ಪಶ್ಚಿಮ ಬಂಗಾಳದಲ್ಲಿ ಮೇರಿ ಮಾತೆಯ ಮೂರ್ತಿ ಧ್ವಂಸ

0
18

ಸನ್ಮಾರ್ಗ ವಾರ್ತೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ರೈದಿಘಿಯಲ್ಲಿರುವ ಕ್ರಿಶ್ಚಿಯನ್ ಚರ್ಚ್ ಒಂದರ ಬಳಿಯಿದ್ದ ಮೇರಿ ಮಾತೆಯ ಮೂರ್ತಿಯನ್ನು ಭಾನುವಾರ ರಾತ್ರಿ ಧ್ವಂಸಗೊಳಿಸಲಾಗಿದೆ. ಈ ಪ್ರದೇಶದ ನಿವಾಸಿ ಬಾಬುಲ್ ಮಲಿಕ್ ಎಂಬವರು ಸೋಮವಾರ ಬೆಳಿಗ್ಗೆ ಹಾನಿಗೊಳಗಾದ ಮೂರ್ತಿಯನ್ನು ಕಂಡಾಗ ಈ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಅವರು ಸ್ಥಳೀಯ ಕ್ರಿಶ್ಚಿಯನ್ ನಾಯಕ ಖೋಕನ್ ಘೋಷ್ ಅವರಿಗೆ ವಿಷಯ ತಿಳಿಸಿದ್ದಾರೆ.

ಈ ಘಟನೆಯು ಕ್ರಿಶ್ಚಿಯನ್ ಸಮುದಾಯವೇ ಹೆಚ್ಚಾಗಿರುವ ಪ್ರದೇಶದಲ್ಲಿ ನಡೆದಿದೆ. ಸಮಾಜಘಾತಕ ಶಕ್ತಿಗಳು ಕತ್ತಲೆಯ ಮರೆಯಲ್ಲಿ ಮೇರಿ ಮಾತೆಯ ಮೂರ್ತಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಅಪರಾಧಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕ್ರಿಶ್ಚಿಯನ್ನರು ಮತ್ತು ಚರ್ಚ್‌ಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳ ಬಗ್ಗೆ ಸ್ಥಳೀಯರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಾರ್ಥನಾ ಸ್ಥಳಗಳಿಗೆ ಸೂಕ್ತ ರಕ್ಷಣೆ ನೀಡುವಂತೆಯೂ ಅವರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಚರ್ಚ್ ಆಡಳಿತ ಮಂಡಳಿಯು ರೈದಿಘಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಘಟನೆಯಲ್ಲಿ ಇದುವರೆಗೆ ಯಾರ ಮೇಲೆಯೂ ಆರೋಪ ಹೊರೆಸಲಾಗಿಲ್ಲ ಮತ್ತು ದಾಳಿಯ ಹಿಂದಿನ ನಿಜವಾದ ಕಾರಣ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಹಿಂದೆ ಸಂಘ ಪರಿವಾರದ ಸಂಘಟನೆಗಳಿವೆ ಎಂದು ಕೆಲವು ವಿಶ್ವಾಸಿಗಳು ಶಂಕಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ರೀಜನ್ ಕ್ಯಾಥೋಲಿಕ್ ಪಾಸ್ಟೊರಲ್ ಏರಿಯಾದ ಉಸ್ತುವಾರಿ ಫಾದರ್ ಉಜ್ಜವಲ್ ಮಂಡಲ್, ಕ್ರಿಶ್ಚಿಯನ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ದಾಳಿಕೋರರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

“ಸಮುದಾಯವನ್ನು ಸಹಿಸಿಕೊಡಲಾಗದವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಕತ್ತಲೆಯ ಮರೆಯಲ್ಲಿ ಈ ಕ್ರೂರ ಕೃತ್ಯ ಎಸಗಿದ್ದಾರೆ. ಸ್ಥಳದಲ್ಲಿ ಯಾರನ್ನೂ ಬಂಧಿಸಲಾಗಿಲ್ಲ. ಆದ್ದರಿಂದ, ಪ್ರದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡಲು ಪೊಲೀಸರು ಆದಷ್ಟು ಬೇಗ ಅಪರಾಧಿಗಳನ್ನು ಕಾನೂನಿನ ಚೌಕಟ್ಟಿಗೆ ತರಬೇಕೆಂದು ನಾವು ಕೇಳಿಕೊಂಡಿದ್ದೇವೆ” ಎಂದು ಅವರು ಹೇಳಿದ್ದಾರೆ.

ಪೋಲಿಸ್ ತಂಡವೊಂದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಲಾಗಿದೆ. ಪ್ರಾರ್ಥನಾ ಸ್ಥಳಗಳಿಗೆ ಕಟ್ಟುನಿಟ್ಟಿನ ಭದ್ರತೆ ಒದಗಿಸುವಂತೆ ಕ್ರಿಶ್ಚಿಯನ್ ಸಮುದಾಯವು ಸರ್ಕಾರ ಮತ್ತು ಪೊಲೀಸರನ್ನು ಕೋರಿದೆ.