ಮಾನ್ವಿ: ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಂತೆ ಎಸ್ ಐ ಓ ಆಗ್ರಹ

0
566

ಸನ್ಮಾರ್ಗ ವಾರ್ತೆ

ಮಾನ್ವಿ(ರಾಯಚೂರು): ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ರಾಜ್ಯದ 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ 14,183 ಉಪನ್ಯಾಸಕರು ಕಳೆದ ಕೆಲವು ದಿನಗಳಿಂದ ಭೋದನಾ ತರಗತಿಗಳನ್ನು ತೊರೆದು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಶಿಕ್ಷಣವು ಸಂವಿಧಾನದ ಮೂಲಭೂತ ಹಕ್ಕಾಗಿದೆ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯವಾಗಿದೆ, ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 1,690 ಉಪನ್ಯಾಸಕರ ಹುದ್ದೆಗಳು ಖಾಲಿ ಇದ್ದು ವಿದ್ಯಾರ್ಥಿಗಳಿಗೆ ಹೇಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿದೆ ಎಂಬುದನ್ನು ಸರ್ಕಾರ ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಸ್ ಐ ಓ ಮಾನ್ವಿ ವತಿಯಿಂದ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ರವರ ಮೂಲಕ ಮನವಿ ಸಲ್ಲಿಸಲಾಯಿತು.

ಅನೇಕ ವರ್ಷಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಕನಿಷ್ಠ ಶೇ.55ರಷ್ಟು ಅಂಕಗಳನ್ನು ಪಡೆದಿದ್ದು, ಎನ್ಇಟಿ/ಎಸ್ಎಲ್ಇಟಿ ಅಥವಾ ಪಿ.ಎಚ್ ಡಿ ಪಡೆದುಕೊಂಡಿರುವ ಅತಿಥಿ ಉಪನ್ಯಾಸಕರಿಗೆ ರೂ.13,000/- ಹಾಗೂ ಸ್ನಾತಕೋತ್ತರ/ಎಂ.ಫಿಲ್ ಪದವೀಧರ ಅತಿಥಿ ಉಪನ್ಯಾಸಕರಿಗೆ ರೂ.11,000/- ಗಳ ಮಾಸಿಕ ಗೌರವ ಸಂಭಾವನೆಯನ್ನು ನೀಡಲಾಗುತ್ತಿದೆ, ಈ ಅಲ್ಪವೇತನ ಪಡೆದುಕೊಂಡು ಇಂದಿನ ಹಣದುಬ್ಬರದ ದಿನಮಾನಗಳಲ್ಲಿ ಅತಿಥಿ ಉಪನ್ಯಾಸಕರು ಸಂಸಾರವನ್ನು ನಡೆಸಲು ತೀರಾ ಕಷ್ಟವನ್ನು ಎದುರಿಸುತ್ತಿದ್ದಾರೆ. ಉಪನ್ಯಾಸಕರಿಗೆ ಗೌರವಧನ ಹೆಚ್ಚಳದ ಜೊತೆಗೆ ಉದ್ಯೋಗ ಭದ್ರತೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣವೇ ಉಪನ್ಯಾಸಕರ ಅಳಲಿಗೆ ಸ್ಪಂದಿಸಬೇಕಾಗಿದೆ ಎಂದು ಎಸ್ ಐ ಓ ಆಗ್ರಹಿಸಿದೆ.

ಸರ್ಕಾರಿ ಕಾಲೇಜುಗಳಲ್ಲಿನ ಕಾರ್ಯಾಭಾರಕ್ಕೆ ಅನುಗುಣವಾಗಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದೇ ಹಿಂದೆಂಟು ಹಾಕುತ್ತಿರುವ ಸರ್ಕಾರ, ಕನಿಷ್ಠ ಪಕ್ಷ ಆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ನೆಮ್ಮದಿಯ ಜೀವನ ಕಟ್ಟಿಕೊಳ್ಳುವಷ್ಟಾದರೂ ಆಸರೆಯಾಗಬೇಕಿತ್ತು, ಆದಾವುದು ಆಗದೆ ಇರುವುದರಿಂದ ಉಪನ್ಯಾಸಕರು ಅನಿವಾರ್ಯವಾಗಿ ಪ್ರತಿಭಟನೆಗೆ ಇಳಿದಿದ್ದಾರೆ.

ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಭೋದನಾ ತರಗತಿಗಳನ್ನು ತೊರೆದು ಪ್ರತಿಭಟಿಸುತ್ತಿದ್ದಾರೆ, ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಬಹಳಷ್ಟು ನಷ್ಟವಾಗಲಿದೆ, ಪಾಠ-ಕಲಿಕೆಯು ವಿಳಂಭವಾದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯಕ್ರಮದ ಮೇಲೆ ಪ್ರಭಾವ ಬೀರುವ ಸಂಭವವಿದೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನಕ್ಕೆ ಅನಾನುಕೂಲವಾಗಲಿದೆ, ಇದಲ್ಲದೆ ರಾಜ್ಯದ ಅನೇಕ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆಯೇ ಅವಲಂಬನೆಯಾಗಿವೆ, ಆದ್ದರಿಂದ ಕರ್ನಾಟಕ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಪರಿಶೀಲಿಸಿ ಶೀಘ್ರದಲ್ಲಿಯೇ ಈಡೇರಿಸಬೇಕೆಂದು ಎಸ್.ಐ.ಓ. ಮಾನ್ವಿ ತಿಳಿಸಿದೆ.

ಈ ಸಂದರ್ಭದಲ್ಲಿ ಎಸ್.ಐ.ಓ. ಮಾನ್ವಿ ಅಧ್ಯಕ್ಷ ಸಮೀರ್ ಪಾಷಾ, ಕಾರ್ಯದರ್ಶಿ ಮುಹಮ್ಮದ್ ಯಾಸೀನ್, ಮುಹಮ್ಮದ್ ಇಬ್ರಾಹಿಂ, ಜುಬೇರ್ ಖಾನ್, ಮುಹಮ್ಮದ್ ಅಶ್ಫಾಕ್, ಅತೀಕ್, ಜಿಯಾರುಲ್ ಇಸ್ಲಾಂ,ಅಬ್ದುಲ್ ಅಜೀಜ್, ಜಿಶಾನ್ ಆಖಿಲ್ ಸಿದ್ದಿಖಿ,ಅಬ್ದುಲ್ ಖೈಯುಮ್, ಜಮಾತೇ ಇಸ್ಲಾಮಿ ಹಿಂದ್ ಮಾನ್ವಿ ಅಧ್ಯಕ್ಷರಾದ ಅಬ್ದುಲ್ ಕರೀಮ್ ಖಾನ್, ಅಬ್ದುಲ್ ರಹ್ಮಾನ್, ಸೈಫ್ , ನಾಸಿರ್ ಅಲಿ, ಚಾಂದ್ ಟೈಲರ್, ಚಂದ್ ಪಾಷಾ, ಜಬ್ಬಾರ್ ಖುರೈಶಿ, ಮಹಮ್ಮದ್ ಆರಿಫ್, ಇಮ್ತಿಯಾಜ್ ಹುಸೇನ್, ಇಶ್ರಾದ್ ಖಾನ್ ಇತರರು ಉಪಸ್ಥಿತರಿದ್ದರು.