ಸುದೃಢ ಕುಟುಂಬ ಸುಭದ್ರ ಸಮಾಜ

0
994

ಲೇಖಕಿ: ಶಮೀರ ಜಹಾನ್. ಮಂಗಳೂರು

“ನಿಮ್ಮನ್ನು ಒಂದು ವ್ಯಕ್ತಿಯಿಂದ ಸೃಷ್ಟಿಸಿದವನು ಅಲ್ಲಾಹನೇ ಆಗಿರುತ್ತಾನೆ.ಮತ್ತು ಅವನು ಅದೇ ವ್ಯಕ್ತಿಯಿಂದ ಅದರಜೋಡಿಯನ್ನು ಮಾಡಿದನು.ಅವಳಿಂದ ಮನಶಾಂತಿ ಪಡೆಯಲಿಕ್ಕಾಗಿ.ಅನಂತರ ಪುರುಷನು ಸ್ತ್ರೀಯೊಂದಿಗೆ ಸಂಯೋಗಿಸಿದಾಗ ಅವಳಿಗೆ ಒಂದು ಲಘುವಾದ ಗರ್ಭಧಾರಣೆಯಾಯಿತು.ಅವಳು ಅದನ್ನು ಹೊತ್ತುಕೊಂಡೇ ನಡೆಯುತ್ತಿದ್ದಳು.ಅದು ಭಾರವಾದಾಗ ಅವರಿಬ್ಬರೂ ಒಟ್ಟಾಗಿ ತಮ್ಮ ಪ್ರಭುವಾದ ಅಲ್ಲಾಹನೊಡನೆ ನೀನು ನಮಗೆ ಉತ್ತಮ ಮಗುವನ್ನು ನೀಡಿದರೆ ನಾವು ನಿನಗೆ ಕೃತಜ್ಞತೆ ಸಲ್ಲಿಸುವೆವು ಎಂದು ಪ್ರಾರ್ಥಿಸಿದರು.” (ಪವಿತ್ರಕುರ್ ಆನ್ 7:189)

ದೇವಭಯ
ಕುಟುಂಬ ವ್ಯವಸ್ಥೆ ಎಂಬುದು ಮನುಷ್ಯ ಸ್ವಭಾವದ ಬೇಡಿಕೆಯಾಗಿದೆ ಎಂಬುದು ಈ ವಚನದಿಂದ ಸಾಬೀತಾಗುತ್ತದೆ. ಎಲ್ಲ ಕಾಲಗಳಲ್ಲಿಯೂ ಕೇವಲ ದೇವವಿಶ್ವಾಸ ಮತ್ತು ಧರ್ಮನಿಷ್ಠೆಯ ವ್ಯವಹಾರ ಮಾತ್ರ ಕುಟುಂಬಗಳ ಭದ್ರತೆಗೆ ಪ್ರೇರಕಶಕ್ತಿಯಾಗಿತ್ತು. ಹಾಗೆಯೇ ಸ್ವೇಚ್ಛಾಚಾರ ,ಚಿತ್ತಾಕಾಂಕ್ಷೆಗಳ ಅನುಸರಣೆ ಕುಟುಂಬಗಳ ಛಿದ್ರತೆಗೆ ಕಾರಣವಾಯಿತು. ಪವಿತ್ರಕುರ್ ಆನ್ ನಲ್ಲಿ ಪತಿ ಪತ್ನಿಯರ ಪ್ರಸ್ತಾಪ ಬಂದಾಗಲೆಲ್ಲಾ “ಅಲ್ಲಾಹನನ್ನು ಭಯಪಡಿರಿ” ಎಂದು ಉಪದೇಶಿಸುವುದು ಕಂಡು ಬರುತ್ತದೆ. ದಾಂಪತ್ಯ ಜೀವನದಲ್ಲಿ ಪತಿ ಪತ್ನಿ ಅತ್ಯಧಿಕವಾಗಿ ಪಾಲಿಸಲ್ಪಡಬೇಕಾದ ಗುಣ ದೇವಭಯವಾಗಿದೆ.

ವಿವಾಹ
ಅಲ್ಲಾಹನು ಮನುಷ್ಯನನ್ನು ಸೃಷ್ಟಿಸಿ ಪ್ರಾಣಿಗಳಂತೆ ಅಲೆದಾಡಲು ಬಿಟ್ಟುಬಿಡಲಿಲ್ಲ. ಬದಲಾಗಿ ಗಂಡು ಹೆಣ್ಣನ್ನು ಒಂದು ಶರತ್ತುಬದ್ಧ ಒಪ್ಪಂದದ ಮೂಲಕ ಕೂಡಿ ಬಾಳಬೇಕೆಂದು ಆದೇಶಿಸಿರುವನು. ಇದರಿಂದಾಗಿ ಒಂದು ಸುಂದರ ಕುಟುಂಬ ಅಸ್ತಿತ್ವಕ್ಕೆ ಬರಬೇಕು ಎಂಬುದೇ ಇದರ ಉದ್ದೇಶವಾಗಿದೆ. ಈ ಒಪ್ಪಂದವನ್ನು ವಿವಾಹ ಎನ್ನಲಾಗಿದೆ.
“ವಿವಾಹವು ಎಲ್ಲ ಪ್ರವಾದಿಗಳ ಸಂಪ್ರದಾಯವಾಗಿತ್ತು”–(ಮುಹಮ್ಮದ್(ಸ))

ವಿವಾಹವು ನನ್ನ ಕ್ರಮವಾಗಿದೆ. ನನ್ನ ಕ್ರಮವನ್ನು ಅನುಸರಿಸದವನು ನನ್ನವನಲ್ಲ ಎಂಬ ಪ್ರವಾದಿ ಮುಹಮ್ಮದ್ (ಸ)ರ ಎಚ್ಚರಿಕೆ ಇಸ್ಲಾಮ್ ಧರ್ಮದಲ್ಲಿ ವಿವಾಹಕ್ಕೆ ಯಾವ ಮಹತ್ವವಿದೆ ಎಂಬುದರ ಅರಿವಾಗುತ್ತದೆ. ವಿವಾಹವಾಗದೇ ಇರುವ ಗಂಡು ಹೆಣ್ಣಿನ ಬಂಧವನ್ನು ವ್ಯಭಿಚಾರ ಎನ್ನಲಾಗಿದೆ. ವ್ಯಭಿಚಾರವನ್ನು ನಿಷಿದ್ಧ ಮಾತ್ರವಲ್ಲ ಪಾಪವೆಂದು ಸಾರಲಾಗಿದೆ. ಇಹಪರಗಳಲ್ಲಿಯೂ ಶಿಕ್ಷೆಯ ಘೋಷಣೆಯಿದೆ. ವಿವಾಹದಲ್ಲಿ ಪುರುಷನು ಮಹಿಳೆಗೆ ವಿವಾಹಧನ(ಮಹ್ರ್) ಪಾವತಿ ಮಾಡುವ ಮೂಲಕ ಕವ್ವಾಮ್(ಮೇಲ್ವಿಚಾರಕ,ಸಂರಕ್ಷಕ) ಆಗಿ ಮಾರ್ಪಡುತ್ತಾನೆ. ಮಹಿಳೆ ಮೆಹ್ರ್ ಸ್ವೀಕರಿಸುವ ಮೂಲಕ ಅವನ ಅನುಸರಣೆ ಮಾಡುವ ಪತ್ನಿಯಾಗಿ ಮಾರ್ಪಡುತ್ತಾಳೆ. ಇದರಲ್ಲಿ ಇಬ್ಬರ ಸಮ್ಮತಿಯೂ ಇರುವುದು.

ಕವ್ವಾಮ್(ಮೇಲ್ವಿಚಾರಕ ಸಂರಕ್ಷಕ)
ಪುರುಷನಿಗೆ ಮೇಲ್ವಿಚಾರಕನ ಪದವಿ ನೀಡಿರುವುದು ಪತ್ನಿಯನ್ನು ಪೀಡಿಸಲಿಕ್ಕಾಗಿಯೋ,ಅವಳ ಮೇಲೆ ಅಧಿಕಾರ ಚಲಾಯಿಸಲಿಕ್ಕಾಗಿಯೋ ಅಲ್ಲ. ಬದಲಾಗಿ ತನ್ನ ಜೋಡಿಯೊಂದಿಗೆ ಪ್ರೀತಿ ಅನುಕಂಪದಿಂದ ವರ್ತಿಸಲಿಕ್ಕಾಗಿದೆ. ಅಧಿಕಾರ ಮೇಲ್ಮೆಯು ಅಲ್ಲಾಹನ ಗುಣವಾಗಿರುವಾಗ ಅಲ್ಲಾಹನು ತನ್ನ ಸೃಷ್ಟಿಗಳೊಂದಿಗೆ ದಯೆಯಿಂದ ವರ್ತಿಸುವುದಿಲ್ಲವೇ? ಹಾಗೆಯೇ ಕುಟುಂಬದಲ್ಲಿ ಪುರುಷನಿಗೆ ದೇವನು ಮಹಿಳೆಗಿಂತ ಮೇಲ್ಮೆ ದಯಪಾಲಿಸಿರುವುದು ಮಹಿಳೆಯೊಂದಿಗೆ ಹೆಚ್ಚು ಪ್ರೀತಿ ಅನುಕಂಪವನ್ನು ಪ್ರದರ್ಶಿಸಲಿಕ್ಕಾಗಿದೆ. ಅಧಿಕಾರವನ್ನು ಪಡೆದು ಮೃಗೀಯತೆಯಿಂದ ವರ್ತಿಸುವುದಾದರೆ ಅದನ್ನು ಪುರುಷನ ಅಲ್ಪತನ ಎಂದು ಭಾವಿಸಬೇಕಾಗುತ್ತದೆ.

ಪ್ರೀತಿ ಮತ್ತು ಅನುಕಂಪ
ಪತಿ-ಪತ್ನಿಯರ ಮಧ್ಯೆ ಪ್ರೀತಿ ಅನುಕಂಪ ಇಲ್ಲದಿದ್ದರೆ ಅಂತಹ ಸಂಬಂಧ ಮೃತ ಶರೀರದಂತೆ ಎಂಬುದಾಗಿ ವಿಧ್ವಾಂಸರು ಅಭಿಪ್ರಾಯಪಡುತ್ತಾರೆ. ಮೃತ ಶರೀರವನ್ನು ಹಾಗೆಯೇ ಬಿಟ್ಟರೆ ದುರ್ನಾತ ಬೀರುವಂತೆ ಮೃತ ಸಂಬಂಧಗಳು ಸಮಾಜವನ್ನು ಹಾಳುಮಾಡುವುದು. ಅಲ್ಲಾಹನು ಇಷ್ಟಪಡುವ ದಾಂಪತ್ಯ ಪ್ರೀತಿ ಅನುಕಂಪದಿಂದ ಕೂಡಿರುವುದಾಗಿದೆ.
“ಪ್ರೀತಿ ಮತ್ತು ಅನುಕಂಪವನ್ನು ಉಂಟುಮಾಡಿರುವುದು ಅವನ ನಿದರ್ಶನಗಳಲ್ಲಿ ಒಂದಾಗಿದೆ” (ಪವಿತ್ರಕುರ್ ಆನ್)

ಗ್ರಾಹಕ ಸಂಸ್ಕೃತಿ
ಗ್ರಾಹಕ ಸಂಸ್ಕೃತಿಯು ಮಹಿಳೆಯ ಶತ್ರುವಾಗಿದೆ ಎಂಬ ವಾಸ್ತವಿಕತೆಯನ್ನು ಮಹಿಳೆಯರು ಅರ್ಥಮಾಡಿಕೊಳ್ಳಬೇಕು. ಕಣ್ಣಿಗೆ ಕಂಡ ವಸ್ತುಗಳನ್ನೆಲ್ಲಾ ಖರೀದಿಸುವುದು ಎಲ್ಲರಿಗೂ ಒಂದು ಚಟವಾಗಿ ಮಾರ್ಪಟ್ಟಿದೆ. ಇದು ಗ್ರಾಹಕ ಸಂಸ್ಕೃತಿಯ ಪ್ರಭಾವ. ಈ ಚಟ ಶರಾಬಿನ ಚಟದಷ್ಟೇ ಅಪಾಯಕಾರಿಯಾಗಿದೆ. ವ್ಯಕ್ತಿ ಸಾಲ ಮಾಡಿಯಾದರೂ ಅನಗತ್ಯ ವಸ್ತುಗಳನ್ನು ಖರೀದಿಸುತ್ತಾನೆ. ಅಕ್ರಮ ವಿಧಾನವನ್ನೂ ಬಳಸುತ್ತಾನೆ. ಮುಂಬೈಯ ಸಾಯಿಕ್ ಟ್ರಸ್ಟ್ ನ ಡಾ ಅಶೀತ್ ಸೇಟ್ ರ ಪ್ರಕಾರ ಈ ರೋಗ ಮಹಿಳೆಯರಲ್ಲಿ ಪುರುಷರಿಗಿಂತ ಹೆಚ್ಚಾಗಿ ಕಂಡು ಬರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ವೈದ್ಯರು ಈ ರೋಗವನ್ನು
ಪ್ಯಾಥೊಲೋಜಿಕಲ್ ಡಿಸಾರ್ಡರ್ (pathological disorder)ಎಂದು ಹೆಸರಿಸಿದ್ದಾರೆ. ಈ ರೋಗದ ಅಪಾಯದ ಬಗ್ಗೆ ಎಚ್ಚರಿಕೆ ವಹಿಸಬೇಕು.

ಪುರುಷನೊಡನೆ ಅವನ ಸಾಮರ್ಥ್ಯಕ್ಕಿಂತ ಹೆಚ್ಚು ಜೀವನಾಂಶಕ್ಕಾಗಿ ಮಹಿಳೆಯು ಒತ್ತಾಯಪಡಿಸುವುದು ಕುಟುಂಬಗಳಲ್ಲಿ ನೆಮ್ಮದಿ ಇಲ್ಲದಿರಲು ಕಾರಣವಾಗುತ್ತಿದೆ. ಪತಿ-ಪತ್ನಿಯರು ಈ ಬಗ್ಗೆ ಅಲ್ಲಾಹನ ಆದೇಶವೇನು ಎಂಬುದರ ಕಡೆಗೆ ಗಮನಹರಿಸಿದರೆ ಹೆಚ್ಚಿನ ಕಲಹಗಳು ತನ್ನಿಂತಾನೆ ದೂರವಾಗಬಹುದು. ಅಲ್ಲಾಹನ ಆದೇಶ ಪ್ರಕಾರ *ಪುರುಷನು ಶ್ರೀಮಂತನಾಗಿದ್ದರೆ ಅವನ ಶಕ್ತ್ಯಾನುಸಾರ ಜೀವನಾಂಶ ನೀಡಬೇಕಾದುದು ಖಡ್ಡಾಯ. ಪುರುಷನು ಬಡವನಾಗಿದ್ದರೆ ಅವನ ಶಕ್ತ್ಯಾನುಸಾರ ಜೀವನಾಂಶ ನೀಡಬೇಕಾದುದು ಪುರುಷನ ಮೇಲೆ ಖಡ್ಡಾಯ.

ಪತಿ ಪತ್ನಿಯರು ಖರ್ಚಿನ ಬಗ್ಗೆ ಪರಸ್ಪರ ಸಮಾಲೋಚಿಸಿ ವ್ಯವಹರಿಸುವುದರಿಂದ ಕುಟುಂಬದ ಹಲವಾರು ಸಮಸ್ಯೆಗಳು ದೂರವಾಗಬಹುದು.
“ಸರಳತೆಯು ಸತ್ಯವಿಶ್ವಾಸದ ಸ್ವಭಾವವಾಗಿದೆ.”
(ಪ್ರವಾದಿವಚನ)
“ದುಂದುಗಾರರು ಶೈತಾನನ ಸಹೋದರರಾಗಿರುತ್ತಾರೆ”(ಕುರ್ ಆನ್)‌.
ಅಲ್ಲಾಹನು ಶೈತಾನನ ಸಹೋದರರು ಎಂಬ ಪದ ಬಳಸಿರುವಾಗ ಈ ಬಗ್ಗೆ ನಾವು ಸೂಕ್ಷ್ಮತೆ ಪಾಲಿಸಬೇಕಾದುದು ಅತೀ ಅಗತ್ಯವಾಗಿದೆ.

ಸಮಾನತೆ
ಸಮಾನತೆಯ ಹೆಸರಿನಲ್ಲಿ ಮಹಿಳೆಯನ್ನು ದುಡಿಮೆಗೆ ಪ್ರೇರೇಪಿಸಲಾಗಿದೆ. ಇದು ಬಂಡವಾಳಶಾಹಿ ಸಾಮ್ರಾಜ್ಯತ್ವದ ತಂತ್ರವಾಗಿದೆ ಎಂಬುದು ಸುಲಭದಲ್ಲಿ ಅರ್ಥವಾಗುತ್ತದೆ. ಗ್ರಾಹಕ ಸಂಸ್ಕೃತಿಯು ಬಂಡವಾಳಶಾಹಿತ್ವದ ಕೊಡುಗೆಯಾಗಿದೆ. ಮಹಿಳೆಗೆ ಮನೆಯ ಒಳಗೂ ಕೆಲಸ ಮನೆಯ ಹೊರಗೂ ಕೆಲಸ. ದೈಹಿಕ ಮಾನಸಿಕ ದೌರ್ಬಲ್ಯವು ಮಹಿಳೆಯನ್ನು ನಿರಾಸೆಗೊಳಿಸಿದೆ. ಮಹಿಳೆ ತಾಯ್ತನದಿಂದ ದೂರ ಸರಿಯುವಂತಾಗಿದೆ. ವಾಸ್ತವದಲ್ಲಿ ತಾಯ್ತನ ಎಂಬುದು ಸೃಷ್ಟಿಕರ್ತನು ಹೆಣ್ಣಿಗೆ ನೀಡಿದ ವಿಶಿಷ್ಟ ಅನುಗ್ರವಾಗಿದೆ. ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಬೇಕು. ಅದರಿಂದ ದೂರ ಸರಿಯುವುದು ಪ್ರಕೃತಿಗೆ ವಿರುದ್ಧವಾಗಿದೆ. ಸಮಾಜದ ಸಮತೋಲನವೇ ತಪ್ಪಿಹೋಗುತ್ತದೆ. ಧರ್ಮದಲ್ಲಿ ಮಹಿಳೆಗೆ ಹೊರಗೆ ಹೋಗುವ ಅನುಮತಿ ನೀಡಲಾಗಿದ್ದರೂ ಅನಿವಾರ್ಯ ಸಂದರ್ಭಗಳಿಗಾಗಿ ಮಾತ್ರ ಬಾಹ್ಯ ಜಗತ್ತನ್ನು ಮಹಿಳೆಯರು ಪ್ರೀತಿಸುವವರಾಗಬೇಕು. ಅನ್ಯಥಾ ಕುಟುಂಬದ ಕಡೆಗೆ ಹೆಚ್ಚಿನ ಗಮನಹರಿಸಬೇಕು.
ಪ್ರವಾದಿ ಮುಹಮ್ಮದ್ (ಸ)ಒಂದು ವಚನ ಈ ರೀತಿ ಇದೆ.
“ಒಂಟೆಯಲ್ಲಿ ಸವಾರಿ ಮಾಡುವ ಮಹಿಳೆಯರಲ್ಲಿ(ಅರಬರಲ್ಲಿ) ಅತ್ಯುತ್ತಮರು ಕುರೈಶ್ ಗೋತ್ರದ ಸಜ್ಜನ ಮಹಿಳೆಯಾಗಿದ್ದಾಳೆ. ಆಕೆ ತನ್ನ ಚಿಕ್ಕ ಮಕ್ಕಳ ಪಾಲಿಗೆ ಅತ್ಯಂತ ಕರುಣಾಳು ಮತ್ತು ತನ್ನ ಪತಿಯ ವ್ಯವಹಾರಗಳ ಸಂರಕ್ಷಕಳೂ ಆಗಿರುವಳು.”

ಸ್ವಭಾವ ಅಭಿಪ್ರಾಯಗಳ ಭಿನ್ನತೆ
ಪತಿ ಪತ್ನಿಯರ ಮಧ್ಯೆ ಸ್ವಭಾವ ಅಭಿಪ್ರಾಯಗಳಲ್ಲಿ ಭಿನ್ನತೆ ಸ್ವಾಭಾವಿಕ. ಇಂತಹ ಸಂದರ್ಭಗಳಲ್ಲಿ ಪರಸ್ಪರರನ್ನು ಗೌರವಿಸಲು ಕಲಿಯಬೇಕು.
ಅಲ್ಲಾಹನು ಶೈತಾನನ್ನು ಮನುಷ್ಯನ ಪ್ರತ್ಯಕ್ಷ ಶತ್ರು ಎಂದು ಹೇಳಿರುವನು. ಈ ವಚನದ ಮೇಲೆ ನಮಗೆ ನಂಬಿಕೆ ಇದ್ದರೆ ಪ್ರವಾದಿ ಮುಹಮ್ಮದ್ (ಸ) ಹೇಳಿದಂತೆ ಪತಿ ಪತ್ನಿಯ ಮಧ್ಯೆ ವಿರಸ ಉಂಟುಮಾಡಿ ಪತಿ ಪತ್ನಿಯರನ್ನು ಬೇರ್ಪಡಿಸುವ ಶೈತಾನನ ಚೇಲಾಗಳಿಂದ ಜಾಗ್ರತೆ ವಹಿಸಬೇಕು. ಪತಿ -ಪತ್ನಿಯರು ಜಗಳಕ್ಕೆ ಆಸ್ಪದ ನೀಡುವ ವಿಷಯಗಳಿಂದ ಸಾಧ್ಯವಾದಷ್ಟು ದೂರವಿರಬೇಕು. ಮಕ್ಕಳ ಮುಂದೆ ಜಗಳ ಮಾಡುವ ಪತಿಪತ್ನಿ ಯರು ವಿಶೇಷವಾಗಿ ಗಮನಿಸಬೇಕಾದ ಅಂಶ ಇಂದು ಮಕ್ಕಳು ವಿವಾಹವನ್ನು ದ್ವೇಷಿಸಲಾರಂಭಿಸಿರುವುದು. ನಮ್ಮ ಯುವ ಪೀಳಿಗೆ ಕೌಟುಂಬಿಕ ಹೊಣೆಗಾರಿಕೆಗಳಿಂದ ದೂರ ಉಳಿಯಬಯಸುತ್ತಾರೆ. ಪ್ರವಾದಿ ಮುಹಮ್ಮದ್ (ಸ)ರ ಪ್ರಬಲ ಸುನ್ನತ್ ಆಗಿರುವ ವಿವಾಹದಿಂದ ದೂರ ಸರಿಯುವುದೆಂದರೆ ಸಣ್ಣ ವಿಷಯವಲ್ಲ. ಈ ಬಗ್ಗೆ ದಂಪತಿಗಳು ಎಚ್ಚರಿಕೆ ವಹಿಸಬೇಕು. ಕುಟುಂಬ ಕಲಹಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತಿದೆ ಎಂಬುದು ತಜ್ಙರ ಅಭಿಪ್ರಾಯ.

ಪರಲೋಕ ವಿಚಾರಣೆ
ಪರಲೋಕಕ್ಕೆ ಸಂಬಂಧಿಸಿ ಹೇಳುವುದಾದರೆ ಪತಿ ಪತ್ನಿ ಇಬ್ನರೂ ಅಲ್ಲಾಹನ ಮುಂದೆ ಜವಾಬ್ದಾರರು.
ಪ್ರವಾದಿ ಮುಹಮ್ಮದ್(ಸ) ಹೇಳಿರುವರು. “ನಿಮ್ಮಲ್ಲಿ ಪ್ರತಿಯೊಬ್ಬರೂ ಹೊಣೆಗಾರರು. ನಿಮ್ಮ ಹೊಣೆಯಲ್ಲಿ ಇರುವವರ ಬಗ್ಗೆ ಅಲ್ಲಾಹನ ಮುಂದೆ ಉತ್ತರ ನೀಡಬೇಕಾಗಿದೆ. ಪತಿಯು ಪತ್ನಿ ಮಕ್ಕಳ ಹೊಣೆಗಾರನಾಗಿರುವನು. ಪತ್ನಿ ಪತಿಯ ಮನೆ ಮಕ್ಕಳ ಹೊಣೆಗಾರಳಾಗಿರುವಳು.
ಈ ಪ್ರವಾದಿ ವಚನದ ಪ್ರಕಾರ ಪತಿ ಪತ್ನಿ ಇಬ್ಬರೂ ಕುಟುಂಬದ ನಾಯಕ ನಾಯಕಿಯಾಗಿದ್ದಾರೆ. ಆದರ್ಶ ಮನೆ ನಿರ್ಮಾಣ ಇಬ್ಬರ ಜವಾಬ್ದಾರಿ.
“ನಿಮ್ಮ ಮನೆಗಳಲ್ಲಿ ಓದಿ ಹೇಳಲಾಗುತ್ತಿರುವ ಅಲ್ಲಾಹನ ಸೂಕ್ತಗಳನ್ನೂ ವಿವೇಕದ ಮಾತುಗಳನ್ನು ಚೆನ್ನಾಗಿ ನೆನಪಿಡಿರಿ”
ಪ್ರವಾದಿ ಮುಹಮ್ಮದ್(ಸ)ರು ಮನೆಯಲ್ಲಿ ಅಲ್ಲಾಹನ ವಚನಗಳನ್ನು ಓದಿ ಕೇಳಿಸುತ್ತಿದ್ದರು ಮತ್ತು ವಿವೇಕದ ಶಿಕ್ಷಣ ನೀಡುತ್ತಿದ್ದರು ಎಂಬುದಕ್ಕೆ ಪವಿತ್ರ ಕುರ್ ಆನ್ ನ ಈ ವಚನವು ಆಧಾರವಾಗಿದೆ.

ಈ ಲೋಕದಲ್ಲಿ ಅಲ್ಲಾಹನು ನೀಡಿದ ಅನುಗ್ರಹಗಳನ್ನು ಎಣಿಕೆ ಮಾಡಿದರೆ ಮುಗಿಯಲಾರದು. ಆದುದರಿಂದ ದಂಪತಿಗಳು ಅಲ್ಲಾಹನ ಅನುಗ್ರಹಗಳಿಗೆ ಕೃತಜ್ಞತೆ ಸಲ್ಲಿಸುತ್ತಾ ,ಯಾವ ಸಂಬಂಧಗಳನ್ನು ಜೋಡಿಸಲು ಆಜ್ಞಾಪಿಸಿದ್ದಾನೋ ಆ ಸಂಬಂಧಗಳನ್ನು ಜೋಡಿಸುತ್ತಾ ದೇವಸಂಪ್ರೀತಿಗೆ ಪಾತ್ರರಾಗಲು ಪ್ರಯತ್ನಿಸಬೇಕು. ಅಲ್ಲಾಹ್ ಅನುಗ್ರಹಿಸಲಿ.