ಶಾರ್ಜಾ ಬೃಹತ್ ಪುಸ್ತಕ ಮೇಳ: UAEಯಲ್ಲಿ ಕನ್ನಡದ ಕಂಪನ್ನು ಪಸರಿಸಿದ ‘ಶಾಂತಿ ಪ್ರಕಾಶನ’

0
228

ಆಯಿಷಾ ಅಮನ್ ಅನಮ್‌ ದುಬಾಯಿ

ಯುಎಇಯ ಶಾರ್ಜಾದಲ್ಲಿ ನೆರವೇರುತ್ತಿರುವ ವಿಶ್ವ ವಿಖ್ಯಾತ ಪುಸ್ತಕ ಮೇಳದಲ್ಲಿ ಕನ್ನಡಿಗರ ಆಕರ್ಷಣೆಯಾಗಿರುವ “ಶಾಂತಿ ಪ್ರಕಾಶನ” ದ ಮಳಿಗೆಗೆ ನಿನ್ನೆ 4-11-2022 ಶುಕ್ರವಾರ ಪತಿ, ಮಕ್ಕಳು ಸಹಿತ ಬೇಟಿ ನೀಡಿದೆ. ಅಲ್ಲಿದ್ದಷ್ಟು ಹೊತ್ತು ತವರ ನೆಲದಲ್ಲಿ ಇದ್ದು ಆನಂದಿಸಿದಂತೆ ಅನಿಸಿತು.

ನನಗೆ ಚಿಕ್ಕಂದಿನಿಂದಲೂ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವ ಗೀಳು. ನನ್ನಮ್ಮ, ಅಪ್ಪ, ಅಣ್ಣಂದಿರು ಕೂಡ ಹಾಗೇನೇ. ಸುಮಾರು 28ವರ್ಷಗಳಿಂದ ಸನ್ಮಾರ್ಗ ಪತ್ರಿಕೆಯ ನಿಯಮಿತ ಓದುಗರಾಗಿದ್ದೇವೆ. ಆನಂತರ ಸನ್ಮಾರ್ಗದ ಜೊತೆಗೆ ಅನುಪಮಾಳೂ ಬಂದು ಸೇರಿದಳು. ಆ ದಿನಗಳಲ್ಲಿ ಸಕ್ಕರೆ, ಚಾ ಹುಡಿ ಕಟ್ಟಿತಂದ ತುಂಡು ಪತ್ರಿಕೆಯನ್ನೂ ಬಿಡದೆ ಓದುವ ತವಕ ನಮಗಿತ್ತು. ನಾನು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ದಿನಗಳವು.

ಸನ್ಮಾರ್ಗ ಪತ್ರಿಕೆಯಲ್ಲಿ ನಿಯಮಿತವಾಗಿ ಪ್ರಕಟವಾಗುತ್ತಿದ್ದ ಕವಿ ಅಲ್ಲಾಮಾ ಇಕ್ಬಾಲಾರ ಕವಿತೆಗಳು, ಅಬೂಲಾಲ ಮೌದೂದಿ ಅಂಕಣ, ಜೈನಬುಲ್ ಗಜ್ಜಾಲಿಯವರ ಜೈಲು ವಾಸ, ಇದನ್ನೆಲ್ಲಾ ಇಷ್ಟಪಟ್ಟು ಓದುತ್ತಿದ್ದೆವು. ನನ್ನಮ್ಮ ಒರಳು ಕಲ್ಲಿನಲ್ಲಿ ಮಸಾಲೆ ಅರೆಯುವಾಗ ಅಲ್ಲಾಮಾ ಇಕ್ಬಾಲರ ‘ಏಕ್ ದಿನ್ ರಸೂಲ್ ಎ ಪಾಕ್ ನೇ ಅಸ್ ಹಾಬ್ ಸೆ ಕಹಾ… ಕವನವನ್ನು ಬಾಯಿಪಾಠ ಗುಣುಗುತ್ತಿದಳು. ಹಾಗೆ ಅದು ನನಗೂ ಬಾಯಿಪಾಠವಾಗಿತ್ತು. ‘ತಾಹಾ ಪಿತಾ’ ಸುಳ್ಯರವರ “ಮಗಳಲ್ಲದಿದ್ದರೂ ನೀ ನನ್ನ ಮಗಳೇ”.., ಅಪ್ರತಿಮ ಅಸಮಾನ ಅಧ್ವರ್ಯ, ಸರ್ವತ್ರ ವ್ಯಾಪಿಸಿಹ ಅಲ್ಲಾಹನೇ.. ಕವಿತೆ ಈಗಲೂ ನನಗೆ ನೆನಪಿದೆ. SSLC ಮತ್ತು PUC ಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಕ್ಕೆ ನನಗೆ ಜಮೀಯತುಲ್ ಫಲಹ್ ಸಂಘಟನೆಯವರು ಸನ್ಮಾನಿಸಿ, ಪ್ರೋತ್ಸಾಹ ಧನದ ಜೊತೆಗೆ ಪವಿತ್ರ ಕುರ್‌ಆನ್ ಗಿಫ್ಟ್ ಕೊಟ್ಟಿದ್ದರು.

ನಿನ್ನೆ ಇಲ್ಲಿ ಓದಲಿಕ್ಕಾಗಿ ಪುನಃ ‘ಪವಿತ್ರ ಕುರ್‌ಆನ್’ ಮತ್ತು ‘ಜೀವನದ ಶಿಷ್ಟಚಾರ’ವನ್ನು ಕೊಂಡಿದ್ದೇನೆ. ಕುಕ್ಕಿಲಾರವರ ಅವಳನ್ನೂ ಎತ್ತಿಕೊಂಡಿದ್ದೇನೆ. ಅಬ್ದುಸ್ಸಲಾಂ ಪುತ್ತಿಗೆಯವರ ಕನ್ನಡದಲ್ಲಿ ಕುರ್‌ಆನ್ ಅನುವಾದ ಕೃತಿಯನ್ನು ಉಡುಗೊರೆಯಾಗಿ ನೀಡಿದರು.

ನಿನ್ನೆ ಪುಸ್ತಕ ಮೇಳದಲ್ಲಿ ತುಂಬಾ ಜನಸಂದಣಿ ಇತ್ತು. ಅರಬ್ ಮತ್ತು ಬೇರೆ ರಾಷ್ಟ್ರಗಳ ಪುಸ್ತಕ ಮಳಿಗೆಗಳಲ್ಲಿ ಜನಸಂದಣಿ ಹೆಚ್ಚು ಇತ್ತು. ಭಾರತದ ಬೇರೆ ಭಾಷೆಗಳ ಪುಸ್ತಕ ಮಳಿಗೆಗಳೂ ಇದ್ದವು. ಮೊಬೈಲ್ ಬಂದ ಮೇಲೆ ಜನರ ಪುಸ್ತಕ, ಪತ್ರಿಕೆ ಓದುವ ಹವ್ಯಾಸ ಕಡಿಮೆ ಯಾಗಿದೆ. ಆದರೂ ಪುಸ್ತಕ ಪ್ರಿಯರು ಇನ್ನೂ ಇದ್ದಾರೆ.

ನಮ್ಮನ್ನು ಪ್ರೀತಿ ಪೂರ್ವಕ ಬರಮಾಡಿಕೊಂಡ ಶಾಂತಿ ಪ್ರಕಾಶನ ಮಳಿಗೆಯ ನಿರ್ವಾಹಕರು ನವೆಂಬರ್ 13ರಂದು ನೆರವೇರುವ ಪುಸ್ತಕ ಮೇಳ ಸಮಾರೋಪ ಸಮಾರಂಭಕ್ಕೂ ನಮ್ಮನ್ನು ಆಹ್ವಾನಿಸಿದರು. ಇನ್ ಶಾ ಅಲ್ಲಾಹ್.. ಸಾದ್ಯವಾದರೆ ಹೋಗಬೇಕು. ಕನ್ನಡದ ಕಂಪನ್ನು ಯುಎಇಯ ನೆಲದಲ್ಲಿ ಪಸರಿಸಿದ ಶಾಂತಿ ಪ್ರಕಾಶನಕ್ಕೆ ತುಂಬು ಹೃದಯದ ಅಭಿನಂದನೆಗಳು.