ಐವರಿಂದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕಾರ : 32ಕ್ಕೇರಿದ ನ್ಯಾಯಮೂರ್ತಿಗಳ ಸಂಖ್ಯೆ

0
377

ಸನ್ಮಾರ್ಗ ವಾರ್ತೆ

ನವದೆಹಲಿ: ಸುಪ್ರೀಂ ಕೋರ್ಟ್‌ನ ಆರು ಸದಸ್ಯರ ಕೊಲಿಜಿಯಂ ಕಳೆದ ವರ್ಷ ಡಿಸೆಂಬರ್ ನಲ್ಲಿ ಶಿಫಾರಸು ಮಾಡಿದ್ದ ಹಿನ್ನೆಲೆಯಲ್ಲಿ ಮೂವರು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಹೈಕೋರ್ಟ್‌ನ ಇಬ್ಬರು ಹಿರಿಯ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.

ಸುಪ್ರೀಂ ಕೋರ್ಟ್‌ನ ನೂತನ ಕಟ್ಟಡದ ಸಭಾಂಗಣದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಅವರು ಪ್ರಮಾಣ ವಚನ ಬೋಧಿಸಿದರು.

ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್, ಸಂಜಯ್ ಕರೋಲ್, ಪಿವಿ ಸಂಜಯ್ ಕುಮಾರ್, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಮನೋಜ್ ಮಿಶ್ರಾ ಅವರು ಪ್ರಮಾಣವಚನ ಸ್ವೀಕರಿಸಿದರು.

ಈ ಐವರು ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ 32ಕ್ಕೆ ಏರಲಿದೆ. ಸುಪ್ರೀಂ ಕೋರ್ಟ್‌ನ ಮಂಜೂರಾಗಿರುವ ನ್ಯಾಯಮೂರ್ತಿಗಳ ಸ್ಥಾನ 34 ಆಗಿದ್ದು, ಇನ್ನು ಎರಡು ಹುದ್ದೆಗಳು ಬಾಕಿ ಇವೆ. ಇಬ್ಬರು ಇನ್ನಷ್ಟೇ ನೇಮಕವಾಗಬೇಕಿದೆ.

ಈ ಐವರು ನ್ಯಾಯಮೂರ್ತಿಗಳ ಹೆಸರನ್ನು ಸುಪ್ರೀಂ ಕೋರ್ಟ್‌ನ ಆರು ಸದಸ್ಯರ ಕೊಲಿಜಿಯಂ ಕಳೆದ ವರ್ಷ ಡಿಸೆಂಬರ್‌ 13ರಂದು ಶಿಫಾರಸು ಮಾಡಿತ್ತು. ಫೆಬ್ರವರಿ 4ರಂದು ಕಾನೂನು ಸಚಿವರು ನೇಮಕಾತಿಗಳನ್ನು ಅಂತಿಮಗೊಳಿಸಿದ್ದರು.