ಕುರ್ಚಿ ಕಿತ್ತಾಟ ನಿಲ್ಲಿಸಿ ಬರ ಪರಿಸ್ಥಿತಿ ನಿಭಾಯಿಸುವ ಕಡೆ ಗಮನ ಹರಿಸಿ: ವೆಲ್ಫೇರ್ ಪಾರ್ಟಿ

0
205

ಸನ್ಮಾರ್ಗ ವಾರ್ತೆ

ರಾಜ್ಯ ಬರ ಮತ್ತಿತರ ಸಮಸ್ಯೆಗಳಿಂದ ತತ್ತರಿಸುತ್ತಿರುವಾಗ ರಾಜ್ಯ ಸರಕಾರದ ಕೆಲ ಸಚಿವರುಗಳು ಮುಖ್ಯಮಂತ್ರಿ ಕುರ್ಚಿಯ ಚರ್ಚೆಯಲ್ಲಿ ನಿರತರಾಗಿರುವುದು ವಿಪರ್ಯಾಸ. ಅದನ್ನು ಬಿಟ್ಟು ರಾಜ್ಯದ ನೈಜ ಅಭಿವೃದ್ಧಿ ಕಡೆಗೆ ಗಮನ ಹರಿಸಲಿ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹಿರ್ ಹುಸೇನ್ ಆಗ್ರಹಿಸಿದ್ದಾರೆ.

ಅವರು ಮುಂದುವರಿಯುತ್ತಾ, ರಾಜ್ಯದಲ್ಲಿ ಮಳೆ ಕಡಿಮೆಯಾಗಿ ರೈತರು ಕಂಗಲಾಗಿದ್ದಾರೆ, ಬಡ ಜನರಿಗೆ ಐದು ಗ್ಯಾರಂಟಿಗಳ ಸೌಲಭ್ಯ ಪಡೆಯುವುದು ಅತ್ಯಂತ ಕಷ್ಟವಾಗುತ್ತಿದೆ. ಇಂಥ ಸಮಸ್ಯೆಗಳು ಇರುವಾಗ ಕುರ್ಚಿ ಚರ್ಚೆ ಅನಗತ್ಯ, ಸಚಿವರು ಜನರ ಸಮಸ್ಯೆಗಳನ್ನು ಬಗೆಹರಿಸುವ ಕಡೆ ಗಮನ ಹರಿಸಬೇಕೆಂದು ಅವರು ಒತ್ತಾಯಿಸಿದರು.

ಇತ್ತ ಕಡೆ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯಾಚರಿಸುವ ಬದಲು ಬಿಜೆಪಿಯು ಪ್ರಸಕ್ತ ರಾಜ್ಯ ಸರಕಾರವನ್ನು ಆಪರೇಷನ್ ಕಮಲದ ಮೂಲಕ ಕೆಡಹುವಂತಹ ಮಾತುಗಳನ್ನಾಡುತ್ತಿದೆ. ಸಂವಿಧಾನ ಬದ್ದವಾಗಿ ಬಹುಮತ ಪಡೆದ ಸರಕಾರದ ಶಾಸಕರಿಗೆ ಆಮಿಷ ತೋರಿಸಿ ಸರಕಾರವನ್ನು ಉರುಳಿಸಲು ಪ್ರಯತ್ನಿಸುವುದು ಯಾವ ಸೀಮೆ ರಾಜಕೀಯ ಎಂದು ಅವರು ಪ್ರಶ್ನಿಸಿದ್ದಾರೆ.

ಸರಕಾರ ಬಂದು ನಾಲ್ಕು ತಿಂಗಳಾದರೂ ವಿರೋಧ ಪಕ್ಷ ನಾಯಕರನ್ನು ಇನ್ನೂ ಆರಿಸಲು ಚಡಪಡಿಸಿದ ಬಿಜೆಪಿ ಈಗ ಸರಕಾರವನ್ನು ಉರುಳಿಸುವ ಮಾತನಾಡುತ್ತಿದೆ. ರಾಜ್ಯದ ಅಭಿವೃದ್ಧಿಗಿಂತ ಸ್ವಾರ್ಥವೇ ಮೆರೆಯುತ್ತಿದೆ.

ರಾಜ್ಯ ಸರ್ಕಾರ ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ದ್ವೇಷದ ರಾಜಕಾರಣವನ್ನು ಮಟ್ಟ ಹಾಕಲು ಅಗತ್ಯ ಕ್ರಮ ವಹಿಸಬೇಕು. ಫೆಲೆಸ್ತೀನ್ ಪರ ಇಸ್ರೇಲ್ ವಿರೋಧಿ ಪ್ರತಿಭಟನೆಗೆ ಸರಕಾರ ಏಕೆ ಭಯಪಡುತ್ತಿದೆ.? ಅಮಾಯಕ ಮಕ್ಕಳ ಹೆಂಗಳೆಯರ ಮಾರಣಹೋಮದ ವಿರುದ್ದ ಪ್ರತಿಭಟಿಸಬಾರದೇ? ಎಂದೂ ಪ್ರಶ್ನಿಸಿದ ಅವರು ಜನರು ನೀಡಿದ ತೀರ್ಪನ್ನು ಗೌರವಿಸಿ ನ್ಯಾಯಬದ್ಧ ಕರ್ತವ್ಯ ನಿಭಾಯಿಸಬೇಕೆಂದು ಆಗ್ರಹಿಸಿದರು.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ಘಟಕ ನ.1ರಿಂದ 10 ರ ವರೆಗೆ ದ್ವೇಷ ಅಳಿಸೋಣ ದೇಶ ಉಳಿಸೋಣ ಅಭಿಯಾನವನ್ನು ರಾಜ್ಯದಾದ್ಯಂತ ಹಮ್ಮಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.