ಸಮಾನ ನಾಗರಿಕ ಸಂಹಿತೆಯ ಅಸಮಾನತೆಗಳು

0
291

ಸನ್ಮಾರ್ಗ ಸಂಪಾದಕೀಯ

ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆಯ ಸ್ವರೂಪ ಏನು? ಯಾವೆಲ್ಲ ಕಾನೂನುಗಳಲ್ಲಿ ಏಕರೂಪವನ್ನು ತರಲಾಗುತ್ತದೆ?
ನಾಗಾಲ್ಯಾಂಡ್ ಸಹಿತ ಈಶಾನ್ಯ ಭಾರತದ ಬುಡಕಟ್ಟುಗಳನ್ನು ಈ ಏಕರೂಪ ನಾಗರಿಕ ಸಂಹಿತೆಯಿಂದ ಹೊರಗಿಡಲಾಗುತ್ತದೆ ಎಂದು ಜುಲೈ 8ರ ಡೆಕ್ಕನ್ ಹೆರಾಲ್ಡ್ ಸಹಿತ ವಿವಿಧ ಆಂಗ್ಲಪತ್ರಿಕೆಗಳು ವರದಿ ಮಾಡಿವೆ. ನಾಗಾಲ್ಯಾಂಡ್‌ನ ಕ್ರೈಸ್ತರನ್ನು ಕೂಡಾ ಈ ಏಕರೂಪ ನಾಗರಿಕ ಸಂಹಿತೆಯಿಂದ ಹೊರಗಿಡಲಾಗುತ್ತದೆ. ನಾಗಾಲ್ಯಾಂಡ್‌ನಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಮೈತ್ರಿಯಲ್ಲಿರುವ ನ್ಯಾಶನಲ್ ಡೆಮಾಕ್ರಾಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ(NDPP)ಯ ವಕ್ತಾರ ಸಹಿತ 12 ಮಂದಿಯ ನಿಯೋಗ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ ಈ ಮಾಹಿತಿಯನ್ನು ನೀಡಲಾಗಿದೆ. ಹಾಗಿದ್ದರೆ,

ಒಂದು ದೇಶ, ಒಂದು ಕಾನೂನು ಎಂಬುದರ ಅರ್ಥವೇನು? ಸಂವಿಧಾನದ ಮಾರ್ಗದರ್ಶಿ ಸೂತ್ರದಲ್ಲಿ ಏಕರೂಪ ನಾಗರಿಕ ಸಂಹಿತೆಗೆ ಒಲವು ವ್ಯಕ್ತಪಡಿಸಿರುವಂತೆಯೇ ಸಂಪೂರ್ಣ ಮದ್ಯಪಾನ ನಿಷೇಧದ ಜಾರಿಗೂ ಒಲವು ವ್ಯಕ್ತಪಡಿಸಲಾಗಿದೆ. ಈ ಎರಡರಲ್ಲಿ ನಿಜಕ್ಕೂ ಮೊದಲು ಆಗಬೇಕಾದುದು ಯಾವುದು? ಏಕರೂಪದ ಕಾನೂನು ಇಲ್ಲದೇ ಇರುವುದರಿಂದ ಈ ದೇಶದ ನಾಗರಿಕರಿಗೆ ಆಗಿರುವ ತೊಂದರೆಗಳು ಏನೇನು ಮತ್ತು ಸಂಪೂರ್ಣ ಪಾನ ನಿಷೇಧ ಮಾಡದೇ ಇರುವುದರಿಂದ ಆಗಿರುವ ತೊಂದರೆಗಳು ಏನೇನು ಎಂಬ ಬಗ್ಗೆ ಸರಕಾರ ಸಮೀಕ್ಷೆ ನಡೆಸಿದೆಯೇ? ಸಂವಿಧಾನದ ಮಾರ್ಗದರ್ಶಿ ಸೂತ್ರಗಳಲ್ಲಿ ಎರಡರ ಜಾರಿಯ ಬಗ್ಗೆಯೂ ಒಲವು ವ್ಯಕ್ತಪಡಿಸಿರುವಾಗ ಪಾನ ನಿಷೇಧದ ಬಗ್ಗೆ ಯಾವೊಂದೂ ಮಾತಾಡದೇ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುತ್ತೇವೆ ಅನ್ನುವುದು ಮತ್ತು ಅದಕ್ಕೆ ಸಮರ್ಥನೆಯಾಗಿ ಸಂವಿಧಾನದ ಮಾರ್ಗದರ್ಶಿ ಸೂತ್ರಗಳನ್ನು ತೋರಿಸುವುದು ದ್ವಂದ್ವವಲ್ಲವೇ?

ಕೇಂದ್ರ ಸರಕಾರದ ಉದ್ದೇಶ ಪ್ರಾಮಾಣಿಕವಾಗಿಲ್ಲ ಎಂಬುದಕ್ಕೆ ತ್ರಿವಳಿ ತಲಾಕ್‌ನ ವಿಷಯದಲ್ಲಿ ಅದು ನಡಕೊಂಡ ರೀತಿಯೇ ಸ್ಪಷ್ಟ ಪಡಿಸುತ್ತದೆ. ತ್ರಿವಳಿ ತಲಾಕನ್ನು ಇತ್ಯರ್ಥಪಡಿಸಲು ಸುಪ್ರೀಮ್ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಕೇಹರ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ನ್ಯಾಯಪೀಠದ ಮೂವರು ನ್ಯಾಯಾಧೀಶರು ತ್ರಿವಳಿ ತಲಾಕನ್ನು ವಿರೋಧಿಸಿದರೆ ಮುಖ್ಯ ನ್ಯಾಯಮೂರ್ತಿ ಕೇಹರ್ ಮತ್ತು ಅಬ್ದುಲ್ ನಝೀರ್ ಅದನ್ನು ಸಮರ್ಥಿಸಿದ್ದರು. ಅಂತಿಮವಾಗಿ ಬಹುಮತದ ತೀರ್ಪಿನಲ್ಲಿ ತ್ರಿವಳಿ ತಲಾಕನ್ನು ಅಸಿಂಧು ಎಂದು ಹೇಳಿ ಸುಪ್ರೀಮ್ ಕೋರ್ಟ್ ರದ್ದು ಮಾಡಿತ್ತೇ ಹೊರತು ಅದನ್ನು ಕ್ರಿಮಿನಲ್ ಅಪರಾಧ ಎಂದು ಹೇಳಿರಲಿಲ್ಲ. ಆದರೆ ಮೋದಿ ಸರಕಾರ ಆ ತೀರ್ಪನ್ನೇ ಬಳಸಿಕೊಂಡು ತ್ರಿವಳಿ ತಲಾಕನ್ನು ಕ್ರಿಮಿನಲ್ ಅಪರಾಧವೆಂದು ಸಾರಿತಲ್ಲದೇ, ಹೀಗೆ ತಲಾಕ್ ಹೇಳುವ ವ್ಯಕ್ತಿಗೆ ಜಾಮೀನು ರಹಿತ 3 ವರ್ಷಗಳ ಸೆರೆವಾಸ ಶಿಕ್ಷೆಯ ಕಾನೂನು ಜಾರಿ ಮಾಡಿತು. ಈ ಕಾನೂನಿನ ಪ್ರಕಾರ, ತ್ರಿವಳಿ ತಲಾಕ್‌ಗೆ ಒಳಗಾದ ಮಹಿಳೆಯೇ ದೂರು ಕೊಡಬೇಕಿಲ್ಲ. ಮೂರನೇ ವ್ಯಕ್ತಿ ದೂರು ಕೊಟ್ಟರೂ ಅದು ಸಿಂಧುವಾಗುತ್ತದೆ. ಒಂದುವೇಳೆ, ದೂರು ಸುಳ್ಳು ಎಂಬುದು ಸ್ಪಷ್ಟವಾದರೂ ಸ್ಟೇಷನ್ ಜಾಮೀನು ಸಿಗುವುದಿಲ್ಲ ಮತ್ತು ನ್ಯಾಯಾಲಯ ಜಾಮೀನು ಕೊಡುವವರೆಗೆ ಆತ ಜೈಲಲ್ಲೇ ಇರಬೇಕಾಗುತ್ತದೆ. ಇದೇವೇಳೆ,

ಹಿಂದೂ ಸಮುದಾಯದ ಓರ್ವ ವ್ಯಕ್ತಿ ಪತ್ನಿಯನ್ನು ತ್ಯಜಿಸಿದರೆ ಅದನ್ನು ಸಿವಿಲ್ ಪ್ರಕರಣವಾಗಿ ಪರಿಗಣಿಸಲಾಗುತ್ತದೆ. ಈ ಅಪರಾಧಕ್ಕಾಗಿ ಆತನನ್ನು ಜಾಮೀನು ರಹಿತವಾಗಿ ಬಂಧಿಸುವ ಮತ್ತು ಆತನನ್ನು ಮೂರು ವರ್ಷ ಜೈಲಲ್ಲಿಡುವ ಯಾವ ಕಾನೂನನ್ನೂ ರಚಿಸಲಾಗಿಲ್ಲ. ಹೀಗೆ ಪುರುಷನಿಂದ ತ್ಯಜಿಸಲ್ಪಟ್ಟ ಲಕ್ಷಾಂತರ ಮಹಿಳೆಯರು ನ್ಯಾಯಕ್ಕಾಗಿ ಕಾನೂನಿನ ವಿವಿಧ ಕಂಭಗಳಿಗೆ ಇವತ್ತು ಅಲೆಯುತ್ತಿದ್ದಾರೆ. ಇಂಥ ಸುಮಾರು 20 ಲಕ್ಷಕ್ಕಿಂತಲೂ ಅಧಿಕ ಪ್ರಕರಣಗಳು ಇವೆ ಎಂಬುದು ಅಧಿಕೃತ ಅಂಕಿ-ಅಂಶ. ಕನಿಷ್ಠ ತಲಾಕ್ ಅಥವಾ ವಿಚ್ಛೇದನೆ ಎಂದು ಕೂಡ ಹೇಳದೆಯೇ ಪತ್ನಿಯನ್ನು ತ್ಯಜಿಸಿದ ಹಿಂದೂ ಪುರುಷ ಯಾವ ಕಾನೂನು ಭೀತಿಯೂ ಇಲ್ಲದೇ ನಾಗರಿಕ ಸಮಾಜದಲ್ಲಿ ಆರಾಮವಾಗಿರುವಾಗ ಮುಸ್ಲಿಮ್ ಪುರುಷ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುತ್ತಾನೆ. ಅಲ್ಲದೇ, ಪತ್ನಿಯ ಹೊರತಾಗಿ ಮೂರನೇ ವ್ಯಕ್ತಿ ದೂರು ಕೊಟ್ಟರೂ ಈ ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಕಾನೂನು ಎಷ್ಟು ಪಕ್ಷಪಾತಿ ಅನ್ನುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ವೈವಾಹಿಕ ಬದುಕೇ ಅತ್ಯುತ್ತಮ ಉದಾಹರಣೆ. ಅವರು ಪತ್ನಿ ಜಶೋದಾ ಬೆನ್‌ರನ್ನು ತ್ಯಜಿಸಿ ಸುಮಾರು ಅರ್ಧ ದಶಕವೇ ಕಳೆದಿದೆ. ಒಂದುವೇಳೆ, ಪತ್ನಿಯನ್ನು ತ್ಯಜಿಸುವುದು ಕ್ರಿಮಿನಲ್ ಅಪರಾಧ ಮತ್ತು ಪತ್ನಿಯ ಹೊರತಾಗಿ ಮೂರನೇ ವ್ಯಕ್ತಿ ದೂರು ಕೊಡುವುದೂ ಕಾನೂನು ಸಮ್ಮತ ಎಂದಾಗಿದ್ದರೆ ಪ್ರಧಾನಿಯೂ ಮೂರು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕಿತ್ತಲ್ಲವೇ? ಹಾಗಂತ,

ತ್ರಿವಳಿ ತಲಾಕನ್ನು ಕ್ರಿಮಿನಲ್ ಅಪರಾಧವೆಂದು ಸಾರಿ ಕಾನೂನು ರಚಿಸಿದ ಪ್ರಧಾನಿಗೆ ಇವೆಲ್ಲ ಗೊತ್ತಿಲ್ಲ ಎಂದಲ್ಲ. ಮುಸ್ಲಿಮರನ್ನು ಸತಾಯಿಸಬೇಕು ಮತ್ತು ಅವರ ವರ್ಚಸ್ಸನ್ನು ಸಾರ್ವಜನಿಕವಾಗಿ ಕುಗ್ಗಿಸಬೇಕು ಎಂಬ ಉದ್ದೇಶವೇ ಇದರ ಹಿಂದಿರುವಂತಿದೆ. ಇಲ್ಲದಿದ್ದರೆ ತ್ರಿವಳಿ ತಲಾಕ್ ಕಾನೂನು ಜಾರಿಗೊಳಿಸಲಾದ 2018ರಲ್ಲೇ ಈ ವಿಷಯದಲ್ಲಿ ಏಕರೂಪ ಕಾನೂನನ್ನು ಜಾರಿಗೊಳಿಸಬಹುದಿತ್ತಲ್ಲವೇ? ಪತ್ನಿಯನ್ನು ತ್ಯಜಿಸುವವ ಹಿಂದೂವಾಗಿರಲಿ, ಮುಸ್ಲಿಮನಾಗಿರಲಿ ಆತನನ್ನು ಕ್ರಿಮಿನಲ್ ಅಪರಾಧಿ ಎಂದು ಸಾರಿ ಮೂರು ವರ್ಷಗಳ ಜೈಲು ಶಿಕ್ಷೆ ಘೋಷಿಸಬಹುದಿತ್ತಲ್ಲವೇ? ನಿಜವಾಗಿ,

ಮೋದಿ ಸರಕಾರದ ಈ ತಾರತಮ್ಯ ನೀತಿಯೇ ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಅನುಮಾನ ಪಡುವುದಕ್ಕೆ ಆಧಾರವಾಗಿದೆ. ಈ ಸರಕಾರದ ಉದ್ದೇಶ ಪ್ರಾಮಾಣಿಕವಾಗಿಲ್ಲ. ಲೋಕಸಭಾ ಚುನಾವಣೆಗೆ ಇನ್ನು ಬರೇ 10 ತಿಂಗಳಷ್ಟೇ ಉಳಿದಿರುವಾಗ ಪ್ರಧಾನಿ ಮೋದಿ ಏಕರೂಪ ನಾಗರಿಕ ಸಂಹಿತೆ ಎಂಬ ದಾಳವನ್ನು ಉರುಳಿಸಿದ್ದಾರೆ. ಇನ್ನೊಂದು ಕಡೆ ಈಶಾನ್ಯ ಭಾರತದ ಬುಡಕಟ್ಟುಗಳು ಈ ಕಾಯ್ದೆಯಿಂದ ವಿನಾಯಿತಿ ಪಡೆಯಲಿದ್ದಾರೆ ಅನ್ನುವುದೂ ಖಚಿತವಾಗಿದೆ. ಬುಡಕಟ್ಟುಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳನ್ನು ಹಾಗೆಯೇ ಇರಗೊಟ್ಟು ದೇಶದ ಉಳಿದವರ ಧಾರ್ಮಿಕ-ಸಾಂಸ್ಕೃತಿಕ ವೈವಿಧ್ಯತೆಗಳಲ್ಲಿ ಏಕರೂಪ ತರುವುದೆಂದರೇನು? ಬುಡಕಟ್ಟು ಸಮುದಾಯದಲ್ಲಿ ಹೇಗೂ ವಿಚ್ಛೇದನ ನಡೆಯಬಹುದು, ಹೇಗೂ ಆಸ್ತಿ ಹಂಚಿಕೆಯಾಗಬಹುದು, ಬಹುಪತ್ನಿತ್ವವೋ ಇನ್ನೇನೋ ಇದ್ದರೂ ತೊಂದರೆಯಿಲ್ಲ, ಅವರಲ್ಲಿ ಜಾತಿ-ಅಸ್ಪೃಶ್ಯತೆ ಇತ್ಯಾದಿಗಳಿದ್ದರೂ ವಿರೋಧವಿಲ್ಲ ಎಂದರೆ ಏನರ್ಥ? ಈಶಾನ್ಯ ಭಾರತೀಯರಿಗೆ ಈ ರಿಯಾಯಿತಿ ಯಾಕೆ? ಅಂದಹಾಗೆ,

ನಾಗಾಲಾಂಡ್ ಗೆ ಸಂವಿಧಾನದ 371(A) ಪರಿಚ್ಛೇದದನ್ವಯ 1961ರಲ್ಲಿ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ಬಳಸಿಕೊಂಡು ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುವುದಕ್ಕೆ ಕೇಂದ್ರ ಸರಕಾರ ನಿರ್ಧರಿಸಿದಂತಿದೆ. ಹಾಗಂತ, ಈ ವಾದ ಎಷ್ಟು ಸರಿ? ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸುವಾಗ ಇರದ ವಾದ ಈಗೇಕೆ? 370ನೇ ವಿಧಿಯನ್ನು ರದ್ದುಗೊಳಿಸಿ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತು ಹಾಕಿದಂತೆಯೇ ನಾಗಾಲ್ಯಾಂಡ್‌ನ 371(A) ವಿಧಿಯನ್ನು ರದ್ದುಗೊಳಿಸಬಾರದೇಕೆ? ಒಂದು ದೇಶ, ಒಂದೇ ಕಾನೂನು ಅಂದಮೇಲೆ ಈಶಾನ್ಯ ಭಾರತದ ಬುಡಕಟ್ಟುಗಳು ಈ ಪರಿಕಲ್ಪನೆಯಿಂದ ಹೊರಗಿರುವುದು ಎಷ್ಟು ಸರಿ? ನಿಜವಾಗಿ,

ಏಕರೂಪ ನಾಗರಿಕ ಸಂಹಿತೆ ಎಂಬ ಪದಪುಂಜದಲ್ಲಿ ಕೇಂದ್ರ ಸರಕಾರ ಆಟ ಆಡುತ್ತಿದೆ. ಈಶಾನ್ಯ ಭಾರತದ ಬುಡಕಟ್ಟುಗಳ ಮೇಲೆ ಏಕರೂಪ ನಾಗರಿಕ ಸಂಹಿತೆಯನ್ನು ಹೇರಿದರೆ ಮತದಾರರ ವಿರೋಧ ಕಟ್ಟಿಕೊಳ್ಳಬೇಕಾದೀತು ಎಂಬ ಭಯವಿದೆ. ಆದರೆ ಮುಸ್ಲಿಮರನ್ನು ಸತಾಯಿಸಿದಷ್ಟೂ ಲಾಭ ಹೆಚ್ಚು ಎಂಬ ನಂಬಿಕೆಯೂ ಅದಕ್ಕಿದೆ. ಆದ್ದರಿಂದಲೇ, ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆಯು ಮುಸ್ಲಿಮರನ್ನೇ ಗುರಿ ಮಾಡಿ ಜಾರಿಗೆ ತರಲಾಗುವ ಕಾನೂನು ಎಂದೇ ಹೇಳಬೇಕಾಗುತ್ತದೆ. ಮೋದಿ ಸರಕಾರಕ್ಕೆ ನಿಜಕ್ಕೂ ಒಂದೇ ದೇಶ ಒಂದೇ ಕಾನೂನು ಎಂಬ ಪ್ರಾಮಾಣಿಕ ಉದ್ದೇಶ ವೇನೂ ಇಲ್ಲ ಮತ್ತು ಅದು ಅಸಾಧ್ಯ ಎಂಬುದೂ ಅದಕ್ಕೆ ಗೊತ್ತಿದೆ. ಆದರೆ, ಅದೊಂದು ರಮ್ಯ ಮತ್ತು ಜನರ ಗಮನ ಸೆಳೆಯಬಲ್ಲ ಪದಪುಂಜ ಅನ್ನುವುದೂ ಗೊತ್ತಿದೆ. ಮುಸ್ಲಿಮರಿಗೆ ಸಂಬಂಧಿಸಿದ ವಿವಾಹ, ವಿಚ್ಛೇದನ, ಆಸ್ತಿ ವಿತರಣೆ ಇತ್ಯಾದಿ ಕಾನೂನುಗಳನ್ನು ಕಿತ್ತು ಹಾಕುವುದೇ ಅದರ ಉದ್ದೇಶವಾಗಿರುವಂತಿದೆ. ಮುಸ್ಲಿಮ್ ದ್ವೇಷವನ್ನೇ ರಾಜಕೀಯ ಮಾಡಿಕೊಂಡಿರುವ ಪಕ್ಷವೊಂದಕ್ಕೆ ಇದರಾಚೆಗಿನ ಸಂಭಾವಿತ ಗುರಿ ಇದೆ ಎಂದು ಅಂದುಕೊಳ್ಳುವುದಕ್ಕೆ ಬೇರೆ ಯಾವ ಆಧಾರಗಳೂ ಇಲ್ಲ.