ಸನ್ಮಾರ್ಗ ವಾರ್ತೆ
ಅಹಮದಾಬಾದ್: ಗುಜರಾತ್ನ ಸೂರತ್ನಲ್ಲಿ ಇತ್ತೀಚೆಗೆ ನಡೆದ ಅಕ್ರಮ ತೆರವು ಕಾರ್ಯಾಚರಣೆಯ ವಿರುದ್ಧ ಗುಜರಾತ್ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಿರಾಶ್ರಿತರಾದ 100ಕ್ಕೂ ಹೆಚ್ಚು ಕುಟುಂಬಗಳಿಗೆ ತಕ್ಷಣವೇ ಪುನರ್ವಸತಿ ಕಲ್ಪಿಸುವುದು ಸೂರತ್ ಮಹಾನಗರ ಪಾಲಿಕೆಯ ಕಡ್ಡಾಯ ಕರ್ತವ್ಯವಾಗಿದೆ ಎಂದು ಆದೇಶಿಸಿದೆ. ಮೇ 30 ರಂದು ಸೂರತ್ನ ನಾಸಿರ್ ನಗರದಲ್ಲಿ ನಡೆದ ಈ ಕಾರ್ಯಾಚರಣೆಯನ್ನು ನ್ಯಾಯಾಲಯವು ಸಂಪೂರ್ಣ ಕಾನೂನುಬಾಹಿರ ಎಂದು ಕರೆದಿದೆ.
ಬಾಧಿತ ನಿವಾಸಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಿಖಿಲ್ ಎಸ್. ಕರಿಯೆಲ್ ಅವರ ಪೀಠವು, ಯಾವುದೇ ಅಧಿಕೃತ ನಿರ್ಧಾರವಿಲ್ಲದೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮನೆಗಳನ್ನು ಕೆಡವಿರುವುದನ್ನು ತರಾಟೆಗೆ ತೆಗೆದುಕೊಂಡಿತು. ಸಂತ್ರಸ್ತ ಕುಟುಂಬಗಳಿಗೆ ಅದೇ ಸ್ಥಳದಲ್ಲಿ ಮನೆಗಳನ್ನು ಮರುನಿರ್ಮಾಣ ಮಾಡಿಕೊಡುವ ಮೂಲಕ ಅಥವಾ ಬೇರೆಡೆ ಸೂಕ್ತ ವಸತಿ ಕಲ್ಪಿಸುವ ಮೂಲಕ ಪುನರ್ವಸತಿ ಒದಗಿಸಬೇಕು ಎಂದು ತಿಳಿಸಿದ ನ್ಯಾಯಾಲಯ, ಇದಕ್ಕೆ ಸಂಬಂಧಿಸಿದ ವಿವರವಾದ ಅಫಿಡವಿಟ್ಟನ್ನು ಜುಲೈ 9 ರೊಳಗೆ ಸಲ್ಲಿಸುವಂತೆ ಮಹಾನಗರ ಪಾಲಿಕೆ ಕಮಿಷನರ್ಗೆ ಗಡುವು ವಿಧಿಸಿದೆ.
ಕೇವಲ ಡೆವಲಪರ್ ಒಬ್ಬರ ವಿನಂತಿಯ ಮೇರೆಗೆ ಗಡಿ ಗುರುತಿಸುವಿಕೆ ಪ್ರಕ್ರಿಯೆಗಾಗಿ ಹೋದ ಅಧಿಕಾರಿಗಳು, ತೆರವು ಕಾರ್ಯಾಚರಣೆ ನಡೆಸಿರುವುದು ಪಾಲಿಕೆಯ ಆಂತರಿಕ ತನಿಖೆಯಲ್ಲೇ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಐದು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಪಾಲಿಕೆ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ಈ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ನೂರಾರು ಕುಟುಂಬಗಳು ಬೀದಿಗೆ ಬಿದ್ದಿರುವಾಗ ಕೇವಲ ಅಮಾನತು ಸಾಕೇ ಎಂದು ಪ್ರಶ್ನಿಸಿದರು.
ಇದೇ ವೇಳೆ ಕಾನೂನು ಸುವ್ಯವಸ್ಥೆಯ ನೆಪ ಒಡ್ಡಿ ಮೂಕಪ್ರೇಕ್ಷಕನಾಗಿದ್ದ ಪೊಲೀಸರ ನಿಷ್ಕ್ರಿಯತೆಯನ್ನೂ ನ್ಯಾಯಾಲಯ ತೀವ್ರವಾಗಿ ಖಂಡಿಸಿತು. ಗಡಿ ಗುರುತಿಸುವಿಕೆಯ ಕೆಲಸವು ತೆರವು ಕಾರ್ಯಾಚರಣೆಯಾಗಿ ಬದಲಾಗುತ್ತಿದ್ದರೂ ಪೊಲೀಸರು ಸಕ್ರಿಯವಾಗಿ ತಡೆಯದೇ ಇರುವುದು ಸರಿಯಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಅಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳವರು ಮತ್ತು ನುಸುಳುಕೋರರು ವಾಸಿಸುತ್ತಿದ್ದರು ಎಂಬ ರಾಜ್ಯ ಸರ್ಕಾರದ ವಾದವನ್ನು ಒಪ್ಪದ ಹೈಕೋರ್ಟ್, ಯಾವುದೇ ಕಾರಣಕ್ಕೂ ಕಾನೂನುಬಾಹಿರವಾಗಿ ಮನೆಗಳನ್ನು ಧ್ವಂಸಗೊಳಿಸುವುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 9 ಕ್ಕೆ ಮುಂದೂಡಲಾಗಿದ್ದು, ಅಷ್ಟರೊಳಗೆ ಸರ್ಕಾರ ಮತ್ತು ಪಾಲಿಕೆಗಳು ಜವಾಬ್ದಾರರ ವಿರುದ್ಧ ಕೈಗೊಂಡ ಕ್ರಮ ಹಾಗೂ ಪುನರ್ವಸತಿಯ ವಿವರವಾದ ವರದಿಯನ್ನು ಸಲ್ಲಿಸಬೇಕಿದೆ.












