ಆರ್ಟಿಕಲ್ 370 ರದ್ದು: ವೀರ ಮರಣವನ್ನಪ್ಪಿದ ಸೈನಿಕರಿಗೆ ಮೋದಿ ನೀಡಿದ ಗೌರವ- ಅಮಿತ್ ಶಾ

0
517

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್,ಸೆ.30: ಗಡಿಯಲ್ಲಿ ದೇಶಕ್ಕಾಗಿ ಪ್ರಾಣ ತೆತ್ತ ಸೈನಿಕರಿಗೆ ಸಲ್ಲಿಸಿದ ಗೌರವ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ್ದಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಹ್ಮದಾಬಾದಿನಲ್ಲಿ ಹೇಳಿದರು. ಅವರು ರ‌್ಯಾಪಿಡ್ ಆಕ್ಷನ್ ಫೋರ್ಸ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದರು.

ಆರ್ಟಿಕಲ್ 370 ರದ್ದು ಮಾಡುವ ಮೂಲಕ ದೇಶ ರಕ್ಷಣೆಯ ವೇಳೆ ಜೀವ ಬಲಿ ನೀಡಿದ ಎಲ್ಲ ಯೋಧರಿಗೂ ಅತ್ಯಂತ ಅನುಯೋಜ್ಯವಾದ ಗೌರವವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದರು. ಇನ್ನು ಯಾವ ಸೈನಿಕನೂ ಈ ಮಣ್ಣಿನಲ್ಲಿ ವೀರಮೃತ್ಯವನ್ನಪ್ಪುವ ಸಂದರ್ಭ ಸೃಷ್ಟಿಯಾಗದಿರಲು ಹೀಗೆ ಮಾಡಲಾಯಿತು ಎಂದು ಅವರು ಹೇಳಿದರು.

ಎರಡನೆ ಬಾರಿ ನಮಗೆ ದೊಡ್ಡ ಮಟ್ಟದ ಜನರ ಬೆಂಬಲ ದೊರೆತರೇ ಆರ್ಟಿಕಲ್ 370 ರದ್ದು ಮಾಡುವ ಕೆಲಸವನ್ನು ಮೊದಲು ಮಾಡುತ್ತೇವೆ ಎಂದು ಜನರಿಗೆ ಹೇಳಿದ್ದೇವು. ಇದರೊಂದಿಗೆ ಕಾಶ್ಮೀರ ಅಭಿವೃದ್ಧಿಯೆಡೆಗೆ ಸಾಗುತ್ತಿದೆ. ಕಾಶ್ಮೀರದಲ್ಲಿ ಯಾರಾದರೂ ಏನಾದರೂ ತಂಟೆ ಮಾಡಲು ನೋಡಿದರೆ ಅಲ್ಲಿ ಸೇನೆ ಕಾವಲಿಗಿದೆ ಎಂಬುದನ್ನು ನೆನಪಿಟ್ಟುಕೊಳ್ಳಲಿ ಎಂದು ಅವರು ಹೇಳಿದರು.