ಪ್ರಧಾನಿಯವರ ವಾರಣಾಸಿ ಗೆಲುವನ್ನು ಪ್ರಶ್ನಿಸಿದ ಅರ್ಜಿಯನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್

0
401

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.24:ವಾರಣಾಸಿಯಿಂದ ಆಯ್ಕೆಯಾದ ಪ್ರಧಾನಿ ನರೇಂದ್ರ ಮೋದಿಯ ಚುನಾವಣಾ ಗೆಲುವನ್ನು ಪ್ರಶ್ನಿಸಿ ಗಡಿಭದ್ರತಾ ಪಡೆಯ ಮಾಜಿ ಜವಾನ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟು ತಳ್ಳಿಹಾಕಿದೆ.

ಬಿಎಸ್‍ಎಫ್‌ನಿಂದ ಉಚ್ಚಾಟಿತರಾದ ತೇಜ್ ಬಹಾದೂರ್ ಯಾದವ್ ಮೋದಿಯ ಚುನಾವಣಾ ಗೆಲುವನ್ನು ರದ್ದುಪಡಿಸಲು ಆಗ್ರಹಿಸಿ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದರು. ಮೋದಿಯ ವಿರುದ್ಧ ಉತ್ತರ ಪ್ರದೇಶದ ವಾರಣಾಸಿಯಿಂದ ತೇಜ್‍ಬಹಾದೂರ್ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಆಯೋಗ ಅದನ್ನು ತಿರಸ್ಕರಿಸಿತ್ತು.

ಕೆಲವರ ಒತ್ತಡಕ್ಕೊಳಗಾಗಿ ಚುನಾವಣಾ ಆಯೋಗ ನಾಮಪತ್ರ ತಿರಸ್ಕರಿಸಿದೆ. ಆದ್ದರಿಂದ ಚುನಾವಣೆಯನ್ನು ರದ್ದುಪಡಿಸಬೇಕೆಂದು ತೇಜ್‍ಬಹಾದೂರ್ ಅರ್ಜಿಯಲ್ಲಿ ಹೇಳಿಕೊಂಡಿದ್ದರು. ಚೀಫ್ ಜಸ್ಟಿಸ್ ಎಸ್‍ಎ ಬೊಬ್ಡೆ, ಜಸ್ಟಿಸ್ ಎ.ಎಸ್ ಬೋಪಣ್ಣ, ಜಸ್ಟಿಸ್ ವಿ. ರಾಮ ಸುಬ್ರಮಹ್ಮಣ್ಯರನ್ನೊಳಗೊಂಡ ಸುಪ್ರೀಂಕೋರ್ಟಿನ ಪೀಠ ತೇಜ್‍ಬಹಾದೂರ್‌ರವರ ಅರ್ಜಿಯನ್ನು ತಿರಸ್ಕರಿಸಿದೆ.

ಸೇನೆಯಿಂದ ಹೊರಹಾಕಲ್ಪಟ್ಟ ಕುರಿತ ಪ್ರಶ್ನೆಯನ್ನು ಸರಿಯಾಗಿ ಉತ್ತರಿಸಿಲ್ಲ ಎಂದು ನಾಮಪತ್ರ ತಿರಸ್ಕೃತವಾಗಿತ್ತು. ಅಲಹಾಬಾದ್ ಕೋರ್ಟು ಕೂಡ ತೇಜ್‍ಬಹಾದೂರ್ ಅರ್ಜಿಯನ್ನು ತಳ್ಳಿಹಾಕಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಸೈನಿಕರಿಗೆ ನೀಡುವ ಆಹಾರದ ಗುಣಮಟ್ಟ ಸರಿಯಿಲ್ಲ ಎಂದು ತಗಾದೆ ಎತ್ತಿ ತೇಜ್‍ಬಹಾದೂರ್ ಪೋಸ್ಟ್ ಹಾಕಿದ್ದರು. ನಂತರ ಅವರನ್ನು ಸೇನೆಯಿಂದ ವಜಾಗೊಳಿಸಲಾಗಿತ್ತು.