ಇಸ್ಲಾಮ್: ಅನ್ಯ ಧರ್ಮ ಅಸಹಿಷ್ಣುವೇ?

0
356

ಸನ್ಮಾರ್ಗ ಸೀರತ್ ವಿಶೇಷಾಂಕ ಸಂಪಾದಕೀಯ

 ಪ್ರಥಮ ಮಾನವ ಮತ್ತು ಪ್ರಥಮ ಪ್ರವಾದಿ ಆದಮ್‌ರ(ಅ) ಇಬ್ಬರು ಪುತ್ರರಲ್ಲಿ ಕಿರಿಯವನಾದ ಕಾಬೀಲನು ಅಣ್ಣ ಹಾಬೀಲ್‌ನನ್ನು ಹತ್ಯೆ ಮಾಡುತ್ತಾನೆ. ಅಣ್ಣ ಹಾಬೀಲ್‌ನನ್ನು ಹತ್ಯೆ ಮಾಡಲು ತಮ್ಮ ಕಾಬೀಲ್ ಮುಂದಾದಾಗ ಅಣ್ಣ ಹೇಳುವ ಮಾತನ್ನು ಮತ್ತು ಆ ಇಡೀ ವೃತ್ತಾಂತವನ್ನು ಪವಿತ್ರ ಕುರ್‌ಆನ್‌ನ ಅಧ್ಯಾಯ 50: 27-30ರ ವಚನಗಳಲ್ಲಿ ಹೀಗೆ ವಿವರಿಸಲಾಗಿದೆ-

ನೀನು ನನ್ನನ್ನು ಹತ್ಯೆ ಮಾಡಲು ಕೈಯೆತ್ತಿದರೂ ನಾನು ನಿನ್ನ ಹತ್ಯೆ ಮಾಡಲ್ಲ. ನಾನು ಸರ್ವಲೋಕಗಳ ಪ್ರಭುವಾದ ಅಲ್ಲಾಹನನ್ನು ಭಯಪಡುತ್ತೇನೆ ಎಂದು ಹಾಬೀಲ್ ಹೇಳುತ್ತಾರೆ. ಕೊನೆಗೆ ಅಣ್ಣನನ್ನು ಕಾಬೀಲ್ ಹತ್ಯೆ ಮಾಡಿದ ಮತ್ತು ನಷ್ಟ ಹೊಂದಿದವರಲ್ಲಿ ಸೇರಿದ.

ಈ ವೃತ್ತಾಂತದ ಬೆನ್ನಿಗೇ ಪವಿತ್ರ ಕುರ್ ಆನ್ ನ  32ನೇ ವಚನದಲ್ಲಿ ಹೀಗೆ ಹೇಳಲಾಗಿದೆ-
ಓರ್ವ ಮಾನವನ ಹತ್ಯೆಯ ಬದಲಿಗೆ ಅಥವಾ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡುವ ಕಾರಣದ ಹೊರತಾಗಿ ಯಾರಾದರೂ ಓರ್ವ ಮನುಷ್ಯನನ್ನು ಹತ್ಯೆ ಮಾಡಿದರೆ ಅವನು ಸಕಲ ಮಾನವ ಸಮೂಹವನ್ನೇ ಹತ್ಯೆ ಮಾಡಿದಂತೆ ಮತ್ತು ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಸಕಲ ಮಾನವ ಸಮೂಹಕ್ಕೇ ಜೀವದಾನ ಮಾಡಿದಂತೆ.

ಪ್ರವಾದಿ(ಸ) ಹೀಗೆ ಹೇಳಿದ್ದಾರೆ,
ಯಾರಾದರೂ ಒಪ್ಪಂದ ಮಾಡಿಕೊಂಡ (ಅಥವಾ ದೇಶದ ಪ್ರಜೆಗಳಾಗಿರಲು ಒಪ್ಪಿಕೊಂಡೆ ಅಲ್ಪಸಂಖ್ಯಾತ) ಮುಸ್ಲಿಮೇತರರ ಹತ್ಯೆ ನಡೆಸಿದರೆ ಅಂಥ ಹತ್ಯೆಕೋರರು ನಲ್ವತ್ತು ವರ್ಷ ಪ್ರಯಾಣಿಸಿ ಹೋಗಬೇಕಾದಷ್ಟು ದೂರದವರೆಗೂ ಹಬ್ಬುವಂಥ ಸ್ವರ್ಗದ ಪರಿಮಳವನ್ನು ಕೂಡಾ ಅನುಭವಿಸಲಾರರು.

ಈ ಮೂರೂ ವಿಷಯಗಳಲ್ಲಿ ಏಕ ಸತ್ಯವೊಂದಿದೆ. ಇಸ್ಲಾಮ್ ಹಿಂಸೆಯ ವಿರೋಧಿ, ಅನ್ಯ ಧರ್ಮ ಅಸಹಿಷ್ಣುತೆಯ ವಿರೋಧಿ ಮತ್ತು ಒಂದು ಹತ್ಯೆಯನ್ನು ಇಡೀ ಮಾನವ ಸಮೂಹವನ್ನೇ ಹತ್ಯೆ ಮಾಡಿದುದಕ್ಕೆ ಸಮವೆಂದು ಪರಿಗಣಿಸುವಷ್ಟು ಹತ್ಯೆ ವಿರೋಧಿ. ಈ ಜಗತ್ತಿನಲ್ಲಿ ಪ್ರಪ್ರಥಮವಾಗಿ ಹತ್ಯೆಗೊಳಗಾದ ಹಾಬೀಲ್‌ನನ್ನು ಇಸ್ಲಾಮ್ ಸಜ್ಜನನೆಂದು ಪರಿಚಯಿಸುತ್ತದೆ ಮತ್ತು ಹತ್ಯೆ ಮಾಡಿದವ ಪ್ರವಾದಿಯ ಮಗನೇ ಆಗಿದ್ದರೂ ಆತನನ್ನು ನಷ್ಟ ಹೊಂದಿದವ ಮತ್ತು ಭ್ರಷ್ಟ ಚಿತ್ತದವ ಎಂದು ಉಲ್ಲೇಖಿಸುತ್ತದೆ. ಅಲ್ಲದೇ, ತಾನು ಹತ್ಯೆಗೊಳಗಾಗುವುದು ಶತಃಸಿದ್ಧ ಎಂದು ಗೊತ್ತಿದ್ದೂ ‘ತಾನು ಸರ್ವಲೋಕಗಳ ಪ್ರಭುವಾದ ಅಲ್ಲಾಹನನ್ನು ಭಯಪಡುತ್ತೇನೆ’ ಎಂದು ಅಣ್ಣ ಹೇಳುತ್ತಾರೆ. ಅಂದರೆ, ಅಲ್ಲಾಹನನ್ನು ಭಯಪಡುವವ ಹತ್ಯೆ ನಡೆಸುವುದಿಲ್ಲ ಅನ್ನುವುದೇ ಇದರ ತಾತ್ಪರ್ಯ. ಈ ಘಟನೆಯನ್ನು ಹೇಳಿದ ಬೆನ್ನಿಗೇ ಹತ್ಯೆಗೆ ಸಂಬಂಧಿಸಿ ಪವಿತ್ರ ಕುರ್ ಆನ್ ಸಾರ್ವತ್ರಿಕ  ನಿಯಮವನ್ನೂ ಮುಂದಿಡುತ್ತದೆ. ಪ್ರವಾದಿ ಮುಹಮ್ಮದ್(ಸ) ಈ ಕುರ್‌ಆನನ್ನೇ ಬೋಧಿಸಿದರು ಮತ್ತು ಬದುಕಿದರು. ‘ತನ್ನ ಅಧೀನದಲ್ಲಿರುವ ಮುಸ್ಲಿಮೇತರ ಕಾರ್ಮಿಕನನ್ನು ಅವಧಿಗಿಂತ ಹೆಚ್ಚು ದುಡಿಸಿದರೆ ಪರಲೋಕ ವಿಚಾರಣೆಯ ವೇಳೆ ನಾನು ಆ ಮುಸ್ಲಿಮೇತರನ ಪರ ನಿಲ್ಲುವೆ..’ ಎಂದು ಪ್ರವಾದಿ(ಸ) ತನ್ನ ಅನುಯಾಯಿಗಳ ಮುಂದೆ ಘೋಷಿಸುವುದಕ್ಕೆ ಈ ಪವಿತ್ರ ಕುರ್‌ಆನೇ ಪ್ರೇರಣೆ. ಮುಹಮ್ಮದರು ಪ್ರವಾದಿಯಾಗಿ 40ನೇ ವರ್ಷದಲ್ಲಿ ನಿಯುಕ್ತರಾದರು ಮತ್ತು 63 ವರ್ಷಗಳ ವರೆಗೆ ಬದುಕಿದರು. ಅವರು ಮೃತಪಡುವಾಗ, ಯುದ್ಧ ಕವಚ ಓರ್ವ ಯಹೂದಿಯ ಬಳಿ ಅಡವಿಡಲಾದ ಸ್ಥಿತಿಯಲ್ಲಿ ಇತ್ತು ಎಂದು ಇತಿಹಾಸ ಹೇಳುತ್ತದೆ. ಇನ್ನೊಂದು ಮಹತ್ವಪೂರ್ಣ ಘಟನೆಯೂ ಉಲ್ಲೇಖಾರ್ಹ-

 ಬಶೀರ್ ಬಿನ್ ಉಬೈರಿಕ್ ಎಂಬ ಮುಸ್ಲಿಮ್ ವ್ಯಕ್ತಿ ಇನ್ನೋರ್ವನ ಗುರಾಣಿಯನ್ನು ಕದಿಯುತ್ತಾರೆ ಮತ್ತು ಮಾಲಕ ತನ್ನ ಗುರಾಣಿಯನ್ನು ಹುಡುಕುತ್ತಿರುವುದು ಗೊತ್ತಾದಾಗ ಅದನ್ನು ಓರ್ವ ಯಹೂದಿಯ ಮನೆಯಲ್ಲಿ ಸದ್ದಿಲ್ಲದೇ ಇಟ್ಟುಬಿಡುತ್ತಾರೆ. ಗುರಾಣಿಯ ಮಾಲಕ ಪ್ರವಾದಿಯವರಲ್ಲಿ(ಸ) ದೂರು ನೀಡುವುದಲ್ಲದೇ ಬಶೀರ್ ಬಿನ್ ಉಬೈರಿಕ್‌ನ ಮೇಲೆ ಸಂದೇಹವನ್ನೂ ವ್ಯಕ್ತಪಡಿಸುತ್ತಾನೆ. ಆದರೆ ಬಷೀರ್ ಬಿನ್ ಉಬೈ ರಿಕ್  ಕಳ್ಳತನವನ್ನು ನಿರಾಕರಿಸುತ್ತಾನಲ್ಲದೇ ಯಹೂದಿಯತ್ತ ಕೈ ತೋರಿಸುತ್ತಾನೆ. ಆ ಬಶೀರ್‌ನ ಪರ ಆತನ ಝಫರ್ ಗೋತ್ರದವರೂ ಹಲವು ಮುಸ್ಲಿಮರೂ ಬೆಂಬಲಕ್ಕೆ ನಿಲ್ಲುತ್ತಾರೆ ಮತ್ತು ಆ ಅಲ್ಪಸಂಖ್ಯಾತ ಯಹೂದಿ ವ್ಯಕ್ತಿ ತಾನು ಕದ್ದಿಲ್ಲ ಎಂದು ಹೇಳಿದರೂ ಸಾಂದರ್ಭಿಕ ಸಾಕ್ಷ್ಯಗಳು ಅವನ ವಿರುದ್ಧವೇ ಇರುವುದರಿಂದ ಪ್ರವಾದಿ(ಸ) ಆತನನ್ನೇ ತಪ್ಪಿತಸ್ಥ ಎಂದು ತೀರ್ಮಾನಿಸುವುದಕ್ಕೆ ಮುಂದಾಗುತ್ತಾರೆ. ಆಗ ಪ್ರವಾದಿಯವರನ್ನು(ಸ) ತಿದ್ದುವ ಧಾಟಿಯಲ್ಲಿ ಪವಿತ್ರ ಕುರ್‌ಆನ್ ನ ವಾಣಿಗಳು ಅಲ್ಲಾಹನಿಂದ ಅವತೀರ್ಣವಾಗುತ್ತವೆ  ಮತ್ತು ಅಪ್ರಾಮಾಣಿಕರ ಪರ ವಾದಿಸುವವರಾಗಬೇಡಿ ಎಂದು (ಅಧ್ಯಾಯ 4, ವಚನ 105-106) ಪ್ರವಾದಿಯನ್ನು ಎಚ್ಚರಿಸುತ್ತದೆ ಮತ್ತು ಯಹೂದಿಯ ಪರ ತೀರ್ಪು ಕೊಡುವಂತೆ ಮಾಡುತ್ತದೆ.

ಅನ್ಯ ಧರ್ಮೀಯರನ್ನು ಅಸಹಿಷ್ಣುತೆಯಿಂದ ಕಾಣುವುದಕ್ಕೂ ಇಸ್ಲಾಮ್‌ಗೂ ಸಂಬಂಧ  ಇಲ್ಲ. ಈ ದೇಶದಲ್ಲಿ 800 ವರ್ಷಗಳ ಕಾಲ ಮುಸ್ಲಿಮರು ರಾಜರಾಗಿ ಮೆರೆದರೂ ಇವತ್ತಿಗೂ ಮುಸ್ಲಿಮರ ಸಂಖ್ಯೆ 15%ವನ್ನೂ ಮೀರಿಲ್ಲ. ಇಸ್ಲಾಮ್ ಅನ್ಯಧರ್ಮ ಅಸಹಿಷ್ಣುವೇ ಆಗಿದ್ದಿದ್ದರೆ ಈ ದೇಶದ ಬಹುಸಂಖ್ಯಾತರು ಇವತ್ತು ಮುಸ್ಲಿಮರೇ ಆಗಿರುತ್ತಿದ್ದರು. ಹಾಗಂತ, ಇದರಾಚೆಗೆ ಹಿಂದೂವನ್ನು ದ್ವೇಷಿಸುವ ಮುಸ್ಲಿಮ್ ಮತ್ತು ಮುಸ್ಲಿಮರನ್ನು ದ್ವೇಷಿಸುವ ಹಿಂದೂ ಇರಲು ಸಾಧ್ಯವಿದೆ. ಅದಕ್ಕೆ ಧರ್ಮ ಕಾರಣ ಅಲ್ಲ. ಸಂದರ್ಭ, ಸನ್ನಿವೇಶ, ತಪ್ಪು ಅಭಿಪ್ರಾಯಗಳು, ಅಸೂಯೆ, ಅಹಂಕಾರ, ರಾಜಕೀಯ ಅಧಿಕಾರ ಇತ್ಯಾದಿ ಇತ್ಯಾದಿ ವೈಯಕ್ತಿಕವಾದವುಗಳೇ ಕಾರಣವಾಗಿವೆ. ಅವನ್ನು ವೈಯಕ್ತಿಕವಾಗಿ ನೋಡಬೇಕೇ ಹೊರತು ಧರ್ಮದ ಕನ್ನಡಕದಿಂದಲ್ಲ. ಮುಸ್ಲಿಮ್ ರಾಷ್ಟ್ರಗಳಾಗಿರುವ ಮತ್ತು ಕುರ್‌ಆನನ್ನೇ ಸಂವಿಧಾನವಾಗಿ ಒಪ್ಪಿಕೊಂಡಿರುವ ಅರಬ್ ರಾಷ್ಟ್ರಗಳಲ್ಲಿ ಇವತ್ತು ಲಕ್ಷಾಂತರ ಹಿಂದೂಗಳು ಅಸಹಿಷ್ಣುತೆಯ ಅಣುವಿನಷ್ಟಾದರೂ ತಾರತಮ್ಯವನ್ನು ಅನುಭವಿಸದೆ ಬದುಕುತ್ತಿರುವುದೇ ಇಸ್ಲಾಮ್ ಅನ್ಯಧರ್ಮ ಅಸಹಿಷ್ಣುವಲ್ಲ ಎಂಬುದಕ್ಕೆ ಸಾಕ್ಷಿ.