ಮಕ್ಕಳಿಗೆ ತರಕಾರಿ ಬೀಜಗಳನ್ನು ಕೊಟ್ಟು ಕೃಷಿಗೆ ಹಚ್ಚುವ ವಿನೂತನ ಅಭಿಯಾನ: ಎಸ್ ಐ ಓನಿಂದ ಚಾಲನೆ

0
359

ಸನ್ಮಾರ್ಗ ವಾರ್ತೆ

ಮಂಗಳೂರು, ಜುಲೈ- 30: ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಆಯೋಜಿಸಿರುವ ಹಸಿರು ಕರಾವಳಿ ಜಿಲ್ಲಾ ಮಟ್ಟದ ಪರಿಸರ ಜಾಗೃತಿ ಅಭಿಯಾನದ ಭಾಗವಾಗಿ ಮಕ್ಕಳ ತೋಟ ಎಂಬ ವಿನೂತನ ಕಾರ್ಯಕ್ರಮಕ್ಕೆ ಎಸ್ ಐ ಓ ಜಿಲ್ಲಾ ಕಚೇರಿಯಲ್ಲಿ ಚಾಲನೆ ನೀಡಲಾಯಿತು. ಕೊರೋನ ಹಿನ್ನೆಲೆಯಲ್ಲಿ ಮಕ್ಕಳು ಮನೆಯಲ್ಲಿರುವುದರಿಂದ ಹಾಗು ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಲು ವಿದ್ಯಾರ್ಥಿಗಳಿಗೆ ಉಚಿತ ತರಕಾರಿ ಬೀಜಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಸಮಾಜ ಸೇವಕ ಹಾಗು ಜಮಾಅತೇ ಇಸ್ಲಾಮಿ ಹಿಂದ್ ಇದರ ಸದಸ್ಯರಾಗಿರುವ ಜನಾಬ್ ಅಬ್ದುಲ್ ಕರೀಂ ಬೆಂಗ್ರೆ ಕಸ್ಬಾ ಮಾತನಾಡಿ “ಮಕ್ಕಳು ಪರಿಸರದ ಬಗ್ಗೆ ಕಾಳಜಿ ಉಳ್ಳವರಾಗಬೇಕು. ನಮಗೆ ಸಾಧ್ಯವಾಗುವ ರೀತಿಯಲ್ಲಿ ಕೃಷಿಯಲ್ಲಿ ಆಸಕ್ತಿಯನ್ನು ಉಂಟು ಮಾಡಬೇಕು. ತಾಯಿ ಮಗುವನ್ನು ಪೋಷಿಸಿ ಬೆಳೆಸುವಂತೆ ನಾವು ನೆಟ್ಟು ಬೆಳೆಸಿದ ಬೀಜಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಅದು ಒಂದು ಪುಣ್ಯ ಕಾರ್ಯವಾಗಿದೆ” ಎಂದರು.

ಇನ್ನೋರ್ವ ಅತಿಥಿ ಸನ್ಮಾರ್ಗ ವಾರ ಪತ್ರಿಕೆಯ ಸಂಪಾದಕರಾಗಿರುವ ಏ ಕೆ ಕುಕ್ಕಿಲ ರವರು ಮಕ್ಕಳಿಗೆ ಉಚಿತ ಬೀಜಗಳನ್ನು ವಿತರಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು. ಎಸ್ ಐ ಓ ಜಿಲ್ಲಾ ಅಧ್ಯಕ್ಷರಾದ ಅಶೀರುದ್ದೀನ್ ಅಲಿಯಾ, ಮಂಜನಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಎಸ್ ಐ ಓ ಪಕ್ಕಲಡ್ಕ ಅಧ್ಯಕ್ಷರಾಗಿರುವ ಝಮೀರ್ ಕಾರ್ಯಕ್ರಮ ನಿರೂಪಿಸಿದರು, ನಿಹಾಲ್ ಕುದ್ರೋಳಿ ಧನ್ಯವಾದವಿತ್ತರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.