ಸನ್ಮಾರ್ಗ ವಾರ್ತೆ
ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ(RSS) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಕೊರೋನಾ ಪಾಸಿಟಿವ್ ಆಗಿರುವುದಾಗಿ ಆರ್ ಎಸ್ ಎಸ್ ತನ್ನ ಅಧಿಕೃತ ಹ್ಯಾಂಡಲ್ನಲ್ಲಿ ಟ್ವೀಟ್ ಮಾಡಿ ಮಾಹಿತಿ ನೀಡಿದೆ.
70 ರ ಹರೆಯದ ಭಗವತ್ ಅವರು ಕರೋನ ವೈರಸ್ ಸೋಂಕಿನ ಲಕ್ಷಣಗಳನ್ನು ಹೊಂದಿರುವುದಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಟ್ವೀಟ್ ಮಾಡಿದೆ.
ಅವರು ಪ್ರಸ್ತುತ ಕೋವಿಡ್ ನ ಸಾಮಾನ್ಯ ರೋಗ ಲಕ್ಷಣಗಳನ್ನು ಹೊಂದಿದ್ದಾರೆ ಮತ್ತು ಅವರನ್ನು ನಾಗ್ಪುರದ ಕಿಂಗ್ಸ್ ವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ತಪಾಸಣೆ ನಡೆಸಲಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ “ಎಂದು ಆರ್ ಎಸ್ ಎಸ್ ತಿಳಿಸಿದೆ.
ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕರಾಗಿರುವ ಭಾಗವತ್ ಅವರು ಮಾರ್ಚ್ 7 ರಂದು ಕೋವಿಡ್ ಲಸಿಕೆಯನ್ನು ತೆಗೆದುಕೊಂಡಿದ್ದರು. ಆದರೂ ಅವರಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಸಂಘ ಪರಿವಾರದವರಿಗೆ ಆಘಾತ ನೀಡಿದೆ.
ಕೋವಿಡ್ ಸಾಂಕ್ರಾಮಿಕ ರೋಗವು ಭಾರತದಲ್ಲಿ ಕಂಡು ಬಂದ ಒಂದು ವರ್ಷದ ನಂತರ, ಅಂದರೆ ಇತ್ತೀಚಿನ ವಾರಗಳಲ್ಲಿ ಮಹಾರಾಷ್ಟ್ರ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಪಾಸಿಟಿವ್ ವರದಿಯಾಗುತ್ತಿದೆ.












