ಶ್ರೀ ಶಿವಕುಮಾರ ಸ್ವಾಮೀಜಿ ನಿಧನ: ನಾಳೆ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ಅಧೀಕೃತ ರಜೆ

0
728

ತುಮಕೂರು, ಜ.21:ಅನ್ನ ಮತ್ತು ಅಕ್ಷರ ದಾಸರೆನ್ನಿಸಿಕೊಂಡ ಕರ್ನಾಟಕ ರತ್ನ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳು(ವ.111) ಇಂದು ಸೋಮವಾರ ಸಿದ್ಧಗಂಗಾ ಮಠದಲ್ಲಿ ಬೆಳಗ್ಗೆ ಇಹಲೋಕ ತ್ಯಜಿಸಿದರು.

ಶ್ರೀಗಳ ನಿಧನದಿಂದ ಧಾರ್ಮಿಕ ಕ್ಷೇತ್ರಕ್ಕೆ ಭರಿಸಲಾರದ ನಷ್ಟ ಉಂಟಾಗಿದೆ ಎಂದು ಮುಖ್ಯ ಮಂತ್ರಿ ಎಚ್ ಡಿ ಕುಮಾರ್ ಸ್ವಾಮಿ ನುಡಿದರಲ್ಲದೇ ನಾಳೆ ರಾಜ್ಯದಾದ್ಯಂತ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಹಾಗೂ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ ಎಂದರು.

ಇದಲ್ಲದೇ, ಕರ್ನಾಟಕ ಸರ್ಕಾರವು ಅಧೀಕೃತವಾಗಿ (21.1.2019 ರಿಂದ 23.1.2019 ರ ವರೆಗೆ) ಮೂರು ದಿನಗಳ ಕಾಲ ಶೋಕಾಚರಣೆಗೆ ಕರೆ ನೀಡಿದ್ದು ಈ ದಿನಗಳಲ್ಲಿ ಯಾವುದೇ ಅಧೀಕೃತ ಮನೋರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ಸೂಚಿಸಿದೆ. ಹಾಗೂ ನಿಯತವಾಗಿ ರಾಷ್ಟ್ರಧ್ವಜವನ್ನು ಹಾರಿಸಲ್ಪಡುವ ಸರ್ಕಾರದ ಎಲ್ಲ ಕಟ್ಟಡಗಳ ಮೇಲೆ, ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುವುದಾಗಿ ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.

ದಿವಂಗತ ಶ್ರೀ ಶಿವಕುಮಾರ ಶ್ರೀಗಳ ಪಾರ್ಥಿವ ಶರೀರದ ಕ್ರೀಯಾ ಸಮಾಧಿಯು ನಾಳೆ (ಜ.22) ಸಂಜೆ 4:30 ಕ್ಕೆ ನಡೆಯಲಿದೆ.