ಕೈಲಾಸ ಸ್ಥಾಪಿಸಿದ ನಿತ್ಯಾನಂದ: ಸಂಪೂರ್ಣ ದೇಶದ ಮಾನ್ಯತೆ ನೀಡುವಂತೆ ವಿಶ್ವಸಂಸ್ಥೆಗೆ ಮನವಿ; ಕೈಲಾಸದ ವಿಶೇಷತೆ ಏನೇನು ಗೊತ್ತೇ?

0
1243

ಸನ್ಮಾರ್ಗ ವಾರ್ತೆ-

ಬೆಂಗಳೂರು, ಡಿ. 4: ಅತ್ಯಾಚಾರ, ಕಿರುಕುಳ ಕ್ರಿಮಿನಲ್ ಪ್ರಕರಣಲ್ಲಿ ಆರೋಪಿಯಾದ ವಿವಾದಾಸ್ಪದ ದೇವಮಾನವ ನಿತ್ಯಾನಂದ ಹಿಂದೂ ದೇಶವನ್ನು ಘೋಷಿಸಿದ್ದಾರೆ. ಇಕ್ವಡೋರಿನಲ್ಲಿ ಖರೀದಿಸಿದ ಖಾಸಗಿ ದ್ವೀಪಕ್ಕೆ ಕೈಲಾಸ ಎಂದು ಹೆಸರಿಸಿ ಅದನ್ನು ಹಿಂದೂ ದೇಶ ಎಂದು ಘೋಷಿಸಿದ್ದಾರೆ. ದೇಶದ ಸ್ಥಾಪಕ, ಆಡಳಿತಾಧಿಕಾರಿಯಾಗಿ ಭಗವಾನ್ ನಿತ್ಯಾನಂದ ಪರಮ ಶಿವನನ್ನು ಪ್ರತಿಷ್ಠಾಪಿಸಲಾಗಿದೆ. ಕೈಲಾಸ ಎಂಬ ವೆಬ್ ಸೈಟ್ ಈ ವಿವರವನ್ನು ನೀಡುತ್ತಿದೆ.

ಭೂಮಿಯ ಅತ್ಯಂತ ಮಹತ್ವದ ಹಿಂದೂ ದೇಶ ಎಂದು ಕೈಲಾಸ ದ್ವೀಪವನ್ನು ನಿತ್ಯಾನಂದ ಕರೆದಿದ್ದಾರೆ. ಸ್ವಂತ ಧ್ವಜ, ಚಿಹ್ನೆ ಎರಡು ಬಣ್ಣದ ಪಾಸ್‍ಪೋರ್ಟು, ತನ್ನ ಅನುಯಾಯಿಗಳಾದ ಹತ್ತು ಮಂದಿಯ ಸಚಿವ ಸಂಪುಟವನ್ನು ಹಿಂದೂ ಸಾರ್ವಭೌಮ ರಿಪಬ್ಲಿಕ್ ಕೈಲಾಸದಲ್ಲಿ ನಿತ್ಯಾನಂದ ರೂಪಿಸಿದ್ದು ಹಿಂದೂ ದೇಶದಲ್ಲಿ ನಿತ್ಯಾನಂದ ಭಗವಾನ್ ಪರಮಶಿವನಾಗಿ ಅರಿಯಲ್ಪಡುವರು. ನಿತ್ಯಾನಂದನ ವಿರುದ್ಧ ಅತ್ಯಾಚಾರ, ಪ್ರಕೃತಿ ವಿರುದ್ಧ ಲೈಂಗಿಕ ಕಿರುಕುಳ, ವಂಚನೆ, ಕ್ರಿಮಿನಲ್ ಸಂಚು ಮುಂತಾದ ಕೇಸುಗಳಿವೆ. 2018ರ ಕೊನೆಯಲ್ಲಿ ಈತ ದೇಶ ತೊರೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 2000ನೇ ಇಸ್ವಿಯಲ್ಲಿ ಬೆಂಗಳೂರಿನಲ್ಲಿ ಆಶ್ರಮ ಸ್ಥಾಪಿಸಿದ ನಿತ್ಯಾನಂದ ಭಾರತ ಪಾಸ್‍ಪೋರ್ಟಿನ ಕಾಲಾವಧಿ ಮುಗಿದೊಡನೆ ವೆನೆಝುವೆಲಕ್ಕೆ ನಕಲಿ ಪಾಸ್‍ಪೋರ್ಟ್ ಬಳಸಿ ದೇಶ ತೊರೆದನೆಂದು ವರದಿಗಳು ತಿಳಿಸಿವೆ. ಈ ನಡುವೆ ಈಗ ತಾನೇ ಹಿಂದೂ ದೇಶ ಸ್ಥಾಪಿಸಿದ ವರದಿ ಬಂದಿದೆ.

ದ್ವೀಪದಲ್ಲಿರುವ ನಿತ್ಯಾನಂದನ ಚಿತ್ರವೂ ವೆಬ್‍ಸೈಟ್‍ನಲ್ಲಿದೆ. ಸ್ವಂತ ದೇಶದಲ್ಲಿ ಹಿಂದುತ್ವ ಆಚರಿಸಲು ಸಾಧ್ಯವಾಗದ ಹಿಂದೂಗಳಿಗಾಗಿ ಗಡಿಯೇ ಇಲ್ಲದ ಸಾರ್ವಭೌಮ ಹಿಂದೂರಾಷ್ಟ್ರ ಸ್ಥಾಪಿಸಿದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದು ಎಲ್ಲ ಹಿಂದೂಗಳೂ ಅಲ್ಲಿಗೆ ಬರುವಂತೆ ಕೋರಿದ್ದಾನೆ. ಇಂಗ್ಲಿಷ್, ಹಿಂದಿ, ತಮಿಳ್ ಗಳು ಕೈಲಾಸದ ಅಧಿಕೃತ ಭಾಷೆ. ಹತ್ತುಕೋಟಿಗೂ ಹೆಚ್ಚು ಶೈವರು ಭಾರತದಲ್ಲಿದ್ದಾರೆ. ಸನಾತನ ಹಿಂದೂ ಧರ್ಮ ದೇಶದ ಧರ್ಮ ಎಂದು ವೆಬ್‍ಸೈಟ್‍ನಲ್ಲಿ ತಿಳಿಸಲಾಗಿದೆ. ಕೈಲಾಸವನ್ನು ಮರುವಶಪಡಿಸಿದ ವ್ಯಕ್ತಿ ಎಂದು ತನ್ನನ್ನು ನಿತ್ಯಾನಂದ ವಿಶ್ಲೇಷಿಸಿಕೊಂಡಿದ್ದಾನೆ. ಕೈಲಾಸದ ಕಾನೂನು ವಿಭಾಗವು ಕೈಲಾಸಕ್ಕೆ ಸಂಪೂರ್ಣ ದೇಶದ ಪದವಿ ನೀಡಲು ವಿಶ್ವಸಂಸ್ಥೆಗೆ ಮನವಿ ಸಲ್ಲಿಸಲಿದೆ ಎಂದು ವೆಬ್‍ಸೈಟ್‍ನಲ್ಲಿ ತಿಳಿಸಿದ್ದಾನೆ. ಏನಿದ್ದರೂ ನಿತ್ಯಾನಂದ ಮತ್ತು ನಿತ್ಯಾನಂದನ ಕೈಲಾಸದ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ. ಮಧ್ಯ ಅಮೆರಿಕದ ದೇಶ ಬೆಲಿಸಿನ ಪೌರತ್ವ ಪಡೆಯಲು ನಿತ್ಯಾನಂದ ಶ್ರಮಿಸುತ್ತಿದ್ದಾರೆಂದು ವಿವರ ಲಭಿಸಿದೆ.