‘ಹೆದ್ದಾರಿಗಳಲ್ಲಿ ಟೋಲ್’ ವರದಿಗಳನ್ನು ನಿರಾಕರಿಸಿದ ಸೌದಿ ಅರೇಬಿಯಾ: ಸಾರಿಗೆ ಸಚಿವಾಲಯದಿಂದ ಸ್ಪಷ್ಟನೆ

0
408

ಸನ್ಮಾರ್ಗ ವಾರ್ತೆ

ಮುಂದಿನ ವರ್ಷದಿಂದ ಸೌದಿಯ ಹೈವೇಗಳಲ್ಲಿ ಟೋಲ್ ಸಂಗ್ರಹ ನಡೆಸಲಾಗುತ್ತದೆ ಎಂಬ ಮಾಧ್ಯಮ ವರದಿಯನ್ನು ಸೌದಿ  ಸಚಿವಾಲಯ ತಿರಸ್ಕರಿಸಿದೆ.

ದೇಶದ ಯಾವುದೇ ರಸ್ತೆಯಲ್ಲಿ ಟೋಲ್ ಸ್ಥಾಪಿಸುವ ಮತ್ತು ಜನರಿಂದ ಹಣ ಸಂಗ್ರಹಿಸುವ ಯಾವುದೇ ಯೋಜನೆ ಸರ್ಕಾರಕ್ಕಿಲ್ಲ ಎಂದು ಸಾರಿಗೆ ಸಚಿವಾಲಯ ತಿಳಿಸಿದೆ.

ಟೋಲ್ ಸಂಗ್ರಹದ ವಾರ್ತೆ ಮಾಧ್ಯಮಗಳಲ್ಲಿ ದಿನಗಳಿಂದ ಹರಿದಾಡುತ್ತಿತ್ತು. ಪ್ರಮುಖ ರಸ್ತೆಗಳಲ್ಲಿ ಟೋಲ್ ಸಂಗ್ರಹ ಮಾಡಲಾಗುವುದು ಮತ್ತು ರಸ್ತೆ ಅಭಿವೃದ್ಧಿ ಕಾರ್ಯವನ್ನು ಖಾಸಗಿ ಸಂಸ್ಥೆಗಳೊಂದಿಗೆ ಸೇರಿಕೊಂಡು ನಡೆಸಲು ತೀರ್ಮಾನಿಸಲಾಗಿದೆ ಎಂದು ಕೂಡ ಮಾಧ್ಯಮ ವರದಿಗಳಲ್ಲಿ ಪ್ರಕಟವಾಗಿತ್ತು.

ನೈಜ ಸುದ್ದಿಗಳನ್ನು ಮಾತ್ರ ಮಾಧ್ಯಮಗಳು ಪ್ರಕಟಿಸಬೇಕು ಎಂದು ಕೂಡ ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡುತ್ತಾ ಸಚಿವಾಲಯ ಮುನ್ನೆಚ್ಚರಿಕೆ ನೀಡಿದೆ.