✍️ ಶುಐಬ್ ಹುಸೈನಿ ನದ್ವಿ
ಇತಿಹಾಸದ ಕಬರಸ್ತಾನದಲ್ಲಿ ಅದೆಷ್ಟೋ ಗೋರಿಗಳಿವೆ. ಅವುಗಳನ್ನು ಹುಡುಕುವುದು ಮತ್ತು ನೋಡುವುದು ಅಸಾಧ್ಯ. ಪ್ರತಿ ಶತಮಾನದಲ್ಲಿ ಅದೆಷ್ಟೋ ಹೆಸರುಗಳು ಪ್ರಸಿದ್ಧಿ ಗಳಿಸುತ್ತವೆ, ಬಳಿಕ ಅಳಿದು ಹೋಗುತ್ತವೆ. ಎಷ್ಟೋ ಮಂದಿ ಬದುಕಿನ ರಣಾಂಗಣದಲ್ಲಿ ಇತಿಹಾಸದ ಬಾಗಿಲು ತಟ್ಟುತ್ತಾ ಇರುತ್ತಾರೆ, ಆದರೆ ಅವರ ಈ ಪ್ರಯತ್ನವು ಅಪರಿಚಿತವಾಗಿ ಕಳೆದು ಹೋಗುತ್ತದೆ. ಮಾನವನು ಹೋಗಲಿಕ್ಕಾಗಿಯೇ ಬಂದಿರುವಾಗ, ಬದುಕುಳಿದು ಏನು ಮಾಡಲಿಕ್ಕಿದೆ? ಅಂತಿಮ ವಿಶ್ರಾಂತಿಗೇಹವು ಗೋರಿಯಾಗಿರುವಾಗ, ಎಷ್ಟು ದಿನಾಂತ ತಾತ್ಕಾಲಿಕ ಮನೆಯನ್ನು ತನ್ನ ಗೇಹವನ್ನಾಗಿ ಮಾಡಿಕೊಂಡಿರಬಲ್ಲನು? ಕಾಲಚಕ್ರವು ಪ್ರತಿಯೊಬ್ಬನನ್ನೂ ತನ್ನ ತೆಕ್ಕೆಯಲ್ಲಿ ತೆಗೆದುಕೊಳ್ಳುವಾಗ, ಯಾರು ಎಷ್ಟರ ವರೆಗೆ ತಪ್ಪಿಸಿಕೊಳ್ಳಬಲ್ಲರು?
ಕೆಲವರು ಇಹಲೋಕದಿಂದ ವಿದಾಯ ಕೋರುವಾಗ ಅವರ ಮನೆಮಂದಿ ದುಃಖತಪ್ತ ಮನಸ್ಸು ಮತ್ತು ಭಾರವಾದ ಹೆಜ್ಜೆಗಳೊಂದಿಗೆ ಅವರನ್ನು ಮಣ್ಣಿಗೆ ಅರ್ಪಿಸಿ ಬರುತ್ತಾರೆ. ಇನ್ನು ಕೆಲವರ ವಿದಾಯವನ್ನು ಇಡೀ ಜಗತ್ತು ತನ್ನ ದುಃಖವೆಂದು ಭಾವಿಸಿ, ಸ್ವಯಂ ಸಂತಾಪಕ್ಕೆ ಅರ್ಹವೆಂದು ಭಾವಿಸುತ್ತದೆ.
ನಮ್ಮಲ್ಲಿ ಇತರರಿಗೆ ಸಂಬಂಧಿಸಿ ಇರುವ ಭಾವನೆ-ಸಂವೇದನೆಗಳೇನಿವೆಯೋ ಅವು ವಿಶ್ವಾಸ ಮತ್ತು ಬಾಂಧವ್ಯದ ಆಧಾರದಲ್ಲಿರುತ್ತದೆ. ಅದರಲ್ಲಿ ಬಾಹ್ಯ ಔಪಚಾರಿಕ ಮತ್ತು ಸಾಂಸ್ಥಿಕ ಬಾಂಧವ್ಯಕ್ಕೆ ಯಾವುದೇ ಸಂಬಂಧವಿಲ್ಲ. ಬದಲಾಗಿ ಎದುರಿಗಿರುವವರ ಸರಳತೆ ಮತ್ತು ಉಪಕಾರದ ಪ್ರಭಾವದಿಂದಾಗಿರುತ್ತದೆ.
ನಮ್ಮ ಪ್ರೀತಿಯ ದೊಡ್ಡಪ್ಪ, ಹುಸೈನಿ ಪರಿವಾರದ ಮೇಲ್ವಿಚಾರಕರೂ ಹಿರಿಯರೂ ಆದ ಸಯ್ಯದ್ ಸಲ್ಮಾನ್ ಹುಸೈನಿ ನದ್ವಿಯವರ ವಿಯೋಗವು ಇತಿಹಾಸದ ಲೇಖನಿಯು ಕಡೆಗಣಿಸುವಂತ ಅಥವಾ ಎರಡು ಸಾಲುಗಳಲ್ಲಿ ಬರೆದು ಮುಗಿಸುವಂತಹುದಲ್ಲ. ಏಕೆಂದರೆ ಇಂತಹ ಸರ್ವತೋಮುಖ ಮತ್ತು ಬಹುಮುಖಿ ಪ್ರತಿಭೆಯು ಒಂದು ಯುಗದಲ್ಲೇನು, ಶತಮಾನಗಳಿಗೊಮ್ಮೆ ಹುಟ್ಟಿ ಬರುತ್ತವೆ. ನೂರಾರು ಜೀವನ ಚರಿತ್ರೆಗಳ ಪುಟಗಳನ್ನು ತಿರುವಿದಾಗಲಷ್ಟೇ ಇಂತಹ ಒಬ್ಬ ವಿರಾಗಿಯು ಕಾಣಸಿಗುತ್ತಾರೆ. ಮಾಸಗಳು ಮತ್ತು ಸಂವತ್ಸರಗಳು ಎಷ್ಟೋ ಮಗ್ಗುಲು ಬದಲಿಸಿದ ಬಳಿಕವಷ್ಟೇ ಇಂತಹ ಯುಗಪುರುಷ ಜನ್ಮ ತಾಳುತ್ತಾರೆ. ಸೂರ್ಯನು ಪ್ರತಿ ಪ್ರಾತಃಕಾಲದಲ್ಲಿ ಉದಯಿಸಿ ಉದಯಿಸಿ ದಣಿದ ಮೇಲಷ್ಟೇ ಭೂಮಿಯ ಮೇಲೆ ಇಂತಹ ಸೂರ್ಯ ಉದಯಿಸುತ್ತಾನೆ.
ಮೌಲಾನಾರ ಸಮಗ್ರ ವ್ಯಕ್ತಿತ್ವವು ಲೋಕದ ದಶದಿಕ್ಕುಗಳಲ್ಲಿ ಹರಡಿಕೊಂಡಿದೆ. ಇದನ್ನು ಒಂದು ಲೇಖನದಲ್ಲೇನು ಇಡೀ ಒಂದು ಗ್ರಂಥದಲ್ಲಿ ಅರುಹುವುದು ಸುಲಭವಾಗದು.
ಈಗ ದೀರ್ಘ ಲೇಖನ ಬರೆಯುವ ಯೋಚನೆ ಇಲ್ಲ. ಬದಲಾಗಿ ಮೌಲಾನಾರ ವ್ಯಕ್ತಿತ್ವದ ಎರಡು ಮಗ್ಗುಲುಗಳನ್ನು ಉದ್ಧರಿಸುವುದೇ ನನ್ನ ಉದ್ದೇಶ.
ಮೌಲಾನಾರ ಭಾಷಾ ನೈಪುಣ್ಯ, ವಾಕ್ಚಾತುರ್ಯ ಮತ್ತು ಅನುಪಮ ವಿವರಣಾ ಶೈಲಿಯು ಬಹಳ ಪ್ರಸಿದ್ಧಿ ಪಡೆದುಕೊಂಡಿದೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಅವರ ಜೀವನದ ಕೆಲವು ಮಗ್ಗುಲುಗಳ ಕುರಿತು ಹೆಚ್ಚಿನವರು ತಿಳಿದಿಲ್ಲದಂತಹ ಕೆಲವು ವಿಷಯಗಳನ್ನು ಇಲ್ಲಿ ಉಲ್ಲೇಖಿಸಬಯಸುತ್ತೇನೆ.
ಮೌಲಾನಾರ ನಿಷ್ಕಳಂಕತೆ, ದೇವಭಕ್ತಿ, ವೈರಾಗ್ಯ, ಸಂಯಮ ಮತ್ತು ಪರಲೋಕ ಚಿಂತೆಯು ಎಷ್ಟು ಉನ್ನತವಾಗಿತ್ತೆಂದರೆ, ಜಗತ್ತಿನಲ್ಲಿ ತಮ್ಮ ಜೀವಿತೋದ್ದೇಶಕ್ಕೆ ಯಾವುದೇ ಧಕ್ಕೆಯಾಗದಷ್ಟು ಮಾತ್ರವೇ ಇಹಲೋಕದ ಬಗ್ಗೆ ಆಸಕ್ತಿ ಇತ್ತು. ಅವರು ಉತ್ತಮ ಅಭಿರುಚಿಯನ್ನು ಹೊಂದಿದ್ದರಾದರೂ ಜಗತ್ತಿನ ವರ್ಣವೈವಿಧ್ಯತೆಯಲ್ಲಿ ಎಂದೂ ಅವರು ಆಸಕ್ತಿಯನ್ನು ವಹಿಸಿರಲಿಲ್ಲ. ಸಂಸ್ಕೃತಿ-ನಾಗರಿಕತೆಯ ವೈಭವಗಳ ಅರಿವು ಬಹಳವಿತ್ತು. ಆದರೆ, ಸರಳತೆಯು ಅರೆದು ಕುಡಿದಂತಿತ್ತು. ಅಧಿಕಾರ, ವೈಭವ, ಆಡಂಬರಗಳೆಲ್ಲವೂ ಅವರ ಕಾಲ ಬುಡದಲ್ಲಿ ಬಂದು ಬಿದ್ದಿದ್ದುವು. ಆದರೆ ಅವರ ಸ್ವಭಾವವು ಅದನ್ನು ನಿರಾಕರಿಸುತ್ತಿತ್ತು, ಪರಿಶ್ರಮವೇ ಅವರಿಗೆ ಪ್ರಿಯವಾಗಿತ್ತು.
ಮನೆಯ ಸದಸ್ಯನೆಂಬ ನೆಲೆಯಲ್ಲಿ ಅಲ್ಲಾಹನನ್ನು ಸಾಕ್ಷ್ಯವಿರಿಸಿ ಹೇಳುತ್ತಿದ್ದೇನೆ – ನಮ್ಮ ದೊಡ್ಡಪ್ಪ ಇಹಲೋಕವನ್ನು ತಮ್ಮ ಕಾಲಬುಡದಲ್ಲಿ ತುಳಿದಿಟ್ಟಿದ್ದರು. ಜಗತ್ತಿನ ಸಾವಿರಾರು ಆಕರ್ಷಣೆಯ ಹೊರತಾಗಿಯೂ ಅವರು ಯಾವುದಕ್ಕೂ ಮೋಸ ಹೋಗಿರಲಿಲ್ಲ. ಅವರು ಸದಾ ಹಝ್ರತ್ ಅಲಿಯವರ(ರ) ಮಾತಿನಂತೆ ಇಹಲೋಕವನ್ನು ಉದ್ದೇಶಿಸಿ ‘ಗರ್ರಿ ಗೈರಿ’ (ಹೋಗು, ಬೇರೆ ಯಾರನ್ನಾದರೂ ಆಕರ್ಷಿಸು) ಎನ್ನುತ್ತಿದ್ದರು.
ಮೌಲಾನರ ಬಳಿ ಇಂದಿಗೂ ಮುವ್ವತ್ತು-ನಲ್ವತ್ತು ವರ್ಷಗಳಷ್ಟು ಹಳೆಯದಾದ ಬಟ್ಟೆಗಳಿದ್ದುವು. ಅವುಗಳನ್ನು ಧರಿಸುತ್ತಿದ್ದರು, ಸ್ವತಃ ಅವುಗಳಿಗೆ ತೇಪೆ ಹಚ್ಚುತ್ತಿದ್ದರು. ದುಬಾರಿ ವಸ್ತುಗಳನ್ನು ಖರೀದಿಸುವುದು ಬಿಡಿ, ಯಾರಾದರೂ ಉಡುಗೊರೆಯಾಗಿ ನೀಡಿದ ವಸ್ತು ದುಬಾರಿಯೆಂದು ತಿಳಿದರೆ ಅದನ್ನೂ ಬಳಸುತ್ತಿರಲಿಲ್ಲ. ಮನೆಮಂದಿಯನ್ನು ದುಂದುವೆಚ್ಚದ ಬಗ್ಗೆ ನಿರಂತರವಾಗಿ ಎಚ್ಚರಿಸುತ್ತಿದ್ದರು. ಲೌಕಿಕ ಸುಖ-ಭೋಗಗಳಲ್ಲಿ, ಮನರಂಜನೆಯಲ್ಲಿ ತಲ್ಲೀನವಾಗುವುದನ್ನು ಅವರು ಮದ್ಯ-ಜೂಜಿನಂತೆಯೇ ಕೆಟ್ಟದೆಂದು ಭಾವಿಸುತ್ತಿದ್ದರು. ರಾಜರ ಆಸ್ಥಾನದಲ್ಲಿ ಸ್ವಾಭಿಮಾನ, ಶ್ರೀಮಂತರಿಂದ ನಿರ್ಲಿಪ್ತತೆ ಮತ್ತು ಕಿಂಚಿತ್ತೂ ಮುಖಸ್ತುತಿ ಮಾಡದಿರುವುದು ಅವರದೇ ಆದ ವೈಶಿಷ್ಟ್ಯವಾಗಿತ್ತು. ಮತ್ತು ಏಕಿರಬಾರದು? ಅವರು ಅಲಿ ಮಿಯಾ, ಹಝ್ರತ್ ಶೈಖುಲ್ ಹದೀಸ್ ಮತ್ತು ಮೌಲಾನಾ ಅಹ್ಮದ್ ಪ್ರತಾಪ್ಗಢಿ ಮುಂತಾದವರಿಂದ ತರಬೇತಿಯನ್ನು ಪಡೆದವರಾಗಿದ್ದರು. ಸತ್ಯಮಾರ್ಗದಲ್ಲಿ ತನ್ನ ನಾವೆಯನ್ನು ಸುಟ್ಟು ಹಾಕಿದವರನ್ನು ಲೌಕಿಕವಾದಿಗಳು ಹೇಗೆ ತಾನೇ ಕೊಂಡುಕೊಳ್ಳಲು ಸಾಧ್ಯ? ಇದಕ್ಕೆ ಇರುವ ಪುರಾವೆಗಳು ಎಣಿಸಿ ಮುಗಿಯಲಾರದಷ್ಟಿವೆ.
ಹಿರಿಯರು-ಕಿರಿಯರು ಯಾರೇ ಇರಲಿ, ಯಾವುದೇ ಮುಜುಗರ ಅಥವಾ ಕೃತಕತೆಯ ಬಂಧನ ಇರುತ್ತಿರಲಿಲ್ಲ. ಅನೌಪಚಾರಿಕತೆ, ಅತಿಶಯೋಕ್ತಿಯಿಂದ ತೀರ ದೂರ, ಪ್ರತಿಯೊಬ್ಬರ ಮಾತನ್ನೂ ಗಮನವಿಟ್ಟು ಆಲಿಸುವುದು ಅವರ ಗುಣವಾಗಿತ್ತು.
ಎರಡನೆಯ ಮಗ್ಗುಲು ವ್ಯಕ್ತಿತ್ವ ನಿರ್ಮಾಣ ಮತ್ತು ವ್ಯಕ್ತಿತ್ವ ವಿಕಸನವಾಗಿತ್ತು. ಒಂದರ್ಥದಲ್ಲಿ ಅವರು ಸ್ಪರ್ಶಮಣಿಯಾಗಿದ್ದರು. ಅವರ ಸಾಂಗತ್ಯದಿಂದ ಎಷ್ಟೋ ಮಂದಿ ಅಪರಂಜಿಯಾಗಿ ಮೂಡಿ ಬಂದಿದ್ದಾರೆ. ಇಂದು ಅವರ ನಿಧನಕ್ಕೆ ಜಗತ್ತು ಕಂಡ ಭಕ್ತಿ ಮತ್ತು ಪ್ರೀತಿಯ ಪ್ರವಾಹವು ವಾಸ್ತವದಲ್ಲಿ ಅವರ ನಿಸ್ವಾರ್ಥ ಸೇವೆ, ಶಿಷ್ಯರ ಮೇಲೆ ಅಪಾರ ಪ್ರೀತಿ, ಶುದ್ಧ ಮನಸ್ಸು, ವಾತ್ಸಲ್ಯ ಮತ್ತು ಪರೋಪಕಾರದ ಕಾರಣವಾಗಿತ್ತು. ಇದು ಅವರ ಪ್ರತಿಯೋರ್ವ ಶಿಷ್ಯನ ಅನುಭವವಾಗಿತ್ತು. ಎಷ್ಟೋ ಮಂದಿ ಬಂದರು ಮತ್ತು ಮೌಲಾನರು ಅವರಿಗೆ ಸರ್ವಸ್ವವನ್ನೂ ಧಾರೆಯೆರೆದರು. ಆ ಮಂದಿ ಎಲ್ಲಿಂದೆಲ್ಲಿಗೆ ತಲುಪಿದರು. ಮೌಲಾನರು ಪ್ರತಿಯಾಗಿ ಅವರಿಂದ ಏನನ್ನೂ ಬಯಸಲಿಲ್ಲ. ಮೌಲಾನರು ಯಾರೊಂದಿಗೂ ಯಾವ ವಿಷಯದಲ್ಲೂ ಜಿಪುಣತೆ ತೋರಲಿಲ್ಲ.
ಯಾವುದಕ್ಕೆ ಹೃದಯವು ಸಾಕ್ಷ್ಯ ವಹಿಸುತ್ತದೋ ಅದುವೇ ಸತ್ಯ. ನಿರ್ಬಂಧಗಳು ಕೊರಳುಗಳಿಗೆ ಬೀಳುತ್ತವೆಯೇ ಹೊರತು ಹೃದಯದ ಮೇಲೆ ಯಾರು ನಿರ್ಬಂಧ ಹೇರಬಲ್ಲರು? ಮೌಲಾನರ ಉಪಕಾರದಿಂದ ಉನ್ನತ ಸ್ಥಾನದಲ್ಲಿ ಇರುವ ಹತ್ತಿಪ್ಪತ್ತು ಮಂದಿಯ ಹೆಸರು ನನ್ನ ಮನಪಟಲದಲ್ಲೀಗ ಮೂಡಿ ಬರುತ್ತಿದೆ. ವಾಸ್ತವದಲ್ಲಿ ಹೆಸರು, ಪ್ರಸಿದ್ಧಿಯ ಅವಕಾಶಗಳು ಸಿಕ್ಕಾಗಲೆಲ್ಲ ಮೌಲಾನರು ಉದಾರ ಮನಸ್ಸಿನಿಂದ ಇತರರನ್ನೂ ಅದರಲ್ಲಿ ಭಾಗಿಗೊಳಿಸುತ್ತಿದ್ದರು. ಹೆಚ್ಚಿನ ವೇಳೆ ತಮ್ಮ ನಿಕಟ ಬಂಧುಗಳನ್ನು ಹಿಂದಕ್ಕಿರಿಸುತ್ತಿದ್ದರು. ಯಾರ ಮೇಲೂ ಉಪಕಾರ ಭಾರವಿರಿಸುತ್ತಿರಲಿಲ್ಲ. ಅವರಿಗೆ ಸಕ್ರಿಯತೆ ಇಷ್ಟವಿತ್ತು. ಜಡತೆ ಮತ್ತು ಆಲಸ್ಯವನ್ನು ಅವರು ತೀರಾ ದ್ವೇಷಿಸುತ್ತಿದ್ದರು. ಕೆಲಸ ಮಾಡುವವರನ್ನು ಸದಾ ಪ್ರೋತ್ಸಾಹಿಸುತ್ತಿದ್ದರು ಮತ್ತು ಅವರಿಗೆ ಸಂಪೂರ್ಣ ಸಹಕಾರವನ್ನೂ ನೀಡುತ್ತಿದ್ದರು.
ಎರಡನೆಯದಾಗಿ, ಅವರು ವಸ್ತುತಃ ಅಸೂಯೆ, ದ್ವೇಷದಿಂದ ತೀರಾ ಮುಕ್ತರಾಗಿದ್ದರು. ಇತರರ ಕಾಲೆಳೆದು ಮುಂದುವರಿಯುವುದು ದೂರದ ಮಾತು, ಅವರು ಹಿಂದುಳಿದವರನ್ನೂ ಕೈ ಹಿಡಿದು ಮುಂದಕ್ಕೆ ತರುವವರಾಗಿದ್ದರು. ರಾಜಕೀಯ ತಂತ್ರಗಳು ಮತ್ತು ಸ್ವಾರ್ಥಪರತೆಯು ಅವರನ್ನು ಸ್ಪರ್ಶಿಸಿಯೂ ಇಲ್ಲ. ಇದೇ ಕಾರಣಕ್ಕೆ ಅವರ ವಿರೋಧಿಗಳೂ ಅವರ ಘನತೆ ಮತ್ತು ಗೌರವವನ್ನು ಅಂಗೀಕರಿಸುತ್ತಾರೆ. ಅವರ ನಿಧನದ ನೋವನ್ನು ಪ್ರತಿ ಎದೆಯೂ ಅನುಭವಿಸಿತ್ತು. ದುಃಖವು ಪ್ರತಿ ಮನೆಯನ್ನೂ ಆವರಿಸಿತ್ತು.
ಈ ಚಂದ್ರಮವನ್ನು ಮಣ್ಣಿಗೆ ಅರ್ಪಿಸಿ, ಬಂಧುಗಳನ್ನು ಆಲಿಂಗಿಸಿ, ಮನಸ್ಸನ್ನು ಹಗುರಗೊಳಿಸಿ, ನೆನಪುಗಳನ್ನು ಹೃದಯದಾಳದಲ್ಲಿ ತುಂಬಿಕೊಂಡು ಮಂಗಳೂರಿಗೆ ಹೊರಟು ನಿಂತಿದ್ದೇನೆ. ವಿಮಾನದಲ್ಲಿ ಕುಳಿತು ಈ ಕೆಲವು ಸಾಲುಗಳನ್ನು ಬರೆದಿದ್ದೇನೆ. ಆದರೆ ಸತ್ಯವೇನೆಂದರೆ, ಹಕ್ಕು ಇನ್ನೂ ಸಂದಾಯವಾಗಿಲ್ಲ.
ಕನ್ನಡಾನುವಾದ: ಮುಹಮ್ಮದ್ ಅಶ್ರಫ್, ಮಂಗಳೂರು












