ಸ್ಕಾರ್ಫ್ ವಿವಾದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ವಿದ್ಯಾರ್ಥಿನಿಯರ ಖಾಸಗಿ ಮಾಹಿತಿ ಸೋರಿಕೆ: ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ ಎಸ್ ಐ ಓ ಮನವಿ

0
203

ಸನ್ಮಾರ್ಗ ವಾರ್ತೆ

ಉಡುಪಿ: ವಿದ್ಯಾರ್ಥಿಗಳ ಖಾಸಗಿ ಮಾಹಿತಿಯನ್ನೊಳಗೊಂಡ ಕಾಲೇಜಿನ ದತ್ತಾಂಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ದತ್ತಾಂಶ ಸೋರಿಕೆಗೆ ಕಾರಣರಾದ ಪ್ರತಿಯೊಬ್ಬರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್ ಐ ಓ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು, ಮಹಿಳಾ ಹಕ್ಕು ಆಯೋಗ, ಬೆಂಗಳೂರು, ಉಡುಪಿ ಜಿಲ್ಲಾಧಿಕಾರಿ ಹಾಗೂ ಉಡುಪಿಯ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರನ್ನು ಭೇಟಿಯಾಗಿ ದೂರು ನೀಡಲಾಯಿತು.

ಸೋರಿಕೆಯಾದ ದತ್ತಾಂಶದಲ್ಲಿ ವಿದ್ಯಾರ್ಥಿನಿಯರ ಖಾಸಗಿ ಮಾಹಿತಿಗಳಿದ್ದು, ಅದನ್ನು ಕೆಲವು ದುಷ್ಕರ್ಮಿಗಳು ದುರುಪಯೋಗ ಪಡಿಸಿಕೊಂಡು ಕಿರುಕುಳ ನೀಡುತ್ತಿರುವ ಕುರಿತು ವಿದ್ಯಾರ್ಥಿನಿಯರು ಈಗಾಗಲೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳ ಖಾಸಗಿ ಮಾಹಿತಿಯ ಗೌಪ್ಯತೆಯ ಕಾಯ್ದುಕೊಳ್ಳುವುದು ಆಯಾ ಕಾಲೇಜಿನ ಆದ್ಯ ಕರ್ತವ್ಯ. ಆದರೆ ಇಲ್ಲಿ ಕಾಲೇಜು ಸ್ಪಷ್ಟವಾಗಿ ನಿಯಮ ಉಲ್ಲಂಘನೆ ಮಾಡಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಎಸ್ ಐ ಓ ಉಡುಪಿ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ, ಜಿಲ್ಲಾ ಕಾರ್ಯದರ್ಶಿ ಡಾ. ಫಹೀಂ, ಎಸ್ ಐ‌ ಓ ಮಲ್ಪೆ ಶಾಖೆಯ ಅಧ್ಯಕ್ಷ ಅಯಾನ್ ಮಲ್ಪೆ ಉಪಸ್ಥಿತರಿದ್ದರು.