ಸುರಿಬೈಲು: ಅಬ್ದುಲ್ ಕಾದರ್ ಮನೆಗೆ ಸಿಡಿಲಾಘಾತ, ಕುಸಿದು ಬಿದ್ದ ಮಾಡು, ಬಿರುಕು ಬಿಟ್ಟ ಮನೆ: ರೂ. 7ಲಕ್ಷ ನಷ್ಟ

0
531

ಸನ್ಮಾರ್ಗ ವಾರ್ತೆ

ಬಂಟ್ವಾಳ: ಇಲ್ಲಿನ ಸುರಿಬೈಲ್ ಪಿಲಿಕೊಡಲಿನ ಅಬ್ದುಲ್ ಖಾದರ್ ಅವರ ಮನೆಗೆ ಅಕ್ಟೋಬರ್ 10 ಮಂಗಳವಾರ ರಾತ್ರಿ ಸಿಡಿಲು ಬಡಿದು ಭಾರಿ ಹಾನಿಯಾಗಿದೆ.

ರಾತ್ರಿ ಸುಮಾರು 9 ಗಂಟೆಯ ವೇಳೆ ಭಾರಿ ಸದ್ದಿನೊಂದಿಗೆ ಸಿಡಿಲು ಬಡಿದಿದ್ದು ಮನೆಯ ಮಾಡು ಕುಸಿದಿದೆ. ಹೆಂಚು ಪಕ್ಕಾಸು ರೀಪು ಸಹಿತ ಮನೆ ಮಾಡಿಗೆ ಪೂರ್ಣ ಪ್ರಮಾಣದ ಹಾನಿಯಾಗಿದ್ದು ಗೋಡೆ ಬಿರುಕು ಬಿಟ್ಟಿದೆ.

ಇದೆ ವೇಳೆ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹಾನಿಗೀಡಾಗಿದೆ. ರೆಫ್ರಿಜರೇಟರ್ ಟಿವಿ ವಾಷಿಂಗ್ ಮಷೀನ್ ಇನ್ವರ್ಟರ್ ಗಳು ಹಾಳಾಗಿವೆ. ವಿದ್ಯುತ್ ಬೋರ್ಡ್ ಸಹಿತ ವೈರ್ ಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸಿಡಿಲು ಬಡಿಯುವಾಗ ಮನೆಮಂದಿಯೆಲ್ಲಾ ಚಾವಡಿಯಲ್ಲಿದ್ದು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಮಾತ್ರವಲ್ಲ ರಾತ್ರಿಯನ್ನು ನೆರೆಮನೆಯಲ್ಲಿ ಕಳೆದಿದ್ದಾರೆ.

ಕನಿಷ್ಠ 7 ಲಕ್ಷ ರೂಪಾಯಿಗಿಂತಲೂ ಅಧಿಕ ನಷ್ಟವಾಗಿದ್ದು ಕುಟುಂಬ ಸರ್ಕಾರದ ಪರಿಹಾರವನ್ನು ನೀರಿಕ್ಷಿಸುತ್ತಿದೆ. ಪಂಚಾಯಿತಿ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.