ರೈತರ ಬೇಡಿಕೆ ಈಡೇರಿಕೆ, ಸ್ಥಳೀಯ ಸಂಸ್ಥೆಗಳ ಅನುದಾನ ಹೆಚ್ಚಳ ಸೇರಿದಂತೆ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 10 ಸಾವಿರ ಕೋಟಿ ರೂ. ಬಜೆಟ್ ಮೀಸಲಾತಿಗೆ SDPI ಆಗ್ರಹ

0
416

ಸನ್ಮಾರ್ಗ ವಾರ್ತೆ

ಬೆಂಗಳೂರು: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್.ಡಿ.ಪಿ.ಐ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿಯ ಎರಡು ದಿನದ ಸಭೆಯು ಬೆಂಗಳೂರಿನ ರಾಜ್ಯ ಕಚೇರಿಯ ಸಭಾಂಗಣದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.

1. ರೈತರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು

ಹಲವು ತಿಂಗಳುಗಳಿಂದ ದೇಶದಾದ್ಯಂತ ರೈತರು ತಮ್ಮ ಸಂಕಷ್ಟಗಳ ಬಗ್ಗೆ ಹೋರಾಡುತ್ತಿದ್ದಾರೆ. ಈ ಹೋರಾಟಗಳಿಗೆ ಸರಕಾರಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ದೇಶದ ಬೆನ್ನೆಲುಬು ರೈತರು. ಒಟ್ಟು ಆರ್ಥಿಕತೆಯು ಕೃಷಿಯೊಂದಿಗೆ ಅವಲಂಬಿತವಾಗಿದೆ. ಮುಂದಿನ ತಲೆಮಾರಿಗೆ ಆಹಾರದ ಕೊರತೆಯಾಗದಿರಲು ಕೃಷಿ ಭೂಮಿಗಳನ್ನು ಹೆಚ್ಚಿಸಬೇಕು. ಸರ್ವಪಕ್ಷಗಳ ಸಲಹೆ ಪಡೆದು ಕೂಡಲೇ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.

2. ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಅನುದಾನ ಹೆಚ್ಚಿಸಬೇಕು

ರಾಜ್ಯದ ಮಹಾನಗರ ಪಾಲಿಕೆ, ಮುನ್ಸಿಪಾಲಿಟಿ ಹಾಗೂ ಜಿಲ್ಲಾ, ತಾಲೂಕು, ಪಟ್ಟಣ ಮತ್ತು ಗ್ರಾಮ ಪಂಚಾಯಿತಿಗಳಿಗೆ ರಾಜ್ಯ ಸರ್ಕಾರದ ನೇರ ಅನುದಾನ ಹೆಚ್ಚಿಸಬೇಕು. ಸ್ಥಳೀಯ ಸರ್ಕಾರಗಳಿಗೆ ಹೆಚ್ಚು ಅನುದಾನ ನಿಧಿ ನೀಡಿದರೆ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ. ಗಾಂಧೀಜಿ ಮತ್ತು ಅಬ್ದುಲ್ ನಜೀರ್ ಸಾಬ್‌ರವರ ಕಲ್ಪನೆಯ ಸ್ಥಳೀಯ ಸಂಸ್ಥೆಗಳು ಅನುಷ್ಠಾನವಾದಾಗ ಮಾತ್ರ ದೇಶ ಸರ್ವಾಂಗೀಣ ಪ್ರಗತಿ ಸಾಧಿಸಬಹುದು. ಆದ್ದರಿಂದ ಸರಕಾರ ಶೀಘ್ರವೇ ತೀರ್ಮಾನ ಕೈಗೊಳ್ಳಬೇ ಕೆಂದು ಸಭೆಯು ಆಗ್ರಹಿಸಿತು.

3.ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ 10 ಸಾವಿರ ಕೋಟಿ ಮೀಸಲಿಡಬೇಕು

ರಾಜ್ಯ ಸರ್ಕಾರ 2021-22ರ ಬಜೆಟ್ ಮಂಡಿಸಲು ತಯಾರಿನಡೆಸುತ್ತಿದೆ. ಒಂದು ಕೋಟಿಗೂ ಹೆಚ್ಚಿರುವ ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕಾಗಿ ಈ ಬಾರಿಯ ಬಜೆಟ್‌ನಲ್ಲಿ ಕನಿಷ್ಠ 10 ಸಾವಿರ ಕೋಟಿಯನ್ನು ಮೀಸಲಿಡಬೇಕು. ಮುಸ್ಲಿಂ, ಕ್ರೈಸ್ತ, ಬುದ್ಧ, ಜೈನ, ಪಾರ್ಸಿ ಹಾಗೂ ಸಿಖ್ ಸಮುದಾಯಗಳು ಸೇರಿ ಅಲ್ಪಸಂಖ್ಯಾತ ಇಲಾಖೆಯನ್ನು ಮಾಡಲಾಗಿದೆ. ಈ ಸಮುದಾಯಗಳಿಗೆ ಶಿಕ್ಷಣ, ಸ್ವಉದ್ಯೋಗ, ಕುಶಲಕರ್ಮ, ಆರೋಗ್ಯ, ವಸತಿ ಮತ್ತಿತರ ಹಲವಾರು ಸಮಸ್ಯೆಗಳಿಗೆ ಪ್ರತ್ಯೇಕ ಅನುದಾನ ಅಗತ್ಯವಿದೆ. ಕಳೆದ ಮೂರು ಬಜೆಟ್‌ಗಳಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅನುದಾನವನ್ನು ನಿರಂತರವಾಗಿ ಕಡಿತಗೊಳಿಸಲಾಗುತ್ತಿರುವುದು ಸರಿಯಲ್ಲ. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ತೀರ ಹಿಂದುಳಿದಿರುವ ಅಲ್ಪಸಂಖ್ಯಾತರ ಸಮುದಾಯಗಳಲ್ಲಿ ಕೆಲವು ನಿರ್ದಿಷ್ಟ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಅನುದಾನ ಅಗತ್ಯವಾಗಿದೆ ಎಂದು ಎಸ್.ಡಿ.ಪಿ.ಐ ಆಗ್ರಹಿಸುತ್ತದೆ.

ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಅಡ್ವೊಕೇಟ್ ಅಬ್ದುಲ್ ಮಜೀದ್ ಖಾನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಪ್ಸರ್ ಕೊಡ್ಲಿಪೆಟ್ ಹಾಗೂ ಮುಜಾಹಿದ್ ಪಾಷಾ, ರಾಜ್ಯ ಕಾರ್ಯದರ್ಶಿಗಳಾದ ಅಬ್ರಾರ್ ಅಹ್ಮದ್ ಚಾಮರಾಜನಗರ ಹಾಗೂ ಅಶ್ರಫ್ ಮಾಚಾರ್, ಕಾರ್ಯದರ್ಶಿ ಮಂಡಳಿ ಸದಸ್ಯರಾದ ಅಕ್ರಂ ಹಸನ್ ಹಾಗೂ ಎ.ಆರ್ ಪಟೇಲ್ ಮೊದಲಾದವರು ಉಪಸ್ಥಿತರಿದ್ದರು.