪಾಲಿಗೂ ಮನುಷ್ಯರೇ ಆಗಿದ್ದರು. ಆದರೆ, ಆಗಸ್ಟ್ 18ರ ರಾತ್ರಿ ನ್ಯೂಸ್ 9 ಮತ್ತು ಟಿ.ವಿ.9 ಚಾನೆಲ್ನಲ್ಲಿ ಪ್ರಸಾರವಾದ ಸುದ್ದಿಗಳು ಗೋವಿಂದೂರನ್ನು ನಡುಗಿಸಿದುವು ಮತ್ತು ಮರುದಿನ ನ್ಯೂಸ್ 18 ಚಾನೆಲ್ ಹಾಗೂ ಇತರ ಮಾಧ್ಯಮಗಳಲ್ಲಿ ಪ್ರಕಟ/ ಪ್ರಸಾರವಾದ ಸುದ್ದಿಗಳು ಈ ಆರ್ ಸಿ ಸಿ ಮನೆಯನ್ನು ಬಂಗ್ಲೆಯೋ ಎಂಬಂತೆ ಚಿತ್ರಿಸಿದುವು. ಅಬ್ದುರ್ರವೂಫ್ರನ್ನು ಪಾಕ್ನೊಂದಿಗೆ ಸಂಪರ್ಕ ಸ್ಥಾಪಿಸಿರುವ ಉಗ್ರ ಎಂಬ ಅರ್ಥ ಬರುವ ರೀತಿಯಲ್ಲಿ ಸುದ್ದಿಗಳು ಬರತೊಡಗಿದುವು. ಸೆಟಲೈಟ್ನ ಮೂಲಕ ಪಾಕ್ ಗೆ ಕರೆ ಮಾಡಿದ್ದಾರೆ, ಗೋವಿಂದೂರಿನಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ, ರವೂಫ್ರನ್ನು ಬಂಧಿಸಲಾಗಿದೆ ಇತ್ಯಾದಿ ಇತ್ಯಾದಿ ಸುದ್ದಿಗಳು ಪತ್ರಿಕೆಗಳೂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗತೊಡಗಿದುವು.
ಈ ಹಿನ್ನೆಲೆಯಲ್ಲಿ ಜಾರಿಗೆಬೈಲಿನಲ್ಲಿರುವ ಅಬ್ದುರ್ರವೂಫ್ರನ್ನು, ಅವರ ಮನೆಯವರನ್ನು, ಸ್ಥಳೀಯರನ್ನು ಮತ್ತು ಪೊಲೀಸ್ ಠಾಣಾಧಿಕಾರಿಗಳನ್ನು ಭೇಟಿ ಮಾಡಿ ಮಾತನಾಡಿಸಿದಾಗ, ಆ ಇಡೀ ಬೆಳವಣಿಗೆಯ ಬಗ್ಗೆಯೇ ತೀವ್ರ ಶಂಕೆ ತಲೆದೋರಿತು. ಅಬ್ದುರ್ರವೂಫ್ರಿಗಾಗಲಿ, ಆ ಊರಿನವರಿಗಾಗಲಿ, ಠಾಣಾಧಿಕಾರಿಗಳಿಗಾಗಲಿ ಯಾರಿಗೂ ಆ ಸುದ್ದಿ ಹೇಗೆ ಹುಟ್ಟಿಕೊಂಡಿತು ಎಂಬುದು ಆಗಸ್ಟ್ 19ರಿಂದ ಹಿಡಿದು ಈ ವರೆಗೂ ಗೊತ್ತಾಗಿಲ್ಲ. ಪ್ರವಾಹದಿಂದ ಮತ್ತು ರಾಜಕೀಯ ಸಂಬಂಧಿ ಸುದ್ದಿಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಉದ್ದೇಶಪೂರ್ವಕವಾಗಿ ಹುಟ್ಟು ಹಾಕಲಾದ ಸುಳ್ಳು ಸುದ್ದಿ ಇದಾಗಿರಬಹುದು ಎಂಬುದೇ ಸ್ಥಳೀಯರ ಖಚಿತ ನಿಲುವು. ಸುದ್ದಿಯ ಬೆನ್ನ ಹತ್ತಿ ಸತ್ಯ ಹುಡುಕುತ್ತಾ ಹೋದಾಗಲೂ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆಯೇ ಹೊರತು ಪರಿಹಾರವಲ್ಲ. ಜೊತೆಗೇ, ಈ ಸೆಟಲೈಟ್ ಸುದ್ದಿಯು ಮೂರೇ ದಿನಗಳೊಳಗೆ ವಾರ್ತಾ ಮಾಧ್ಯಮಗಳಿಂದ ಮಾಯವಾಗಿರುವುದೂ ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ. ಅಬ್ದುರ್ರವೂಫ್ ಮುಸ್ಲಿಯಾರ್ ರನ್ನು ಉಗ್ರರಾಗಿಸಿದ್ದು ಯಾರು, ಯಾಕೆ, ಅವರ ಉದ್ದೇಶವೇನು? ನಿಜಕ್ಕೂ ಇದು ಪ್ರಮಾದವೇ ಅಥವಾ ಸಂಚಿನ ಭಾಗವೇ ಇತ್ಯಾದಿ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ಅಬ್ದುರ್ರವೂಫ್ ಮುಸ್ಲಿಯಾರ್ ಗೆ ಈಗಲೂ ಈ ಸುದ್ದಿ ಹೇಗೆ ಸ್ಫೋಟವಾಯಿತು ಎಂದು ಗೊತ್ತಿಲ್ಲ. ಈವರೆಗೆ ಅಬ್ದುರ್ರವೂಫ್ ಮುಸ್ಲಿಯಾರ್ ರ ಬಂಧನವೂ ಆಗಿಲ್ಲ. ಅವರಿಗೆ ತಾನು ‘ಉಗ್ರ’ ಎಂದು ಗೊತ್ತಾದದ್ದೇ ವಾಟ್ಸಪ್ ಮೂಲಕ. ಅವರು ಸೆಟಲೈಟ್ ಕರೆ ಮಾಡಿದ್ದಾರೆ, ಪಾಕ್ನೊಂದಿಗೆ ಸಂಬಂಧ ಇದೆ ಎಂಬೆಲ್ಲ ಸುದ್ದಿಗಳು ಹರಿದಾಡುತ್ತಿದ್ದಾಗ ಅವರು ಮಂಜನಾಡಿಯ ಅಲ್ ಮದೀನಾ ಶಿಕ್ಷಣ ಸಂಸ್ಥೆಯಲ್ಲಿದ್ದರು. ಅವರಿಗದು ಗೊತ್ತೂ ಇರಲಿಲ್ಲ. ಆಗಸ್ಟ್ 19ರಂದು ಊರಿನ ಪರಿಚಿತ ರಿಕ್ಷಾ ಚಾಲಕ ಕರೆ ಮಾಡಿದ ಬಳಿಕ ಅಬ್ದುರ್ರವೂಫ್ರಿಗೆ ಸುದ್ದಿ ಗೊತ್ತಾಯಿತು. ಅವರು ಗಾಬರಿ ಬಿದ್ದು ಶಾಸಕ ಯು.ಟಿ. ಕಾದರ್ ಗೆ ಕರೆ ಮಾಡಿದ್ದಾರೆ. ಅವರು ಕೂಡಲೇ ಮಂಗಳೂರಿನಲ್ಲಿರುವ ಎಸ್.ಪಿ. ಕಚೇರಿಗೆ ಹೋಗುವಂತೆ ಹೇಳಿದ್ದಾರೆ. ಉಳ್ಳಾಲ ಕಲ್ಲಾಪುವಿನ ಮಾಜಿ ಕೌನ್ಸಿಲರ್ ಉಸ್ಮಾನ್ ಕಲ್ಲಾಪು ಅವರು ಅಬ್ದುರ್ರವೂಫ್ರನ್ನು ಎಸ್.ಪಿ. ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಬೆಳ್ತಂಗಡಿ ಮತ್ತು ಕೊಣಾಜೆ ಪೊಲೀಸ್ ಠಾಣೆಯಿಂದ ಅವರಿಗೆ ಕರೆ ಹೋಗಿದೆ. ಎಸ್.ಪಿ. ಆಫೀಸ್ನಿಂದಲೂ ಅವರಿಗೆ ಕರೆ ಹೋಗಿದೆ. ಆಗ ತಾನು ಎಸ್ ಪಿ ಕಚೇರಿಯಲ್ಲಿರುವುದಾಗಿ ಅವರು ಆ ಕರೆಗಳಿಗೆ ಉತ್ತರಿಸಿದ್ದಾರೆ.
“ಎಸ್.ಪಿ.ಯವರಲ್ಲಿ ತಾನು ಎಲ್ಲವನ್ನೂ ಹೇಳಿದೆ. ಮಂಜನಾಡಿಯಲ್ಲಿ ಗುರುಗಳ ಸೇವಕನಾಗಿ ಕೆಲಸ ನಿರ್ವಹಿಸುತ್ತಿರುವುದನ್ನು ಹೇಳಿದೆ ಮತ್ತು ಟಿ.ವಿ. ಚಾನೆಲ್ಗಳಲ್ಲಿ ತನ್ನ ತೇಜೋವಧೆ ನಡೆದಿರುವುದನ್ನೂ ಹೇಳಿಕೊಂಡೆ. ಹೀಗೆ ಮೌಖಿಕ ದೂರು ಕೊಟ್ಟಿರುವೆ ಮತ್ತು ಲಿಖಿತ ದೂರನ್ನು ಇನ್ನಷ್ಟೇ ಕೊಡಬೇಕಿದೆ” ಎಂದು ಅಬ್ದುರ್ರವೂಫ್ ಮುಸ್ಲಿಯಾರ್ ಹೇಳಿದರು.
“ಗೋವಿಂದೂರು, ಜಾರಿಗೆ ಬೈಲು ಮತ್ತು ನಾಳ ಈ ಮೂರೂ ಪ್ರದೇಶಗಳಲ್ಲಿ ಅಬ್ದುರ್ರವೂಫ್ ಹೆಸರಿನ 5-6 ಮಂದಿಯಷ್ಟೇ ಇದ್ದು, ಅದರಲ್ಲಿ ಬಿಳಿ ಲುಂಗಿ, ಶರ್ಟು, ಟೋಪಿ ಧರಿಸಿರುವ ಮತ್ತು ಧರ್ಮ ಗುರುವಾಗಿ ಗುರುತಿಸಿಕೊಂಡಿರುವ ವ್ಯಕ್ತಿ ಇರುವುದು ನಾನೊಬ್ಬನೇ. ಟಿ.ವಿ. ಮತ್ತು ಪತ್ರಿಕಾ ಸುದ್ದಿಗಳಲ್ಲಿ ತನ್ನ ಪೋಟೋ ಮುದ್ರಿಸಿಲ್ಲ ನಿಜ. ಆದರೆ, ನಾನು ಎಸ್.ಪಿ. ಕಚೇರಿಗೆ ಮುಟ್ಟುವ ಮೊದಲೇ ಮಂಜನಾಡಿಯ ಅಲ್ ಮದೀನಾಕ್ಕೆ ಮೂರು ಪೊಲೀಸ್ ಜೀಪ್ಗಳು ತನ್ನನ್ನು ಹುಡುಕಿಕೊಂಡು ಬಂದಿರುವುದೇಕೆ, ಬೆಳ್ತಂಗಡಿ ಮತ್ತು ಕೊಣಾಜೆ ಪೊಲೀಸ್ ಠಾಣೆಯಿಂದ ತನಗೆ ಕರೆಗಳು ಬಂದಿರುವುದೇಕೆ, ಈ ಪ್ರದೇಶದಲ್ಲಿರುವ ಇತರ ರವೂಫ್ ರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿಲ್ಲವಲ್ಲ ಯಾಕೆ” ಎಂದವರು ಪ್ರಶ್ನಿಸುತ್ತಾರೆ.
ಅಲ್ಲದೇ, ಅಬ್ದುರ್ರವೂಫ್ ಮುಸ್ಲಿಯಾರ್ ರನ್ನು ವಶಪಡಿಸಲಾಗಿಲ್ಲ, ಅವರನ್ನು ವಿಚಾರಿಸಲಾಗಿಲ್ಲ, ಅವರ ಸೆಟಲೈಟ್ ಕರೆಯ ಬಗ್ಗೆ ಯಾವ ಮಾಹಿತಿಯೂ ಇಲ್ಲ ಎಂದು ಜಿಲ್ಲಾ ಎಸ್.ಪಿ.ಯವರು ಸುದ್ದಿ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರೂ ತನ್ನನ್ನು ಉಗ್ರನೆಂದು ಬಿಂಬಿಸಿ ಸುದ್ದಿ ತಯಾರಿಸಿದ ಟಿ.ವಿ. ಮತ್ತು ಪತ್ರಿಕೆಗಳು ತನ್ನನ್ನು ಆ ಬಳಿಕ ಕನಿಷ್ಠ ಸಂಪರ್ಕಿಸುವ ಸೌಜನ್ಯವನ್ನೂ ತೋರಿಲ್ಲ. ಅಲ್ಲದೇ, ಗೋವಿಂದೂರಿನಲ್ಲಿ ಅಥವಾ ಜಾರಿಗೆಬೈಲು-ನಾಳದಲ್ಲಿರುವ ಇತರ ರವೂಫ್ರನ್ನು ಭೇಟಿಯಾದದ್ದಾಗಲಿ, ವಿಚಾರಿಸಿದ್ದಾಗಲಿ ಮಾಹಿತಿಯೂ ಇಲ್ಲ ಎಂದವರು ಅಚ್ಚರಿ ಪ್ರಕಟಿಸಿದರು. ನಾನಲ್ಲದಿದ್ದರೆ ಈ ಊರಿನ ಉಗ್ರ ರವೂಫ್ ಬೇರೆ ಯಾರು ಎಂಬ ಬಗ್ಗೆ ಸುದ್ದಿ ಪ್ರಕಟಿಸಿದವರು ಪತ್ತೆ ಕಾರ್ಯ ನಡೆಸಬೇಡವೇ ಎಂದವರು ಪ್ರಶ್ನಿಸಿದರು. ಯು.ಟಿ. ಕಾದರ್ ಜೊತೆ ಪ್ರೆಸ್ ಕಾನ್ಫರೆನ್ಸ್ ನಡೆಸಿದ ಬಳಿಕ ಪೊಲೀಸರು ನನ್ನ ಮನೆಗೆ ಬಂದಿಲ್ಲ. ಪೊಲೀಸ್ ಠಾಣೆಗೆ ಕರೆದೂ ಇಲ್ಲ ಎಂದು ಹೇಳುವ ಅವರು ದಿಢೀರನೇ ತನ್ನ ಸುತ್ತಲೇ ಉಗ್ರನೆಂದು ಸುದ್ದಿ ತಯಾರಿಸುವುದು ಮತ್ತು ಏನೂ ಆಗಿಲ್ಲವೆಂಬಂತೆ ಮೌನ ವಹಿಸುವುದು ಇವೆಲ್ಲ ಯಾಕೆ ಎಂದವರು ದಿಗಿಲಿನಿಂದ ಪ್ರಶ್ನಿಸುತ್ತಾರೆ.

ಊರಿನಲ್ಲಿ ಈ ಕುಟುಂಬಕ್ಕೆ ಯಾರೊಂದಿಗೂ ತಕರಾರಿಲ್ಲ. ಅಬ್ಬಾಸ್ ಮುಸ್ಲಿಯಾರ್ ಮತ್ತು ಬೀಫಾತಿಮಾ ದಂಪತಿಗಳ ನಾಲ್ಕು ಮಂದಿ ಗಂಡು ಮತ್ತು ಓರ್ವ ಹೆಣ್ಣು ಮಕ್ಕಳ ಪೈಕಿ ಅಬ್ದುರ್ರವೂಫ್ ಕೊನೆಯವರು. ಅಬ್ದುರ್ರವೂಫ್ರಿಗೆ ಐದೂವರೆ ವರ್ಷ ಪ್ರಾಯವಾಗಿದ್ದಾಗಲೇ ತಂದೆ ಅಬ್ಬಾಸ್ ಮುಸ್ಲಿಯಾರ್ ನಿಧನರಾಗಿದ್ದರು. ಅವರೂ ಮಂಜನಾಡಿಯಲ್ಲೇ ಇದ್ದುದು. ಅತ್ತರ್ (ಸೆಂಟ್) ವ್ಯಾಪಾರ ಮಾಡುತ್ತಿದ್ದುದರಿಂದ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಇಬ್ಬರು ಅಣ್ಣಂದಿರು ಬಸ್ ಕಂಡೆಕ್ಟರ್ ಆಗಿ ದುಡಿಯುತ್ತಿದ್ದರೆ, ಜರ್ನಲಿಸಂ ಮಾಡಿರುವ ಇನ್ನೊಬ್ಬ ಅಣ್ಣ ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ದುಡಿಯುತ್ತಿದ್ದಾರೆ.
ಅಬ್ದುರ್ರವೂಫ್ರ ಮನೆಯಲ್ಲಿ ಲ್ಯಾಂಡ್ಲೈನ್ ಪೋನ್ ಸಂಪರ್ಕ ಇಲ್ಲ. ಇವರ ಮೊಬೈಲ್ಗೆ ಈವರೆಗೂ ಇಂಟರ್ನೆಟ್ ಕರೆ ಬಂದಿಲ್ಲ. ಇತ್ತೀಚೆಗೆ ಮಂಜನಾಡಿಯ ಅಬ್ಬಾಸ್ ಮುಸ್ಲಿಯಾರರು ತೀವ್ರ ಅನಾರೋಗ್ಯದಲ್ಲಿದ್ದಾಗ ಗಲ್ಫ್ ನಲ್ಲಿದ್ದ ಒಂದಿಬ್ಬರು ಗೆಳೆಯರು ಆರೋಗ್ಯ ವಿಚಾರಿಸಿ ಕರೆ ಮಾಡಿದ್ದನ್ನು ಬಿಟ್ಟರೆ ಇವರಿಗೆ ಗಲ್ಫ್ ನಿಂದ ಕರೆ ಬಂದಿರುವುದೂ ಶೂನ್ಯ ಅನ್ನುವಷ್ಟು ವಿರಳ. ಇವರ ಮನೆಯ ತುಸು ದೂರದಲ್ಲಿರುವ ಗೋವಿಂದೂರಿನ ಚಂದ್ರಣ್ಣನ ಅಂಗಡಿಯಿಂದ ಮನೆಗೆ ಸಾಮಾನು ಇತ್ಯಾದಿಗಳನ್ನು ತರುತ್ತಾರೆ. ಇನ್ನೊಂದು ಅಂಗಡಿ ಮಹ್ಮೂದ್ರದ್ದು.
ಆದ್ದರಿಂದಲೇ, ತನ್ನ ವಿರುದ್ಧ ಟಿ.ವಿ.ಯವರಿಗೆ ಯಾರು ಹೀಗೆ ಸುದ್ದಿಯನ್ನು ಕೊಟ್ಟರು ಎಂಬ ಸಿಟ್ಟು, ಆತಂಕ ಅವರಲ್ಲಿದೆ. ಅವರ ಅಣ್ಣ ರಫೀಕ್ ಅವರು ಊರಿನಲ್ಲಿರುವ ಹಲವರನ್ನು ಈ ಬಗ್ಗೆ ವಿಚಾರಿಸಿದ್ದಾಗಿಯೂ ಅವರೆಲ್ಲ ತಾವು ಸುದ್ದಿ ಕೊಟ್ಟಿಲ್ಲ ಎಂದು ಹೇಳಿದ್ದಾಗಿಯೂ ಮತ್ತು ನಮಗೆ ನಿಮ್ಮ ಮೇಲೆ ಶಂಕೆಯೇ ಇಲ್ಲ ಎಂದೂ ಹೇಳಿದ್ದಾಗಿಯೂ ತಿಳಿಸಿದರು.
ಅಬ್ದುರ್ರವೂಫ್ರವರು ಹುಟ್ಟಿದ ಮನೆ ಮತ್ತು ಅಣ್ಣಂದಿರ ಮನೆ ಎಲ್ಲವೂ ಇವರ ಮನೆ ಅಕ್ಕಪಕ್ಕದಲ್ಲೇ ಇದೆ. ಅಬ್ದುರ್ರವೂಫ್ರ ಪತ್ನಿ ಹೆರಿಗೆಯಾಗಿ ತವರು ಮನೆ ಆತೂರಿಗೆ ಹೋಗಿರುವುದರಿಂದ ಮತ್ತು ಮಂಜನಾಡಿಯಿಂದ ಇವರು ವಾರಕ್ಕೊಮ್ಮೆ ಮನೆಗೆ ಬರುವುದರಿಂದ ಇತ್ತೀಚಿನ ದಿನಗಳಲ್ಲಿ ಮನೆಗೆ ಬೀಗ ಹಾಕಿರುತ್ತಿತ್ತು. ಇವರು ಬಂದು ಬಾಗಿಲು ತೆರೆದು ಇದ್ದು ಹೋಗುತ್ತಿದ್ದರು. ಆದ್ದರಿಂದ ಮಾಹಿತಿ ಕಲೆ ಹಾಕಲು ಆಗಸ್ಟ್ 19ರಂದು ಪೊಲೀಸರು ಬಂದಾಗ ಮನೆಗೆ ಬೀಗ ಹಾಕಲಾಗಿತ್ತು. ಅವರು ಅಣ್ಣನ ಮನೆಯಲ್ಲಿ ವಿಚಾರಿಸಿ ಮಾಹಿತಿ ಪಡೆದುಕೊಂಡು ಹೋದರು ಎಂದು ಅಣ್ಣ ರಫೀಕ್ ಹೇಳಿದರು. ಅಲ್ಲದೇ, ಈ ಸುದ್ದಿ ಸ್ಫೋಟಕ್ಕಿಂತ ಮೊದಲು ರವೂಫ್ರ ಮನೆಯ ಹಿಂಭಾಗದಲ್ಲಿರುವ ಬನವೊಂದರ ಸಮೀಪ ಎರಡ್ಮೂರು ಪೊಲೀಸರು ಬಂದು ಹೋಗಿದ್ದರು ಮತ್ತು ಅವರು ನಾಗರಿಕ ಉಡುಪಿನಲ್ಲಿದ್ದರು ಎಂಬ ವದಂತಿ ಇದ್ದ ಬಗ್ಗೆಯೂ ಅವರು ಹೇಳಿದರು. ಆದರೆ ಇವರಾರೂ ಅವರನ್ನು ನೋಡಿಲ್ಲ. ಅವರು ಇವರನ್ನು ವಿಚಾರಿಸಿಯೂ ಇಲ್ಲ ಎಂದೂ ಹೇಳಿದರು.
ನನಗೆ ನ್ಯಾಯ ಸಿಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನನ್ನ ಮಾನ ಹರಾಜು ಹಾಕಿದವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬೇಕು ಎಂಬ ಸಹಜ ಆಕ್ರೋಶವನ್ನು ಅವರು ವ್ಯಕ್ತಪಡಿಸಿದರು.
ಅಬ್ದುರ್ರವೂಫ್ರು ತೀವ್ರ ಭಯದಲ್ಲಿದ್ದಾರೆ. ಏನಾಗುತ್ತೋ, ಯಾಕೆ ಇಂಥ ಬೆಳವಣಿಗೆ ನಡೆಯಿತೋ ಎಂಬ ಗೊಂದಲದಲ್ಲಿದ್ದಾರೆ. ಈ ಸುದ್ದಿ ಕೇಳಿ ಅವರ ಅನಾರೋಗ್ಯ ಪೀಡಿತ ತಾಯಿ ಮೂರ್ಚೆ ಹೋದರು. ಪತ್ನಿ ಮನೆಯಲ್ಲಂತೂ ಭಯದ ವಾತಾವರಣ. ತನ್ನನ್ನು ಎಲ್ಲರೂ ಸಂಶಯದಿಂದ ನೋಡುತ್ತಿದ್ದಾರೆ ಎಂಬ ಅಳುಕು ಅವರಲ್ಲಿದೆ. ಅವರಲ್ಲಿರುವುದು ನಾಲ್ಕು ವರ್ಷಗಳ ಹಿಂದೆ ಮಾಡಿಸಿಕೊಂಡಿರುವ ಪಾಸ್ಪೋರ್ಟ್, ಮೊಬೈಲ್ ಪೋನ್, ಇನ್ನೂ ಪೂರ್ಣಗೊಳ್ಳದ ಮನೆ, 2 ಲಕ್ಷ ರೂಪಾಯಿ ಸಾಲ, ಒಂದು ಫೇಸ್ಬುಕ್ ಖಾತೆ, ಬಿಳಿ ಲುಂಗಿ, ಶರ್ಟು, ಟೋಪಿ, ಧಾರ್ಮಿಕ ಜ್ಞಾನ ಮತ್ತು ಒಂದಷ್ಟು ಮುಗ್ಧತೆ, ಭಯ – ಇಷ್ಟು ಮಾತ್ರ.
ಇವರು ಹೀಗೆಂದರು:
ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ಇನ್ಸ್ ಪೆಕ್ಟರ್ ಬಿ.ಎಸ್. ರವಿ
ಅಬ್ದುರ್ರವೂಫ್ ಹೇಗೆ ಉಗ್ರ ಆದ ಎಂಬುದನ್ನು ಮಾಧ್ಯಮದವರೇ ಹೇಳಬೇಕು. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾನಿಲ್ಲಿಗೆ ಬಂದು ನಾಲ್ಕು ವರ್ಷ ಆಯಿತು. ಅವರ ಮೇಲಾಗಲಿ ಕುಟುಂಬದ ಮೇಲಾಗಲಿ ಯಾವ ಕೇಸೂ ಇಲ್ಲ. ಅವರಿರುವ ಊರು ಶಾಂತಿಯುತ ಪ್ರದೇಶವಾಗಿ ಗುರುತಿಸಿಕೊಂಡಿದೆ. ಎಸ್.ಪಿ. ಕಚೇರಿಯಿಂದ ಮಾಹಿತಿ ಕೇಳಿದುದಕ್ಕಾಗಿ ನಾವು ಅವರನ್ನು ಸಂಪರ್ಕಿಸಿದ್ದೇವೆ. ಸ್ಯಾಟಲೈಟ್ನ ಬಗ್ಗೆಯಾಗಲಿ, ನಾಗರಿಕ ಉಡುಪಿನಲ್ಲಿ ಅಲ್ಲಿಗೆ ಪೊಲೀಸರು ಹೋಗಿದ್ದಾರೆ ಎಂಬ ಬಗ್ಗೆಯಾಗಲಿ ನಮಗೆ ಮಾಹಿತಿ ಇಲ್ಲ. ಈ ಠಾಣೆಯಿಂದ ಯಾರೂ ಹಾಗೆ ಹೋಗಿಲ್ಲ. ಮಾಧ್ಯಮದವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.
ಬಿ.ಎಂ. ಭಟ್ – ನ್ಯಾಯವಾದಿ
ದ.ಕ. ಜಿಲ್ಲಾ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕ ಸಂಘದ ಅಧ್ಯಕ್ಷ
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಬೆಳ್ತಂಗಡಿ ತಾಲೂಕಿನಲ್ಲಿ ನೆರೆ ಪರಿಸ್ಥಿತಿ ತಲೆದೋರಿತ್ತು ಮತ್ತು ಭಾರೀ ಹಾನಿ ಸಂಭವಿಸಿತ್ತು. ಆಡಳಿತ ವರ್ಗದ ವಿರುದ್ಧ ಜನರು ಅಸಮಾಧಾನಗೊಳ್ಳುತ್ತಿರುವುದನ್ನು ಮನಗಂಡು ಯಾರೋ ಈ ಸುಳ್ಳು ಸುದ್ದಿಯನ್ನು ಹಬ್ಬಿಸಿ ಜನರ ಗಮನ ಬೇರೆಡೆಗೆ ಹರಿಯುವಂತೆ ಮಾಡಿದ್ದಾರೆ ಎಂದು ಅನಿಸುತ್ತಿದೆ. ಜಾರಿಗೆಬೈಲು ಮಾತ್ರವಲ್ಲ, ಇಲ್ಲಿನ ಪಕ್ಕದ ಪಟ್ರಮೆ ಗ್ರಾಮದ ಪಟ್ಟೂರ್ ನಿಂದಲೂ ಸ್ಯಾಟಲೈಟ್ ಕರೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಮಾಧ್ಯಮಗಳೂ ಸುದ್ದಿ ಪ್ರಕಟಿಸಿದ್ದುವು. ಪಟ್ಟೂರಿನಲ್ಲಿ 25 ಮನೆಗಳಿವೆ. ಯಾರಿಂದ, ಯಾವ ಮನೆಯಿಂದ ಕರೆ ಹೋಗಿದೆ ಎಂದು ಸುದ್ದಿಯಾಗಿಲ್ಲ. ಹಾಗಿದ್ದರೆ ಈ 25 ಮನೆಗಳೂ ಉಗ್ರರದ್ದಾ ಎಂಬುದು ನನ್ನ ಪ್ರಶ್ನೆ. ಈ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಊರವರೆಲ್ಲರೂ ಸೇರಿ ಮಾನನಷ್ಟ ಮೊಕದ್ದಮೆ ಹೂಡಿ ಬುದ್ಧಿ ಕಲಿಸುವ ಕೆಲಸ ಆಗಬೇಕಿದೆ.
ಮುಹಮ್ಮದ್, ಸ್ಥಳೀಯ ಅಂಗಡಿ ವ್ಯಾಪಾರಿ
ಈ ಸುದ್ದಿ ಪ್ರಸಾರವಾದ ಸಮಯದಲ್ಲಿ ಬೆಳ್ತಂಗಡಿ ಪೊಲೀಸರು ನಾನಿರುವ ಕಟ್ಟಡದ ಸಿಸಿ ಟಿ.ವಿ. ಪರಿಶೀಲಿಸಿದ್ದಾರೆ. ಹಾಗೆಯೇ ಈ ಕಟ್ಟಡದ ಹಿಂಬದಿಯಲ್ಲಿ ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರು ವಾಸ ಮಾಡುತ್ತಿದ್ದು, ಅವರ ಮಾಹಿತಿ ಕಲೆ ಹಾಕಿದ್ದಾರೆ. ನನಗೆ ಗೊತ್ತಿರುವಂತೆ ಅಬ್ದುರ್ರವೂಫ್ ಕುಟುಂಬದವರು ತುಂಬಾ ಒಳ್ಳೆಯವರು. ಅವರನ್ನು ಅನುಮಾನಿಸುವುದೇ ತಪ್ಪು.
ವಿಜಯಲಕ್ಷ್ಮಿ – ಸ್ಥಳೀಯ ಅಂಗಡಿ ವ್ಯಾಪಾರಿ
ಅಬ್ದುರ್ರವೂಫ್ರನ್ನು ಹಲವು ವರ್ಷಗಳಿಂದ ನೋಡುತ್ತಿದ್ದೇನೆ. ಅವರು ತುಂಬಾ ಒಳ್ಳೆಯವರು. ಅವರ ಬಗ್ಗೆ ಯಾಕೆ ಇಂಥ ಸುಳ್ಳು ಸುದ್ದಿ ಹರಡಿದರೋ ಗೊತ್ತಾಗುತ್ತಿಲ್ಲ.












