ಇರಾನಿನ ಅಣು ರಹಸ್ಯ ಸೋರಿಕೆಗೆ 20 ಮಿಲಿಯನ್ ಡಾಲರ್ ಬಹುಮಾನ ಘೋಷಣೆ: ಯುಎನ್‌ನಲ್ಲಿ ಅಮೆರಿಕ ವಿರುದ್ಧ ದೂರು ನೀಡಿದ ಇರಾನ್

0
38

ಸನ್ಮಾರ್ಗ ವಾರ್ತೆ

ಟೆಹ್ರಾನ್: ಇರಾನ್‌ನ ಅಣು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದವರಿಗೆ 20 ಮಿಲಿಯನ್ ಡಾಲರ್‌ವರೆಗಿನ ಬಹುಮಾನ ನೀಡುವ ಅಮೆರಿಕದ ನಡೆಯನ್ನು ಖಂಡಿಸುವಂತೆ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆಗೆ (IAEA) ಆಗ್ರಹಿಸಿದ್ದು, ಈ ಕ್ರಮವು ಇರಾನ್‌ನ ಅಣು ನಿಲಯಗಳು ಮತ್ತು ವಿಜ್ಞಾನಿಗಳ ಭದ್ರತೆಗೆ ಬೆದರಿಕೆಯೊಡ್ಡುತ್ತದೆ ಎಂದು ಎಚ್ಚರಿಸಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ಭದ್ರತಾ ಮಂಡಳಿಯ ಅಧ್ಯಕ್ಷರು ಮತ್ತು ಐಎಇಎ ಮಹಾನಿರ್ದೇಶಕ ರಾಫೆಲ್ ಗ್ರೋಸಿ ಅವರಿಗೆ ಬರೆದಿರುವ ಪತ್ರದಲ್ಲಿ ಅರಾಘ್ಚಿ ಅವರು ಅಮೆರಿಕದ ಪ್ರಕಟಣೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಅಮೆರಿಕ ವಿದೇಶಾಂಗ ಇಲಾಖೆಯ ‘ರಿವಾರ್ಡ್ಸ್ ಫಾರ್ ಜಸ್ಟಿಸ್’ (ನ್ಯಾಯಕ್ಕಾಗಿ ಬಹುಮಾನ) ಕಾರ್ಯಕ್ರಮದ ಮೂಲಕ ಈ ಬಹುಮಾನವನ್ನು ಘೋಷಿಸಲಾಗಿದೆ. ಹಣವನ್ನು ಪಾವತಿಸುವುದರ ಜೊತೆಗೆ, ಇರಾನ್‌ನ ಅಣು ನಿಲಯಗಳು, ಉಪಕರಣಗಳು, ವಿಜ್ಞಾನಿಗಳು ಮತ್ತು ಉದ್ಯೋಗಿಗಳ ಕುರಿತು ಮಾಹಿತಿ ನೀಡುವವರಿಗೆ ಅಗತ್ಯವಿದ್ದರೆ ಮರುನೆಲೆಸುವಿಕೆಯ ಆಫರ್ ಕೂಡ ನೀಡಲಾಗಿದೆ.

ಈ ಕ್ರಮವು ಇರಾನ್‌ನ ಅಣು ಕಾರ್ಯಕ್ರಮದ ವಿರುದ್ಧ ಗೂಢಚರ್ಯೆಯನ್ನು ಪ್ರೋತ್ಸಾಹಿಸುತ್ತದೆ ಎಂದು ಅರಾಘ್ಚಿ ಆರೋಪಿಸಿದ್ದು, ಇದು ವಿಜ್ಞಾನಿಗಳು ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಹತ್ಯೆಯ ಯತ್ನಗಳು, ವಿಧ್ವಂಸಕ ಕೃತ್ಯಗಳು ಮತ್ತು ಇತರ ಭದ್ರತಾ ಬೆದರಿಕೆಗಳಿಗೆ ಈಡಾಗುವಂತೆ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.

ಐಎಇಎ ಸುರಕ್ಷತಾ ಕಣ್ಗಾವಲಿನಲ್ಲಿರುವ ಅಣು ಸ್ಥಾವರಗಳ ಕುರಿತು ಗೌಪ್ಯ ಮಾಹಿತಿಯನ್ನು ಸಂಗ್ರಹಿಸಲು ಯತ್ನಿಸುವುದು ಸಂಸ್ಥೆಯ ಕಣ್ಗಾವಲು ವ್ಯವಸ್ಥೆಯ ನಂಬಿಕಾರ್ಹತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ ಎಂದು ಅರಾಘ್ಚಿ ಪತ್ರದಲ್ಲಿ ಬೆಟ್ಟು ಮಾಡಿದ್ದಾರೆ. ದಾಳಿ ಮತ್ತು ವಿಧ್ವಂಸಕ ಕೃತ್ಯದ ಬೆದರಿಕೆ ಮುಂದುವರಿದಿರುವಾಗ ಅಣು ಸುರಕ್ಷತಾ ಒಪ್ಪಂದದಡಿಯಲ್ಲಿನ ಬಾಧ್ಯತೆಗಳನ್ನು ಸಾಮಾನ್ಯ ರೀತಿಯಲ್ಲಿ ಜಾರಿಗೆ ತರಲು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಅಣು ಶಸ್ತ್ರಾಸ್ತ್ರ ರಹಿತ ಒಪ್ಪಂದದ (NPT) ಆರ್ಟಿಕಲ್ 4 ಶಾಂತಿಯುತ ಉದ್ದೇಶಗಳಿಗಾಗಿ ಅಣುಶಕ್ತಿಯನ್ನು ಅಭಿವೃದ್ಧಿಪಡಿಸಲು ಮತ್ತು ಬಳಸಲು ರಾಷ್ಟ್ರಗಳ ಹಕ್ಕನ್ನು ಗುರುತಿಸುತ್ತದೆ ಎಂಬುದನ್ನು ಅರಾಘ್ಚಿ ನೆನಪಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಮೇಲಿನ ಅಮೆರಿಕದ ಈ ಕ್ರಮದ ಪರಿಣಾಮಗಳನ್ನು ಪರಿಶೀಲಿಸುವಂತೆ ಮತ್ತು ಅದಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡುವಂತೆ ಅವರು ಯುಎನ್ ಭದ್ರತಾ ಮಂಡಳಿಗೆ ಕರೆ ನೀಡಿದ್ದಾರೆ.