ಸೌದಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಖದೀಜಾ ನಿಸಾ‌’ಗೆ ಚಿನ್ನ: 2.20 ಕೋಟಿ ರೂ. ಬಹುಮಾನ ಪಡೆದ ಅನಿವಾಸಿ ಭಾರತೀಯ ಪೋರಿ

0
209

ಸನ್ಮಾರ್ಗ ವಾರ್ತೆ

ರಿಯಾದ್: ಸೌದಿ ಅರೇಬಿಯದ ಮೊತ್ತಮೊದಲ ರಾಷ್ಟ್ರೀಯ ಗೇಮ್ಸ್‌ನಲ್ಲಿ ಕೇರಳದ ಕೋಝಿಕ್ಕೋಡ್ ಮೂಲದ, ರಿಯಾದ್ ಮಿಡ್ಲ ಈಸ್ಟ್ ಇಂಟರ್ ನ್ಯಾಶನಲ್ ಸ್ಕೂಲಿನ ಹನ್ನೊಂದನೆ ತರಗತಿ ವಿದ್ಯಾರ್ಥಿನಿ ಖದೀಜಾ ನಿಸಾ ಬ್ಯಾಡ್ಮಿಂಟನ್ ವೈಯಕ್ತಿಕ ಚಾಂಪಿಯನ್‌ಶಿಪ್‍ನಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದಾರೆ.

ಸೌದಿಯಲ್ಲಿ ಜನಿಸಿದ ವಿದೇಶಿಯರಿಗೂ ಗೇಮ್ಸ್‌ನಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿತ್ತು. ‘ಗಲ್ಫ್ ಮಾಧ್ಯಮ’ ಖದೀಜ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸುವ ಸುದ್ದಿಯನ್ನು ಮೊತ್ತಮೊದಲು ವರದಿ ಮಾಡಿತ್ತು.

ಅಕ್ಟೋಬರ್ 28 ರಂದು ರಿಯಾದ್‌ನಲ್ಲಿ ಆರಂಭವಾದ ಸೌದಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನವೆಂಬರ್ 1 ರಿಂದ ಬ್ಯಾಡ್ಮಿಂಟನ್ ಸ್ಪರ್ಧೆಗಳು ಪ್ರಾರಂಭವಾಗಿದ್ದವು. ಆರಂಭದಲ್ಲಿ ಸ್ಪರ್ಧೆಯು ವಿವಿಧ ಕ್ಲಬ್‌ಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಪೂಲ್‌ಗಳ ನಡುವೆ ಇತ್ತು. ಇದನ್ನು ಸುಲಭವಾಗಿ ಗೆದ್ದ ಖದೀಜಾ ನಿಸಾ ಬುಧವಾರ ಸಂಜೆ ನಡೆದ ಕ್ವಾರ್ಟರ್ ಫೈನಲ್ ಹಾಗೂ ಗುರುವಾರ ಬೆಳಗ್ಗೆ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಜಯಗಳಿಸಿದರು.

ಗುರುವಾರ ಸಂಜೆ 6:00 ಗಂಟೆಗೆ ಆರಂಭವಾದ ಫೈನಲ್ ಪಂದ್ಯದಲ್ಲಿ ಅಲ್-ನಜ್ ಕ್ಲಬ್ ಪರವಾಗಿ ಸ್ಪರ್ಧಿಸಿದ್ದ ಖದೀಜಾ ಅವರು ಅಲ್ ಹಿಲಾಲ್ ಕ್ಲಬ್ ಪ್ರತಿನಿಧಿಸಿದ್ದ ಹಲಾಲ್ ಅಲ್-ಮುದರಿಯ್ಯ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 21-11, 21-10 ಗೆಲುವಿನ ಸ್ಕೋರ್‌ನೊಂದಿಗೆ ಗೆಲುವು ಸಾಧಿಸಿದರು.

ಸಭಿಕರ ಜಯಘೋಷದ ಸ್ವಾಗತದೊಂದಿಗೆ ಖದೀಜಾ ನಿಸಾ ಸೌದಿ ಅರೇಬಿಯಾ ಇತಿಹಾಸಕ್ಕೆ ಕಾಲಿಟ್ಟಿದ್ದಾರೆ. ಖದೀಜಾ ನಿಸಾ ಅವರು ಸ್ಪರ್ಧಿಸಿದ ಎಲ್ಲಾ ಆಟಗಳಲ್ಲಿ ತನ್ನ ಎದುರಾಳಿಗಳನ್ನು ಸೋಲಿಸುವ ಮೂಲಕ 10 ಲಕ್ಷ ರಿಯಾಲ್ (ಸುಮಾರು 2 ಕೋಟಿ 20 ಲಕ್ಷ ರೂ.) ಬಹುಮಾನವನ್ನು ಗೆದ್ದಿದ್ದಾರೆ.

ರಿಯಾದ್‌ನಲ್ಲಿ ಕೆಲಸ ಮಾಡುತ್ತಿರುವ ಕೊಡುವಳ್ಳಿ ಕೂಡ್ತಿಂಕಲ್ ಲತೀಫ್ ಕೊಟ್ಟೂರ್ ಮತ್ತು ಶಾನಿದಾ ದಂಪತಿಯ ಮೂರನೇ ಪುತ್ರಿ. ಎರಡೂವರೆ ತಿಂಗಳ ಹಿಂದೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸೌದಿ ಹಾಗೂ ವಿದೇಶಿ ಕ್ರೀಡಾಳುಗಳನ್ನು ಎದುರಿಸುವ ಮೂಲಕ ಖದೀಜಾ ನಿಸಾ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪ್ರವೇಶಿಸಿದ್ದು ವಿಶೇಷ.