✍️ ಪ್ರೊ. ಶ್ರೀಧರ್
ನಿವೃತ್ತ ಉಪನ್ಯಾಸಕರು, ಬೆಂಗಳೂರು
ನಾವು ಒಂದು ದುರಂತಮಯ ಕಾಲದಲ್ಲಿದ್ದೇವೆ. ಆದರೆ ನಾವು ಅದನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ. ಎಸ್.ಐ.ಆರ್. ಎಂಬ ಮಹಾಮಾರಿ ಈಗ ನಮ್ಮ ಮನೆ ಬಾಗಿಲಿಗೆ ಬಂದಿದೆ. ಇದು ಕೇವಲ ಪುಸ್ತಕದಲ್ಲಿಲ್ಲ. ಈಗಲೂ ಈ ಬಗ್ಗೆ ಸುಮ್ಮನಿದ್ದರೆ ಮುಂದೆ ನಮ್ಮ ಭವಿಷ್ಯ ಕರಾಳವಾಗಲಿದೆ. ಇದು ಹೆದರಿಸುವುದಲ್ಲ. ಇದು ಮುಂದೆ ನಿಜವಾಗಿಯೂ ನಡೆಯುತ್ತದೆ.
ಚುನಾವಣಾ ಆಯೋಗವು ಚುನಾವಣೆ ಆರಂಭವಾದಂದಿನಿಂದ ಮತ ಪಟ್ಟಿಯನ್ನು ಪರಿಷ್ಕರಣೆ ಮಾಡುತ್ತಾ ಬಂದಿದೆ. ಪರಿಷ್ಕರಣೆ ಮಾಡಲಾಗುತ್ತದೆ. ವಿಶೇಷ ಪರಿಷ್ಕರಣೆ ಎಂಬುದು ಕೆಲವು ತೊಂದರೆ ಕಂಡು ಬಂದ ಕಡೆ ಮಾತ್ರ ಮಾಡಲಾಗುತ್ತದೆ. ಆದರೆ ಈಗ ಈ ಎರಡೂ ಅಲ್ಲದ ತೀವ್ರ ವಿಶೇಷ ಪರಿಷ್ಕರಣೆಯನ್ನು ಚುನಾವಣಾ ಆಯೋಗ ಮಾಡುತ್ತಿದೆ. ಕೇವಲ ಪರಿಷ್ಕರಣೆಯಾದರೆ ನಾವು ಮಾತನಾಡುತ್ತಿರಲಿಲ್ಲ. ಆದರೆ ಈಗ ಆಯೋಗದ ನಡೆ ನೋಡಿದಾಗ ಇದು ಏನೋ ಒಂದು ದೊಡ್ಡ ಯೋಜನೆ ಹಾಕಿಕೊಂಡಂತೆ ಕಾಣುತ್ತಿದೆ.
ಇಲ್ಲಿ ಎನ್.ಆರ್.ಸಿ. ಬಗ್ಗೆ ಬೃಹತ್ ಪ್ರತಿಭಟನೆ ನಡೆಯಿತು. ಆ ಸಮಯದಲ್ಲಿ ಕೋರೋನಾ ಬಂದ ಕಾರಣ ಆ ಹೋರಾಟ ನಿಧಾನವಾಗಿ ತಣ್ಣಗಾಗುತ್ತಾ ಬಂತು. ಈಗ ಅದನ್ನು ಹಿಂಬಾಗಿಲಿನಿಂದ ತರುವ ಪ್ರಯತ್ನ ನಡೆದಿದೆ. ಎಸ್.ಐ.ಆರ್. ಪಶ್ಚಿಮ ಬಂಗಾಳ, ಬಿಹಾರ್ ಮುಂತಾದಡೆ ಒಟ್ಟು ಹತ್ತು ಹದಿನೈದು ಕಡೆ ನಡೆದಿದೆ. ಈ ಎಸ್.ಐ.ಆರ್.ನಿಂದ ಐದೂವರೆ ಕೋಟಿಯಷ್ಟು ಮತದಾರರು ಪಟ್ಟಿಯಿಂದ ಹೊರಬಿದ್ದಿದ್ದಾರೆ. ನಮ್ಮಲ್ಲಿ ಮತದಾರ ಚೀಟಿ ಇಲ್ಲ ಎಂದಾದರೆ ನಮ್ಮ ಪೌರತ್ವಕ್ಕೆ ಅರ್ಥವೆಲ್ಲಿದೆ? ಪ್ರಜಾಪ್ರಭುತ್ವದಲ್ಲಿ ಚುನಾವಣೆ ಮಹತ್ತರವಾದ ಭಾಗ. ಭಾರತದಲ್ಲಿ ಚುನಾವಣಾ ಪ್ರಕ್ರಿಯೆಯಿಂದ ಎಂಟು ಕೋಟಿ ಮತದಾರರು ತಮ್ಮ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಮತಪಟ್ಟಿಯಿಂದ ಹೊರಗಿದ್ದವರ ಬಗ್ಗೆ ಸುಪ್ರೀಮ್ ಕೋರ್ಟು ಕೂಡಾ ಸ್ಪಷ್ಟ ವಿವರಣೆ ಕೊಟ್ಟಿಲ್ಲ.
ಮತದಾರನೇ ತಾನು ಯಾರು ಎಂಬುದನ್ನು ಸ್ಪಷ್ಟೀಕರಿಸಬೇಕು.
ನಿಜವಾಗಿ ಸರಕಾರ ಈ ಕೆಲಸ ಮಾಡಬೇಕಿತ್ತು. ಯೋಗೇಂದ್ರ ಯಾದವ್ರಂತಹವರು ಹೇಳುವ ಪ್ರಕಾರ ಈ ವರೆಗೆ ನಾವು ಸರಕಾರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆವು ಈಗ ಸರಕಾರವೇ ಮತದಾರರನ್ನು ಆಯ್ಕೆ ಮಾಡುವ ಪರಿಸ್ಥಿತಿ ಬಂದಿದೆ. ಹೋರಾಟಗಾರ ಪರಕಾಲ ಪ್ರಭಾಕರ್ ಅವರು ಈ ಪ್ರಕ್ರಿಯೆಯನ್ನು ರಕ್ತರಹಿತ ಜನಾಂಗೀಯ ಹತ್ಯೆ ಎಂದು ಕರೆದರು. ಸರಕಾರ ಯಾಕೆ ಇದನ್ನು ತರಲು ಮುಂದಾಗಿದೆ ಎಂಬುದು ಪ್ರಶ್ನೆ.
ಡಿಲಿಮಿಟೇಷನ್ ಎಂಬ ಮಸೂದೆ ಲೋಕಸಭೆಯಲ್ಲಿ ಸೋತಿದೆ. ನೋಡಿ ಮುಂದೆ ಅದು ಜಾರಿಗೆ ಬರುತ್ತದೆ. ಡಿಲಿಮಿಟೇಷನ್ ಅಂದರೆ ಹೊಸ ಹೊಸ ಕ್ಷೇತ್ರಗಳನ್ನು ಗುರುತಿಸಿ ಈಗ ಇರುವಂತಹ ಸಂಸದರ ಸಂಖ್ಯೆಗಳನ್ನು ಹೆಚ್ಚಿಸುವುದಾಗಿದೆ. ನಿರ್ದಿಷ್ಟ ಸಂಖ್ಯೆಯ ಮತದಾರರಿಗೆ ಓರ್ವ ಸಂಸದರನ್ನು ಆಯ್ಕೆ ಮಾಡುವುದು. ಸುಮಾರು ಎಂಟು ನೂರು ಸಂಸದರನ್ನು ಆಯ್ಕೆ ಮಾಡುವುದು. ಈ ಯೋಜನೆಯ ಭಾಗವಾಗಿ ಈಗಾಗಲೇ ಅಷ್ಟೇ ಸಂಖ್ಯೆಯ ಆಸನದ ವ್ಯವಸ್ಥೆಯ ಕಟ್ಟಡವನ್ನು ಮಾಡಲಾಗಿದೆ.
ಹೀಗೆ ಸಂವಿಧಾನದ ಚೌಕಟ್ಟಿನೊಳಗಿದ್ದುಕೊಂಡೇ ಸಂವಿಧಾನವನ್ನು ವಿರೋಧಿಸುವ ಪ್ರಕ್ರಿಯೆಯಾಗಿದೆ ಇದು. ಹಿಂದೂ ರಾಷ್ಟ್ರ ಸ್ಥಾಪಿಸಿ ಏನೆಲ್ಲ ಅಜೆಂಡಾಗಳಿವೆಯೋ ಅವೆಲ್ಲ ವನ್ನೂ ಜಾರಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಅವರ ಈ ಕರಾಳ ಯೋಜನೆಗೆ ಮೆಟ್ಟಲಾಗಿ ಈ ಎಸ್. ಐ.ಆರ್ ಬಳಕೆಯಾಗುತ್ತಿದೆ. ಇದನ್ನು ನಾವು ಅರ್ಥೈಸಿ ಜನರಿಗೆ ಅರ್ಥ ಮಾಡಿಸಬೇಕಾಗಿದೆ.
ನಮಗೆ ನ್ಯಾಯಾಂಗದ ಮೇಲೆ ಭರವಸೆಯಿತ್ತು. ಆದರೆ ಎಸ್.ಐ.ಆರ್. ಗಮನಿಸಿದಾಗ ನ್ಯಾಯಾಂಗ ಕೂಡಾ ಅವರ ಜೊತೆ ಶಾಮೀಲಾದಂತೆ ಕಂಡು ಬರುತ್ತಿದೆ. ನ್ಯಾಯಾಲಯವನ್ನು ಹೋರಾಟಗಾರರು ಸಮೀಪಿಸಿದಾಗ ಅದು ಪಶ್ಚಿಮ ಬಂಗಾಳ ಚುನಾವಣೆ ಆಗುವ ತನಕ ಮೂಲಭೂತ ಸಮಸ್ಯೆಯನ್ನು ಗಣನೆಗೆ ತೆಗೆಯದೆ ಅದರ ಸುತ್ತಮುತ್ತ ಇರುವ ಸಮಸ್ಯೆಯ ಬಗ್ಗೆ ಮಾತನಾಡಿತು.
ಚುನಾವಣೆ ಮುಗಿದ ಬಳಿಕ ನಾಲ್ಕೈದು ಕೋಟಿ ಜನರನ್ನು ಹೊರಗಿಟ್ಟ ಬಳಿಕ ಚುನಾವಣಾ ಆಯೋಗಕ್ಕೆ ಎಸ್.ಐ.ಆರ್. ಮಾಡುವ ಅಧಿಕಾರ ಇದೆ ಎಂದು ಕೋರ್ಟು ತೀರ್ಪು ನೀಡಿತು. ಆದ್ದರಿಂದ ರಾಜ್ಯ ಸರಕಾರಕ್ಕೆ ನಾಲ್ಕು ಬೇಡಿಕೆ ಇಡುತ್ತಿದ್ದೇನೆ.
- ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವಾಗ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದರೆ ತೆಗೆದು ಹಾಕುವ ಕ್ರಮವನ್ನು ರದ್ದುಪಡಿಸಬೇಕು. ಬಿಡಿ.ಎ. ಲೆವಲಲ್ಲಿ ತರಬೇತಿ ನೀಡಿ ಹಳ್ಳಿಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಸೋಶಿಯಲ್ ಆಡಿಟಿಂಗ್ ಮಾಡಬೇಕು.
- ಕೇರಳ ಮತ್ತು ತಮಿಳುನಾಡಿನಲ್ಲಿ ಮತದಾರರಿಗೆ ಸ್ಮಾರ್ಟ್ ಕಾರ್ಡ್ ನೀಡಿತ್ತು. ಹಾಗೆಯೇ ಕರ್ನಾಟಕದಲ್ಲಿಯೂ ಸರಕಾರ ಸ್ಮಾರ್ಟ್ ಕಾರ್ಡ್ ನೀಡಬೇಕು.
- ಎಸ್.ಐ.ಆರ್. ಪ್ರಕ್ರಿಯೆ ಜೂನ್ 30 ರಿಂದ ಪ್ರಾರಂಭವಾಗಿ ನವೆಂಬರ್ 9 ರೊಳಗೆ ಮುಗಿಸಬೇಕು ಎನ್ನಲಾಗಿದೆ. ಇದು ಬಹಳ ಸೀಮಿತ ಅವಧಿಯಾಗಿದೆ. ಅದಕ್ಕೆ ಆರು ತಿಂಗಳು ಅವಧಿ ನೀಡಬೇಕು.
ಸರಕಾರ ಪಕ್ಷದ ಬಗ್ಗೆ ಯೋಚಿಸದೆ ಇಡೀ ದೇಶದ ಬಗ್ಗೆ ಚಿಂತಸಬೇಕಾಗಿದೆ. ಆದಷ್ಟು ಜನರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಗರಿಷ್ಟ ಶ್ರಮವನ್ನು ಸರಕಾರ ಮಾಡಬೇಕು. ಈ ದೇಶದಲ್ಲಿ ಒಂಬತ್ತು ದಾಖಲೆಗಳನ್ನು ಪ್ರಸ್ತುತ ಪಡಿಸಲು ಸಾಮರ್ಥ್ಯವಿಲ್ಲದ ಸಹಸ್ರಾರು ಮತದಾರರು ಇರಬಹುದು. ಮಹಿಳೆಯರು, ವಲಸೆ ಕಾರ್ಮಿಕರು, ಆದಿವಾಸಿಗಳು ಈ ಸಮಸ್ಯೆ ಎದುರಿಸುತ್ತಾರೆ. ಮೇಲ್ನೋಟಕ್ಕೆ ಇದು ಒಂದು ಸಮುದಾಯದ ವಿರುದ್ಧ ಎಂದು ಅನ್ನಿಸಿದ್ದರೂ ಬಹಳ ತಂತ್ರಪರವಾಗಿ ಮಾಡಿದ್ದಾರೆ. ತಾಯಿ ಮತ್ತು ಮಕ್ಕಳ ಅಂತರ ಹದಿನೈದು ವರ್ಷಕ್ಕಿಂತ ಹೆಚ್ಚಿಗೆಯಿದ್ದರೂ ಸಮಸ್ಯೆಯಾಗುತ್ತದೆ. ಹೀಗೆ ಎಸ್.ಐ.ಆರ್. ಹೊಸ ಹೊಸ ಸಮಸ್ಯೆಗಳನ್ನು ಸೃಷ್ಟಿಸಿ ಮತದಾರರನ್ನು ಗೊಂದಲಕ್ಕೆ ಸಿಲುಕಿಸುತ್ತದೆ.
ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾಕ್ಕೆ ಹೋಲಿಸಿದಾಗ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಗಟ್ಟಿಯಾಗಿದೆ. ಈಗ ಅದಕ್ಕೆ ಧಕ್ಕೆ ತರಲಾಗುತ್ತಿದೆ. ಈ ಬಗ್ಗೆ ನಾವು ಜಾಗೃತರಾಗಬೇಕಾಗಿದೆ. ನಮಗೆ ಪ್ರಜಾಪ್ರಭುತ್ವ ಪರವಾಗಿ ಸಿಗುವ ಸವಲತ್ತುಗಳು ನಮ್ಮ ಜನ್ಮ ಸಿದ್ದ ಹಕ್ಕು ಎಂದು ಜನರಿಗೆ ಮನವರಿಕೆ ಮಾಡಿಕೊಡ ಬೇಕು. ರಾಜಕೀಯ ಸ್ವಾತಂತ್ರ್ಯ ನಮಗೆ ದೊರೆತಿದೆ. ಇಲ್ಲಿ ಸಾಮಾಜಿಕ ಸಮಾನತೆಯಿಲ್ಲ, ಆರ್ಥಿಕ ಸಮಾನತೆಯೂ ಇಲ್ಲ. ನಾವು ಕಷ್ಟಪಟ್ಟು ಗಳಿಸಿರುವ ರಾಜಕೀಯ ಸ್ವಾತಂತ್ರ್ಯ ಕಳೆದು ಕೊಳ್ಳಬೇಕಾಗಬಹುದು. ನಮ್ಮ ಮೂಲಭೂತ ರಾಜಕೀಯ ಸ್ವಾತಂತ್ರ್ಯಕ್ಕೆ ಏಟು ಬೀಳುತ್ತಿದೆ. ಇದರ ವಿರುದ್ಧ ತಳ ಮಟ್ಟದಿಂದ ಜನ ಜಾಗೃತಿ ಮಾಡಬೇಕಾಗಿದೆ. ಭ್ರಾತೃತ್ವ ಸಹೋದರತೆಯನ್ನು ಬೆಳೆಸಬೇಕಾಗಿದೆ. ನಮ್ಮ ನೆರೆಮನೆಯವರ ಹಕ್ಕುಗಳ ಬಗ್ಗೆಯೂ ಕಾಳಜಿ ವಹಿಸಬೇಕಾಗಿದೆ.












