ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯ: ರಾಷ್ಟ್ರಗೀತೆಯ ವೇಳೆ ಭಾವುಕನಾಗಿ ಕಣ್ಣೀರಿಟ್ಟ ಬೌಲರ್ ಸಿರಾಜ್

0
1420

ಸನ್ಮಾರ್ಗ ವಾರ್ತೆ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಇಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ಆರಂಭವಾದ ಸರಣಿಯ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ ಆರಂಭದಲ್ಲಿ ಮೊಳಗಿಸಲಾಗುವ ಭಾರತದ ರಾಷ್ಟ್ರಗೀತೆ ಮುಗಿದ ಬಳಿಕ ಭಾರತ ತಂಡದ ವೇಗಿ ಮುಹಮ್ಮದ್ ಸಿರಾಜ್ ಭಾವುಕನಾಗಿ ಕಣ್ಣೀರಿಟ್ಟ ವೀಡಿಯೋ ಹಾಗೂ ಫೋಟೋ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.

ಹಲವಾರು ಭಾರತೀಯರು ಈ ವೀಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡುತ್ತಿದ್ದು, ಸಿರಾಜ್ ಯಾಕೆ ಭಾವುಕರಾದರು ಎಂಬ ಪ್ರಶ್ನೆಗಳನ್ನು ಹಾಕುತ್ತಿರುವ ಮಧ್ಯೆ, ಕೆಲವರು ಇತ್ತೀಚೆಗೆ ನಿಧನರಾದ ತನ್ನ ತಂದೆಯ ನೆನಪು ಬಂದಿರಬಹುದು ಎಂದು ಕೆಲವರು ಕಮೆಂಟಿಸಿದ್ದಾರೆ. ದೇಶಕ್ಕಾಗಿ ತಾವು ಆಡುತ್ತಿರುವುದಕ್ಕೆ ನಮಗೆ ಹೆಮ್ಮೆ ಇದೆ ಎಂದು ಕೆಲವರು ಹೇಳಿದ್ದಾರೆ.

ಸಿರಾಜ್ ರವರ ಫೋಟೋವನ್ನು ಟ್ವೀಟ್ ಮಾಡಿರುವ ಮಾಜಿ ಭಾರತೀಯ ಕ್ರಿಕೆಟಿಗ ವಾಸಿಮ್ ಜಾಫರ್, ನಿಮ್ಮನ್ನು ಹುರಿದುಂಬಿಸಲು ಸ್ಟೇಡಿಯಂ ನಲ್ಲಿ ಜನಸಮೂಹ ಕಡಿಮೆ ಅಥವಾ ಇಲ್ಲದೇ ಇದ್ದರೂ ಕೂಡ ಭಾರತಕ್ಕಾಗಿ ಆಡುವುದಕ್ಕಿಂತ ಉತ್ತಮ ಪ್ರೇರಣೆ ಬೇಕಿಲ್ಲ. “ನೀವು ಜನಸಮೂಹಕ್ಕಾಗಿ ಆಡಬೇಡಿ, ನೀವು ದೇಶಕ್ಕಾಗಿ ಆಡಿರಿ.” ಎಂದು ಒಮ್ಮೆ ನನಗೆ ಓರ್ವ ಲೆಜೆಂಡ್ ಹೇಳಿದ್ದು ‌ನನಗೆ ನೆನಪಿಗೆ ಬಂತು ಎಂದು ಟ್ವೀಟ್ ಮಾಡಿದ್ದಾರೆ.

ಟೀಮ್ ಇಂಡಿಯಾದಲ್ಲಿ ಉತ್ತಮ ಬೌಲರ್ ಆಗಿರುವ ಮುಹಮ್ಮದ್ ಸಿರಾಜ್ ಮೂಲತಃ ಹೈದರಾಬಾದ್ ನವರು.‌ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಂಡ ಬಳಿಕ ಸಿರಾಜ್ ರವರ ತಂದೆ ಮುಹಮ್ಮದ್ ಗೌಸ್ ನಿಧನರಾಗಿದ್ದರು. ದೇಶಕ್ಕಾಗಿ ಆಡಬೇಕು ಎಂಬುದು ಸಿರಾಜ್ ರವರ ತಂದೆಯ ಕನಸಾಗಿತ್ತು.