ಸೌದಿ ಅರೇಬಿಯಾ: ಮಸೀದಿಗಳಲ್ಲಿ ತರಾವೀಹ್, ಖಿಯಾಮುಲ್ಲೈಲ್ ನಮಾಝ್‍ಗೆ ಅರ್ಧಗಂಟೆ ಮಾತ್ರ ಸಮಯ

0
513

ಸನ್ಮಾರ್ಗ ವಾರ್ತೆ

ಜಿದ್ದಾ: ಪವಿತ್ರ ರಮಝಾನ್ ತಿಂಗಳ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಎಲ್ಲಾ ಮಸೀದಿಗಳಲ್ಲಿ ತರಾವೀಹ್ ಮತ್ತು ಖಿಯಾಮುಲ್ಲೈಲ್ ನಮಾಝ್ ಗಳಿಗೆ ಗರಿಷ್ಠ 30 ನಿಮಿಷ ಮೀರಬಾರದೆಂದು ಸುತ್ತೋಲೆ ಹೊರಡಿಸಿ ಧಾರ್ಮಿಕ ಸಚಿವಾಲಯವು ಆದೇಶಿಸಿದೆ.

ಸಚಿವಾಲಯದ ಎಲ್ಲಾ ಅಧಿಕಾರಿಗಳು ಮಸೀದಿ ಇಮಾಮ್‍ಗಳಿಗೆ ಧಾರ್ಮಿಕ ಕಾರ್ಯ ಸಚಿವ ಡಾ. ಅಬ್ದುಲ್ ಲತೀಫ್ ಅಲ್ ಶೈಖ್ ರವಿವಾರ ಕಳುಹಿಸಿದ ಸುತ್ತೋಲೆಯಲ್ಲಿ ಈ ವಿವರವನ್ನು ನೀಡಲಾಗಿದೆ.

ಕೊರೋನಾ ಹರಡದಿರುವಂತೆ ಮುನ್ನೆಚ್ಚರಿಕೆಯ ಭಾಗವಾಗಿ ಈ ಕ್ರಮಗಳನ್ನು ಸೌದಿ ಆರೋಗ್ಯ ಸಚಿವಾಲಯ ತೆಗೆದುಕೊಂಡಿದೆ. ಸಚಿವಾಲಯದ ಅಧೀನದ ಸಮಿತಿಯ ಅಧ್ಯಯನದ ನಂತರ ಈ ತೀರ್ಮಾನಕ್ಕೆ ಬರಲಾಗಿದ್ದು ತರಾವೀಹ್, ಖಿಯಾಮುಲ್ಲೈಲ್ ನಮಾಝ್ ಇಶಾ ನಮಾಝ್ ಜೊತೆಗೆ ನಿರ್ವಹಿಸಬೇಕೆಂದು ನಿರ್ದೇಶಿಸಲಾಗಿದೆ.

ಜನರು ಮಸೀದಿಯಲ್ಲಿ ಹೆಚ್ಚು ಸಮಯ ಇದ್ದರೆ ಕೊರೋನ ಹರಡುವ ಸಾಧ್ಯತೆ ಹೆಚ್ಚಿದೆ. ಮಸೀದಿಯ ಸಮಯ ಕಡಿಮೆ ಮಾಡುವ ತೀರ್ಮಾನ ಕೊರೋನ ಬಾಧೆ ಕಡಿಮೆ ಮಾಡುವ ಉದ್ದೇಶದಿಂದ ಕೂಡಿದೆ. ಈಗಿನ ಪರಿಸ್ಥಿತಿಯಲ್ಲಿ ಇಂತಹ ತೀರ್ಮಾನ ತೆಗೆದುಕೊಳ್ಳಲಾಗಿದೆ. ಎಲ್ಲ ಮಸೀದಿಗಳಲ್ಲಿ ಪ್ರತಿರೋಧ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಮಸೀದಿಯಲ್ಲಿ ನಮಾಝ್‍ಗಾಗಿ ಹೋಗುವವರು ಮುಸಲ್ಲಾ (ಚಾಪೆಗಳನ್ನು) ತಾವೇ ಕೊಂಡು ಹೋಗಬೇಕು. ಮಾಸ್ಕ್ ಧರಿಸಿರಬೇಕು. ಶಾರೀರಿಕ ಅಂತರ ಪಾಲಿಸಬೇಕು ಮುಂತಾದ ನಿರ್ದೇಶನಗಳನ್ನು ಸಚಿವಾಲಯವು ನೀಡಿದೆ.