ಭಾರ ಹೊರುವ ಕತ್ತೆಯಂತಾಗದಿರಿ…

0
76

ಲೇಖನ: ರೈಹಾನ ವಿ ಕೆ

ನಾವೆಲ್ಲರೂ ಅಲ್ಲಾಹನು ಗೌರವಿಸಿದ ಪವಿತ್ರ ತಿಂಗಳಾದ ಷಹ್ರುಲ್ಲಾಹ್ ಯಾನೀ ಅಲ್ಲಾಹನ ತಿಂಗಳು ಎಂಬ ಗೌರವಕ್ಕೆ ಪಾತ್ರವಾದ ಹೊಸ ವರುಷದ ಮೊದಲನೇ ತಿಂಗಳಲ್ಲಿ ಇದ್ದೇವೆ. ಅವನು ಈ ತಿಂಗಳಿಗೆ ಇಟ್ಟಂತಹ ಎಲ್ಲಾ ಅನುಗ್ರಹಗಳೂ ನಮ್ಮ ಮೇಲೂ ವರ್ಷಿಸುವಂತಾಗಲಿ. ಹೊಸ ವರುಷ ಹೊಸ ಹುರುಪು ಹೊಸ ನಿರೀಕ್ಷೆ ಹೊಸತೊಂದು ಶಾಂತಿ ಯುತ ಸಮಾಜವನ್ನು ನೀಡಲಿ.
ಅಲ್ಲಾಹನಿಗೆ ಸ್ಥುತಿ. ಈ ತಿಂಗಳ ಒಂಬತ್ತು ಮತ್ತು ಹತ್ತನೇ ದಿನಗಳಲ್ಲಿನ ಉಪವಾಸ ಐಚ್ಚಿಕವೆಂಬ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಹಾಗೂ ಇದಕ್ಕಿರುವ ಪ್ರತಿಫಲ ಕೂಡಾ. ಕಳೆದ ಒಂದು ವರುಷದ ಪಾಪಗಳು ಮನ್ನಿಸಲ್ಪಡಲಾಗುವುದು ಹಾಗೂ ರಮಝಾನಿನ ನಂತರದ ಶ್ರೇಷ್ಠ ಉಪವಾಸಗಳಲ್ಲಿ ಇದೂ ಒಂದು ಎಂದು ಹೇಳಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕೇವಲ ಉಪವಾಸ ಆಚರಿಸುವುದರಿಂದ ಮಾತ್ರ ಇಂತಹ ಪುಣ್ಯ ಲಭಿಸಲು ಖಂಡಿತಾ ಸಾಧ್ಯವಿಲ್ಲ. ಏಕೆಂದರೆ ಇಸ್ಲಾಂ ಧರ್ಮ ಕೇವಲ ಪೂಜಾ ಕಾರ್ಯ ಗಳ ಹೆಸರಲ್ಲ. ಕೇವಲ ಆಚರಣಿ ಸಂಭ್ರಮ ಗಳ ಹೆಸರೂ ಅಲ್ಲ.ಬದಲಾಗಿ ಇಸ್ಲಾಂ ಅನ್ನುವುದು ಕ್ರಾಂತಿಯಾಗಿದೆ.

ಆದ್ದರಿಂದ ಪುಣ್ಯಗಳ ಲೆಕ್ಕ ಹಾಕಿ ಆರಾಧನೆ ಗಳಲ್ಲಿ ಮಾತ್ರ ತಲ್ಲೀನರಾಗುವುದಕ್ಕೆ ಯಾವುದೇ ಅರ್ಥವಿಲ್ಲ. ಹಾಗಿರುತ್ತಿದ್ದರೆ ಪ್ರವಾದಿ(ಸ) ಮಸ್ಜಿದುಲ್ ಹರಮ್‌ನಲ್ಲಿ ಕುಳಿತು ದಿಕ್ರ್ ತಸ್ಬೀಹ್‌ಗಳಲ್ಲಿ ನಿರತರಾಗಿ ಅನಾಯಾಸ ಸ್ವರ್ಗಕ್ಕೆ ಹೋಗಬಹುದಿತ್ತು. ಮಕ್ಕಾ ಬಿಟ್ಟು ಹೋಗುವ ಅವಶ್ಯಕತೆ ಬರುತ್ತಿರಲಿಲ್ಲ. ಇಲ್ಲಿ ತಿಳಿದಿರಬೇಕಾದ ವಿಚಾರವೇನೆಂದರೆ ಈ ಉಪವಾಸದ ಹಿನ್ನೆಲೆಯೇನು? ಮತ್ತು ಈ ಚರಿತ್ರೆ ನಮಗೆ ನೀಡುವ ಪಾಠ ಏನು? ಇದರಲ್ಲಿ ಸಮಕಾಲಕ್ಕೆ ಯಾವ ಸಂಬಂಧ ಇದೆ ಅನ್ನುವಂಥದ್ದು.

ಕುರ್‌ಆನಿನಲ್ಲಿ ಅನೇಕ ಪ್ರಾಣಿಗಳ ಹೆಸರು ಪ್ರಸ್ತಾಪವಾಗಿದೆ. ಆನೆ, ಒಂಟೆ, ಸಿಂಹ, ಕತ್ತೆ, ನಾಯಿ, ಮಂಗ ಹಾಗೂ ಹಂದಿಯ ಪರಾಮರ್ಶೆ ಬಂದಿದೆ. ಇವು ನಾಲ್ಕು ಪ್ರಾಣಿಗಳು ಇಸ್ರಾಯೀಲ್‌ರ ಚರಿತ್ರೆಗೆ ಸಂಬಂಧಿಸಿದ ಉದಾಹರಣೆಗಳಿಗಾಗಿ ಉಪಯೋಗಿಸಿದಂತಹ ಪ್ರಾಣಿಗಳು. ಅದೇನಂದರೆ ಮೂಸಾ(ಅ)ವರರ ಜನತೆಗೆ ಅನೇಕ ಅನೇಕ ಅನುಗ್ರಹಗಳನ್ನು ನೀಡಲಾಗುತ್ತದೆ. ಆದರೆ ಆ ಜನತೆ ನೀಚವಾದ ಗುಲಾಮತನವನ್ನು ಬಯಸಿ ಮೂಸಾ(ಅ)ರಿಗೆ ನಿನ್ನ ದೇವರಿಂದ ನಮಗೆ ಈರುಳ್ಳಿಯನ್ನು ಕೇಳು, ಹರಿವೆ ಸೌತೆಕಾಯಿಯನ್ನು ಕೇಳು ಏಕೆಂದರೆ ಫಿರ್‌ಔನಿನ ಗುಲಾಮರಾಗಿದ್ದಾಗ ತಿಂದಂತಹ ವಸ್ತುಗಳು ಅಂದ್ರೆ ಅವರು ಗುಲಾಮಗಿರಿತನವನ್ನು ಬಯಸಿದರು. ಪೌಷ್ಟಿಕವಾದಂತಹ ಮನ್ನಾ-ಸಲ್ವ ದಿಂದ ಅವರು ಸಂತೃಪ್ತರಾಗುವುದಿಲ್ಲ. ಮಾತ್ರವಲ್ಲ ಪವಿತ್ರ ವಾದ ತೌರಾತ್ ಗ್ರಂಥ ಸಾರಾಂಶವನ್ನು ಅರಿಯಲು ಸನ್ನದ್ಧರಾಗದಾಗ, ಕುರ್‌ಆನ್ ಆ ಜನತೆಮನ್ನು ಭಾರಹೊರುವ ಕತ್ತೆಗೆ ಹೋಲಿಸಿತು.. ಆ ಕತ್ತೆಗೆ ತಾನು ಹೊರುವ ಗ್ರಂಥದ ಬೆಲೆ ತಿಳಿದಿಲ್ಲದಂತೆ ಮುಸ್ಲಿಂ ಸಮುದಾಯ ಆಗಬಾರದು. ನಾವು ಆಚರಿಸುವ ಈ ಉಪವಾಸದ ಮರ್ಮವೇನೆಂದು ತಿಳಿಯದ ಕತ್ತೆಯಂತಹ ಉಪವಾಸಿಗಳು ನಾವಾಗಬಾರದು.

ಅದೇ ರೀತಿ ನಾಯಿಗೆ ಹೋಲಿಸಲಾಯಿತು‌. ಅದೇನಂದರೆ ನಾಯಿಗೆ ಎಸೆದ ಕಲ್ಲನ್ನು ಸಹ ಅದು ನನಗೆ ಎಸೆದ ಆಹಾರವೆಂಬ ಆಸೆಯಿಂದ ಮೂಸಿ ನೋಡುವಂತಹ ನಾಯಿಯ ತರ ಶೋಷಣೆಗೆ ಒಳಗಾಗುತ್ತಿದ್ದರೂ ನಮ್ಮ ಜೇಬು ತುಂಬುತ್ತಿದೆ ಎಂದು ಆಶಿಸುವ ನಾಯಿ ತರ ಅಥವಾ ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ ಕೈಯಲ್ಲಿರುವ ಗ್ರಂಥದ ಮಹಾನತೆ ತಿಳಿಯದಂತೆ ಮಂಗ ಮುಸಲ್ಮಾನ ನಾವಾಗಬಾರದು.

ಆದ್ದರಿಂದ ಈ ಮುಹರ್ರಮ್ ಕೊಡುವ ಸಂದೇಶವೇನು ಎಂದು ಪ್ರತಿಯೊಬ್ಬ ಉಪವಾಸಿಗನೂ ಅರಿಯಲು ಪ್ರಯತ್ನಿಸಿ ಅದರ ತಿರುಳನ್ನು ಅರಿತು ಈ ಪ್ರಸಕ್ತ ಕಾಲದಲ್ಲಿ ನನ್ನ ಹೊಣೆಗಾರಿಕೆ ಏನು ಎಂದು ಎಚ್ಚೆತ್ತುಕೊಳ್ಳಬೇಕು. ಆಗ ಮಾತ್ರ ಈ ಉಪವಾಸ ಅರ್ಥ ಪೂರ್ಣ ಮತ್ತು ಪುಣ್ಯದಾಯಕವಾಗಲು ಸಾಧ್ಯ.