ಆರ್ಟಿಕಲ್ 370 ರದ್ದನ್ನು ವಿರೋಧಿಸಿದ ಅರ್ಜಿ ಅಸಮಗ್ರ: ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

0
372

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಆ. 16: ಜಮ್ಮು-ಕಾಶ್ಮೀರದ ವಿಶೇಷ ಅಧಿಕಾರ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟು ಮುಂದೂಡಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆಗೆ ಎತ್ತಿಕೊಳ್ಳುವುದಕ್ಕಾಗಿ ಕೋರ್ಟು ತಿಳಿಸಿದೆ. ಆರ್ಟಿಕಲ್ 370 ರದ್ದತಿಯನ್ನು ಪ್ರಶ್ನಿಸಿ ವಕೀಲ ಎಂಎಲ್ ಶರ್ಮ, ಮಾಧ್ಯಮಗಳಿಗೆ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಕಾಶ್ಮೀರ ಟೈಮ್ಸ್ ಸಂಪಾದಕಿ ಅನುರಾಧ ಬಾಸಿನ್ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ “ವಿಧಿ370 ರದ್ದು ಪಡಿಸಿರುವುದರ ವಿರುದ್ಧ ಅರ್ಜಿ ಅಸಮಗ್ರವಾಗಿದೆ. ವಕೀಲ ಎಂಎಲ್ ಶರ್ಮರ ಅರ್ಜಿಯನ್ನು ಒಂದೂವರೆ ಗಂಟೆವರೆಗೆ ಓದಿದರೂ ತನಗೆ ಯಾವುದೂ ಅರ್ಥವಾಗಲಿಲ್ಲ. ಅರ್ಜಿಯಿಂದ ಏನು ಬಯಸುತ್ತಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಲಾಗಿಲ್ಲ. ಅಲ್ಲದೇ ಇದರಲ್ಲಿ ಗಂಭೀರ ಲೋಪಗಳಿವೆ. ಅರ್ಜಿಯನ್ನು ತಿರಸ್ಕರಿಸದಿರುವುದು ಇದೇ ವಿಷಯದಲ್ಲಿರುವ ಇತರ ಅರ್ಜಿಗಳಿಗೆ ಅದು ಬಾಧಕವಾಗುತ್ತದೆ ಎನ್ನುವ ಕಾರಣದಿಂದಾಗಿ ಆಗಿದೆ” ಎಂದು ಚೀಫ್ ಜಸ್ಟಿಸ್ ಹೇಳಿದರು.

“ಅರ್ಜಿ ತಯಾರಿಸುವ ವೇಳೆ ತಾನು ಅಪಘಾತಕ್ಕೊಳಗಾಗಿ ವಿಶ್ರಾಮದಲ್ಲಿದ್ದೆ ಎಂದು ವಕೀಲ ಎಂಎಲ್ ಶರ್ಮ ಕೋರ್ಟಿಗೆ ತಿಳಿಸಿದರು. ಆದ್ದರಿಂದ ಅರ್ಜಿಗೆ ಸಂಬಂಧಿಸಿ ಕೆಲಸ ಮಾಡಲು ಮತ್ತು ರಿಜಿಸ್ಟಾರ್‍‌ಗೆ ಸಲ್ಲಿಸುವ ಮೊದಲು ಪರಾಮರ್ಶಿಸಲು ತನ್ನಿಂದ ಸಾಧ್ಯವಾಲಿಲ್ಲ. ತಪ್ಪನು ಸರಿಪಡಿಸಿ ಪುನಃ ಅರ್ಜಿ ಸಲ್ಲಿಸಲು ಅನುಮತಿಸಬೇಕೆಂದು ಎಂಎಲ್ ಶರ್ಮ ಮನವಿ ಮಾಡಿದರು. ಕಾಶ್ಮೀರದ ಕುರಿತ ನಾಲ್ಕು ಅರ್ಜಿಗಳಲ್ಲಿಯೂ ಸಮಸ್ಯೆ ಇದೆ ಎಂದು ರಿಜಿಸ್ಟರಿ ಕಚೇರಿ ತಿಳಿಸಿದೆ. ಒಟ್ಟು ಆರು ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದರಲ್ಲಿ ಲೋಪ ಇರುವ ಎರಡು ಅರ್ಜಿಗಳನ್ನು ತಿದ್ದಿ ಸಲ್ಲಿಸಲಾಯಿತೆಂದು ಅಧಿಕಾರಿ ತಿಳಿಸಿದರು.

ಜಮ್ಮು-ಕಾಶ್ಮೀರದಲ್ಲಿ ಆಶಯ ವಿನಿಮಯ ವ್ಯವಸ್ಥೆಯ ಮೇಲೆ ಹೇರಲಾದ ನಿಷೇಧವನ್ನು ಪ್ರಶ್ನಿಸಿ ಕಾಶ್ಮೀರ್ ಟೈಮ್ಸ್‌ಗಾಗಿ ಹಾಜರಾದ ವಕೀಲೆ ವೃಂದಾ ಗ್ರೋವರ್ ಹೇಳಿದರು. ಟೆಲಿಫೋನ್, ಇಂಟರ್‍‌ನೆಟ್ ಸೇವೆ ಲಭ್ಯವಿಲ್ಲದಿರುವಾಗ ಹೇಗೆ ರಾಜ್ಯದಲ್ಲಿ ಮಾಧ್ಯಮ ಸ್ವಾತಂತ್ರ್ಯ ಇರಲು ಸಾಧ್ಯ. ಅಂಗೀಕೃತ, ಗುರುತು ಚೀಟಿ ಇರುವ ಪತ್ರಕರ್ತರಿಗೆ ಕೆಲಸ ಮಾಡಲು ಆಗದ ಪರಿಸ್ಥಿತಿ ಇದೆಯೆಂದು ವೃಂದಾ ಗ್ರೋವರ್ ಬೆಟ್ಟು ಮಾಡಿದರು. ಕಾಶ್ಮೀರ ಟೈಮ್ಸ್ ಜಮ್ಮುವಿನಿಂದ ಹೊರಡುತ್ತಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಹೇಳಿದರು. ಹಾಗಿರುವಾಗ ಯಾಕೆ ಶ್ರೀನಗರದಿಂದ ವರದಿ ಮಾಡಲು ಆಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು. ಭದ್ರತಾ ಸಂಸ್ಥೆಗಳಲ್ಲಿ ವಿಶ್ವಾಸ ಹೊಂದಬೇಕು. ಕಾಶ್ಮೀರದಲ್ಲಿ ಪ್ರತಿದಿನವೂ ನಿಯಂತ್ರಣದಲ್ಲಿ ಸಡಿಲಿಕೆ ಮಾಡಲಾಗುತ್ತಿದೆ ಎಂದು ಸಾಲಿಸಿಟರ್ ಜನರಲ್ ಸುರೇಶ್ ಮೆಹ್ತ ಕೋರ್ಟಿಗೆ ತಿಳಿಸಿದರು. ಚೀಫ್ ಜಸ್ಟಿಸ್ ರಂಜನ್ ಗೊಗೊಯಿ , ಜಸ್ಟಿಸ್ ಎಸ್‍‌.ಎ ಬೊಬ್ಡೆ, ಎಸ್‍.ಎ ನಝೀರರವರ ವಿಶೇಷ ಪೀಠ ಕೇಸನ್ನು ವಿಚಾರಣೆಗೆತ್ತಿಕೊಂಡಿತ್ತು.